ಬೆಂಗಳೂರು: ಶಕ್ತಿಸೌಧದ ಮೇಲೆ ರಾಷ್ಟ್ರಧ್ವಜ ಹಾರಿಸುವುದು ಬೆರಳಿಲ್ಲದ ಕೈ..!

By Kannadaprabha NewsFirst Published Aug 13, 2022, 10:11 AM IST
Highlights

 26 ವರ್ಷಗಳಿಂದ ಅಂಥೋನಿ ದಾಸ್‌ರಾಷ್ಟ್ರಧ್ವಜ ಸೇವೆ, ಅಂಗೈನಿಂದಲೇ ಹೆಮ್ಮೆಯಿಂದ ಧ್ವಜ ಹಾರಿಸುವ ಸೌಧ ನೌಕರ

ಜಯಪ್ರಕಾಶ್‌ ಬಿರಾದಾರ್

ಬೆಂಗಳೂರು(ಆ.13):  ನಾಡಿನ ಶಕ್ತಿ ಕೇಂದ್ರ ವಿಧಾನಸೌಧದ ಮೇಲೆ ಸ್ವಚ್ಛಂದವಾಗಿ ಹಾರಾಡುವ ರಾಷ್ಟ್ರ ಧ್ವಜವನ್ನು ಎಲ್ಲರೂ ನೋಡಿ ಖುಷಿಪಟ್ಟಿದ್ದೇವೆ. ವಿಶೇಷವೆಂದರೆ, ಆ ಧ್ವಜವನ್ನು ಕಳೆದ 25 ವರ್ಷಗಳಿಂದ ಹಾರಿಸುತ್ತಿರುವುದು ಬೆರಳುಗಳೇ ಇಲ್ಲದ ಕೈ! ವಿಧಾನಸೌಧದಲ್ಲಿ ನಿತ್ಯ ಸೂರ್ಯೋದಯವಾಗುತ್ತಿದ್ದಂತೆ ರಾಷ್ಟ್ರ ಧ್ವಜವನ್ನು ಹಾರಿಸಿ, ಸೂರ್ಯಾಸ್ಥವಾಗುತ್ತಿದ್ದಂತೆ ಬಿಚ್ಚಿಡಲಾಗುತ್ತದೆ. ಈ ಕೆಲಸವನ್ನು ಅಲ್ಲಿನ ಡಿ ಗ್ರೂಪ್‌ಸಿಬ್ಬಂದಿಯೇ ನಿರ್ವಹಿಸುತ್ತಾರೆ. 1997 ರಿಂದ ಇಲ್ಲಿವರೆಗೂ ಸತತ 26 ವರ್ಷಳಿಂದ ಅಂಗವಿಕಲರಾದ ಅಂಥೋನಿ ದಾಸ್‌ಎಂಬುವವರು ಬಾವುಟ ಹಾರಿಸು ಮತ್ತು ಇಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅಂಥೋನಿ ದಾಸ್‌ಬಾಲ್ಯದಲ್ಲಿಯೇ ಅಪಘಾತವೊಂದರಲ್ಲಿ ಬಲಗೈನ ಬೆರಳುಗಳನ್ನು ಕಳೆದುಕೊಂಡಿದ್ದು, ಉಳಿದ ಅಂಗೈನಿಂದಲೇ ನಿತ್ಯ ರಾಷ್ಟ್ರ ಧ್ಚಜನವನ್ನು ಹೆಮ್ಮೆಯಿಂದ ಹಾರಿಸುವ ಇಳಿಸುವ ಕಾಯಕ ಮಾಡುತ್ತಿದ್ದಾರೆ.

‘ನಿತ್ಯವೂ ರಾಷ್ಟ್ರೀಯ ಹಬ್ಬ’:

‘ರಾಷ್ಟ್ರೀಯ ಹಬ್ಬಗಳು ಬಂದಾಗ ವರ್ಷಕ್ಕೆ ಸಾರ್ವಜನಿಕರು ಮೂರು ಬಾರಿ ರಾಷ್ಟ್ರ ಧ್ವಜ ಹಾರಿಸಿ ಸಂತಸ ಪಡುತ್ತಾರೆ. ಆದರೆ, ನಮಗೆ ನಿತ್ಯವು ರಾಷ್ಟ್ರೀಯ ಹಬ್ಬ. ಯಾರಿಗಾದರು ಧ್ವಜ ಹಾರಿಸುವ ಅವಕಾಶ ಸಿಗುವುದು ಅತ್ಯಂತ ಗೌರವದ ಸಂಗತಿಯಾಗಿದೆ. ಅದರಲ್ಲೂ, ವಿಧಾನಸೌಧದ ಮೇಲೆ ಧ್ವಜ ಹಾರಿಸಲು ಅವಕಾಶ ಸಿಕ್ಕಿದೆ. ಇದು ಒಂದು ಪುಣ್ಯದ ಕೆಲಸ ಎಂದು ತಿಳಿದು ಶ್ರದ್ಧೆ ಮತ್ತು ಹೆಮ್ಮೆಯಿಂದ ನಿರ್ವಹಿಸುತ್ತಿದ್ದೇನೆ’ ಎನ್ನುತ್ತಾರೆ ಅಂಥೋನಿ ದಾಸ್‌.

