ಅಂಗವೈಕಲ್ಯ ಮೆಟ್ಟಿನಿಂತು ಕೃಷ್ಣನಾದ ಬಾಲಕ ಮುಹಮ್ಮದ್‌ ಯಾಹ್ಯಾ!

By Kannadaprabha NewsFirst Published Sep 8, 2023, 6:14 AM IST
Highlights

ಕೃಷ್ಣ ಜನ್ಮಾಷ್ಟಮಿ ಬಂತೆಂದರೆ ಮಕ್ಕಳು ಕೃಷ್ಣನ ವೇಷ ಧರಿಸಿ ಸಂಭ್ರಮಿಸುತ್ತಾರೆ. ಆದರೆ ಕೇರಳದಲ್ಲಿ ಇದು ಇನ್ನಷ್ಟುವಿಶೇಷವಾಗಿ ಆಚರಿಸಲ್ಪಟ್ಟಿದೆ. ಕಲ್ಲಿಕೋಟೆಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ 8 ವರ್ಷದ ಅಂಗವಿಕಲ ಮುಸ್ಲಿಂ ಬಾಲಕನೊಬ್ಬ ಕೃಷ್ಣನ ವೇಷ ಧರಿಸಿ ಸಂಭ್ರಮಿಸಿದರೆ, ಶೋಭಾ ಯಾತ್ರೆಯಲ್ಲಿ ಆತನನ್ನು ಬುರ್ಖಾಧಾರಿ ಮಹಿಳೆಯರು ಗಾಲಿ ಕುರ್ಚಿಯಲ್ಲಿ ತಳ್ಳುತ್ತ ಭಾವೈಕ್ಯತೆ ಮೆರೆದಿದ್ದಾರೆ.

ಕಲ್ಲಿಕೋಟೆ (ಕೇರಳ): ಕೃಷ್ಣ ಜನ್ಮಾಷ್ಟಮಿ ಬಂತೆಂದರೆ ಮಕ್ಕಳು ಕೃಷ್ಣನ ವೇಷ ಧರಿಸಿ ಸಂಭ್ರಮಿಸುತ್ತಾರೆ. ಆದರೆ ಕೇರಳದಲ್ಲಿ ಇದು ಇನ್ನಷ್ಟುವಿಶೇಷವಾಗಿ ಆಚರಿಸಲ್ಪಟ್ಟಿದೆ. ಕಲ್ಲಿಕೋಟೆಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ 8 ವರ್ಷದ ಅಂಗವಿಕಲ ಮುಸ್ಲಿಂ ಬಾಲಕನೊಬ್ಬ ಕೃಷ್ಣನ ವೇಷ ಧರಿಸಿ ಸಂಭ್ರಮಿಸಿದರೆ, ಶೋಭಾ ಯಾತ್ರೆಯಲ್ಲಿ ಆತನನ್ನು ಬುರ್ಖಾಧಾರಿ ಮಹಿಳೆಯರು ಗಾಲಿ ಕುರ್ಚಿಯಲ್ಲಿ ತಳ್ಳುತ್ತ ಭಾವೈಕ್ಯತೆ ಮೆರೆದಿದ್ದಾರೆ.

ಮುಹಮ್ಮದ್‌ ಯಾಹ್ಯಾ ಎಂಬಾತನೇ ಕೃಷ್ಣವೇಷಧಾರಿ ಅಂಗವಿಕಲ ಪೀಡಿತ 3ನೇ ತರಗತಿ ಶಾಲಾ ಬಾಲಕ. ಯಾಹ್ಯಾಗೆ ಹುಟ್ಟಿನಿಂದಲೇ ಮಾಂಸ-ಖಂಡದ ಸಮಸ್ಯೆ ಇದ್ದು ಆತನಿಗೆ ನಡೆಯಲು ಆಗದು. ಹೀಗಾಗಿ ಆತ ಹುಟ್ಟಾಅಂಗವಿಕಲನಾಗಿದ್ದಾನೆ. ಗಾಲಿಕುರ್ಚಿಯೇ ಆತನಿಗೆ ಆಶ್ರಯವಾಗಿದೆ. ಆದರೂ ಇದನ್ನು ಮೆಟ್ಟಿನಿಂತು ಆತ ಜೀವನೋತ್ಸಾಹ ಹೊಂದಿದ್ದಾನೆ.

ಪ್ರಾರ್ಥನೆ ಬಳಿಕ ಮಂತ್ರಾಲಯ ರಾಯರ ದರ್ಶನ ಪಡೆದ ಮುಸ್ಲಿಂ ಬಾಂಧವರು!

