ಲೋಕಾಯುಕ್ತ ತನಿಖೆ ಎದುರಿಸುವ ನಿರ್ಧಾರಕ್ಕೆ ಸಿಎಂ ಬಂದರೆ ಅದಕ್ಕಿರುವ ಅಡ್ಡಿ ಆತಂಕಗಳು ಏನು?

By Prashant Natu  |  First Published Sep 29, 2024, 7:43 AM IST

2011ರಲ್ಲಿ ಯಡಿಯೂರಪ್ಪ ವಿರುದ್ಧ ದೂರುಗಳು ದಿಲ್ಲಿ ತಲುಪಿದಾಗ ವರಿಷ್ಠರು ರಾಜ್ಯದ ಕೆಲ ಹಿರಿಯ ಅಧಿಕಾರಿಗಳನ್ನು ದಿಲ್ಲಿಗೆ ಕರೆಸಿಕೊಂಡಿದ್ದರು. ಆರೋಪದಲ್ಲಿ ಹುರುಳಿದೆಯೇ ಎಂದು ಅವರು ಕೇಳಿದಾಗ, ಅಧಿಕಾರಿಗಳು ‘ಈಗಲೇ ರಾಜೀನಾಮೆ ಕೊಡುವುದು ಸೂಕ್ತ’ ಎಂದು ಹೇಳಿದರಂತೆ. ಆದರೆ ಯಡಿಯೂರಪ್ಪ ಒಪ್ಪಲಿಲ್ಲ. ಆಮೇಲೆ ಯಡಿಯೂರಪ್ಪ ಜೈಲಿಗೂ ಹೋದರು, ರಾಜೀನಾಮೆಯನ್ನೂ ಕೊಟ್ಟರು.


