ಭದ್ರತಾ ವಿದ್ರೋಹ: ಭಾರತದ ರಕ್ಷಣಾ ರಹಸ್ಯಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ ಬಿಇಎಲ್ ಇಂಜಿನಿಯರ್!

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಉದ್ಯೋಗಿಯ ಬಂಧನವು ರಕ್ಷಣಾ ಮಾಹಿತಿಯ ಸೋರಿಕೆಯ ಬಗ್ಗೆ ಕಳವಳ ಮೂಡಿಸಿದೆ. ಪಾಕಿಸ್ತಾನದ ಐಎಸ್‌ಐಗೆ ರಹಸ್ಯ ಮಾಹಿತಿಗಳನ್ನು ರವಾನಿಸಿದ ಆರೋಪದ ಮೇಲೆ ದೀಪ್ ರಾಜ್ ಚಂದ್ರ ಎಂಬ ಇಂಜಿನಿಯರ್ ಬಂಧನವಾಗಿದೆ.

Indian defense espionage BEL Engineer Arrested san

ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಸಂಸ್ಥೆಯಲ್ಲಿ ಹಿರಿಯ ಇಂಜಿನಿಯರ್ ಆಗಿದ್ದ ವ್ಯಕ್ತಿಯೋರ್ವನನ್ನು ಇತ್ತೀಚೆಗೆ ಬಂಧಿಸಲಾಗಿದ್ದು, ಈ ಘಟನೆ ದೇಶದ ರಕ್ಷಣಾ ವಲಯಕ್ಕೆ ಆಘಾತ ನೀಡಿದೆ. ದೀಪ್ ರಾಜ್ ಚಂದ್ರ ಎಂಬ ಬಿಇಎಲ್ ಇಂಜಿನಿಯರ್, ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐಗೆ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ ಆರೋಪ ಎದುರಿಸುತ್ತಿದ್ದಾನೆ. ಈ ಘಟನೆ ದೇಶದ ಭದ್ರತಾ ತಂತ್ರಜ್ಞಾನಗಳ ರಕ್ಷಣೆಯ ಕುರಿತ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಕಳವಳ ಮೂಡುವಂತೆ ಮಾಡಿದೆ.

Latest Videos

ಬಯಲಾದ ಗೂಢಚಾರಿಕೆ: ಉತ್ತರ ಪ್ರದೇಶ ಮೂಲದ, 36 ವರ್ಷ ವಯಸ್ಸಿನ ದೀಪ್ ರಾಜ್ ಚಂದ್ರ ಬಿಇಎಲ್ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಉದ್ಯೋಗ ನಡೆಸುತ್ತಿದ್ದರು. ಶಂಕಾಸ್ಪದ ಪಾಕಿಸ್ತಾನಿ ಇಂಟಲಿಜೆನ್ಸ್ ಆಪರೇಟಿವ್ (ಪಿಐಒ - ಪಾಕಿಸ್ತಾನಿ ಗುಪ್ತಚರ ಕಾರ್ಯಾಚರಣೆ) ಸಂಬಂಧಿಸಿದ ಹಣಕಾಸು ವರ್ಗಾವಣೆಯಲ್ಲಿ ದೀಪ್ ರಾಜ್ ಚಂದ್ರ ಕಾಣಿಸಿಕೊಂಡ ಬಳಿಕ, ಮಿಲಿಟರಿ ಗುಪ್ತಚರ ಇಲಾಖೆ ಆತನನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ತನಿಖೆ ನಡೆದ ಬಳಿಕ, ಚಂದ್ರ ವಿವಿಧ ಬ್ಯಾಂಕ್ ಖಾತೆಗಳಿಂದ ಬಿಟ್ ಕಾಯಿನ್ ಮೂಲಕ ಹಣ ಪಡೆದುಕೊಂಡಿರುವುದು ಬೆಳಕಿಗೆ ಬಂದು, ಇದರ ಹಿಂದೆ ದೊಡ್ಡ ಬೇಹುಗಾರಿಕಾ ಜಾಲ ಇರುವ ಸಾಧ್ಯತೆಗಳು ಎದುರಾಗಿವೆ.