Vijayapura: ಕ್ರಾಂತಿಯೋಗಿಗೆ ಅಪಚಾರ ಮಾಡಿದ ವಿಜಯಪುರ ಜಿಲ್ಲಾಡಳಿತ!

ನಿಖರ ಸಮಯ; ನಿಯಮ ಪಾಲನೆ

ರಾಷ್ಟ್ರ ಧ್ವಜವನ್ನು ಯಾವುದೋ ಸಮಯಕ್ಕೆ ಹಾರಿಸಿ, ಯಾವುದೋ ಸಮಯಕ್ಕೆ ಕೆಳಕ್ಕಿಳಿಸುವಂತಿಲ್ಲ. ನಿತ್ಯ ಸೂರ್ಯೋದಯದ ಸಮಯ ತಿಳಿದುಕೊಂಡು ನಿಖರ ಸಮಯಕ್ಕೆ ಜೋರಾಗಿ ಧ್ವಜ ಹಾರಿಸಬೇಕು. ಅದೇ ರೀತಿ ಸೂರ್ಯಾಸ್ತದ ಸಮಯವನ್ನೂ ನಿಖರವಾಗಿ ತಿಳಿದುಕೊಂಡು ಧ್ವಜ ನಿಧಾನವಾಗಿ ಇಳಿಸಿ ಸುರಕ್ಷಿತ ಸ್ಥಳದಲ್ಲಿ ನಿಯಮದಂತೆ ಮಡಚಿ ಇಡಲಾಗುತ್ತದೆ. ಪ್ರತಿನಿತ್ಯ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯ ಬದಲಾಗುತ್ತಿರುತ್ತದೆ.

ಇಂಟರ್‌ನೆಟ್‌ಮೂಲಕ ತಿಳಿದುಕೊಂಡು ಕಾರ್ಯನಿರ್ವಹಿಸುತ್ತೇವೆ. ಗಣ್ಯರು ನಿಧನರಾದ ಸಂದರ್ಭದಲ್ಲಿ ಅಧಿಕಾರಿಗಳ ಸೂಚನೆ ಮೇರೆಗೆ ಸ್ತಂಭದ ಅರ್ಧಕ್ಕೆ ಧ್ವಜ ಹಾರಿಸುತ್ತೇವೆ. ಗಾಳಿ, ಮಳೆ ಸಂದರ್ಭದಲ್ಲಿ ಧ್ವಜ ಹರಿದು ಹೋಗುವುದನ್ನು ಗಮನಿಸಬೇಕು. ಕೂಡಲೇ ಬದಲಾಯಿಸಬೇಕು. ಮಳೆ ಇಲ್ಲದ ಸಾಮಾನ್ಯ ದಿನಗಳಲ್ಲಿ ತಿಂಗಳಿಗೊಂದು ಹೊಸ ಧ್ವಜ ಬಳಸುತ್ತೇವೆ ಎನ್ನುತ್ತಾರೆ ಅಂಥೋನಿ ತಿಳಿಸಿದರು.

1996ರಲ್ಲಿ 1 ಈಗ 50 ಗೌರವ ಧನ!

ನಿತ್ಯ ಧ್ವಜವನ್ನು ಹಾರಿಸುವುದಕ್ಕೆ ಮತ್ತು ಇಳಿಸುವುದಕ್ಕೆ ಸಿಬ್ಬಂದಿಗಳಿಗೆ ಗೌರವ ಧನ ನೀಡಲಾಗುತ್ತದೆ. 1996ರಲ್ಲಿ ಒಂದು ರು. ಗೌರವ ಧನ ಸಿಗುತ್ತಿತ್ತು. ಆ ಬಳಿಕ ಮನವಿ ಮೇರೆಗೆ ಅಧಿಕಾರಿಗಳು ಗೌರವ ಧನವನ್ನು ಹೆಚ್ಚಿಸುತ್ತಾ ಬಂದಿದ್ದು, ಸದ್ಯ 50 ರು. ನೀಡಲಾಗುತ್ತಿದೆ. ಭಾರತ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ (1997) ಸಂದರ್ಭದಲ್ಲಿ ವಿಧಾನಸೌಧದ ಭದ್ರತೆ ಮತ್ತು ಧ್ವಜ ನಿರ್ವಹಣೆಯನ್ನು 90ಕ್ಕೂ ಹೆಚ್ಚು ಡಿ ಗ್ರೂಪ್‌ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರಂತೆ. ಸದ್ಯ ಅವರಲ್ಲಿ ಈಗ ಆರು ಜನ ಮಾತ್ರ ಉಳಿದುಕೊಂಡಿದ್ದಾರೆ. ಈ ಪೈಕಿ ಅಂಥೋನಿ ದಾಸ್‌ಹಿರಿಯರು. ವಿಧಾನಸೌಧದ ಕೊಠಡಿ ಮತ್ತು ಮುಖ್ಯ ದ್ವಾರಕ್ಕೆ ಬೀಗ ಹಾಕುವುದು, ಬೀಗ ತೆಗೆಯುವುದು ಕುಡಾ ಇವರ ಕೆಲಸವಾಗಿದ್ದು, ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಬಹುತೇಕ ಬೆಳಗಿನ ಪಾಳಿಯಲ್ಲಿ ಬರುವ ಅಂಥೋನಿ ದಾಸ್‌ಧ್ವಜ ಹಾರಿಸುತ್ತಾರೆ.
 

click me!