
- ಮಂದಾರ ಭಟ್, ಶೃಂಗೇರಿ
ಅವತ್ತು ಭಾನುವಾರ ಬಿಡುವಿನಲ್ಲಿ ಕುಳಿತು ರಾಧಿಕಾ ಜೊತೆಗಿನ ಫೋಟೋ ನೋಡ್ತಾ, ಹಳೆಯ ನೆನಪುಗಳನ್ನು ಮೆಲುಕು ಹಾಕ್ತಾ ಕೂತಿದ್ದೆ. ಮರುಕ್ಷಣವೇ ರಾಧಿಕಾ ಫೋನು!ಅವಳು ಯಾವಾಗಲೂ ಹೇಳ್ತಿದ್ಲು, ನಮಗೆ ಏನಾದ್ರು ಬೇಕು ಅಂತ ಮನಸಾರೆ ಕೇಳಿದರೆ, ಜಗತ್ತು ನಮಗದನ್ನು ಕೊಡುತ್ತೆ ಅಂತ. ಅವಳ ಫೋಟೋ ನೋಡುವಾಗಲೇ, ಅವಳ ಫೋನು ಬಂದಿದ್ದು ಈ ಮಾತನ್ನು ನನಗೆ ನೆನಪಿಸಿತ್ತು. ‘ಅರ್ಜೆಂಟಾಗಿ ಭೇಟಿ ಮಾಡಬೇಕು ಬಾ’ ಅಂತ ಹೇಳಿದ್ಲು. ‘ಹೆಲೋ ರಾಧಿಕಾ, ನೀನು ಯಾವಾಗ ಕೆನಡಾದಿಂದ ವಾಪಸು ಬಂದೆ? ಎಲ್ಲಿದೀಯ ಈಗ?’ ಅಂತ ಸ್ವಲ್ಪ ಗಾಬರಿಯಲ್ಲೇ ಕೇಳಿದೆ. ‘ಎಲ್ಲವನ್ನೂ ಹೇಳ್ತೀನಿ ಲಾಲ್‌ಬಾಗ್‌ನ ಕೆಂಪೇಗೌಡ ಟವರ್ ಬಳಿ ಬಂದು ಬಿಡು.. ಕಾಯ್ತಾ ಇರ್ತೀನಿ’ ಎಂದು ಹೇಳಿ ಕಾಲ್ ಕಟ್ ಮಾಡಿದಳು. ನಾನು ತಕ್ಷಣವೇ ಕ್ಯಾಬ್ ಹತ್ತಿ ಲಾಲ್‌ಬಾಗ್ ಕಡೆಗೆ ಹೊರಟೆ. ಕ್ಯಾಬ್ ಹತ್ತಿದ ಕ್ಷಣದಿಂದ ಅವಳನ್ನು ನೋಡುವವರೆಗೂ ನನ್ನ ಅತಂಕದ ಹೆಚ್ಚಾಗುತ್ತಲೇ ಇತ್ತು.
*
ಇದು ಸುಮಾರು ಐದು ವರ್ಷಗಳ ಹಿಂದಿನ ಮಾತು. ರಾಧಿಕಾ ನನಗೆ ಪರಿಚಯ ಆಗಿದ್ದು ಮೆಜೆಸ್ಟಿಕ್ ಬಸ್‌ಸ್ಟಾಂಡ್‌ನಲ್ಲಿ. ಆಫೀಸಿನ ಮೊದಲ ದಿನ ಕೆಲಸ ಮುಗಿಯುವುದು ತಡವಾಗಿ, ರಾತ್ರಿ ಹತ್ತು ಗಂಟೆಯಾದರೂ ಮೆಜೆಸ್ಟಿಕ್‌ನಲ್ಲಿ ಬಸ್ಸು ಕಾಯುತ್ತಾ ನಿಂತಿದ್ದೆ. ನನಗೋ ಬೆಂಗಳೂರು ತೀರಾ ಹೊಸತು. ಈ ರಾತ್ರಿ ಎರಡು ಬಸ್ ಬದಲಾಯಿಸಿ ಪಿ.ಜಿಗೆ ಹೋಗುವುದನ್ನು ನೆನೆಸಿ ಅಳುವೇ ಬಂದಂತಾಗಿತ್ತು. ಅಕ್ಕ ಪಕ್ಕ ಕಣ್ಣಾಡಿಸಿದರೆ, ನನ್ನದೇ ಆಫೀಸಿನ ಐ.