- , ಏಷ್ಯಾನೆಟ್‌ ಸುವರ್ಣ ನ್ಯೂಸ್

Muda case ರಾಜ್ಯದ ರಾಜಕೀಯ ಇತಿಹಾಸದಲ್ಲಿ ದೇವರಾಜ್ ಅರಸು, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ವೀರಪ್ಪ ಮೊಯ್ಲಿ ಇವರೆಲ್ಲರೂ ಅಧಿಕಾರದಲ್ಲಿದ್ದಾಗ ತನಿಖೆಯನ್ನು ಎದುರಿಸಿದವರೇ. ಆದರೆ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿ ಎಫ್‌ಐಆರ್‌ ಹಾಕಿಸಿಕೊಂಡವರು ಇಬ್ಬರು. ಯಡಿಯೂರಪ್ಪ ಮೊದಲನೆಯವರು, ಸಿದ್ದರಾಮಯ್ಯ ನಂತರದವರು. ಯಡಿಯೂರಪ್ಪ ಪ್ರಕರಣದಲ್ಲಿ ಆಗಿನ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ತನಿಖೆಗೆ ಅನುಮತಿ ಕೊಟ್ಟ ನಂತರ ಯಡಿಯೂರಪ್ಪ ಅದನ್ನು ಪ್ರಶ್ನಿಸಿ ನೇರವಾಗಿ ಹೈಕೋರ್ಟ್‌ಗೆ ಹೋಗಲಿಲ್ಲ, ಬದಲಾಗಿ ಕೆಳ ನ್ಯಾಯಾಲಯದಲ್ಲಿ ಕೇಸು ದಾಖಲಾದಾಗ ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗಿ ತಡೆಯಜ್ಞೆ ತಂದರು. ಆದರೆ ಲೋಕಾಯುಕ್ತರು ಗಣಿ ಹಗರಣದಲ್ಲಿ ವರದಿ ನೀಡಿದಾಗ ರಾಜೀನಾಮೆ ನೀಡಿ ಜೈಲಿಗೆ ಹೋಗಿ ಬಂದು ಆಮೇಲೆ ತಾಂತ್ರಿಕ ಅಂಶಗಳನ್ನು ಇಟ್ಟುಕೊಂಡು ಹೈಕೋರ್ಟ್‌ಗೆ ಹೋದರು. ಆಗ ರಾಜ್ಯಪಾಲರು ನೀಡಿದ್ದ ಅನುಮತಿಗೆ ತಡೆಯಾಜ್ಞೆ ಸಿಕ್ಕು ಯಡಿಯೂರಪ್ಪ ನಿರಾಳರಾದರು. ಆದರೆ ಸಿದ್ದು, ರಾಜ್ಯಪಾಲರು ಕೊಟ್ಟಿದ್ದ ತನಿಖೆಯ ಆದೇಶವನ್ನು ಪ್ರಶ್ನಿಸಿ ಕೂಡಲೇ ಹೈಕೋರ್ಟ್‌ಗೆ ಹೋಗಿದ್ದರಿಂದ ಬರೀ ರಾಜ್ಯಪಾಲರ ಅನುಮತಿ ಸರಿಯೋ ತಪ್ಪೋ ಎಂದು ತಾಂತ್ರಿಕ ಅಂಶಗಳ ಮೇಲೆ ಮಾತ್ರ ತೀರ್ಪು ಬಂದಿಲ್ಲ. ತೀರ್ಪಿನಲ್ಲಿ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬ ಹೇಗೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಲಾಭ ಮಾಡಿಕೊಂಡಿತು ಎನ್ನುವ ಬಗ್ಗೆ ಎಳೆ ಎಳೆಯಾದ ಉಲ್ಲೇಖ ಇದೆ. ಎಲ್ಲಿಯವರೆಗೆ ಮೇಲಿನ ಕೋರ್ಟ್‌ಗಳು ಇದರ ಬಗ್ಗೆ ಸರಿ-ತಪ್ಪು ವ್ಯಾಖ್ಯಾನ ಮಾಡುವುದಿಲ್ಲವೋ ಅಲ್ಲಿಯವರೆಗೆ ಮುಖ್ಯಮಂತ್ರಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ. ಈಗ ಯಾವುದೇ ಮೇಲ್ಮನವಿ ಸಲ್ಲಿಸದೇ ಲೋಕಾಯುಕ್ತ ತನಿಖೆಯನ್ನು ಎದುರಿಸುವ ತೀರ್ಮಾನಕ್ಕೆ ಬಂದಿರುವ ಮುಖ್ಯಮಂತ್ರಿಗಳು ಪ್ರಕರಣ ಬೆಳಕಿಗೆ ಬಂದ ದಿನ ನೇರವಾಗಿ ಲೋಕಾಯುಕ್ತರಿಗೆ ತನಿಖೆ ಜವಾಬ್ದಾರಿ ವಹಿಸಿದ್ದರೆ ಇಷ್ಟೆಲ್ಲಾ ಮುಖಭಂಗ, ಮುಜುಗರ ಆಗುವ ಪ್ರಸಂಗವೇ ಉದ್ಭವ ಆಗುತ್ತಿರಲಿಲ್ಲ. ರಾಜನ ಸಾಮರ್ಥ್ಯ ಮತ್ತು ದೌರ್ಬಲ್ಯ ಮಂತ್ರಿಗಳ ಸಲಹೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ವಿಚಿತ್ರ ನೋಡಿ, ಯಡಿಯೂರಪ್ಪ ಸುತ್ತಮುತ್ತಲಿನ ಜನರೇ ಅವರು ಜೈಲಿಗೆ ಹೋಗಲು ಕಾರಣರಾದರು. ಈಗ ಸಿದ್ದರಾಮಯ್ಯನವರಿಗೂ ಇಷ್ಟೆಲ್ಲಾ ಸಂಕಷ್ಟ ಬರಲು ಆಜುಬಾಜು ಓಡಾಡುವವರೇ ಸ್ಪಷ್ಟ ಕಾರಣಕರ್ತರು.

Tap to resize

Latest Videos

undefined

ಲೋಕಾಯುಕ್ತದ ಸಮಸ್ಯೆ ಏನು?

