ವೀಳ್ಯದೆಲೆ ಜತೆ ತಿನ್ನುವ ಸುಣ್ಣ ಡೇಂಜರ್, ನಿಷೇಧಿಸುವಂತೆ ಒತ್ತಾಯಿಸಿದ ಡಾಕ್ಟರ್ಸ್

By Suvarna News  |  First Published Aug 26, 2022, 4:51 PM IST

ನಮ್ಮ ಹಿರಿಯರು ಪ್ರತಿನಿತ್ಯವು ಊಟವಾದ ಬಳಿಕ ಎಲೆ ಅಡಕೆ ಜಗಿಯುತ್ತಿದ್ದರು. ಇದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎನ್ನುವ ನಂಬಿಕೆ. ಆದ್ರೆ, ಈಗ ಎಲೆಗೆ ಬಳಸುವ ಸುಣ್ಣ  ತೊಂದರೆಯಂತೆ.


ಹುಬ್ಬಳ್ಳಿ, (ಆಗಸ್ಟ್. 26): ವೀಳ್ಯದೆಲೆ ಜೊತೆ ಬಾಯಿ ಕೆಂಪಾಗಲು ಸುಣ್ಣ ಬೇಕು. ಇದೀಗ ಈಗಿನ ಸುಣ್ಣ ಆರೋಗ್ಯದಲ್ಲಿ ಮೇಲೆ ಮಾರಕವಾಗಿದೆ. ಹೌದು..ವೀಳ್ಯದೆಲೆಗೆ ಬಳಸುವ ಸುಣ್ಣ ಆಸಿಡ್‌ ನಷ್ಟು ಡೇಂಜರ್ ಅಂತಿದ್ದಾರೆ ವೈದ್ಯರು.

ವೀಳ್ಯದೆಲೆಗೆ ಬಳಿಯಲು ಬಳಸುವ ಸುಣ್ಣ ಆಕಸ್ಮಿಕವಾಗಿ ಮಕ್ಕಳ ಕಣ್ಣಿಗೆ ತಗುಲಿದರೆ, ಅವರು ಶಾಶ್ವತವಾಗಿ ಅಂಧತ್ವ ಸಮಸ್ಯೆಗೆ ಒಳಗಾಗಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ' ಎಂದು ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಆತಂಕ ವ್ಯಕ್ತಪಡಿಸಿದರು.

Latest Videos

undefined

ಕಣ್ಣುಗಳಲ್ಲಿ ಈ ಬದಲಾವಣೆ ಕಂಡ್ರೆ ಕಬ್ಬಿಣಾಂಶದ ಕೊರತೆ ಇದೆ ಎಂದರ್ಥ

ಸುರಕ್ಷಿತ ಮಾನದಂಡಗಳನ್ನು ಅನುಸರಿಸಿದೆ ಪ್ಲಾಸ್ಟಿಕ್‌ ಟ್ಯೂಬ್‌ ಹಾಗೂ ಚಿಕ್ಕ ಪ್ಲಾಸ್ಟಿಕ್‌ ಬಾಕ್ಸ್‌ನಲ್ಲಿ ಸುಣ್ಣ ತುಂಬಿ ಮಾರಾಟ ಮಾಡಲಾಗುತ್ತಿದೆ. ರಾಸಾಯನಿಕ ಮಿಶ್ರಿತವಿರುವ ಆ ಸುಣ್ಣ ಆಕಸ್ಮಿಕವಾಗಿ ಮಕ್ಕಳ ಕೈಗೆ ಸಿಕ್ಕಿ, ಅದು ಕಣ್ಣಿಗೆ ತಾಗಿದರೆ ಒಳಭಾಗದಲ್ಲಿರುವ ಕರಿಗುಡ್ಡೆ ಹಾಗೂ ಪದರುಗಳು ಸುಟ್ಟು ಶಾಶ್ವತ ದೃಷ್ಟಿಹೀನರಾಗುತ್ತಾರೆ. ಆಯಸಿಡ್‌ಗಿಂತಲೂ ಅಪಾಯಕಾರಿಯಾದ ಈ ಸುಣ್ಣವನ್ನು ನಿಷೇಧಿಸಲು ಅಧವಾ ಸುರಕ್ಷಿತವಾಗಿ ಪ್ಯಾಕ್‌ ಮಾಡಿ ಮಾರಾಟ ಮಾಡುವಂತೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು' ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಆಟವಾಡುತ್ತಿದ್ದ 11 ತಿಂಗಳ ಮಗುವಿಗೆ ಆಕಸ್ಮಿಕವಾಗಿ ಟ್ಯೂಬ್‌ನಲ್ಲಿದ್ದ ಸುಣ್ಣ ಕಣ್ಣಿನೊಳಗೆ ಹೋಗಿತ್ತು. ಪಾಲಕರು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಮ್ಮ ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಾಗಲೇ ಮಗುವಿನ ಕರಿಗುಡ್ಡೆ ಸುಟ್ಟು ಹೋಗಿತ್ತು. ಇದೀಗ ಹಂತಹಂತವಾಗಿ ಚಿಕಿತ್ಸೆ, ಶಸ್ತ್ರಚಿಕಿತ್ಸೆ ನೀಡಿ ಮಗುವಿಗೆ ಪುನರ್‌ ದೃಷ್ಟಿ ನೀಡಲು ಸಾಧ್ಯವಿದೆಯೇ ಎಂದು ನೋಡುತ್ತಿದ್ದೇವೆ. ಆದರೆ, ಕಳೆದುಕೊಂಡ ದೃಷ್ಟಿ ಮರಳಿ ಬರುವುದು ಕಷ್ಟ ಎಂದು ತಿಳಿಸಿದರು.

