ಕೋವಿಡ್‌ ಆತಂಕ ಅಂತ್ಯ, ಮತ್ತೆ ಮರುಕಳಿಸುವ ಸಾಧ್ಯತೆ ಕಡಿಮೆ; ಐಸಿಎಂಆರ್‌ ವಿಜ್ಞಾನಿ

By Kannadaprabha NewsFirst Published Nov 19, 2022, 9:18 AM IST
Highlights

ಸತತ ಎರಡು ವರ್ಷದಿಂದ ಕೊರೋನಾ ವೈರಸ್ ಕಾಟದಿಂದ ಕಂಗೆಟ್ಟಿರೋ ಜನರು ಇನ್ಮುಂದೆ ಸ್ಪಲ್ಪ ರಿಲೀಫ್ ಆಗಿ ಇರಬಹುದಾಗಿದೆ. ಕಳೆದ 1 ವರ್ಷದಿಂದ ಗಂಭೀರ ಸ್ವರೂಪದ ಯಾವುದೇ ಕೋವಿಡ್‌ ರೂಪಾಂತರಿ (ವೇರಿಯಂಟ್‌ ಆಫ್‌ ಕನ್ಸರ್ನ್‌) ಪತ್ತೆಯಾಗಿಲ್ಲ. ಹೀಗಾಗಿ ಕೋವಿಡ್‌ನ ಭೀತಿ ಬಹುತೇಕ ಅಂತ್ಯವಾದಂತಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ನವದೆಹಲಿ: ಕಳೆದ 1 ವರ್ಷದಿಂದ ಗಂಭೀರ ಸ್ವರೂಪದ ಯಾವುದೇ ಕೋವಿಡ್‌ ರೂಪಾಂತರಿ (ವೇರಿಯಂಟ್‌ ಆಫ್‌ ಕನ್ಸರ್ನ್‌) ಪತ್ತೆಯಾಗಿಲ್ಲ. ಹೀಗಾಗಿ ಕೋವಿಡ್‌ನ ಭೀತಿ ಬಹುತೇಕ ಅಂತ್ಯವಾದಂತಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಾಜಿ ವಿಜ್ಞಾನಿ ಡಾ.ರಮಣ್‌ ಗಂಗಾಖೇಡ್ಕರ್‌ ಹೇಳಿದ್ದಾರೆ.

ಕೋವಿಡ್‌ನ ಒಮಿಕ್ರೋನ್‌ ರೂಪಾಂತರಿಯು (Omicron variant) ಪತ್ತೆಯಾಗಿ 1 ವರ್ಷ ಕಳೆದಿದ್ದು, ಅದು ಈವರೆಗೂ ಜಗತ್ತಿನ ವಿವಿಧೆಡೆ ಕಂಡುಬಂದಿದೆ. ಮೊದಲು ಪ್ರತಿ 6 ತಿಂಗಳಿಗೆ ಕೋವಿಡ್‌ನ ಹೊಸ ಅಲೆಗಳು ಕಂಡುಬರುತ್ತಿದ್ದವು. ಆದರೆ ಕಳೆದ 1 ವರ್ಷದಿಂದ ಒಮಿಕ್ರೋನ್‌ ರೂಪಾಂತರಿಯೇ ಮುಂದುವರೆಯುತ್ತಿದೆ. ಇದು ಸೌಮ್ಯ ತಳಿಯಾಗಿದ್ದರಿಂದ ಆಸ್ಪತ್ರೆಗೆ (Hospital) ದಾಖಲಾಗುವವರ ಹಾಗೂ ಮೃತರ ಸಂಖ್ಯೆಯು ಗಣನೀಯವಾಗಿ ತಗ್ಗಿದೆ. ಹೀಗಾಗಿ ಈಗ ಕೋವಿಡ್‌ನ ಭೀತಿ ಬಹುತೇಕ ಅಂತ್ಯವಾದಂತಾಗಿದ್ದು, ಮತ್ತೆ ಮರುಕಳಿಸುವ ಸಾಧ್ಯತೆ ಕ್ಷೀಣವಾಗಿದೆ ಎಂದು ಗಂಗಾಖೇಡ್ಕರ್‌ ಹೇಳಿದ್ದಾರೆ.

