
ಊಟದ ವಿಷಯಕ್ಕೆ ಬಂದರೆ ಪೋಷಕರು ಹಾಗೂ ಮಕ್ಕಳ ನಡುವೆ ಪ್ರತಿದಿನ ಯುದ್ಧವೇ ನಡೆಯುತ್ತದೆ. ತಟ್ಟೆ ಎಳೆದಾಡುವುದು, ಪ್ಯಾಕೆಟ್ ಸ್ನ್ಯಾಕ್ಸ್‌ಗಾಗಿ ಗಲಾಟೆ, ಊಟವನ್ನು ಪೋಷಕರಿಗೆ ಗೊತ್ತಾಗದಂತೆ ಎಸೆಯುವುದು, ಊಟ ಕಾಣುತ್ತಿದ್ದಂತೆ ಅಳುವುದು, ಬೈಗುಳ ಎಲ್ಲವೂ ಸರಣಿಯಲ್ಲಿ ಶುರುವಾಗುತ್ತವೆ. ಮಗು ತಟ್ಟೇಲಿರೋದೆಲ್ಲ ತಿನ್ನದೆ ನೀವು ಸುಮ್ಮನಾಗೋಲ್ಲ. ನೀವು ಸುಮ್ಮನಾಗೋಲ್ಲ ಎಂದು ಗೊತ್ತಿದ್ದರೂ ಮಗು ಸುಮ್ಮನೆ ತಿನ್ನೋಲ್ಲ. ಒಟ್ಟಿನಲ್ಲಿ ಊಟದ ಟೈಂ ಬಂದರೆ ಸಾಕು, ತಲೆನೋವು ಶುರುವಾಗುತ್ತದೆ. ಆದರೆ, ಈ ಯುದ್ಧವನ್ನು ನಿಲ್ಲಿಸಿ ಶಾಂತಿಮಂತ್ರ ಘೋಷಿಸುವತ್ತ ಇಬ್ಬರೂ ಗಮನ ಹರಿಸಬಾರದೇಕೆ? ಆಹಾರ ಮತ್ತು ಮಕ್ಕಳ ನಡುವೆ ಒಂದು ಆರೋಗ್ಯಕರ ಸಂಬಂಧ ಬೆಸೆದು, ಆ ಮೂಲಕ ಮಕ್ಕಳು ಆರೋಗ್ಯವಂತರಾಗಿರುವಂತೆ ನೋಡಿಕೊಳ್ಳಬಾರದೇಕೆ?
ಮಗುವಿನ ಹಸಿವು ಹೇಳಿದಂತೆ ಕೇಳಿ
'ತಟ್ಟೆಲಿರೋದನ್ನ ಖಾಲಿ ಮಾಡು' ಎಂದು ದಿನಕ್ಕೆ ನೂರು ಬಾರಿಯಾದರೂ ಅರಚುವುದು ನಿಮಗೆ ಅಭ್ಯಾಸವಾಗಿದೆ. ಇದರಿಂದ ಮಗು ತಟ್ಟೆಯಲ್ಲಿ ಏನಿದೆ, ಏನಿಲ್ಲ, ಬೇಕೋ ಬೇಡವೋ ಯೋಚಿಸದೆ ಒಟ್ರಾಶಿ ತಿನ್ನುವುದನ್ನು, ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳುತ್ತದೆ. ಆದರೆ, ವಿಷಯವೆಂದರೆ, ಪ್ರತಿ ಮಗುವೂ ತನ್ನ ದೇಹಕ್ಕೆ ಎಷ್ಟು ಬೇಕೆಂದು ಅರಿಯುವಂತೆ ಆರನೇ ಇಂದ್ರಿಯ ಕೆಲಸ ಮಾಡುತ್ತಿರುತ್ತದೆ. ಅದರಂತೆ ಹಸಿವಿರುವಷ್ಟು, ಪೋಷಕಸತ್ವಗಳ ಅಗತ್ಯವಿರುವಷ್ಟನ್ನು ಮಗುವೇ ಬಯಸಿ ತಿನ್ನಬಲ್ಲದು. ಹಾಗಾಗಿ, ಸರಿಯಾದ ಸಮಯಕ್ಕೆ ಸರಿಯಾದ ಆಹಾರ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಒತ್ತಾಯ ಬೇಡ. ಆಗ ಮಕ್ಕಳು ಸಂತೋಷವಾಗಿ ತಿನ್ನಲು ಆರಂಭಿಸುತ್ತವೆ. ಹೀಗಾಗಿ, ಆಹಾರ ಅವರ ಬೆಳವಣಿಗೆಗೆ ಪೂರಕವಾಗುತ್ತದೆ.
