ಅರೆನ್ಯಾಯಿಕ ಸಂಸ್ಥೆಗಳಲ್ಲಿ ಹೈಬ್ರಿಡ್‌ ವಿಚಾರಣೆ ಸಾಧ್ಯವೇ? ಸಾಧ್ಯತೆ ಪರಿಶೀಲಿಸಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ

By Kannadaprabha NewsFirst Published Apr 4, 2023, 1:09 PM IST
Highlights

ವಿಡಿಯೋ ಕಾನ್ಫರೆನ್ಸ್‌ ಮೂಲಕ ರಾಜ್ಯದ ಎಲ್ಲ ಅರೆನ್ಯಾಯಿಕ ಪ್ರಾಧಿಕಾರಗಳು ಹೈಬ್ರಿಡ್‌ ಮಾದರಿಯಲ್ಲಿ ಪ್ರಕರಣಗಳ ವಿಚಾರಣೆ ನಡೆಸಲು ಇರುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಚ್‌ ನಿರ್ದೇಶಿಸಿದೆ. 

ಬೆಂಗಳೂರು (ಏ.4) : ವಿಡಿಯೋ ಕಾನ್ಫರೆನ್ಸ್‌ ಮೂಲಕ ರಾಜ್ಯದ ಎಲ್ಲ ಅರೆನ್ಯಾಯಿಕ ಪ್ರಾಧಿಕಾರಗಳು ಹೈಬ್ರಿಡ್‌ ಮಾದರಿಯಲ್ಲಿ ಪ್ರಕರಣಗಳ ವಿಚಾರಣೆ ನಡೆಸಲು ಇರುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಚ್‌ ನಿರ್ದೇಶಿಸಿದೆ.

ಖಾತಾ ರದ್ದತಿ ವಿಚಾರವಾಗಿ ನಾಗಮಂಗಲ ತಾಲೂಕಿನ ಮಂಜೇಗೌಡ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜು(Justice Suraj Govindaraj) ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

Latest Videos

ಮುಸ್ಲಿಂ 2ಬಿ ರದ್ದು ವಿರುದ್ಧ ಹೈಕೋರ್ಟ್‌ಗೆ ಅರ್ಜಿ

ಪ್ರಸ್ತುತ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಕರಣಗಳ ವಿಚಾರಣೆ ನಡೆಸುವ ಹೈಬ್ರಿಡ್‌ ವಿಧಾನಗಳನ್ನು ನ್ಯಾಯಾಲಯಗಳೇ ಅಳವಡಿಸಿಕೊಂಡಿವೆ. ಇದೇ ಮಾದರಿಯ ಸೌಲಭ್ಯಗಳನ್ನು ರಾಜ್ಯದ ಎಲ್ಲ ಅರೆನ್ಯಾಯಿಕ ಪ್ರಾಧಿಕಾರಗಳಿಗೆ ಕಲ್ಪಿಸುವ ಸಂಬಂಧ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ (ಆರ್‌ಡಿಪಿಆರ್‌) ಪ್ರಧಾನ ಕಾರ್ಯದರ್ಶಿ ಗಮನಹರಿಸಬೇಕು. ಅಲ್ಲದೆ, ಆರ್‌ಡಿಪಿಆರ್‌ ಇಲಾಖೆಯಲ್ಲಿ ಆಡಳಿತಾತ್ಮಕ ವಿಭಾಗದ ಅಧಿಕಾರಿಗಳು ಸಹ ಅರೆ-ನ್ಯಾಯಾಂಗ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಹಾಗಾಗಿ, ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಲು ಪ್ರತ್ಯೇಕವಾಗಿ ಸಿಬ್ಬಂದಿಯನ್ನು ನೇಮಕ ಮಾಡುವ ಬಗ್ಗೆಯೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಪರಿಶೀಲನೆ ನಡೆಸಬೇಕು. ಆ ಮೂಲಕ ಅರೆ ನ್ಯಾಯಿಕ ಮತ್ತು ಅಡಳಿತಾತ್ಮಕ ಪ್ರಾಧಿಕಾರಗಳ ಕಾರ್ಯಗಳಿಗೆ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳ ಮಾದರಿಯಲ್ಲಿಯೇ ಅರೆ ನ್ಯಾಯಿಕ ಪ್ರಾಧಿಕಾರಗಳ ದಿನನಿತ್ಯದ ಆದೇಶಗಳು, ತೀರ್ಪುಗಳು ಸೇರಿದಂತೆ ಪ್ರಕರಣಗಳ ಎಲ್ಲ ಪ್ರಕ್ರಿಯೆಗಳ ಮಾಹಿತಿ ವೆಬ್‌ಹೋಸ್ಟ್‌ ಮಾಡುವ ಅಗತ್ಯ ವ್ಯವಸ್ಥೆ ಮತ್ತು ವಿಧಾನಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ಆದೇಶಿಸಿದೆ.