1984ರಲ್ಲಿ ಲೋಕಾಯುಕ್ತ ಕಾನೂನು ಬಂದಿದ್ದೇ ಮುಖ್ಯಮಂತ್ರಿಗಳ ವಿರುದ್ಧ ತನಿಖೆ ನಡೆಸಲು ಅಧಿಕಾರ ಇರುವ ಒಂದು ಸ್ವತಂತ್ರ ತನಿಖಾ ಸಂಸ್ಥೆ ಬೇಕು ಎಂಬ ಕಾರಣಕ್ಕೆ. ಲೋಕಾಯುಕ್ತ ಸಂಸ್ಥೆ ಸ್ವಾಯತ್ತ ಆದರೂ ಕೂಡ ಲೋಕಾಯುಕ್ತ ಪೊಲೀಸರ ಆಡಳಿತಾತ್ಮಕ ವ್ಯವಹಾರವೆಲ್ಲ ಗೃಹ ಇಲಾಖೆಯ ಬಳಿಯೇ ಇರುತ್ತದೆ. ಹೀಗಿರುವಾಗ ಲೋಕಾಯುಕ್ತ ಪೊಲೀಸರು ಎಷ್ಟು ಪಾರದರ್ಶಕತೆಯಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬಹುದು ಅನ್ನೋದು ಪ್ರಶ್ನಾರ್ಥಕ. ಒಂದು ವೇಳೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಅಥವಾ ಅವರ ಕುಟುಂಬ ವರ್ಗವನ್ನು ಬಂಧಿಸಿ ವಿಚಾರಣೆ ನಡೆಸುವ ನಿರ್ಣಯ ತೆಗೆದುಕೊಂಡರೆ, ಸಿದ್ದು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗೆ ಇಳಿಯದೇ ಬೇರೆ ದಾರಿ ಇಲ್ಲ. ಒಂದು ವೇಳೆ ಲೋಕಾಯುಕ್ತ ಪೊಲೀಸರು ಯಾರನ್ನೂ ಬಂಧಿಸದೇ ಬರೀ ವಿಚಾರಣೆ ನಡೆಸುವ ನಿರ್ಣಯ ತೆಗೆದುಕೊಂಡರೆ ಮುಖ್ಯಮಂತ್ರಿಗಳ ಒತ್ತಡದಲ್ಲಿ ಲೋಕಾಯುಕ್ತ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂಬ ವಾದಕ್ಕೆ ಬಲ ಬರಬಹುದು. ಆಗ ಸಿಬಿಐ ತನಿಖೆ ನಡೆಸಬೇಕು ಅನ್ನುವ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತೆಗೆದುಕೊಳ್ಳುವ ನಿರ್ಣಯದ ಬಗ್ಗೆ ಕುತೂಹಲ ಸಹಜ.

India Gate: ರಾಷ್ಟ್ರೀಯ ಬಿಜೆಪಿಗೆ ‘ಅಧ್ಯಕ್ಷ ಸಂಕಟ’: ಪ್ರಶಾಂತ್‌ ನಾತು

ಆದರೆ ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರದ ಇಶಾರೆಯಂತೆ ನಡೆದರೆ ಸಿಬಿಐ ಮೋದಿ ಸಾಹೇಬರ ಕಣ್ಣು ಸನ್ನೆಯಂತೆ ಕೆಲಸ ನಿರ್ವಹಿಸುತ್ತದೆ. ಹೀಗಿರುವಾಗ ಮುಡಾ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ನ್ಯಾಯಾಲಯಗಳೇ ಒಂದು ಹೊಸ ಮಾರ್ಗ ತೋರಿಸಬೇಕು ಅಷ್ಟೆ. ಒಂದು ಮಾತಿದೆ- You cannot be a judge against your own case. ನಿಮ್ಮ ವಿರುದ್ಧದ ಪ್ರಕರಣದಲ್ಲಿ ನೀವೇ ನ್ಯಾಯಮೂರ್ತಿ ಆದರೆ ಹೇಗೆ? ಮುಡಾ ಪ್ರಕರಣದಲ್ಲಿ ಒಂದು ರೀತಿ ಮುಖ್ಯಮಂತ್ರಿ ವಿರುದ್ಧ ಲೋಕಾಯುಕ್ತ ತನಿಖೆ ಎಂದರೆ ನಿಮ್ಮ ವಿರುದ್ಧ ತನಿಖೆಯನ್ನು ನಿಮ್ಮ ಕೈಕೆಳಗಿನ ಸಿಬ್ಬಂದಿ ನಡೆಸಿದಂತೆ.