ಬೊಜ್ಜಿನ ಕೋಶಗಳ ಬೆಳವಣಿಗೆ
ಮನುಷ್ಯರಲ್ಲಿ ಬೊಜ್ಜು ಬಾಲ್ಯದಿಂದಲೇ ಬೆಳೆಯಲಾರಂಭಿಸುತ್ತದೆ. ದೊಡ್ಡವರಾದ ಬಳಿಕ ಸ್ಟೆಬಿಲೈಸ್ ಆಗುತ್ತದೆ. ಆದರೆ, ಈ ಫ್ಯಾಟ್ ಸೆಲ್‌ಗಳ ಇಳಿಕೆ ಅಥವಾ ಹೆಚ್ಚಳವೆಂಬುದು ನೀವು ಮಗುವಿಗೆ ಎಂಥ ಆಹಾರ ಕೊಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ವಯಸ್ಸಾದಂತೆಲ್ಲ ಬೊಜ್ಜು ಕರಗುತ್ತದೆ ಎಂಬುದನ್ನು ನಂಬಿ ಕುಳಿತುಕೊಳ್ಳಬೇಡಿ. ಮಗುವಿದ್ದಾಗಿನಿಂದಲೇ ಅತಿಯಾದ ಬೊಜ್ಜು ಬೆಳೆಯದಂತೆ ನೋಡಿಕೊಳ್ಳಿ.
ಆಯ್ಕೆಯ ಆಹಾರ
ಮಕ್ಕಳು ಕೆಲವೊಂದನ್ನು ಮಾತ್ರ ಹುಡುಕಿ ತಿನ್ನಲು ಕೆಲ ಕಾರಣಗಳಿರುತ್ತವೆ. ಕೆಲ ಮಕ್ಕಳು ಹುಟ್ಟುತ್ತಲೇ ಕೆಲವೊಂದು ರುಚಿ, ಆಹಾರ ವಿನ್ಯಾಸ ಹಾಗೂ ವಾಸನೆ ಕುರಿತು ಅತಿಯಾಗಿ ಸೆನ್ಸಿಟಿವ್ ಆಗಿರುತ್ತಾರೆ. ಮತ್ತೆ ಕೆಲವೊಮ್ಮೆ ಮಕ್ಕಳಿಗೆ ಕೆಲ ಆಹಾರ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತಿರುತ್ತದೆ. ಅದನ್ನವರು ಅರ್ಥೈಸಿಕೊಂಡು ಹೇಳಲಾರರು. ಆಗ ಆ ಆಹಾರವೇ ಬೇಡ ಎನ್ನಬಹುದು. ಮತ್ತಷ್ಟು ಮಕ್ಕಳು ತಂದೆತಾಯಿಯ ಆಹಾರಾಭ್ಯಾಸಗಳನ್ನು ಗಮನಿಸಿ ತಾವೂ ಅದನ್ನೇ ಅನುಕರಿಸುತ್ತಾರೆ. ಇನ್ನು ಆಹಾರದ ವಿಷಯದಲ್ಲಿ ಮಕ್ಕಳು ಪಡೆವ ಶಿಕ್ಷೆ, ರಿವಾರ್ಡ್, ಲಂಚ ಇವೆಲ್ಲವೂ ಆ ಆಹಾರದ ಕುರಿತ ಮಕ್ಕಳ ನಡವಳಿಕೆ ಬದಲಿಸಬಲ್ಲವು.