ಪ್ರತಿವರ್ಷ ದೇಶದಲ್ಲಿ 90ರಷ್ಟು ಇಂತಹ ಪ್ರಕರಣಗಳು ದಾಖಲಾಗುತ್ತವೆ. ಅವುಗಳಲ್ಲಿ ಶೇ 50ರಷ್ಟು ಪ್ರಕರಣಗಳು ಉತ್ತರ ಕರ್ನಾಟಕ ಭಾಗದ್ದಾಗಿದ್ದು, ನಮ್ಮ ಆಸ್ಪತ್ರೆಯಲ್ಲಿ ಪ್ರಸ್ತುತ ವರ್ಷ 10 ಪ್ರಕರಣಗಳು ದಾಖಲಾಗಿವೆ. ಗ್ರಾಮೀಣ ಭಾಗದ ಪೋಷಕರಲ್ಲಿ ತಿಳಿವಳಿಕೆ ಕಡಿಮೆಯಿದ್ದು, ಮಕ್ಕಳ ಕೈಗೆ ಸುಣ್ಣದ ಟ್ಯೂಬ್‌ ಸಿಗುವಂತೆ ಇಡಬಾರದು' ಎಂದ ಡಾ. ಶ್ರೀನಿವಾಸ ಜೋಶಿ, 'ಆ. 25ರಿಂದ ಸೆ. 8ರವರೆಗೆ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ ಸಂದರ್ಭದಲ್ಲಿ ಕಣ್ಣಿನ ಆರೈಕೆ ಕುರಿತು ಜಾಗೃತೆ ಮೂಡಿಸಲಾಗುವುದು ಎಂದರು.

ಕಣ್ಣಿಗೆ ಸುಣ್ಣ ಬಿದ್ದ ಐದು ನಿಮಿಷದಲ್ಲಿಯೇ ಒಳಭಾಗಗಳು ಬಹುತೇಕ ನಿಷ್ಕ್ರಿಯವಾಗುತ್ತವೆ. ಆದರೂ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಮುಂದಾಗಬೇಕು. ಅದಕ್ಕೂ ಪೂರ್ವ ಶುದ್ಧ ನೀರಿನಿಂದ ಸಾಧ್ಯವಾದಷ್ಟು ಕಣ್ಣು ತೊಳೆಯುತ್ತಲೇ ಇರಬೇಕು. ಎಂತಹದ್ದೇ ಚಿಕಿತ್ಸೆ ಅಥವಾ ಕಣ್ಣು ಕಸಿ ಮಾಡಿದರೂ ಶುದ್ಧ ದೃಷ್ಟಿ ಬರುವುದು ಅನುಮಾನ ಎಂದು ಡಾ. ಸತ್ಯಮೂರ್ತಿ ಹೇಳಿದರು.

click me!