ಹಲವಾರು ವರ್ಷಗಳ ಕಾಲ ಹೆಜ್ಬೊಲ್ಲಾ ಸಂಘಟನೆಯ ನೇತೃತ್ವ ವಹಿಸಿ, ಅದು ಲೆಬನಾನ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವಂತೆ ಮಾಡಿದ ಹಸನ್ ನಸ್ರಲ್ಲಾ ಬೈರುತ್‌ನಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹತ್ಯೆಯಾಗಿದ್ದಾನೆ
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಹಲವಾರು ವರ್ಷಗಳ ಕಾಲ ಹೆಜ್ಬೊಲ್ಲಾ ಸಂಘಟನೆಯ ನೇತೃತ್ವ ವಹಿಸಿ, ಅದು ಲೆಬನಾನ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವಂತೆ ಮಾಡಿದ ಹಸನ್ ನಸ್ರಲ್ಲಾ ಬೈರುತ್‌ನಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹತ್ಯೆಯಾಗಿದ್ದಾನೆ.
ಹೆಜ್ಬೊಲ್ಲಾ ಸಂಘಟನೆಯ ಪ್ರಭಾವಿ ನಾಯಕನಾದ ಹಸನ್ ನಸ್ರಲ್ಲಾನನ್ನು ಸೆಪ್ಟೆಂಬರ್ 27ರಂದು, ಲೆಬನಾನ್ ರಾಜಧಾನಿ ಬೈರುತ್‌ನ ದಕ್ಷಿಣ ಉಪನಗರದಲ್ಲಿ ವಾಯು ದಾಳಿ ನಡೆಸಿ, ಇಸ್ರೇಲ್ ಹತ್ಯೆಗೈದಿದೆ. ಈ ಘಟನೆ ಹೆಜ್ಬೊಲ್ಲಾ ಸಂಘಟನೆಗೆ ಭಾರೀ ಹಿನ್ನಡೆ ಉಂಟುಮಾಡಿದೆ.
ಸೆಪ್ಟೆಂಬರ್ 28, ಶನಿವಾರದಂದು ಇಸ್ರೇಲ್ ಮತ್ತು ಹೆಜ್ಬೊಲ್ಲಾ ಎರಡೂ ನಸ್ರಲ್ಲಾ ಸಾವನ್ನು ಖಚಿತಪಡಿಸಿದವು.
64 ವರ್ಷದ ನಸ್ರಲ್ಲಾ 1992ರಿಂದ ಷಿಯಾ ಅರೆ ಮಿಲಿಟರಿ ಪಡೆಯಾದ ಹೆಜ್ಬೊಲ್ಲಾದ ನೇತೃತ್ವ ವಹಿಸಿದ್ದ.
ಕಳೆದ ವರ್ಷ ಅಕ್ಟೋಬರ್ 7ರಂದು, ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿತು. ಅದಕ್ಕೆ ಇಸ್ರೇಲ್ ಗಾಜಾದಲ್ಲಿ ಕಾರ್ಯಾಚರಣೆ ಆರಂಭಿಸಿತು. ಆಗ ಅಮೆರಿಕಾ, ಮತ್ತಿತರ ದೇಶಗಳಿಂದ ಭಯೋತ್ಪಾದಕ ಸಂಘಟನೆ ಎಂದು ಕರೆಯಲ್ಪಟ್ಟಿರುವ ಹೆಜ್ಬೊಲ್ಲಾ, ಗಾಜಾಗೆ ಬೆಂಬಲ ಸೂಚಿಸಿ ಇಸ್ರೇಲ್ ಗಡಿಯಲ್ಲಿ ತೀವ್ರ ಚಕಮಕಿ ಆರಂಭಿಸಿತು.
ಯಾರು ಈ ನಸ್ರಲ್ಲಾ?
