ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರು ಮೂರು ಎಕರೆಯಲ್ಲಿ ಶೇಂಗಾ ಬೆಳೆದು ಕೊಯ್ಲು ಮಾಡುವ ಮೂಲಕ ಕಾಯಕಯೋಗಿಯಾಗಿ ಗಮನ ಸೆಳೆದಿದ್ದಾರೆ. ಕೊರೋನಾ ಸಮಯದಲ್ಲಿ 350 ಚೀಲ ಬತ್ತ ಬೆಳೆದು ದಾಸೋಹದ ಕೊರತೆ ನೀಗಿಸಿದ್ದರು.
ಬಿ.ಜಿ.ಕೆರೆ ಬಸವರಾಜ
ಮೊಳಕಾಲ್ಮೂರು (ನ.25): ಸ್ವಾಮೀಜಿಗಳೆಂದರೆ ಮಠ, ದೇವಸ್ಥಾನ, ಪೂಜೆ ಪುನಸ್ಕಾರ ಹೀಗೆ ನಮ್ಮ ಮನಸ್ಸಿನಲ್ಲಿ ಕಲ್ಪನೆ ಮೂಡುತ್ತದೆ. ತಮ್ಮ ಆಶೀರ್ವಚನ, ಪ್ರವಚನಗಳಲ್ಲಿ ಕಾಯಕ ತತ್ವ, ಸರಳ ಜೀವನ ಬೋಧಿಸುವ ಶ್ರೀಗಳು ತಮ್ಮ ನಿಜ ಜೀವನದಲ್ಲಿ ಐಷಾರಾಮಿ ಬದುಕು ನಡೆಸುವವರೇ ಹೆಚ್ಚು. ಇದಕ್ಕೆ ಅಪವಾದವೆಂಬಂತೆ ಕಾವಿ ತೊಟ್ಟು ಮಠದಲ್ಲಿ ಕೂತು ಭಕ್ತರಿಗೆ ಆಶೀರ್ವಾದ ಮಾಡುವ ಜತಗೆ ಸದಾ ಕೃಷಿ ಕಾಯಕದಲ್ಲಿ ತೊಡಗುವ ಶ್ರೀ ಬಸವಲಿಂಗ ಸ್ವಾಮೀಜಿ ಅವರು ಮೂರು ಎಕರೆ ಜಮೀನಿನಲ್ಲಿ ಶೇಂಗಾ ಬೆಳೆದು ಈಗ ಸ್ವತಃ ಕೊಯ್ಲು ಮಾಡುವ ಮೂಲಕ ಈ ಭಾಗದಲ್ಲಿ ನಿಜ ದನಿಯ ಕಾಯಕ ಯೋಗಿಯಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಾಲೂಕಿನ ಸಿದ್ದಯ್ಯನ ಕೋಟೆ ಚಿನ್ನ ಹಗರಿ ನದಿ ತಟದಲ್ಲಿ ನೆಲೆ ಕಂಡಿರುವ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರು ಮಠದ 3 ಎಕರೆ ಜಮೀನಿನಲ್ಲಿ ಶೇಂಗಾ ಬೆಳೆದಿದ್ದಾರೆ. ಈಗ ಫಸಲು ಕೈಗೆ ಬಂದಿದ್ದು ಕೊಯ್ಲು ಮಾಡಲು ಮುಂದಾಗಿದ್ದಾರೆ. ಆಳುಗಳೊಂದಿಗೆ ದಿನಪೂರಾ ಜಮೀನಿನಲ್ಲಿ ದುಡಿಯುವುದು ಇವರಿಗೆ ಸಾಮಾನ್ಯವಾಗಿದೆ.