ಚೀನಾ ಜೊತೆ ಕೈಜೋಡಿಸಿದ ಪಾಕ್‌, ಕೊರೋನಾಗಿಂತ ಮಾರಕವಾದ 'ಡೆಡ್ಲಿ ವೈರಸ್‌' ಸಂಶೋಧನೆ!

ಭಾರತದಲ್ಲಿ ಸೋಂಕಿನ ಅಬ್ಬರ ಭಾರಿ ಇಳಿಮುಖ
ಕೊರೋನಾ ವೈರಸ್‌ನ ಅಲೆ ಉತ್ತುಂಗದಲ್ಲಿದ್ದಾಗ ಪ್ರತಿದಿನ ಸಹಸ್ರಾರು ಸಾವುಗಳನ್ನು ಕಂಡಿದ್ದ ಭಾರತದಲ್ಲಿ ಸೋಂಕಿನ ಅಬ್ಬರ ಭಾರಿ ಇಳಿಮುಖವಾಗಿದೆ. ಇದರ ಫಲವಾಗಿ ಎರಡೂವರೆ ವರ್ಷಗಳ ಬಳಿಕ ದೇಶದಲ್ಲಿ ಇದೇ ಮೊದಲ ಬಾರಿಗೆ ಶೂನ್ಯ ಕೋವಿಡ್‌ ಸಾವು ವರದಿಯಾಗಿದೆ. ಮತ್ತೊಂದೆಡೆ, ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡುಬಂದಿದೆ. ದೇಶದಲ್ಲಿ 2020ರ ಮಾರ್ಚ್‌ನಲ್ಲಿ ಮೊದಲ ಕೋವಿಡ್‌ ಸಾವು ಸಂಭವಿಸಿತ್ತು.

ಕರ್ನಾಟಕದ ಕಲಬುರಗಿಯ 76 ವರ್ಷದ ವೃದ್ಧರೊಬ್ಬರು ಈ ಸೋಂಕಿಗೆ ಬಲಿಯಾದ ದೇಶದ ಪ್ರಥಮ ವ್ಯಕ್ತಿ ಎನಿಸಿಕೊಂಡಿದ್ದರು. ಆನಂತರ ಪ್ರತಿ ದಿನ ಒಂದಲ್ಲಾ ಒಂದು ಸಾವು (Death) ಸಂಭವಿಸಿ ಕೋವಿಡ್‌ ಅಲೆ ಉತ್ತುಂಗಕ್ಕೇರಿದಾಗ ಪ್ರತಿ ದಿನ ಮರಣ ಹೊಂದುವವರ ಸಂಖ್ಯೆ 4000ಕ್ಕೇರಿಕೆಯಾಗಿತ್ತು. ಶವಗಳನ್ನು ದಹಿಸಲೂ ಪರದಾಡುವಂತಹ ಹಾಗೂ ಸಾಮೂಹಿಕ ಶವ ದಹನ ಮಾಡುವಂತಹ ಪರಿಸ್ಥಿತಿ ನೆಲೆಸಿತ್ತು. ಆ್ಯಂಬುಲೆನ್ಸ್‌ ಶಬ್ದಕಂಡರೆ ಜನರು ಬೆಚ್ಚಿ ಬೀಳುವಂತಾಗಿತ್ತು. ಆದರೆ ಈಗ ದೇಶ ಶೂನ್ಯ ಸಾವಿನ ಹಂತಕ್ಕೆ ತಲುಪಿದೆ.

ಕೋವಿಡ್ ವೇಳೆ ಜಾಹೀರಾತಿಗೆ ಆಪ್‌ 490 ಕೋಟಿ ರೂ ಖರ್ಚು, ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ!