ಕೆಲವೊಮ್ಮೆ ತಮಗೆ ಸೇರದ್ದನ್ನು ಮಕ್ಕಳಿಗೂ ಸೇರುವುದಿಲ್ಲ ಎಂದು ಪೋಷಕರೇ ನಿರ್ಧರಿಸಿ ಅದನ್ನವರಿಗೆ ಕೊಡುವುದೇ ಇಲ್ಲ. ಇದು ಸರಿಯಲ್ಲ, ಮಕ್ಕಳು ರುಚಿ ನೋಡಿ ತಮಗೇನಿಷ್ಟ ಎಂದು ಅವರೇ ನಿರ್ಧರಿಸಲು ಬಿಡಬೇಕು.
ಕೆಲವೊಂದನ್ನು ಮಾತ್ರ ತಿನ್ನುವ ಮಕ್ಕಳೊಂದಿಗೆ ಹೇಗೆ ಡೀಲ್ ಮಾಡಬೇಕು?
1. ಹಳೆ ಆಹಾರ, ಹೊಸ ರುಚಿ
ಮಗು ಪಾಲಕ್ ತಿನ್ನಲಿ ಎಂದು ನೀವು ಪಾಲಕ್ ಸಬ್ಜಿ ಮಾಡಿ ಕೊಡುತ್ತಿರಬಹುದು. ಆದರೆ, ಮಗು ಇದನ್ನು ತಿನ್ನದ ಮಾತ್ರಕ್ಕೆ ಅದು ಪಾಲಕ್ ತಿನ್ನುವುದಿಲ್ಲ ಎಂದೇನಲ್ಲ. ಬದಲಿಗೆ ಪಾಲಕ್ ಸೂಪ್ ಅಥವಾ ಪಾಲಕ್ ಕೋಫ್ತಾ ಟ್ರೈ ಮಾಡಿ. ಆಕರ್ಷಕವೆನಿಸಿದರೆ ಮಗು ಅದನ್ನು ತಿನ್ನಲು ಇಷ್ಟ ಪಡಬಹುದು.
2. ಹೊಸತು
ನೀವು ಇಂಥ ದಿನ ಇಂಥ ತಿಂಡಿ ಎಂದು ನಿರ್ಧರಿಸಿ ತಯಾರಿಸುತ್ತಿದ್ದರೆ ಅದರಿಂದ ಮಕ್ಕಳು ಬೋರಾಗಿ ಹೋಗಿರಬಹುದು. ಬದಲಿಗೆ ಆಯಾ ದಿನ ಏನು ತಿಂಡಿ ಮಾಡುತ್ತಿದ್ದೀರೆಂದು ಮಕ್ಕಳು ಊಹಿಸಲಾಗದಂತೆ ಹೊಸತನ್ನು ಮಾಡಿಕೊಡಿ. ಇಲ್ಲವೇ, ಯಾವಾಗಲೂ ಕ್ಯಾರೆಟ್ ಉಪ್ಪಿಟ್ಟು ಮಾಡುತ್ತಿದ್ದರೆ ಈ ಬಾರಿ ಅವರೆಕಾಳು ಉಪ್ಪಿಟ್ಟು ಮಾಡಿ. ಮತ್ತೊಮ್ಮೆ ಅದಕ್ಕೆ ವಾಂಗಿಬಾತ್ ಪೌಡರ್ ಸೇರಿಸಿ. ಹೀಗೆ ಒಂದೇ ತಿಂಡಿಯನ್ನು ಹತ್ತು
ಹಲವು ರುಚಿಗಳಲ್ಲೂ ನೀಡಬಹುದು.