ಹೈಕೋರ್ಚ್‌ ಆದೇಶಗಳ ಕುರಿತು ಇ-ಮೇಲ್‌, ಎಸ್‌ಎಂಎಸ್‌ಗಳ ಮೂಲಕ ಅರ್ಜಿದಾರರಿಗೆ ಮತ್ತು ವಕೀಲರಿಗೆ ಪ್ರಕರಣಗಳ ವಿಚಾರಣೆ ಕುರಿತು ಕಾಲಕಾಲಕ್ಕೆ ತಿಳಿಸುವಂತೆ ವ್ಯವಸ್ಥೆ ಮಾಡಬೇಕು. ಪ್ರಕರಣದ ವಿಚಾರಣೆಯನ್ನು ಯಾವ ಕಾರಣಕ್ಕಾಗಿ ಮುಂದೂಡಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಆದೇಶದಲ್ಲಿ ಉಲ್ಲೇಖಿಸಬೇಕು. ಈ ನಿರ್ದೇಶನಗಳ ಕುರಿತು ಸಮಗ್ರ ಯೋಜನಾ ವರದಿ ಸಿದ್ಧಪಡಿಸಬೇಕು. ಜತೆಗೆ, ನಿರ್ದೇಶನಗಳ ಅನುಪಾಲನಾ ವರದಿಯನ್ನು ಏ.17ರಂದು ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ:

ಜಮೀನಿಗೆ ಸಂಬಂಧಿಸಿದಂತೆ ಅರ್ಜಿದಾರ ಮಂಜೇಗೌಡ ತಂದೆ ಹೆಸರಿನಲ್ಲಿ ನೀಡಲಾಗಿದ್ದ ಖಾತಾವನ್ನು ರದ್ದುಪಡಿಸಿ ನಾಗಮಂಗಲ ತಾಲೂಕು ಪಂಚಾಯತಿ ಅಧ್ಯಕ್ಷರು 2002ರ ಮಾ.7ರಂದು ಆದೇಶ ಮಾಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ಮಂಜೇಗೌಡರ ತಂದೆ ಮಂಡ್ಯ ಜಿಲ್ಲಾ ಪಂಚಾಯತ್‌ ಅಧ್ಯಕ್ಷರ ಮುಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯು 2002ರ ಮೇ 10ರಿಂದ ಆರಂಭವಾಗಿತ್ತು. 2014ರ ಜ.16ರಂದು ಅರ್ಜಿ ವಜಾಗೊಳಿಸಿ ಜಿ.ಪಂ. ಅಧ್ಯಕ್ಷರು ಆದೇಶಿಸಿದ್ದರು. ಈ ನಡುವೆ ಮಂಜೇಗೌಡ ಅವರ ತಂದೆ ನಿಧನರಾಗಿದ್ದರು.

12 ವರ್ಷಗಳ ಅವಧಿಯಲ್ಲಿ ಈ ಅರ್ಜಿಯನ್ನು 111 ಬಾರಿ ಯಾವುದೇ ವಿಚಾರಣೆ ನಡೆಸದೆಯೇ ಮುಂದೂಡಲಾಗಿದೆ. ಯಾವುದೇ ಮಾಹಿತಿಯಿಲ್ಲದ ಕಾರಣ 2014ರಲ್ಲಿ ವಿಚಾರಣೆಗೆ ಗೈರಾಗಿದ್ದರು. ಅರ್ಜಿದಾರ ಮತ್ತವರ ವಕೀಲರ ಅನುಪಸ್ಥಿತಿಯಲ್ಲೇ ವಿಚಾರಣೆಯನ್ನೂ ನಡೆಸಿದ ಜಿ.ಪಂ. ಅಧ್ಯಕ್ಷರು ಅರ್ಜಿ ವಜಾಗೊಳಿಸಿ 2014ರಲ್ಲಿ ಆದೇಶಿಸಿದ್ದರು.

Salman Khan: ಪತ್ರಕರ್ತ ದಾಖಲಿಸಿದ್ದ ಕ್ರಿಮಿನಲ್ ಕೇಸ್​ನಿಂದ ಸಲ್ಲುಗೆ ಮುಕ್ತಿ

2016ರಲ್ಲಿ ಮಂಜೇಗೌಡ ವಿಚಾರಿಸಿ ಆದೇಶದ ಪ್ರತಿಯನ್ನು ಪಡೆದಾಗಲೇ ಅರ್ಜಿ ವಜಾಗೊಂಡಿರುವುದು ವಿಷಯ ಬೆಳಕಿಗೆ ಬಂದಿತ್ತು. ಇದರಿಂದ ಹೈಕೋರ್ಚ್‌ ಮೆಟ್ಟಿಲೇರಿದ್ದ ಮಂಜೇಗೌಡ, ಪಂಚಾಯತ್‌ ರಾಜ್‌ ಕಾಯ್ದೆ-1993ರ ಪ್ರಕಾರ ಜಮೀನು ಖಾತಾವನ್ನು ರದ್ದುಪಡಿಸುವ ಅಧಿಕಾರ ಜಿ.ಪಂ ಮತ್ತು ತಾ.ಪಂ ಅಧ್ಯಕ್ಷರಿಗೆ ಇಲ್ಲ ಎಂದು ಆಕ್ಷೇಪಿಸಿದ್ದರು. ಅದನ್ನು ಒಪ್ಪಿ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಚ್‌, ಮಂಜೇಗೌಡ ಅವರ ತಂದೆ ಹೆಸರಿನ ಖಾತೆಯನ್ನು ರದ್ದುಪಡಿಸಿದ ಆದೇಶವನ್ನು ಅಮಾನ್ಯಗೊಳಿಸಿದೆ.

click me!