5 ಕೋಟಿ ಡೋಸ್‌ ಕೊವ್ಯಾಕ್ಸಿನ್ ವ್ಯರ್ಥವಾಗುವ ಸಂಭವ
ವಿಶ್ವಾದ್ಯಂತ ಕೋವಿಡ್‌ ಪ್ರಕರಣ ಇಳಿಕೆ ಬೆನ್ನಲ್ಲೇ, ಲಸಿಕೆಗೆ (Vaccine) ಬೇಡಿಕೆ ಕುಂಠಿತವಾಗಿದ್ದು, ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಕಂಪನಿಯ ಬಳಿ ಇರುವ 5 ಕೋಟಿ ಡೋಸ್‌ ಲಸಿಕೆ ವ್ಯರ್ಥವಾಗುವ ಕಳವಳ ಎದುರಾಗಿದೆ. ಬೇಡಿಕೆ ಸ್ಥಗಿತಗೊಂಡ ಕಾರಣ, ಕಂಪನಿ ಈಗಾಗಲೇ ಲಸಿಕೆ ಉತ್ಪಾದನೆ ಸ್ಥಗಿತಗೊಳಿಸಿದೆ. ಆದರೆ ಈಗಾಗಲೇ ಉತ್ಪಾದಿಸಿರುವ 5 ಕೋಟಿ ಡೋಸ್‌ ಲಸಿಕೆಯ ಬಳಕೆ ಅವಧಿ 2023ರ ಆರಂಭದಲ್ಲಿ ಮುಕ್ತಾಯವಾಗಲಿದೆ. ಇದರ ಹೊರತಾಗಿ ಇನ್ನೂ 20 ಕೋಟಿ ಡೋಸ್‌ಗಳು ಲಸಿಕೆ ಸಗಟು ರೂಪದಲ್ಲಿ ಸಂಗ್ರಹವಿದೆ. ಹೀಗಾಗಿ ಅವುಗಳನ್ನು ನಾಶ ಮಾಡುವುದು ಅನಿವಾರ್ಯವಾಗಲಿದೆ. ಪುಣೆ (Pune) ಮೂಲದ ಸೀರಂ ಇನ್‌ಸ್ಟಿಟ್ಯೂಟ್‌ ಕೂಡಾ ಅವಧಿ ಮುಗಿದ ಕಾರಣ ಇತ್ತೀಚೆಗೆ 10 ಕೋಟಿ ಡೋಸ್‌ ಲಸಿಕೆಯನ್ನು ನಾಶ ಪಡಿಸಿದ್ದಾಗಿ ಹೇಳಿತ್ತು.

ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಕೋವಿಡ್ -19 ಮತ್ತು ಅದರ ಹಲವಾರು ರೂಪಾಂತರಗಳ ವಿರುದ್ಧ  ಹೆಚ್ಚು ಪರಿಣಾಮಕಾರಿಯಾಗಿದೆ ಎಂಬ ಹಲವಾರು ವರದಿಗಳನ್ನು ನಾವು ನೋಡಿದ್ದೇವೆ. ಆದರೆ ಈಗ ಹೊಸ ವರದಿಯ ಪ್ರಕಾರ ಲಸಿಕೆಯ ಲಕ್ಷಾಂತರ ಡೋಸ್‌ಗಳ ಅವಧಿಯು ಮುಂದಿನ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ.  ಹೀಗಾಗಿ ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆಯ ಸುಮಾರು 50 ಮಿಲಿಯನ್ ಡೋಸ್‌ಗಳನ್ನು ನಿಷ್ಕ್ರೀಯಗೊಳಿಸಲಾಗುತ್ತಿದೆ. ಕೋವಾಕ್ಸಿನ್  ಬೇಡಿಕೆ ಕುಸಿದಿದ್ದು ತೆಗೆದುಕೊಳ್ಳುವವರು ಯಾರೂ ಇಲ್ಲ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಕಂಪನಿಯು ಈ ವರ್ಷದ ಆರಂಭದಲ್ಲಿ ಈ ಲಸಿಕೆಯ ಉತ್ಪಾದನೆಯನ್ನು ಕೂಡ ನಿಲ್ಲಿಸಿದೆ. Covaxin ಮತ್ತು Covishield ಭಾರತದಲ್ಲಿ ಕೋವಿಡ್-19 ವಿರುದ್ಧದ ಎರಡು ಪ್ರಮುಖ ಲಸಿಕೆಗಳಾಗಿವೆ. ದೇಶದ ಬಹುತೇಕ ಜನರು ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದಾರೆ.

click me!