ನಸ್ರಲ್ಲಾ 1960ರ ಆಗಸ್ಟ್‌ನಲ್ಲಿ ಪೂರ್ವ ಬೈರುತ್‌ನ ಬುರ್ಜ್ ಹಮ್ಮೌದ್ ಪ್ರದೇಶದಲ್ಲಿನ ಒಂದು ಬಡ ಕುಟುಂಬದಲ್ಲಿ ಜನಿಸಿದ್ದ. ಒಂಬತ್ತು ಜನ ಮಕ್ಕಳಲ್ಲಿ ನಸ್ರಲ್ಲಾ ಹಿರಿಯವನಾಗಿದ್ದು, ಆತನ ತಂದೆ ಸಣ್ಣ ತರಕಾರಿ ಅಂಗಡಿ ನಡೆಸಿ, ಜೀವನ ನಡೆಸುತ್ತಿದ್ದರು. ನಸ್ರಲ್ಲಾ ಬಹುತೇಕ ಕ್ರೈಸ್ತ ನೆರೆಹೊರೆಯಲ್ಲಿ ಬೆಳೆದಿದ್ದ. 1975ರಲ್ಲಿ ಲೆಬನಾನ್‌ನಲ್ಲಿ ಅಂತರ್ಯುದ್ಧ ಆರಂಭವಾದಾಗ ಆತನ ಕುಟುಂಬ ಅಲ್ಲಿಂದ ಪಲಾಯನ ಮಾಡಿ, ದಕ್ಷಿಣದ ಟೈರ್ ನಗರದ ಬಳಿಯ ಬಜೌರೀ ಎಂಬ ಹಳ್ಳಿಗೆ ತೆರಳಿದರು.
ಬಜೌರೀಯಲ್ಲಿ ನಸ್ರಲ್ಲಾ ತನ್ನ ಪ್ರೌಢಶಾಲಾ ವ್ಯಾಸಂಗ ಮುಗಿಸಿ, ಕೆಲ ಸಮಯ ಷಿಯಾ ರಾಜಕೀಯ ಸಂಸ್ಥೆಯಾದ ಅಮಾಲ್ ಚಳುವಳಿಯ ಸದಸ್ಯನಾದ. 1976ರಿಂದ 1978ರ ನಡುವೆ, ನಸ್ರಲ್ಲಾ ಇರಾಕಿನ ನಜಾಫ್ ಎಂಬಲ್ಲಿ ಕುರಾನ್ ಅಧ್ಯಯನ ನಡೆಸಿದ. ಆದರೆ ಆ ಸಮಯದಲ್ಲಿ ಸುನ್ನಿ ಬಾತ್ ಪಕ್ಷ ಇರಾಕ್‌ನ ಷಿಯಾ ಮುಸ್ಲಿಮರನ್ನು ಕಠಿಣವಾಗಿ ನಡೆಸಿಕೊಳ್ಳುತ್ತಿತ್ತು. ಇದರ ಪರಿಣಾಮವಾಗಿ ನಸ್ರಲ್ಲಾ ಲೆಬನಾನ್‌ಗೆ ಮರಳುವಂತಾಯಿತು. ಬಳಿಕ ಆತ ಇರಾನಿನಲ್ಲಿ ವ್ಯಾಸಂಗಕ್ಕೆ ತೆರಳಿ, 1989ರಲ್ಲಿ ಅಧ್ಯಯನ ಪೂರ್ಣಗೊಳಿಸಿದ. ನಸ್ರಲ್ಲಾ 1978ರಲ್ಲಿ ಫಾತಿಮಾ ಯಾಸ್ಸಿನ್ ಎಂಬಾಕೆಯನ್ನು ಮದುವೆಯಾದ. ಆತನ ಓರ್ವ ಮಗ, ಹಾದಿ ಎಂಬಾತ ತನ್ನ 18ನೇ ವಯಸ್ಸಿನಲ್ಲಿ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ದಾಳಿಯಲ್ಲಿ ಹತ್ಯೆಗೀಡಾದ.
ನಸ್ರಲ್ಲಾ ಬೆಳವಣಿಗೆ
1982ರಲ್ಲಿ ಹೆಜ್ಬೊಲ್ಲಾ ಸಂಘಟನೆ ಸ್ಥಾಪನೆಯಾದಾಗ ನಸ್ರಲ್ಲಾ ಕೇವಲ 22 ವರ್ಷ ವಯಸ್ಸಿನ ಯುವಕನಾಗಿದ್ದ. ಹೆಜ್ಬೊಲ್ಲಾ ಸಂಘಟನೆಯನ್ನು ಇರಾನಿನ ಅಯತೊಲ್ಲಾ ರುಹೊಲ್ಲಾ ಖೊಮೇನಿಯ ಬೆಂಬಲಿಗ ಷಿಯಾ ಮುಸ್ಲಿಂ ಧಾರ್ಮಿಕ ಮುಖಂಡರು ಸ್ಥಾಪಿಸಿದ್ದರು. ಈ ಸಂಘಟನೆಯನ್ನು ಲೆಬನಾನಿನ ಮೇಲೆ ಇಸ್ರೇಲಿನ ಎರಡನೇ ದಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಾಪಿಸಲಾಯಿತು.
ಹೆಜ್ಬೊಲ್ಲಾ ಸ್ಥಾಪನೆಯಾದ ಕೆಲ ಸಮಯದಲ್ಲಿ ನಸ್ರಲ್ಲಾ ಆ ಗುಂಪಿಗೆ ಸೇರ್ಪಡೆಯಾದ. ವರ್ಷಗಳು ಕಳೆದಂತೆ, ಆತ ಬೇಕಾ ಪ್ರಾಂತ್ಯ ಮತ್ತು ಬೈರುತ್‌ಗಳಲ್ಲಿ ಹೆಜ್ಬೊಲ್ಲಾವನ್ನು ಮುಂದುವರಿಸುವುದು ಸೇರಿದಂತೆ, ಸಂಘಟನೆಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದ. 1992ರಲ್ಲಿ, ನಸ್ರಲ್ಲಾ ಹೆಜ್ಬೊಲ್ಲಾ ಸಂಘಟನೆಯ ಮುಖ್ಯಸ್ಥನಾದ. ಆತ ಹೆಜ್ಬೊಲ್ಲಾ ಸಂಘಟನೆಯ ಮುಖಂಡನಾದ ಅಬ್ಬಾಸ್ ಅಲ್ ಮುಸಾವಿ ದಕ್ಷಿಣ ಲೆಬನಾನ್‌ನಲ್ಲಿ ಕಾರ್‌ನಲ್ಲಿ ಚಲಿಸುತ್ತಿದ್ದಾಗ ಹೆಲಿಕಾಪ್ಟರ್‌ನಿಂದ ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮೃತನಾದ ಬಳಿಕ, ಹೆಜ್ಬೊಲ್ಲಾದ ನೇತೃತ್ವ ವಹಿಸಿಕೊಂಡ.
ನಸ್ರಲ್ಲಾ ನಾಯಕತ್ವದಲ್ಲಿ ಹೆಜ್ಬೊಲ್ಲಾ ಸಂಘಟನೆ ಇರಾನಿನ ಪ್ರಬಲ ಬೆಂಬಲ ಪಡೆದುಕೊಂಡು, ಸಣ್ಣ ಪ್ರಮಾಣದ ಮಿಲಿಟರಿ ಸಂಘಟನೆಯಿಂದ, ದೊಡ್ಡದಾದ ಅರೆ ಮಿಲಿಟರಿ ಪಡೆಯಾಗಿ ರೂಪುಗೊಂಡಿತು. ಅದರೊಡನೆ ಮುಖ್ಯ ರಾಜಕೀಯ ಶಕ್ತಿಯಾಗಿ ಬೆಳೆಯಿತು. ಇಂದು ಹೆಜ್ಬೊಲ್ಲಾ ಸಂಘಟನೆಯಲ್ಲಿ 50,000 - 1,00,000 ಯೋಧರಿದ್ದಾರೆ. ಸಂಘಟನೆಯ ಬಳಿ 1,50,000 - 2 ಲಕ್ಷ ರಾಕೆಟ್‌ಗಳು, ಮೋರ್ಟಾರ್ ಬಾಂಬ್‌ಗಳು, ಹಾಗೂ ಕ್ಷಿಪಣಿಗಳಿವೆ ಎಂದು ಅಂದಾಜಿಸಲಾಗಿದೆ. ಅಕ್ಟೋಬರ್ 2021ರಲ್ಲಿ, ನಸ್ರಲ್ಲಾ ತನ್ನ ಶಕ್ತಿಶಾಲಿ ಪಡೆಯಲ್ಲಿ 1 ಲಕ್ಷ ತರಬೇತಿ ಹೊಂದಿರುವ, ಶಸ್ತ್ರಸಜ್ಜಿತ ಯೋಧರು ಸನ್ನದ್ಧರಾಗಿದ್ದಾರೆ ಎಂದಿದ್ದ.