ದೀಪ್ ರಾಜ್ ಚಂದ್ರ ಭಾರತದ ಸಂವಹನಾ ವ್ಯವಸ್ಥೆಗಳು, ರೇಡಾರ್ ತಂತ್ರಜ್ಞಾನ, ಭದ್ರತಾ ಶಿಷ್ಟಾಚಾರಗಳು, ಮತ್ತು ಉನ್ನತ ಹುದ್ದೆಯ ಅಧಿಕಾರಿಗಳಿಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಪಾಕಿಸ್ತಾನದೊಡನೆ ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಆತ ಮಾಹಿತಿ ವರ್ಗಾವಣೆಗೆ ವಾಟ್ಸಾಪ್, ಟೆಲಿಗ್ರಾಂ, ಮತ್ತು ಇಮೇಲ್ ನಂತಹ ಎನ್ಕ್ರಿಪ್ಟೆಡ್ ಸಂವಹನ ವಿಧಾನವನ್ನು ಬಳಸಿದ್ದಾನೆ. ‌ನೇರವಾಗಿ ಪಾಕಿಸ್ತಾನಿಯರೊಡನೆ ಸಂವಹನ ನಡೆಸಿ, ಅದರಿಂದ ಸಿಕ್ಕಿಬೀಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಆತ ಇಮೇಲ್‌ನಲ್ಲಿ ಡ್ರಾಫ್ಟ್ ರೂಪದಲ್ಲಿ ಎಲ್ಲ ರಹಸ್ಯ, ಸೂಕ್ಷ್ಮ ಮಾಹಿತಿಗಳನ್ನೂ ಬರೆದಿಟ್ಟು, ಬಳಿಕ ಆ ಇಮೇಲ್ ಐಡಿಯ ಲಾಗಿನ್ ಮಾಹಿತಿಗಳನ್ನು ಅವರೊಡನೆ ಹಂಚಿಕೊಳ್ಳುತ್ತಿದ್ದ ಎನ್ನಲಾಗಿದೆ.

ಗೂಢಚಾರಿ ಚಟುವಟಿಕೆಗಳ ವಿಧಾನ: ಈ ಆಘಾತಕಾರಿ ಬೆಳವಣಿಗೆ ಕೇವಲ ಒಂದು ಗೂಢಚಾರಿ ಚಟುವಟಿಕೆಗೆ ಸೀಮಿತವಾದುದಲ್ಲ. ಇದರ ಹಿಂದೆ ಭಾರತದ ರಕ್ಷಣಾ ವಲಯವನ್ನು ಗುರಿಯಾಗಿಸುವ ಬೇಹುಗಾರಿಕಾ ಮಾದರಿಯೇ ಇದೆ. ಇತ್ತೀಚಿನ ತಿಂಗಳುಗಳಲ್ಲಿ, ಭದ್ರತಾ ಸಂಸ್ಥೆಗಳಲ್ಲಿ ಎಚ್ಚರಿಕೆಯ ಗಂಟೆ ಮೊಳಗಿಸುವಂತಹ ಇಂತಹ ಹಲವಾರು ಪ್ರಕರಣಗಳು ನಡೆದಿವೆ.