ಕೃಷ್ಣನಾದ ಮುಸ್ಲಿಂ ಬಾಲಕ:

ಸೆ.6ರಂದು ಕಲ್ಲಿಕೋಟೆಯ ಬೀದಿಗಳಲ್ಲಿ ಕೃಷ್ಣ ಮತ್ತು ಗೋಪಿಕೆಯರ ವೇಷಗಳನ್ನು ಧರಿಸಿದ ಪುಟ್ಟಮಕ್ಕಳೊಂದಿಗೆ ವರ್ಣರಂಜಿತ ಮೆರವಣಿಗೆ ಕೃಷ್ಣ ಜಯಂತಿ ನಿಮಿತ್ತ ನಡೆಯಿತು. ಅಲ್ಲಿ ಬಾಲಗೋಕುಲಂ ಸಂಸ್ಥೆಯ ಜಿಲ್ಲಾ ಘಟಕದ ವತಿಯಿಂದ ನಡೆದ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಕ್ಕಳ ಪೈಕಿ 8 ವರ್ಷದ ಮುಹಮ್ಮದ್‌ ಯಾಹ್ಯಾ ಗಮನ ಸೆಳೆದ. ಮೆರವಣಿಗೆ ವೀಕ್ಷಿಸಲು ರಸ್ತೆಯ ಎರಡೂ ಬದಿಯಲ್ಲಿ ನೆರೆದಿದ್ದ ಜನರತ್ತ ಆತ ಕೈ ಬೀಸಿದ.

ಈತ ಮುಸ್ಲಿಂ ಆದರೂ ಹಿಂದೂ ದೇವರಾದ ಕೃಷ್ಣನ ವೇಷ ಧರಿಸಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಗಾಲಿಕುರ್ಚಿಯಲ್ಲಿದ್ದ ಯಾಹ್ಯಾಗೆ ಬುರ್ಖಾ ಧರಿಸಿದ್ದ ಆತನ ತಾಯಿ ಸಹಾಯ ಮಾಡಿದರು. ಶೋಭಾ ಯಾತ್ರೆಯುದ್ದಕ್ಕೂ ಸುರಿದ ಮಳೆ ಲೆಕ್ಕಿಸದೆ ಇವರು ಪಾಲ್ಗೊಂಡಿದ್ದರು. ಈ ಬಗ್ಗೆ ಮಾತನಾಡಿದ ಯಾಹ್ಯಾ, ‘ಮಳೆ ಆಗುತ್ತಿದ್ದರೂ ಚಿಂತೆ ಇಲ್ಲ. ಕೃಷ್ಣನಾಗಬೇಕೆಂಬ ಆಸೆಯಿತ್ತು. ಅದನ್ನು ಅಮ್ಮ ಈಡೇರಿಸಿದ್ದಾಳೆ’ ಎಂದ.

Shri Krishna: ಜನ್ಮಾಷ್ಟಮಿಯಂದು ಈ 8 ವಸ್ತುಗಳನ್ನು ಮನೆಗೆ ತನ್ನಿ, ಸಮೃದ್ಧಿ ಹೆಚ್ಚಾಗುತ್ತದೆ

‘ಕಳೆದ ವರ್ಷವೇ ಶೋಭಾ ಯಾತ್ರೆಯ ಮೆರವಣಿಗೆ ಜಯಂತಿಯಲ್ಲಿ ಆತ ಭಾಗವಹಿಸುವ ಇಚ್ಛೆ ವ್ಯಕ್ತಪಡಿಸಿದ್ದ. ಅದನ್ನು ಈ ವರ್ಷ ಈಡರಿಸಿದ್ದೇವೆ’ ಎಂದು ಯಾಹ್ಯಾನ ತಾಯಿ ರುಬಿಯಾ ಹಾಗೂ ಸಂಘಟಕರು ಹೇಳಿದರು. ‘ಹಾಗಂತ ನಾನು ಪ್ರಚಾರಕ್ಕೆ ಇದನ್ನು ಮಾಡಿಲ್ಲ. ಆತನನ್ನು ಸಂತಸದಿಂದ ಇಡಬೇಕು ಎಂಬುದಷ್ಟೇ ನಮಗೆ ಮುಖ್ಯ. ಆತನಿಗೆ ನಡೆಯಲು ಆಗದು ಎಂಬ ಕಾರಣಕ್ಕೆ ಸದಾ ಮನೆಯಲ್ಲಿ ಕೂರಿಸಲು ಆಗದು’ ಎಂದು ತಾಯಿ ಹೇಳಿದರು. ಈಗ ಆತನಿಗೆ ಚಿಕಿತ್ಸೆ ನಡೆದಿದ್ದು, ಆತನ ಕಾಲು ಸರಿ ಹೋಗಬಹುದು ಎಂದು ವೈದ್ಯರು ಹೇಳಿದ್ದಾರೆ. ಯಾಹ್ಯಾ ಬಿಲಾತಿಕುಲಂ ಬಿಇಎಂ ಉನ್ನತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದು, 3ನೇ ತರಗತಿ ಓದುತ್ತಿದ್ದಾನೆ.

click me!