ಶ್ವಾಸಕೋಶದ ಆಹಾರಕ್ಕೋ ಈ ಫುಡ್ ಬೆಸ್ಟ್
3. ಅಗತ್ಯದಷ್ಟು
ಮಕ್ಕಳಿಗೆ ಅವರ ಗಾತ್ರಕ್ಕೆ ಸರಿಯಾಗುವ ಪುಟಾಣಿ ಪ್ಲೇಟ್‌ಗಳಲ್ಲಿ ಪುಟ್ಟ ಪುಟ್ಟ ಭಾಗಗಳನ್ನಾಗಿಸಿ ಆಹಾರವನ್ನು ಸ್ವತಃ ತಿನ್ನಲು ನೀಡಿದಾಗ, ಅದು ಅವರಿಗೆ ಆಹಾರ ಖಾಲಿ ಮಾಡಲು ಪ್ರೋತ್ಸಾಹಿಸುತ್ತದೆ. ಅವರ ಶಕ್ತಿಗೆ ಮೀರಿ ಆಹಾರ ತುಂಬಿಕೊಟ್ಟರೆ ಬಾಯಿಗಿಡುವ ಮೊದಲೇ ಅದನ್ನು ಮುಗಿಸುವ ಆಸಕ್ತಿ ಇಳಿದುಹೋಗುತ್ತದೆ.
4. ಬದಲಿ ಆಹಾರ
ನಿಮ್ಮ ಮಗು ಕ್ಯಾರೆಟ್ ತಿನ್ನುವುದಿಲ್ಲವೆಂದ ಮಾತ್ರಕ್ಕೆ ಚಿಂತಿತರಾಗಬೇಕಿಲ್ಲ. ಕ್ಯಾರೆಟ್‌ನಲ್ಲಿರುವ ಅದೇ ವಿಟಮಿನ್ಸ್ ಇನ್ನಿತರೆ ಪೋಷಕಸತ್ವಗಳು ಬೇರೆ ಯಾವ ಆಹಾರದಲ್ಲಿದೆ ನೋಡಿ, ಅವನ್ನು ಮಕ್ಕಳಿಗೆ ತಿನ್ನಲು ನೀಡಿ. ಬ್ರೊಕೋಲಿ ತಿನ್ನಲಿಲ್ಲವೆಂದರೆ ಹಸಿರು ಬಟಾಣಿ ನೀಡಿ, ಮೊಸರು ತಿನ್ನಲಿಲ್ಲವೆಂದರೆ ಮೊಟ್ಟೆ ನೀಡಿ. ಕೊಟ್ಟಿದ್ದೆಲ್ಲವನ್ನೂ ತಿನ್ನಬೇಕೆಂಬ ಹಟ ಬೇಡ.
5. ಸಪ್ಲಿಮೆಂಟ್
ಕೆಲವೊಮ್ಮೆ ಬಣ್ಣ ಸೇರಿಸದ, ಪ್ರಿಸರ್ವೇಟಿವ್ಸ್ ಇಲ್ಲದ, ಆರ್ಟಿಫಿಶಿಯಲ್ ಫ್ಲೇವರ್ ಸೇರಿಸದ ಸಪ್ಲಿಮೆಂಟ್ ಸಿಕ್ಕರೆ ಅದನ್ನು ಮಕ್ಕಳ ಆಹಾರದೊಂದಿಗೆ ಸೇರಿಸಿ. ಇದರಿಂದ ಬಿಟ್ಟು ಹೋದ ಪೋಷಕಸತ್ವಗಳು ಮಕ್ಕಳಿಗೆ ದಕ್ಕಬಹುದು. ಉದಾಹರಣೆಗೆ, ಯಾವುದಾದರೂ ಹಾಲಿಗೆ ಬೆರಸುವ ಪೌಡರ್. ಇವು ಮಕ್ಕಳಿಗೆ ಇಷ್ಟ ಕೂಡಾ ಆಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.