ಇಂತಹದ್ದೇ ಒಂದು ಇತ್ತೀಚಿನ ಪ್ರಕರಣದಲ್ಲಿ, ಕಾನ್ಪುರ್ ಆರ್ಡಿನೆನ್ಸ್ ಫ್ಯಾಕ್ಟರಿಯ ಕಿರಿಯ ನಿರ್ವಾಹಕ ಒಬ್ಬ ರಹಸ್ಯ, ಸೂಕ್ಷ್ಮ ಮಾಹಿತಿಗಳನ್ನು ವಿದೇಶೀ ಬೇಹುಗಾರಿಕಾ ಸಂಸ್ಥೆಗಳಿಗೆ ಹಂಚಿಕೊಂಡ ಆರೋಪದಲ್ಲಿ ಬಂಧಿಯಾಗಿದ್ದ. ಆತನ ಚಟುವಟಿಕೆಗಳ ಪರಿಣಾಮವಾಗಿ, ಭಾರತದ ಆಯುಧ ಉತ್ಪಾದನೆ ಮತ್ತು ನಿರ್ವಹಣಾ ವ್ಯವಸ್ಥೆಗಳ ಕುರಿತ ರಹಸ್ಯ ಮಾಹಿತಿಗಳು ಬಯಲಾಗಿ, ರಾಷ್ಟ್ರೀಯ ಭದ್ರತೆಗೆ ಭಾರೀ ಅಪಾಯ ಎದುರಾಗಿತ್ತು.

ಇನ್ನೊಂದು ಕಳವಳಕಾರಿ ಘಟನೆ ಕರ್ನಾಟಕದ ಕಾರವಾರ ನೌಕಾನೆಲೆಯಲ್ಲಿ ನಡೆದಿತ್ತು. ಇದರಲ್ಲಿ, ಒಂದಷ್ಟು ವ್ಯಕ್ತಿಗಳು ನೌಕಾಪಡೆಯ ಕಾರ್ಯಾಚರಣೆಗಳು ಮತ್ತು ಮೂಲಭೂತ ವ್ಯವಸ್ಥೆಗಳಿಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳುವುದು ತಿಳಿದುಬಂದಿತ್ತು. ಕಾರವಾರ ನೌಕಾನೆಲೆ ಭಾರತದ ಪಾಲಿಗೆ ಅತ್ಯಂತ ಪ್ರಮುಖವಾಗಿದ್ದು, ಅಲ್ಲಿನ ಮಾಹಿತಿ ಬಯಲಾಗುವುದರಿಂದ ಭಾರತದ ಸಾಗರ ರಕ್ಷಣೆಯ ಮೇಲೆ ಭಾರೀ ಪರಿಣಾಮ ಉಂಟಾಗುವ ಅಪಾಯಗಳಿದ್ದವು.

ಇಷ್ಟೊಂದು ಬೇಹುಗಾರಿಕಾ ಪ್ರಕರಣಗಳು ಪದೇ ಪದೇ ಬಯಲಿಗೆ ಬರುವುದರಿಂದ, ವಿದೇಶೀ ಬೇಹುಗಾರಿಕಾ ಜಾಲಗಳು ಭಾರತದ ರಕ್ಷಣಾ ವ್ಯವಸ್ಥೆ ಮತ್ತು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಅತ್ಯಂತ ಗಂಭೀರವಾಗಿ ಕಾರ್ಯಾಚರಿಸುತ್ತಿದ್ದಾರೆ ಎನ್ನಲಾಗಿದೆ. ಅತ್ಯಾಧುನಿಕ ಸಂವಹನಾ ವ್ಯವಸ್ಥೆಗಳು ಮತ್ತು ಹಣ ಪಾವತಿಗಾಗಿ ಬಿಟ್ ಕಾಯಿನ್ ರೀತಿಯ ಕ್ರಿಪ್ಟೋ ಕರೆನ್ಸಿಯನ್ನು ಬಳಸುವುದರಿಂದ ಅವರು ಸಿಕ್ಕಿಬೀಳುವ ಸಾಧ್ಯತೆಗಳು ಕಡಿಮೆಯಾಗಿದ್ದು, ಅವರನ್ನು ಪತ್ತೆಹಚ್ಚಲು ಇನ್ನಷ್ಟು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಪ್ರತಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಬಿಇಎಲ್ ಯಾಕೆ ಪ್ರಮುಖ ಗುರಿಯಾಗಿದೆ?: ಬಿಇಎಲ್ ಭಾರತ ಸರ್ಕಾರದ ರಕ್ಷಣಾ ಸಚಿವಾಲಯದಡಿ ಒಂದು 'ನವರತ್ನ ಸರ್ಕಾರಿ ಸಂಸ್ಥೆ'ಯಾಗಿದ್ದು, ದೇಶದ ರಕ್ಷಣೆ ಮತ್ತು ಬಾಹ್ಯಾಕಾಶ ವಲಯದಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಬಿಇಎಲ್ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯು ಸೇನೆಗಳಿಗಾಗಿ ಸಂವಹನ ಉಪಕರಣಗಳು, ರೇಡಾರ್ ತಂತ್ರಜ್ಞಾನಗಳು, ಇಲೆಕ್ಟ್ರಾನಿಕ್ ಯುದ್ಧದ ವ್ಯವಸ್ಥೆಗಳು ಸೇರಿದಂತೆ, ಆಧುನಿಕ ಇಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುತ್ತದೆ. ಅದರೊಡನೆ, ಬಾಹ್ಯಾಕಾಶ ಇಲೆಕ್ಟ್ರಾನಿಕ್ಸ್ ಕ್ಷೇತ್ರ ಮತ್ತು ಆಂತರಿಕ ರಕ್ಷಣಾ ಕ್ಷೇತ್ರದಲ್ಲಿ ಬಿಇಎಲ್ ಮಹತ್ವದ ಹೆಜ್ಜೆಗಳನ್ನಿಟ್ಟಿದೆ.