ಡಿ ಕಾರ್ಡ್ ಹಾಕಿದ್ದ ಹುಡುಗಿಯೊಬ್ಬಳು ಕಾಣಿಸಿದ್ಲು. ಅವಳನ್ನು ಬೆಳಿಗ್ಗೆಯ ಬಸ್ಸಿನಲ್ಲೂ ನೋಡಿದ ನೆನಪಾಯ್ತು. ಅವಳ ಬಳಿ ಹೋಗಿ ನನ್ನ ಪರಿಚಯ ಮಾಡಿಕೊಂಡೆ. ಅವಳೂ ಕೂಡಾ ನಾನು ಹೋಗಬೇಕಿದ್ದ ಬಸ್ಸಿಗೆ ಕಾಯುತ್ತಾ ನಿಂತಿದ್ಲು. ಅವಳಿಗೂ ಬೆಂಗಳೂರು ಹೊಸದಂತೆ. ನಾನಿದ್ದ ಕಂಪನಿಗೆ ಅವಳು ಕೂಡ ಅದೇ ದಿನವೇ ಸೇರಿದ್ದಂತೆ. ಆದರೆ ಅವಳ ಮುಖದಲ್ಲಿ ಯಾವ ಆತಂಕವೂ ಇರಲಿಲ್ಲ. ನಾನು ಕೇಳಿಯೇ ಬಿಟ್ಟೆ, ‘ನಿಮಗೆ ಬೆಂಗಳೂರು ಹೊಸತು ಅಂತೀರಾ.. ಈ ರಾತ್ರಿಯಲ್ಲಿ ಹೀಗೆ ಬಸ್ಸು ಕಾಯುವಾಗ ಸ್ವಲ್ಪವೂ ಭಯವಾಗುವುದಿಲ್ವಾ?’ ಆಗ ಆಕೆ ‘ಭಯ ಪಟ್ಟು ಬದುಕೋದಕ್ಕಲ್ಲ ನಾನು ಬೆಂಗಳೂರಿಗೆ ಬಂದಿದ್ದು.. ಇದ್ದದ್ದನ್ನು ಇದ್ದ ಹಾಗೆ ಸ್ವೀಕರಿಸಿ, ನನ್ನ ಕಾರ್ಯ ಸಾಧನೆ ಮಾಡೋಕೆ ಬಂದಿದ್ದೀನಿ’ ಅಂತ ಹೇಳಿ ಮುಗುಳ್ನಕ್ಕಳು. ಅವಳ ಮಾತಿನಲ್ಲಿದ್ದ ನಿಖರತೆ ಕಂಡು ನಾನು ಅವತ್ತೇ ಬೆರಗಾಗಿದ್ದೆ. ಆಮೇಲೆ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಆದೆವು.
ಕನಸಿನ ಕುದುರೆಯೇರಿ ಗುರಿ ಸೇರಿದ ಸಾಧಕಿಯರು!
*
ಎರಡು ತಿಂಗಳ ಹಿಂದೆಯಷ್ಟೇ ನಾನೇ ಅವಳನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟು ಬಂದಿದ್ದೆ. ಇನ್ನೆರಡು ವರ್ಷ ಕೆನಡಾದಿಂದ ವಾಪಸು ಬರಲ್ಲ. ಇಲ್ಲೇ ಇದ್ರೆ ಮನೆಯಲ್ಲಿ ಮಾದುವೆ ಮಾಡಿಕೋ ಅಂತ ಹಿಂಸೆ ಮಾಡ್ತಾರೆ. ಅಲ್ಲಿ ಸ್ವಲ್ಪ ದಿನ ಆರಾಮಾಗಿದ್ದು ವಾಪಸು ಬರ್ತೀನಿ ಅಂತ ಹೇಳಿ ಹೋಗಿದ್ದವಳು ಎರಡೇ ತಿಂಗಳಿಗೆ ವಾಪಸು ಬಂದಿದ್ದು, ನನ್ನ ಮನಸ್ಸಿನ ಆತಂಕಕ್ಕೆ ಕಾರಣವಾಗಿತ್ತು. ರಾಧಿಕಾ ಐದು ವರ್ಷದಲ್ಲಿ ಮೂರು ಕಂಪನಿ ಬದಲಿಸಿ, ಮ್ಯಾನೇಜರ್ ಹುದ್ದೆಯಲ್ಲಿದ್ದಳು. ನಾನಿನ್ನೂ ಮೊದಲನೇ ಕಂಪನಿಯಲ್ಲೇ ಇದ್ದೀನಿ. ಅವಳು ನನಗೆ ಆಗಾಗ ಹೇಳುತ್ತಿದ್ದದ್ದು, ‘ಇರೋದು ಒಂದೇ ಜೀವನ. ಸಿಕ್ಕಿದ್ದಷ್ಟೇ ಸಾಕು ಅನ್ನೋ ಮನೋಭಾವ ಬಿಡು. ಜೀವನದಲ್ಲಿ ಎಷ್ಟಾಗುತ್ತೋ ಅಷ್ಟನ್ನೂ ಪಡೆದುಕೊಳ್ಳಬೇಕು. ಆದರೆ ಬಳಸುವಾಗ ಮಾತ್ರ ಮಿತವಾಗಿ ಬಳಸಬೇಕು. ಅಗತ್ಯ ಇದದ್ದಕ್ಕೆ ಮಾತ್ರ ಬಳಸಬೇಕು. ಅದು ನಮ್ಮ ಹಣವಾದರೂ ಸರಿ, ಬುದ್ಧಿಯಾದರೂ ಸರಿ.’ ‘ನೀನು ಈ ಐ.ಟಿ ಕಂಪನಿ ಕೆಲಸದ ಬದಲು, ಆಶ್ರಮ ಶುರು ಮಾಡಿ ಪ್ರಪಂಚದಾದ್ಯಂತ ಸುತ್ತಾಡಿ ಭಾಷಣ ಮಾಡಿದರೆ ಇನ್ನೂ ದುಪ್ಪಟ್ಟು ಸಂಪಾದನೆ ಮಾಡುತ್ತೀಯಾ..’ ಎಂದು ರೇಗಿಸುತ್ತಿದ್ದೆ. ಆಫೀಸಿನ ಕೆಲವು ವಿದೇಶಿ ಸಹೋದ್ಯೋಗಿಗಳ ಮೂಲಕ ಅವಳಿಗೆ ಧ್ಯಾನ ಮತ್ತು ಮೈಂಡ್ ಕಂಟ್ರೋಲಿಂಗ್ ಬಗ್ಗೆ ಆಸಕ್ತಿಯೂ ಬೆಳೆದಿತ್ತು. ಆ ಬಗ್ಗೆ ಆನ್‌ಲೈನ್ ಕೋರ್ಸ್ ಮಾಡುತ್ತಿದ್ದಳು.
*
ಕ್ಯಾಬ್ ಲಾಲ್‌ಬಾಗ್‌ನ ಮುಂದೆ ಬಂದು ನಿಂತಾಗ ನೀಲಿ ಜೀನ್ಸು ಮತ್ತು ಬಿಳಿ ಶರ್ಟು ತೊಟ್ಟು ನಿಂತಿದ್ದ ರಾಧಿಕಾ ಕಣ್ಣಿಗೆ ಬಿದ್ದಳು. ಅವಳ ಬಳಿ ಹೋಗಿ ಅವಳನ್ನು ಅಪ್ಪಿಕೊಂಡೆ. ‘ಎರಡು ವರ್ಷ ಇರಲು ಹೋದವಳು ಒಂದೇ ತಿಂಗಳಿಗೆ ಯಾಕೆ ವಾಪಸು ಬಂದೆ? ಏನಾದ್ರು ತೊಂದ್ರೆ ಆಯ್ತಾ?’ ಆತಂಕದಲ್ಲಿ ಕೇಳಿದೆ. ಅವಳ ಮುಖದಲ್ಲಿ ಎಂದಿನ ಆತ್ಮವಿಶ್ವಾಸದ ನಗೆ. ‘ನಾನೊಂದು ಮೆಡಿಟೇಶನ್ ಸೆಂಟರ್ ಮತ್ತು ವೃದ್ಧಾಶ್ರಮ ಶುರು ಮಾಡಬೇಕು ಅಂದುಕೊಂಡಿದ್ದೀನಿ’ ಅಂದಳು. ರಪ್ ಎಂದು ಅವಳ ಕೆನ್ನೆಗೆ ಬಾರಿಸಬೇಕು ಅನ್ನಿಸಿತು. ಮನೆಯಲ್ಲಿ ಮದುವೆಯ ಯೋಚನೆ ಮಾಡ್ತಾ ಇದ್ರೆ, ಇವಳು ಮೆಡಿಟೇಶನ್ ಸೆಂಟರ್ ಶುರು ಮಾಡ್ತಾಳಂತೆ. ಆದರೆ ನಂಗೆ ಅವಳ ಬಗ್ಗೆ ತಿಳಿಯದ್ದು ಏನೂ ಇಲ್ಲ. ಅವಳ ನಿರ್ಧಾರವನ್ನು ಅವಳು ಯಾರಿಗಾಗಿಯೂ ಬದಲಿಸುವುದಿಲ್ಲ. ಆದರೂ ಪ್ರಯತ್ನ ಮಾಡೋಣ ಎಂದುಕೊಂಡು ಮತ್ತೆ ಮಾತು ಶುರು ಮಾಡಿದೆ. ‘ಮೆಡಿಟೇಶನ್ ಸೆಂಟರ್ ಶುರು ಮಾಡುವಷ್ಟುತಿಳುವಳಿಕೆ ನಿನಗಿದ್ಯಾ? ಇಂತಹ ಸೆಂಟರ್ ತೆರೆಯುವವರು ಏನಿಲ್ಲವೆಂದರೂ ತಮ್ಮ ಅರ್ಧ ಜೀವನ ಇದರ ಬಗ್ಗೆ ತಿಳಿಯುವುದರಲ್ಲಿ ಕಳೆದಿರುತ್ತಾರೆ. ನಿನಗಿನ್ನೂ ಇಪ್ಪತ್ತಾರು ವಯಸ್ಸು’ ಎಂದೆ. ಈಗ ರಾಧಿಕಾ ತನ್ನ ಮೌನ ಮುರಿದಳು. ‘ನಾನು ಕೆನಡಾಕ್ಕೆ ಹೋಗಿದ್ದೇ ಇದರ ಬಗ್ಗೆ ಇನ್ನಷ್ಟುತಿಳಿದುಕೊಳ್ಳಲು. ಎರಡು ತಿಂಗಳಿನಿಂದ ಸಾಕಷ್ಟುಹೊಸ ವಿಷಯ ಕಲಿತಿದ್ದೇನೆ. ಸುಮಾರು ಎರಡು ವರ್ಷಗಳಿಂದಲೂ ಧ್ಯಾನ ಮತ್ತು ಮೈಂಡ್ ಕಂಟ್ರೋಲಿಂಗ್ ಬಗ್ಗೆ ನನ್ನ ಹುಡುಕಾಟ ನಡೆಯುತ್ತಲೇ ಇತ್ತು. ಧ್ಯಾನ ಮತ್ತು ಮನಸ್ಸಿನ ವಿಚಾರ ನಮ್ಮೊಳಗೆ ನಾವು ಹುಡುಕಿಕೊಂಡು ಕಲಿಯಬೇಕೇ ಹೊರತು ಹೊರ ಪ್ರಪಂಚದಲ್ಲಿ ಆ ಕಲಿಕೆ ಸಿಕ್ಕುವುದಿಲ್ಲ. ಆದರೆ ಅಲ್ಲಿ ಹೋಗಿದ್ದರಿಂದ ಕೆಲವು ವ್ಯಕ್ತಿಗಳ ಪರಿಚಯವಾಯಿತು ಮತ್ತು ಅವರು ಬದುಕನ್ನು ನೋಡುವ ರೀತಿಯ ಬಗ್ಗೆ ತಿಳಿಯಿತು. ಇದೇ ನಂಗೆ ಬೇಕಾಗಿದ್ದ ಕಲಿಕೆ. ಸಾಕಷ್ಟುದುಡಿದಿದ್ದೇನೆ. ಧ್ಯಾನ ಸೆಂಟರ್‌ನಿಂದ ಬರುವ ಹಣವನ್ನು ವೃದ್ಧಾಶ್ರಮ ನಿರ್ವಹಣೆಗೆ ಬಳಸುತ್ತೇನೆ. ನನಗೇನೂ ಆಡಂಬರ ಜೀವನದ ಬಗ್ಗೆ ವ್ಯಾಮೋಹವಿಲ್ಲ. ಸಮಾಜದ ದೃಷ್ಟಿಯಿಂದ ಜೀವನವನ್ನು ನೋಡುವುದು ಬಿಟ್ಟು , ಮನಸ್ಸಿನ ದೃಷ್ಟಿಯಿಂದ ಜೀವನ ನೋಡುವುದನ್ನು ಅಭ್ಯಾಸ ಮಾಡಿದ್ದೇನೆ. ತಾಯಿ ಇಲ್ಲದ ನನಗೆ ವೃದ್ಧಾಶ್ರಮದಲ್ಲಿ ಎಷ್ಟೊಂದು ತಾಯಂದಿರು ಸಿಗಬಹುದು ಎನ್ನುವ ಬಗ್ಗೆ ಖುಷಿಯಿದೆ’ ಎಂದಳು.
‘ಹಾಗಾದರೆ ನಿನ್ನ ಧ್ಯಾನ ಸೆಂಟರ್‌ನಲ್ಲಿ ನನಗೊಂದು ಕೆಲಸ ಖಾಲಿ ಇಡು’ ಎಂದು ನನ್ನ ಮಾಮೂಲಿ ಬುದ್ಧಿಯಲ್ಲಿ ಹೇಳಿದೆ. ಆದರೂ ನಾನು ಆಶ್ರಮ ಶುರು ಮಾಡು ಅಂತ ಅವಳನ್ನು ರೇಗಿಸುತ್ತಿದ್ದುದನ್ನು ಜಗತ್ತು ಇಷ್ಟುಬೇಗ ಅವಳಿಗೆ ಕೊಟ್ಟು ಬಿಟ್ಟಿತೇ ಎಂಬ ಅಚ್ಚರಿಯೂ ಮನಸ್ಸಿನಲ್ಲಿ ಮೂಡಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.