ದಾನ ಪಡೆದ ಮೂರು ಎಕರೆ ಜಮೀನಿನಲ್ಲಿ ಮಳೆಯಾಶ್ರಿತವಾಗಿ ಶೇಂಗಾ ಬಿತ್ತನೆ ಮಾಡಿದ್ದಾರೆ. ತಾವೇ ಕಳೆ ಕಿತ್ತು ಕೃಷಿ ಕೆಲಸ ನಿರ್ವಹಿಸಿದ್ದಾರೆ. ಈಗ ಕೈಗೆ ಬಂದ ಫಸಲನ್ನು ಕೊಯ್ಲು ಮಾಡುತ್ತಿದ್ದಾರೆ. ಬಿತ್ತನೆ ಬೀಜಕ್ಕೆ 14 ಸಾವಿರ ರೂಪಾಯಿ ಖರ್ಚು ಮಾಡಿದ್ದಾರಂತೆ. ಗೊಬ್ಬರ, ಎಡೆ ಹೊಡೆಯುವುದು, ಕಳೆ ಕೀಳುವುದು ಸೇರಿ 40 ಸಾವಿರ ಖರ್ಚು ಆಗಿದ್ದು 10 ಕ್ವಿಂಟಲ್ ಶೇಂಗಾ ಕೈಗೆ ಸಿಗಬಹುದೆನ್ನುವ ನಿರೀಕ್ಷೆ ಶ್ರೀಗಳದ್ದಾಗಿದೆ.
ಐಷಾರಾಮಿ ಜೀವನ ನಡೆಸುವ ಮಠಾಧೀಶರ ನಡುವೆ ಸಿದ್ದಯ್ಯನ ಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ ಭಿನ್ನವಾಗಿ ಕಾಣಿಸುತ್ತಿದ್ದಾರೆ. ಮೂಲ ಸೌಲಭ್ಯದ ಕೊರತೆ ನಡುವೆಯೂ ಕಾಯಕದ ಮೂಲಕ ಶ್ರೀ ಮಠವನ್ನು ರಾಜ್ಯ ಗುರುತಿಸುವಂತೆ ಮಾಡಿದ್ದಾರೆ. ಅಗತ್ಯ ದವಸ ಧಾನ್ಯಗಳನ್ನು ತಾವೇ ಬೆಳೆಯುತ್ತಿದ್ದಾರೆ. ಭತ್ತ, ರಾಗಿ. ಜೋಳ ತರಕಾರಿ ಸೇರಿ ವಿವಿಧ ಕೃಷಿ ಉತ್ಪನ್ನಗಳ ಜತಗೆ ಈ ಬಾರಿ ಬಡವರ ಬಾದಾಮಿ ನೆಲಗಡಲೆ ಬೆಳೆದಿದ್ದು ವಿಶೇಷವಾಗಿದೆ.
ರಾಜ್ಯದ ವಿವಿಧ ಭಾಗದ ನೂರಾರು ಬಡ ವಿದ್ಯಾರ್ಥಿಗಳು ಶ್ರೀಮಠದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸರ್ಕಾರದ ಯಾವುದೇ ಅನುದಾನ ಪಡೆಯದೆ ದಾಸೋಹ ನಡೆಸುತ್ತಿರುವ ಶ್ರೀಗಳು ಕೇವಲ ದಾನಿಗಳ ನೀಡುವ ನೆರವಿನ ಜತಗೆ ತಾವೇ ಬೆಳೆದ ಧವಸ -ಧಾನ್ಯ ದಾಸೋಹಕ್ಕೆ ಬಳಸುತ್ತಿದ್ದಾರೆ. ಬೆಳಗ್ಗೆ 4ಗಂಟೆಗೆ ಏಳುವ ಶ್ರೀಗಳು ಬೆಳಗಿನ ಪೂಜೆ ಮುಗಿಸಿ ನೂರಾರು ವಿದ್ಯಾರ್ಥಿಗಳಿಗೆ ಉಪಹಾರ ತಯಾರಿಸಿ ಉಣಬಡಿಸಿ ಜಮೀನಿಗೆ ತೆರಳಿ ಕೃಷಿ ಕಾಯಕ ಮಾಡುತ್ತಾರೆ.