ಈಗ ಬಿಇಎಲ್‌ನಿಂದ ಸೋರಿಕೆಯಾಗಿರುವ ಮಾಹಿತಿಗಳು ಭಾರತದ ರಕ್ಷಣಾ ಸಾಮರ್ಥ್ಯದ ಕುರಿತು ಮಹತ್ವದ ವಿವರಗಳನ್ನು ನೀಡಿ, ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳುವಂತಹ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ. ಇಂತಹ ಮಹತ್ವದ ಮಾಹಿತಿಗಳು ಶತ್ರು ದೇಶಗಳ ಕೈಗೆ ಸೇರಿದರೆ, ಅದು ಭಾರತೀಯ ರಕ್ಷಣಾ ಪಡೆಗಳ ಕಾರ್ಯಾಚರಣಾ ಅನುಕೂಲತೆಗಳನ್ನು ತಗ್ಗಿಸಿ, ಕಾರ್ಯತಂತ್ರದ ಲೋಪದೋಷಗಳನ್ನು ಎತ್ತಿ ತೋರಿಸಬಹುದು.

ಸುಧಾರಿತ ಭದ್ರತಾ ಕ್ರಮಗಳ ಅವಶ್ಯಕತೆ: ಇಷ್ಟೊಂದು ಭಾರೀ ಪ್ರಮಾಣದ ಬೇಹುಗಾರಿಕಾ ಪ್ರಕರಣಗಳು ನಡೆದಿರುವುದರಿಂದ, ರಕ್ಷಣಾ ವ್ಯವಸ್ಥೆಯ ಒಳಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ತಕ್ಷಣವೇ ಕ್ರಮ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ. ಇಂತಹ ಅಪಾಯದ ಸಾಧ್ಯತೆಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ, ಆಂತರಿಕ ಕಣ್ಗಾವಲು ವ್ಯವಸ್ಥೆ, ಆಗಾಗ್ಗೆ ಸೈಬರ್ ಸುರಕ್ಷತಾ ಕ್ರಮಗಳ ಪರಿಶೋಧನೆ, ಮತ್ತು ಸೂಕ್ಷ್ಮ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಪರಿಶೀಲನಾ ಕ್ರಮಗಳನ್ನು ಇನ್ನಷ್ಟು ಬಲಪಡಿಸಬೇಕು.