ಹಾಗಿದ್ದರೆ ಸಿದ್ದು ಭವಿಷ್ಯ ಏನು?

ಇವತ್ತು ಕರ್ನಾಟಕದಲ್ಲಿ ಎಲ್ಲೇ ಹೋದರೂ ಜನಮಾನಸದಲ್ಲಿ ಕೇಳಿಬರುವ ಒಂದೇ ಪ್ರಶ್ನೆ- ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬರುತ್ತಾ? ಒಂದು ವೇಳೆ ತನಿಖಾ ಸಂಸ್ಥೆಗಳು ಪ್ರಕರಣದಲ್ಲಿ ಮುಖ್ಯಮಂತ್ರಿಯನ್ನು ಬಂಧಿಸುವ ಪ್ರಮೇಯ ಬಂದರೆ ಸಿದ್ದು ರಾಜೀನಾಮೆ ನೀಡದೆ ವಿಧಿಯಿಲ್ಲ. ಒಂದು ವೇಳೆ ಮುಖ್ಯಮಂತ್ರಿಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಅಲ್ಲಿ ಹೈಕೋರ್ಟ್ ತೀರ್ಪು ಊರ್ಜಿತವಾದರೂ ಕೂಡ ಅಧಿಕಾರದಿಂದ ಕೆಳಗೆ ಇಳಿಯಬೇಕಾಗುತ್ತದೆ. ಅದಕ್ಕಾಗಿಯೇ ಮುಖ್ಯಮಂತ್ರಿಗಳು ಸುಪ್ರೀಂಕೋರ್ಟಲ್ಲೇ ಆಗಲಿ, ಹೈಕೋರ್ಟ್ ವಿಭಾಗೀಯ ಪೀಠದಲ್ಲೇ ಆಗಲಿ ಮೇಲ್ಮನವಿ ಸಲ್ಲಿಸುವುದು ಬೇಡ ಎಂದು ಕಾನೂನು ಪರಿಣತರು ಸಲಹೆ ನೀಡುತ್ತಿದ್ದಾರೆ. ಒಂದು ವೇಳೆ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸರು ಬೇಡ, ಸಿಬಿಐ ತನಿಖೆಗೆ ಕೊಡಿ ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗೆ ಮಾನ್ಯತೆ ಸಿಕ್ಕಿ ಸಿಬಿಐ ತನಿಖೆಗೇನಾದರೂ ಆದೇಶವಾದರೆ ನಿಸ್ಸಂದೇಹವಾಗಿ ಸಿದ್ದುಗೆ ಕಷ್ಟ ಜಾಸ್ತಿ ಆಗಬಹುದು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಲೋಕಾಯುಕ್ತ ಕಾನೂನಿನಲ್ಲೇ ಮುಖ್ಯಮಂತ್ರಿಗಳ ವಿರುದ್ಧದ ತನಿಖೆಗೆ ಅವಕಾಶ ಇದೆ, ಸಿಬಿಐ ಯಾಕೆ ಬೇಕು ಎಂದು ತೀರ್ಪು ನೀಡಿದಲ್ಲಿ ಮುಖ್ಯಮಂತ್ರಿ ಸ್ವಲ್ಪ ನಿರಾಳರಾಗಿರಬಹುದು. ಆದರೆ ಏನೇ ಆಗಲಿ ಸಿದ್ದು ಮೇಲೆ ಬಂದಿರುವ ಕಳಂಕ ಅವರನ್ನು ಕೂಡ ಇತರ ರಾಜಕಾರಣಿಗಳ ಸಾಲಿನಲ್ಲಿ ತಂದು ನಿಲ್ಲಿಸಿದೆ. 2011ರಲ್ಲಿ ಯಡಿಯೂರಪ್ಪ ವಿರುದ್ಧ ದೂರುಗಳು ದಿಲ್ಲಿ ತಲುಪಿದಾಗ ನಿತಿನ್ ಗಡ್ಕರಿ, ಅಡ್ವಾಣಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಅವರು ರಾಜ್ಯದ ಕೆಲ ಹಿರಿಯ ಅಧಿಕಾರಿಗಳನ್ನು ದಿಲ್ಲಿಗೆ ಕರೆಸಿಕೊಂಡಿದ್ದರು. ಏನಿದೆ ಆರೋಪದಲ್ಲಿ, ಹುರುಳು ಇದೆಯಾ ಎಂದು ಕೇಳಿದಾಗ ಅಧಿಕಾರಿಗಳು ‘ಈಗಲೇ ರಾಜೀನಾಮೆ ಕೊಡುವುದು ಸೂಕ್ತ’ ಎಂದು ಹೇಳಿದರಂತೆ. ಆದರೆ ಯಡಿಯೂರಪ್ಪ ಒಪ್ಪಲಿಲ್ಲ. ಆಮೇಲೆ ಯಡಿಯೂರಪ್ಪ ಜೈಲಿಗೂ ಹೋಗಬೇಕಾಯಿತು, ರಾಜೀನಾಮೆಯನ್ನೂ ನೀಡಬೇಕಾಯಿತು.