ಕೋವಿಡ್ ಸಮಯದಲ್ಲಿ 350 ಚೀಲ ಬತ್ತದ ಬೆಳೆ: ಇಡೀ ದೇಶವೇ ಕೊರೋನಾ ಗದ್ದಲದಲ್ಲಿ ಮುಳುಗಿದ್ದಾಗ ಲಾಕ್ ಡೌನ್ ಜಾರಿಯಿಂದ ಮಠಕ್ಕೆ ಬರುತ್ತಿದ್ದ ನೆರವು ಬಂದ್ ಆಗಿತ್ತು. ಇತ್ತ ಮಠದಲ್ಲಿ ದಾಸೋಹ ನಡೆಸುವುದು ಕಷ್ಟವಾಗಿತ್ತು. ಮಕ್ಕಳಿಗೆ ಊಟ ನೀಡುವುದು ದುಸ್ತರವಾಗಿತ್ತು. ಇದನ್ನು ಮನಗಂಡು ಸ್ವಾಮೀಜಿ ಅಂದು ಶ್ರೀಮಠದ ಮೂರು ಎಕರೆ ಮತ್ತು ಗುತ್ತಿಗೆಯಲ್ಲಿ ಪಡೆದ ಐದು ಎಕರೆ ಜಮೀನಿನಲ್ಲಿ ಮಠದ ಕೊಳವೆ ಬಾವಿ ಬಳಸಿಕೊಂಡು 350 ಚೀಲ ಬತ್ತ ಬೆಳೆದು ಮಠದ ದಾಸೋಹದ ಕೊರತೆಯನ್ನು ನೀಗಿಸಿದ್ದರು.ಇದನ್ನು ಗಮನಿಸಿ ಕನ್ನಡ ಪ್ರಭ ಮತ್ತು ಸುವರ್ಣ ವಾಹಿನಿಯಿಂದ 2022ನೇ ಸಾಲಿನ ರೈತ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು ಗಮನಾರ್ಹ.
ಭರತ್ ಬೊಮ್ಮಾಯಿ ಮುಂದೆ ಸಿಎಂ ಆಗ್ತಾರಂತೆ..ಶಿಗ್ಗಾಂವಿಯಲ್ಲಿ ಈ ಚರ್ಚೆ ಶುರುವಾಗೋದಕ್ಕೆ ಕಾರಣವೇನು?
ಚಿನ್ನ ಹಗರಿ ನದಿ ತಟದ ಬಂಜರು ಭೂಮಿಯಲ್ಲಿ ಲಿಂಗೈಕ್ಯ ಡಾ.ಮಹಾಂತ ಶ್ರೀಗಳ ಆಶೀರ್ವಾದಿಂದ ಉದಯಿಸಿದ ಮಠವನ್ನು ಸದಾ ಕಾಯಕದ ಮೂಲಕ ಕಟ್ಟಿ ಬೆಳೆಸಿದ ಶ್ರೀ ಬಸವಲಿಂಗ ಸ್ವಾಮೀಜಿಯವರ ಕಾಯಕ ತತ್ವದಿಂದ ಮಠವನ್ನು ರಾಜ್ಯ ಮಟ್ಟಕ್ಕೆ ಪರಿಚಯಿಸಿದ್ದಾರೆ.
ಜೆಡಿಎಸ್ ಬೇಕಿಲ್ಲವೆಂದು ಮುಸ್ಲಿಂ ಸಮುದಾಯದ ಸಂದೇಶ: ಸೋಲಿನ ಬೆನ್ನಲ್ಲೇ ನಿಖಿಲ್ ಬೇಸರ
'ಮೂರು ಎಕರೆಯಲ್ಲಿ ಶೇಂಗಾ ಬೆಳೆದಿದ್ದೇನೆ. ಈಗ ಕೊಯ್ಲು ಮಾಡುತ್ತಿದ್ದೇವೆ. ಉತ್ತಮ ಮಳೆಯಾದರೂ ಇಳುವರಿ ಕಡಿಮೆಯಾಗಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡರೆ ಉತ್ತಮವಾಗಿದೆ. ನಿತ್ಯವೂ ಹೊಲದಲ್ಲಿ ಆಳುಗಳ ಜತಗೆ ನಾನು ದುಡಿಯುತ್ತಿದ್ದೇನೆ. ಸರ್ಕಾರ ಮಠಕ್ಕೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿದರೆ ಕೃಷಿಯಲ್ಲಿ ಖರ್ಚು ಕಡಿಮೆಯಾಗಲಿದೆ. ಸರ್ಕಾರ ನೆರವಾದರೆ ಅನುಕೂಲ' ಎಂದು ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ.