ಹೆಚ್ಚುತ್ತಿರುವ ಕೊರೊನಾ ಭೀತಿ ಮಕ್ಕಳಲ್ಲಿ ಜಾಗೃತಿ ಮೂಡಿಸೋದು ಹೇಗೆ?

By Suvarna NewsFirst Published Mar 20, 2020, 4:15 PM IST
Highlights

ಕೊರೋನಾ ವೈರಸ್ ಹರಡುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಆರೋಗ್ಯ ತುರ್ತು ಎಂದು ಘೋಷಿಸಿದೆ. ಕೊರೊನಾ ಕುರಿತ ಸಾವಿರಾರು ಸುದ್ದಿಗಳು ವೈರಸ್‌ನಷ್ಟೇ ವೇಗವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಗೊಂದಲ, ಭಯ ಎಲ್ಲವೂ ಸಾಮಾನ್ಯ. ಕೊರೊನಾದ್ದೇ ಸುದ್ದಿ ವ್ಯಾಪಿಸಿರುವುದರಿಂದ ಈ ಬಗ್ಗೆ ನಿಮ್ಮ ಮಕ್ಕಳು ಬಂದು ಪ್ರಶ್ನಿಸಬಹುದು. 

ಟಿವಿ ಹಾಕಿದ್ರೆ ಕೊರೋನಾ, ಫೇಸ್ಬುಕ್ ಓಪನ್ ಮಾಡಿದ್ರೆ ಕೊರೊನಾ, ಯಾರೊಂದಿಗೆ ಮಾತಾಡಿದರೂ ಕೊರೋನಾ. ದಿನಪತ್ರಿಕೆ ತೆರೆದರೂ ಕೊರೋನಾದ್ದೇ ಸುದ್ದಿ. ಇದನ್ನೆಲ್ಲ ನಾವು ಗ್ರಹಿಸುವ ರೀತಿಯಲ್ಲೂ ಮಕ್ಕಳು ಗ್ರಹಿಸುವ ರೀತಿಯಲ್ಲೂ ಬಹಳಷ್ಟು ವ್ಯತ್ಯಾಸವಿರುತ್ತದೆ. ಹಾಗಾಗಿ, ಮಕ್ಕಳಿಗೆ ಈ ಕುರಿತು ಏನು ತಿಳಿಸಬೇಕು, ಹೇಗೆ ತಿಳಿಸಬೇಕು ಎಂಬುದರ ಅರಿವಿರುವುದು ಅಗತ್ಯ. 

ಇಂಥ ಸೂಕ್ಷ್ಮ ಪರಿಸ್ಥಿತಿಯಲ್ಲಿ ನಿಮ್ಮ ಮಕ್ಕಳಿಗೆ ಹೆದರಿಸದಂತೆ ಕೊರೋನಾ ಕುರಿತು ತಿಳಿಸಿ, ಆರೋಗ್ಯ ಕಾಪಾಡಿಕೊಳ್ಳುವ ಕುರಿತು ತಿಳಿ ಹೇಳುವುದು ಮುಖ್ಯ. ಈ ಬಗ್ಗೆ ಹೀಗೆ ವಿವರಿಸಬಹುದು. 

ಮಾಹಿತಿ ನೀಡಿ
ಪೋಷಕರು ಏನು ನಡೆಯುತ್ತಿದೆ ಎಂಬ ಕುರಿತು ಮಕ್ಕಳಿಗೆ ಸರಿಯಾದ ಮಾಹಿತಿ ನೀಡುವ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಏನೂ ಅಪಾಯಕಾರಿಯಾದುದು ಆಗ್ತಿಲ್ಲ, ಅವರಿಗೇನೂ ಸಮಸ್ಯೆಯಿಲ್ಲ ಎಂದಷ್ಟೇ ಹೇಳಿ ಮಾತು ಮುಗಿಸಲು ನೋಡಬೇಡಿ. ಪ್ರಾಮಾಣಿಕವಾಗಿ ಏನಾಗುತ್ತಿದೆ ಎಂಬುದನ್ನು ವಿವರಿಸಿ. ಮಕ್ಕಳ ಜೊತೆ ಇಡೀ ದಿನ ಇರಲು ಸಾಧ್ಯವಿಲ್ಲ ಎಂಬುದನ್ನು ನೆನಪಲ್ಲಿಟ್ಟುಕೊಂಡು ಎಲ್ಲಿ ಹೇಗಿರಬೇಕೆಂಬ ಎಚ್ಚರಿಕೆ ಮೂಡಿಸಿ. 