ರಾಜಕೀಯ ಸಂದಿಗ್ಧದ ಪರಿಸ್ಥಿತಿ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೋ ಇಲ್ಲವೋ, ಆದರೆ ರಾಜಕೀಯವಾಗಿ ಹೈಕೋರ್ಟ್ ತೀರ್ಪು ಮತ್ತು ಲೋಕಾಯುಕ್ತ ಪೊಲೀಸರ ಎಫ್‌ಐಆರ್‌ ಕಾರಣದಿಂದ ಸ್ವಲ್ಪ ಮಟ್ಟಿಗೆ ದುರ್ಬಲರಾಗಿದ್ದಾರೆ ಅನ್ನೋದು ವಾಸ್ತವ. ಇದೇ ರೀತಿಯ ಮುಜುಗರಗಳು ಬರತೊಡಗಿದರೆ ದಸರಾ ಹಬ್ಬದ ನಂತರ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಗಳನ್ನು ಮನವೊಲಿಸುವ ಪ್ರಯತ್ನ ಶುರುಮಾಡಿದರೂ ಆಶ್ಚರ್ಯವಿಲ್ಲ. ಆದರೆ ಕಾಂಗ್ರೆಸ್ ಹೈಕಮಾಂಡ್‌ಗಿರುವ ದೊಡ್ಡ ತಲೆನೋವಿನ ಪ್ರಶ್ನೆ- ಸಿದ್ದು ಜಾಗದಲ್ಲಿ ಯಾರನ್ನು ತಂದು ಕೂರಿಸುವುದು. ನಿಸ್ಸಂದೇಹವಾಗಿ ಇವತ್ತಿನ ಸ್ಥಿತಿಯಲ್ಲಿ ರಾಜ್ಯ ರಾಜಕಾರಣದಲ್ಲಿ ಸಿದ್ದು ಬಿಟ್ಟರೆ ಪ್ರಬಲರು, ಸಾಮರ್ಥ್ಯ ಉಳ್ಳವರು ಅಂದರೆ ಡಿ.ಕೆ.ಶಿವಕುಮಾರ್‌. ಅವರಿಗೆ ಜಾತಿ ಬಲ, ಸಂಪನ್ಮೂಲ ಕ್ರೋಡೀಕರಣದ ಶಕ್ತಿ ಮತ್ತು ಆಕ್ರಮಣಕಾರಿ ಸ್ವಭಾವ ಇದೆ. ಆದರೆ ಡಿ.ಕೆ.ಶಿವಕುಮಾರ್‌ ಹೆಸರಿಗೆ ಸ್ವತಃ ಸಿದ್ದು ಮತ್ತು ಅವರ ಆಪ್ತರಾದ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್, ಕೆ.ಎನ್.ರಾಜಣ್ಣ ಒಪ್ಪುತ್ತಾರಾ? ಅದೇ ರೀತಿ, ಪರಮೇಶ್ವರ್‌ ಮತ್ತು ಜಾರಕಿಹೊಳಿ ಹೆಸರಿಗೆ ಡಿ.ಕೆ.ಶಿವಕುಮಾರ್‌ ಒಪ್ಪುತ್ತಾರೆ ಎಂದು ಅನ್ನಿಸುವುದಿಲ್ಲ. ಹಾಗಿರುವಾಗ ಸರ್ವಸಮ್ಮತಿಯ ಒಂದು ಹೆಸರು ಮಲ್ಲಿಕಾರ್ಜುನ ಖರ್ಗೆ. ಆದರೆ ಅವರಿಗೆ ವಯಸ್ಸು 80 ದಾಟಿದೆ. ರಾಷ್ಟ್ರೀಯ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರು ಮುಖ್ಯಮಂತ್ರಿ ಆದರೆ ಅಧಿಕಾರದ ಹಪಾಹಪಿ ಅನ್ನಿಸುವುದಿಲ್ಲವೇ ಎನ್ನುವ ಪ್ರಶ್ನೆ ಕೂಡ ಇದೆ. ಮತ್ತು ಖರ್ಗೆ ಸಾಹೇಬರನ್ನು ದಿಲ್ಲಿಯಿಂದ ಬೆಂಗಳೂರಿಗೆ ಕಳುಹಿಸಲು ಗಾಂಧಿ ಕುಟುಂಬ ಒಪ್ಪಬೇಕು. ಒಂದಂತೂ ನಿಜ, ಒಂದು ವೇಳೆ ರಾಜಕೀಯ ಕಾರಣದಿಂದ ಅಲ್ಲವಾದರೂ ಕಾನೂನಿನ ಕಾರಣದಿಂದ ಸಿದ್ದು ರಾಜೀನಾಮೆ ನೀಡುವ ಸ್ಥಿತಿ ಉದ್ಭವ ಆದರೆ ಕಾಂಗ್ರೆಸ್ ಪಾರ್ಟಿಯಲ್ಲಿ ಬಿಕ್ಕಟ್ಟು ಶುರುವಾಗುವುದು ಪಕ್ಕಾ.

ಟಗರಿನ ಹಿಂದೆ ಬಂಡೆ ಚಾಣಾಕ್ಷ ತಂತ್ರಗಾರಿಕೆ; ಡಿಕೆಶಿ ಏಕ್‌ದಂ ಸಿದ್ದು ಹಿಂದೆ ನಿಂತಿದ್ದೇಕೆ?

ಅರಸು, ಹೆಗಡೆ, ಬಂಗಾರಪ್ಪ ಕೇಸ್‌

ಹಾಲಿ ಮುಖ್ಯಮಂತ್ರಿಗಳ ವಿರುದ್ಧ ಆರೋಪ ಎಲ್ಲಾ ಕಾಲದಲ್ಲಿ ಬಂದಿದೆ. ಆದರೆ ಯಡಿಯೂರಪ್ಪ ಮತ್ತು ಸಿದ್ದು ಮೇಲೆ ಆದಂತೆ ಎಫ್‌ಐಆರ್‌ವರೆಗೆ ಹೋಗಿರಲಿಲ್ಲ. 1978ರಲ್ಲಿ ದೇವರಾಜ ಅರಸು ವಿರುದ್ಧ ಅವರ ಅಳಿಯನಿಗೆ ಅಕ್ರಮವಾಗಿ 8 ಎಕರೆ ಜಾಗ ಕೊಟ್ಟಿದ್ದು ಸೇರಿದಂತೆ 4 ಪ್ರಕರಣಗಳಲ್ಲಿ ವರದಿ ನೀಡುವಂತೆ ಮೊರಾರ್ಜಿ ದೇಸಾಯಿ ಸರ್ಕಾರ ನ್ಯಾಯಮೂರ್ತಿ ಗ್ರೋವರ್ ಆಯೋಗ ರಚಿಸಿತು. ರಾಜ್ಯದ ಮುಖ್ಯಮಂತ್ರಿಯ ವಿರುದ್ಧ ಕೇಂದ್ರ ಹೇಗೆ ತನಿಖೆ ನಡೆಸುತ್ತದೆ ಎಂದು ಅರಸು ಸುಪ್ರೀಂಕೋರ್ಟ್‌ಗೆ ಹೋದರು. ಗ್ರೋವರ್ ಆಯೋಗ ಎರಡು ವರ್ಷ ಬಿಟ್ಟು ಅರಸು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು ಎಂದು ವರದಿ ನೀಡಿತು. ಆದರೆ ವರದಿ ಮೇಲೆ ಕೇಂದ್ರ ಯಾವುದೇ ಕ್ರಮ ತೆಗೆದುಕೊಳ್ಳಲು ಅಧಿಕಾರ ಇರಲಿಲ್ಲ. ವರದಿ ಕಸದ ಬುಟ್ಟಿ ಸೇರಿಕೊಂಡಿತು. ನಂತರ ರಾಮಕೃಷ್ಣ ಹೆಗಡೆ ವಿರುದ್ಧ ಸಾರಾಯಿ ಬಾಟ್ಲಿಂಗ್ ಹಗರಣದ ಆರೋಪ ಬಂತು. ಹೆಗಡೆ ಮಗಳು ಮಮತಾರ ಗಂಡ ಮನು ನಿಚ್ಚಾನಿ ವಿರುದ್ಧ ಇದ್ದ ಆರೋಪ ದೊಡ್ಡ ಪ್ರಮಾಣದಲ್ಲಿ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂದು. ಆದರೆ ಹೈಕೋರ್ಟ್ ಈ ಆರೋಪದಲ್ಲಿ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಹೇಳಿತು. ಮುಂದೆ ರೇವಜೀತು ಭೂ ಹಗರಣದಲ್ಲಿ ಕೂಡ ಮುಖ್ಯಮಂತ್ರಿ ಹೆಗಡೆ ವಿರುದ್ಧ ಆಗಿನ ರಾಜ್ಯಪಾಲ ವೆಂಕಟಸುಬ್ಬಯ್ಯ ಅವರಿಗೆ ದೂರು ನೀಡಲಾಯಿತು. ಆದರೆ ಅಷ್ಟರಲ್ಲಿ ಬಿರುಗಾಳಿ ಎಬ್ಬಿಸಿದ ಟೆಲಿಫೋನ್ ಕದ್ದಾಲಿಕೆ ಆರೋಪದಲ್ಲಿ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಬೇಕಾಯಿತು. ಮುಂದೆ 1992ರಲ್ಲಿ ಬಂಗಾರಪ್ಪ ಕಂಪ್ಯೂಟರ್ ಕಂಪನಿ ಒಂದಕ್ಕೆ ಟೆಂಡರ್ ಪ್ರಕ್ರಿಯೆ ನಡೆಸದೇ 100 ಕಂಪ್ಯೂಟರ್ ಖರೀದಿಗೆ ₹5 ಕೋಟಿ ಹಣವನ್ನು ಒಂದೇ ದಿನ ಮುಂಗಡವಾಗಿ ಕೊಟ್ಟಿದ್ದು ಭಾರೀ ಚರ್ಚೆಯಾಗಿ ಪಿ.ವಿ.ನರಸಿಂಹ ರಾಯರು ಬಂಗಾರಪ್ಪ ರಾಜೀನಾಮೆ ಪಡೆಯುವ ಸ್ಥಿತಿ ನಿರ್ಮಾಣವಾಯಿತು. ಮುಂದೆ ಮುಖ್ಯಮಂತ್ರಿಯಾದ ವೀರಪ್ಪ ಮೊಯ್ಲಿ ಈ ಕ್ಲಾಸಿಕ್ ಕಂಪ್ಯೂಟರ್‌ ಹಗರಣವನ್ನು ಸಿಬಿಐಗೆ ವಹಿಸಿದರು. ಆದರೆ ಅರಸು, ಹೆಗಡೆ ಮತ್ತು ಬಂಗಾರಪ್ಪ ಮೇಲಿನ ಆರೋಪಗಳು ಮತ್ತು ಆಗಿನ ಹೈಕಮಾಂಡ್‌ಗಳು ತೆಗೆದುಕೊಂಡ ನಿರ್ಧಾರದಿಂದ ಆಯಾ ರಾಜಕೀಯ ಪಾರ್ಟಿಗಳಿಗೆ ಆಯಾ ಸಂದರ್ಭದಲ್ಲಿ ನಷ್ಟ ಆಗಿದ್ದು ಮಾತ್ರ ಸತ್ಯ.

click me!