ಎಲ್ಲಕ್ಕಿಂತ ಮುಖ್ಯವಾಗಿ, ರಕ್ಷಣಾ ವಲಯ ಅನುಮಾನಾಸ್ಪದ ಚಟುವಟಿಕೆಗಳನ್ನು ಗುರುತಿಸಲು ಅತ್ಯಾಧುನಿಕ ಡಿಜಿಟಲ್ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಜಾರಿಗೆ ತರಬೇಕು. ಅದರಲ್ಲೂ, ಕ್ರಿಪ್ಟೋಕರೆನ್ಸಿ ಮತ್ತು ಎನ್ಕ್ರಿಪ್ಟೆಡ್ ಸಂವಹನಗಳಲ್ಲಿ ಪಾಲ್ಗೊಳ್ಳುವವರ ಮೇಲೆ ನಿಗಾ ಇಡಬೇಕು. ಬೇಹುಗಾರಿಕಾ ಪ್ರಯತ್ನಗಳನ್ನು ಸಮರ್ಪಕವಾಗಿ ತಡೆಗಟ್ಟಲು ಜಾಗರೂಕತೆ ಮತ್ತು ಜವಾಬ್ದಾರಿಯ ಸಂಸ್ಕೃತಿಯನ್ನು ರೂಪಿಸುವುದು ಅಗತ್ಯವಾಗಿದೆ.

ಇಸ್ರೋ ಉಡಾವಣೆಗೆ ಈಗ ಶತಕ ಸಂಭ್ರಮ: ಗಿರೀಶ್‌ ಲಿಂಗಣ್ಣ

ಮುಂದಿನ ಹಾದಿ: ದೀಪ್ ರಾಜ್ ಚಂದ್ರನ ಬಂಧನ ಬೇಹುಗಾರಿಕಾ ಅಪಾಯಗಳು ದಿನೇ ದಿನೇ ಹೆಚ್ಚು ಬಲಯುತವಾಗುತ್ತಿವೆ ಎನ್ನುವುದರ ಸಂಕೇತವಾಗಿದೆ. ಭಾರತದ ರಕ್ಷಣಾ ಮತ್ತು ಗುಪ್ತಚರ ಸಂಸ್ಥೆಗಳು ಜೊತೆಯಾಗಿ ಕಾರ್ಯಾಚರಿಸಿ, ಭದ್ರತಾ ವ್ಯವಸ್ಥೆಗಳನ್ನು ಇನ್ನಷ್ಟು ಬಲಪಡಿಸಿ, ಆ ಮೂಲಕ ಆಂತರಿಕ ಅಪಾಯಗಳನ್ನು ತಡೆಗಟ್ಟಬೇಕು. ದೇಶ ತಾಂತ್ರಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಮಹತ್ವದ ಮಾಹಿತಿಗಳು ಮತ್ತು ವ್ಯವಸ್ಥೆಗಳನ್ನು ರಕ್ಷಿಸುವಲ್ಲಿನ ದೇಶದ ಬದ್ಧತೆಯೂ ಸ್ಥಿರವಾಗಿರಬೇಕು.

 

100 ಕೃತಕ ಸೂರ್ಯಗ್ರಹಣ ಸೃಷ್ಟಿಗೆ ಸಾಹಸ, ನಾಳೆ ಇಸ್ರೋದಿಂದ ಉಡಾವಣೆ

ಆಧುನಿಕ ಡಿಜಿಟಲ್ ಭದ್ರತೆ, ಉತ್ತಮ ಕಣ್ಗಾವಲು, ಮತ್ತು ಉದ್ಯೋಗಿಗಳಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವಂತಹ ಬಹುಮುಖಿ ಕ್ರಮಗಳನ್ನು ಕೈಗೊಳ್ಳುವುದರಿಂದ, ಭಾರತದ ರಕ್ಷಣಾ ಸಂಸ್ಥೆಗಳ ಸಮಗ್ರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾದೀತು.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

vuukle one pixel image
click me!