ಮಾಸ್ಕ್ ಹಾಕ್ಕೊಂಡರೂ ಕರೋನಾ ಬರುತ್ತೆ

ಮಗು ಕೊರೋನಾ ವೈರಸ್ ಬಗ್ಗೆ ಕುತೂಹಲದಿಂದ ಕೇಳಿದಾಗ ಇದೊಂದು ವೈರಲ್ ಇನ್ಪೆಕ್ಷನ್ ಆಗಿದ್ದು, ಅದು ಮನುಷ್ಯರಿಗೆ ಹರಡಬಹುದು ಎಂಬುದನ್ನು ಹೇಳಿ. ಆದರೆ, ಮಕ್ಕಳಿಗೆ ಏನೇ ಮಾಹಿತಿ ನೀಡುವ ಮುನ್ನ ನೀವು ಆ ಕುರಿತು ಸರಿಯಾಗಿ ತಿಳಿದಿರುವುದು ಅಗತ್ಯ. ವದಂತಿಗಳು ಹಾಗೂ ತಪ್ಪು ಮಾಹಿತಿಗಳು ಮಕ್ಕಳನ್ನು ತಲುಪದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಹಾಗಾಗಿ, ಯಾವುದು ಸತ್ಯವೋ, ಆ ಬಗ್ಗೆ ನಿಮಗೆಷ್ಟು ಗೊತ್ತೋ, ಅಷ್ಟೇ ಹೇಳಿ. 

ಆತಂಕ ವ್ಯಕ್ತಪಡಿಸಬೇಡಿ
ಮಕ್ಕಳ ಪ್ರೈಮ್ ಗಾರ್ಡಿಯನ್ ಆಗಿರುವುದರಿಂದ ಪೋಷಕರ ಎಮೋಶನ್ ಅನ್ನೇ ಮಕ್ಕಳು ಕ್ಯಾಚ್ ಮಾಡುತ್ತಾರೆ. ಹೀಗಾಗಿ, ಪೋಷಕರು ಕೊರೋನಾ ಕುರಿತು ಆತಂಕ, ಭಯ ಹೊಂದಿದ್ದರೆ ಮಕ್ಕಳೂ ಸಿಕ್ಕಾಪಟ್ಟೆ ಭಯ ಪಟ್ಟುಕೊಳ್ಳುತ್ತಾರೆ. ಹಾಗಾಗಿ ಮಕ್ಕಳೆದುರಿಗೆ ಕೊರೋನಾ ಕುರಿತು ಧೈರ್ಯ ವ್ಯಕ್ತಪಡಿಸಿ. ಸರಿಯಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ಭಯ ಪಡಬೇಕಿಲ್ಲ ಎಂಬುದನ್ನು ತಿಳಿಸಿ. ಮಕ್ಕಳು ಕೇಳುವ ಪ್ರತಿ ಫ್ರಶ್ನೆಗೂ ಉತ್ತರಿಸಿ. ಯಾವುದೇ ಪ್ರಶ್ನೆಯನ್ನು ತಳ್ಳಿ ಹಾಕಬೇಡಿ. ಇದು ದೊಡ್ಡವರಿಗೆ ಸಂಬಂಧಿಸಿದ ವಿಷಯ ಎಂದು ಹೇಳಿ ಬಾಯಿ ಮುಚ್ಚಿಸಬೇಡಿ. 

ವಯಸ್ಸನ್ನು ಗಮನದಲ್ಲಿರಿಸಿಕೊಳ್ಳಿ
ಮಕ್ಕಳ ಬಳಿ ಕೊರೋನಾ ಕುರಿತು ಮಾತನಾಡುವಾಗ ಅವರ ವಯಸ್ಸನ್ನು ಪರಿಗಣಿಸಿ. ನೀವು ಬಳಸುವ ಪದಗಳ ಬಗ್ಗೆ ಹೆಚ್ಚಿನ ಜಾಗರೂಕತೆ ಅಗತ್ಯ. ತುಂಬಾ ಚಿಕ್ಕ ಮಕ್ಕಳಾದರೆ ಕೈ ತೊಳೆಯುವ ಕುರಿತು,  ಹಾಗೂ ಬೇಸಿಕ್ ಮಾಹಿತಿಗಳನ್ನು ಮಾತ್ರ ಹೇಳಿದರೆ ಸಾಕು. ಸ್ವಲ್ಪ ದೊಡ್ಡ ಮಕ್ಕಳಿಗೆ ಮುಂಚೆಯೇ ಸ್ವಲ್ಪ ವಿಷಯ ತಿಳಿದಿರುತ್ತದೆ. ಹಾಗಾಗಿ, ಅವರ ಭಯ, ಗೊಂದಲಗಳನ್ನು ನೀಗಿಸಿದರೆ ಸಾಕಾಗುತ್ತದೆ. ಅವರೇನೂ ಕೇಳದಿದ್ದರೆ ಈ ಬಗ್ಗೆ ಅವರಿಗೆ ಹೇಗನಿಸುತ್ತದೆ ಎಂದು ನೀವೇ ವಿಚಾರಿಸಿ. 

ಸಾವು ಎಂಬ ಪದ ಬಳಸಬಹುದೇ?
ಕೊರೋನಾ ಕುರಿತ ವಿಷಯಗಳು ಮಾಧ್ಯಮದಲ್ಲಿ ಬರುವಾಗ ಸಾವು ಎಂಬ ಪದ ಪದೇ ಪದೆ ಮಕ್ಕಳ ಕಿವಿಗೆ ಬೀಳುತ್ತಿರುತ್ತದೆ. ಹೀಗಾಗಿ, ಅವರು ಈ ಕುರಿತು ನಿಮ್ಮಲ್ಲಿ ಪ್ರಶ್ನೆಗಳನ್ನು ಕೇಳಬಹುದು. ಮಕ್ಕಳ ಬಳಿ ಸಾವು ಎಂಬ ಪದ ಬಳಸಬಾರದು ಎಂದುಕೊಂಡು ವಿಷಯವನ್ನು ಎಲ್ಲೆಲ್ಲೋ ಸುತ್ತಿ ಬಳಸುವುದರಿಂದ ಅವರನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಿದಂತಾಗುತ್ತದೆ. ಹಾಗಾಗಿ, ಸಾವು ಎಂಬ ಪದವನ್ನು ನಾರ್ಮಲ್ ಆಗಿ ಬಳಸುವುದರಲ್ಲಿ ತಪ್ಪಿಲ್ಲ. 

ಕರೋನಾ ಭೀತಿ ನಡುವೆ ಇಬ್ಬರು ಸೋಂಕಿತರು ಗುಣಮುಖ

ಕೊರೋನಾ ಕುರಿತು ಅಲ್ಲಿ ಇಲ್ಲಿ ಅಲ್ಪಸ್ವಲ್ಪ ಸುದ್ದಿ ಕೇಳಿ ಮಕ್ಕಳು ಭಯ ಪಟ್ಟುಕೊಳ್ಳುವುದು ನಾರ್ಮಲ್. ಆದರೆ, ಅವರು ಅತಿಯಾಗಿ ಮನಸ್ಸಿಗೆ ಹಚ್ಚಿಕೊಂಡು, ಅದರಿಂದ ಅವರ ನಿದ್ರೆಯ ವಿನ್ಯಾಸ ಬದಲಾಗಿದ್ದರೆ, ಅಥವಾ ವರ್ತನೆ ಬದಲಾಗಿದ್ದರೆ ಆಗ ಪೋಷಕರು ಈ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. 

ಸ್ವಚ್ಚತೆ ಬಗ್ಗೆ ಹೇಳಿಕೊಡಿ
- ಇದು ಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆ ಹಾಗೂ ಸೆಲ್ಫ್ ಕೇರ್ ಬಗ್ಗೆ ಹೇಳಿಕೊಡಲು ಸುಸಮಯ. ಅವರು ಶಾಲೆ, ಮನೆ ಅಥವಾ ಎಲ್ಲೇ ಆಡುತ್ತಿರಲಿ, ಪದೇ ಪದೆ ಕೈಗಳನ್ನು ತೊಳೆಯುವ ಅಭ್ಯಾಸ ಮಾಡಿಸಿ. 
- ಮಕ್ಕಳು ಕೆಮ್ಮುವಾಗ ಅಥವಾ ಸೀನುವಾಗ ಕೈಗಳನ್ನು ಅಡ್ಡ ಹಿಡಿಯಬೇಕೆಂದು ಹೇಳಿಕೊಡಿ. ಹಾಗೆ ಸೀನಿದ ಬಳಿಕ ಕೈ ತೊಳೆಯುವ ಅಭ್ಯಾಸ ಮಾಡಿಸಿ. 
- ತಮ್ಮ ಗೆಳೆಯರು ಅಥವಾ ಇತರೆ ಮಕ್ಕಳಲ್ಲಿ ಅನಾರೋಗ್ಯವಿದ್ದರೆ ಅದನ್ನು ನಿಮಗೆ ತಿಳಿಸಲು ಹೇಳಿ. ಅವರಿಂದ ದೂರ ಇರುವಂತೆ ನೋಡಿಕೊಳ್ಳಿ. 
- ಮಕ್ಕಳು ಮತ್ತೆ ಮತ್ತೆ ಮುಟ್ಟುವ ಟೇಬಲ್, ಬಾಗಿಲಿನ ಚಿಲಕಗಳು, ಫೋನ್, ಟಿವಿ ಸ್ಕ್ರೀನ್ ಹಾಗೂ ಫರ್ನಿಚರ್‌ಗಳನ್ನು ಡಿಸ್‌ಇನ್ಫೆಕ್ಟೆಂಟ್ ಹಾಗೂ ಸ್ಯಾನಿಟೈಸ್ ಮಾಡಿ. 
- ನಿಮ್ಮ ಮಗುವಿನ ರೋಗ ನಿರೋಧಕ ವ್ಯವಸ್ಥೆ ಬಲವಾಗಿರುವಂತೆ ಅವರಿಗೆ ಉತ್ತಮ ಆಹಾರ ನೀಡಿ. ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಸಿಡೆಂಟ್ಸ್ ಹೆಚ್ಚಿರುವ ಆಹಾರಗಳು, ಹಣ್ಣು ಹಾಗೂ ತರಕಾರಿಗಳನ್ನು ತಿನ್ನಿಸಿ. 

click me!