ಇಸ್ರೇಲ್ 2000ನೇ ಇಸವಿಯಲ್ಲಿ ದಕ್ಷಿಣ ಲೆಬನಾನ್‌ನಿಂದ ಹಿಂದೆ ಸರಿದಾಗ ನಸ್ರಲ್ಲಾ ಅತ್ಯಂತ ಜನಪ್ರಿಯನಾದ. 2004ರಲ್ಲಿ, ಹೆಜ್ಬೊಲ್ಲಾ ಮತ್ತು ಇಸ್ರೇಲ್ ನಡುವೆ ನಡೆದ ಬಂಧಿತರ ಹಸ್ತಾಂತರವನ್ನು ರೂಪಿಸುವಲ್ಲಿ ಆತ ಮಹತ್ವದ ಪಾತ್ರ ನಿರ್ವಹಿಸಿದ್ದ. ಈ ಸಂದರ್ಭದಲ್ಲಿ ನಾಲ್ವರು ಇಸ್ರೇಲಿಯನ್ನರ ಬಿಡುಗಡೆಗೆ ಬದಲಾಗಿ, ಇಸ್ರೇಲಿನಲ್ಲಿ ಸೆರೆಯಾಳುಗಳಾಗಿದ್ದ ನೂರಾರು ಹೆಜ್ಬೊಲ್ಲಾ ಸದಸ್ಯರು, ಪ್ಯಾಲೆಸ್ತೀನಿಯನ್ನರು, ಹಾಗೂ ಅರಬ್ಬರು ಬಿಡುಗಡೆ ಹೊಂದಿದರು.
ಜುಲೈ 2006ರಲ್ಲಿ ಇಸ್ರೇಲ್ ವಿರುದ್ಧದ 34 ದಿನಗಳ ಯುದ್ಧದಲ್ಲಿ ನಸ್ರಲ್ಲಾ 'ದೈವಿಕ ಗೆಲುವು' ಸಾಧಿಸಿರುವುದಾಗಿ ಘೋಷಿಸಿದ. ಈ ಯುದ್ಧದಲ್ಲಿ ಲೆಬನಾನ್‌ನಲ್ಲಿ ಕನಿಷ್ಠ 1,190 ಜನರು ಸಾವಿಗೀಡಾಗಿದ್ದು, ಬಹುತೇಕ 9 ಲಕ್ಷ ಜನರು ತಮ್ಮ ಮನೆಗಳನ್ನು ಬಿಟ್ಟು ತೆರಳುವಂತಾಯಿತು. ಈ ಯುದ್ಧದಲ್ಲಿ ಲೆಬನಾನಿನ ಬಹುಪಾಲು ಮೂಲಭೂತ ಸೌಕರ್ಯಗಳು ನಾಶಗೊಂಡಿದ್ದವು. ಇಸ್ರೇಲ್‌ನಲ್ಲಿ ನಾಗರಿಕರು ಮತ್ತು ಯೋಧರು ಸೇರಿದಂತೆ, ಕನಿಷ್ಠ 160 ಜನರು ಪ್ರಾಣ ಕಳೆದುಕೊಂಡಿದ್ದರು.
ಕಳೆದ ಒಂದು ದಶಕದಲ್ಲಿ, ಹೆಜ್ಬೊಲ್ಲಾ ಮಧ್ಯ ಪೂರ್ವ ಪ್ರದೇಶದಲ್ಲಿ ಇರಾನಿನ ಪ್ರಮುಖ ಪ್ರಾಕ್ಸಿ ಸಂಘಟನೆಯಾಗಿ ಬೆಳೆದಿದೆ. ಇದು ಇರಾನಿನಿಂದ ಆಯುಧಗಳು, ತರಬೇತಿ ಮತ್ತು ಆರ್ಥಿಕ ಬೆಂಬಲವನ್ನು ಪಡೆದುಕೊಂಡಿದೆ. ಸಿರಿಯನ್ ಅಂತರ್ಯುದ್ಧದ ಸಂದರ್ಭದಲ್ಲಿ, ಹೆಜ್ಬೊಲ್ಲಾ ಸಿರಿಯಾ ಅಧ್ಯಕ್ಷ ಬಶಾರ್ ಅಲ್ ಅಸಾದ್‌ಗೆ ಬೆಂಬಲ ವ್ಯಕ್ತಪಡಿಸಲು ತನ್ನ ಯೋಧರನ್ನು ಸಿರಿಯಾಗೆ ಕಳುಹಿಸಿತ್ತು. ಹೌತಿ ಬಂಡುಕೋರರಿಗೆ ನೆರವಾಗಲು ಯೋಧರನ್ನು ಯೆಮೆನ್‌ಗೂ ಕಳುಹಿಸಿತ್ತು.
ಅಕ್ಟೋಬರ್ 8, 2023ರಂದು ಗಾಜಾ ಪಟ್ಟಿಯಲ್ಲಿ ಇಸ್ರೇಲ್ - ಹಮಾಸ್ ಯುದ್ಧ ಆರಂಭವಾದ ಮರುದಿನ, ಹೆಜ್ಬೊಲ್ಲಾ ಸಂಘಟನೆ ಇಸ್ರೇಲ್ ಮೇಲೆ ರಾಕೆಟ್‌ಗಳನ್ನು ಉಡಾಯಿಸಲು ಆರಂಭಿಸಿತು. ನವೆಂಬರ್ ತಿಂಗಳಲ್ಲಿ ಭಾಷಣ ಮಾಡಿದ ನಸ್ರಲ್ಲಾ ಇಸ್ರೇಲ್ ವಿರುದ್ಧ ಹಮಾಸ್ ಮತ್ತು ಪ್ಯಾಲೆಸ್ತೀನ್ ನಾಗರಿಕರಿಗೆ ಬೆಂಬಲ ಸೂಚಿಸಲು ಕದನಕ್ಕಿಳಿದಿದೆ ಎಂದಿದ್ದ. ಗಾಜಾ ಯುದ್ಧ ಪೂರ್ಣಗೊಳ್ಳುವ ತನಕವೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ನಸ್ರಲ್ಲಾ ಹೇಳಿದ್ದ. ಆ ಬಳಿಕದ ತಿಂಗಳುಗಳಲ್ಲಿ ನಸ್ರಲ್ಲಾ ತನ್ನ ಭಾಷಣಗಳಲ್ಲಿ ಇದೇ ಮಾತನ್ನು ಪುನರಾವರ್ತಿಸಿದ್ದ. ತನ್ನ ಇತ್ತೀಚಿನ ಭಾಷಣದಲ್ಲಿ ನಸ್ರಲ್ಲಾ ಲೆಬನಾನ್‌ನಲ್ಲಿ ಪೇಜರ್ - ವಾಕಿಟಾಕಿ ಸ್ಫೋಟಗೊಂಡಿದ್ದನ್ನು ಪ್ರಸ್ತಾಪಿಸಿದ್ದ. "ಲೆಬನಾನ್‌ನಲ್ಲಿನ ಪ್ರತಿರೋಧ ಇನ್ನೂ ಮುಂದುವರಿಯಲಿದೆ. ಗಾಜಾ, ವೆಸ್ಟ್ ಬ್ಯಾಂಕ್ ಸೇರಿದಂತೆ, ಎಲ್ಲ ತುಳಿತಕ್ಕೊಳಗಾದ ಜನರಿಗೆ ನಮ್ಮ ಬೆಂಬಲ ಮುಂದುವರಿಯಲಿದೆ" ಎಂದಿದ್ದ.
ಇಸ್ರೇಲ್‌ನಿಂದ ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಭಾರಿ ವಾಯುದಾಳಿ
ನಸ್ರಲ್ಲಾ ಸದಾ ವರ್ಚಸ್ವಿ ನಾಯಕ ಎಂದು ಗುರುತಿಸಿಕೊಂಡಿದ್ದು, ಲೆಬನಾನ್ ಮತ್ತು ಇತರ ಷಿಯಾ ಜನಸಂಖ್ಯೆ ಹೊಂದಿರುವ ಅರಬ್ ದೇಶಗಳಾದ ಸಿರಿಯಾ, ಇರಾಕ್‌ಗಳ ಷಿಯಾ ಸಮುದಾಯದ ಪ್ರಬಲ ಬೆಂಬಲವನ್ನೂ ಗಳಿಸಿದ್ದ. ಆತ ಇತ್ತೀಚೆಗೆ ತನ್ನ ಬೆಂಬಲಿಗರನ್ನು ಉದ್ದೇಶಿಸಿ ರ‌್ಯಾಲಿ ಮಾಡಿ, ಭಾಷಣ ನಡೆಸಿದ್ದ. ಇಸ್ರೇಲಿನ ಸಂಭಾವ್ಯ ಆಕ್ರಮಣದ ಭಯದಿಂದಾಗಿ ನಸ್ರಲ್ಲಾ ಹಲವಾರು ವರ್ಷಗಳ ಕಾಲ ಬಚ್ಚಿಟ್ಟುಕೊಂಡಿದ್ದ. ವರದಿಗಳ ಪ್ರಕಾರ, ಆತ ತೀವ್ರ ಭದ್ರತೆಯೊಡನೆ ತನ್ನ ಗುಂಪಿನ ಸದಸ್ಯರು ಮತ್ತು ಇತರ ಅಧಿಕಾರಿಗಳೊಡನೆ ಒಂದು ಕೇಂದ್ರೀಯ ಬಂಕರ್‌ನಲ್ಲಿ ಸಭೆ ಸೇರುತ್ತಿದ್ದ.