ನೀವು ಕುಳಿತು ಕೆಲಸ ಮಾಡುವ ಖುರ್ಚಿಯಲ್ಲಿದ್ದಾನೆ ಯಮ; ಎಚ್ಚರ ತಪ್ಪಿದ್ರೆ ಸಾವು ಖಚಿತ

By Suvarna News  |  First Published Feb 15, 2024, 1:22 PM IST

ನಮ್ಮ ದೇಹ ರಚನೆ ಇರೋದು ಇಡೀ ದಿನ ಕುಳಿತುಕೊಳ್ಳೋದಕ್ಕೆ ಅಲ್ಲ. ನಿಂತು, ನಡೆದಾಡಿ ಕೆಲಸ ಮಾಡುವ ಸಾಮರ್ಥ್ಯ ನಮಗಿದೆ. ಆದ್ರೆ ದಿನದಲ್ಲಿ ಹತ್ತು ಗಂಟೆಗೂ ಹೆಚ್ಚು ಕಾಲ ಕುಳಿತೇ ಕೆಲಸ ಮಾಡುವ ಅನಿವಾರ್ಯತೆ ಅನೇಕರಿಗಿದೆ. ನೀವು ಕುಳಿತುಕೊಳ್ಳುವ ಖುರ್ಚಿಯಲ್ಲೇ ಸಾವಿದೆ.


ಇತ್ತೀಚೆಗೆ ಅನೇಕ ಮಂದಿ ಬೆನ್ನುನೋವು, ಕುತ್ತಿಗೆ ನೋವು, ಕಣ್ಣು ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದಿನವಿಡೀ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಲ್ಲಿ ಇಂತಹ ಸಮಸ್ಯೆಗಳು ಹೆಚ್ಚು ಕಂಡುಬರುತ್ತವೆ. ಕೆಲವರು ಕಚೇರಿಯಲ್ಲಿ ಇನ್ಕೆಲವರು ಮನೆಯಲ್ಲಿ ಕುಳಿತು ದಿನವಿಡೀ ಕಂಪ್ಯೂಟರ್ ಅಥವಾ ಇನ್ನಿತರ ಕೆಲಸಗಳನ್ನು ಮಾಡುತ್ತಾರೆ. ಹೀಗೆ ಹಲವು ಗಂಟೆಗಳ ಕಾಲ ಒಂದೇ ಖುರ್ಚಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಅನೇಕ ಗಂಭೀರ ಮತ್ತು ಮಾರಣಾಂತಿಕ ಖಾಯಿಲೆಗಳು ಹೆಚ್ಚುತ್ತವೆ.

ಖುರ್ಚಿ (Chair) ಯಿಂದ ಅನಾರೋಗ್ಯ ಖಂಡಿತ :  ಈಗಿನ ಮುಂದುವರೆದ ಜಗತ್ತಿನಲ್ಲಿ ಖರ್ಚು ವೆಚ್ಚಗಳು ಹೆಚ್ಚಿರುತ್ತವೆ. ಆದ್ದರಿಂದ ಎಲ್ಲರೂ ದುಡಿಯುವುದು ಅನಿವಾರ್ಯವಾಗಿದೆ. ಕೆಲಸ ಮಾಡಿ ಹಣ ಗಳಿಸುವುದು ಒಳ್ಳೆಯದೇ ಆದರೂ ಹೆಚ್ಚಿನ ಸಮಯ ಖುರ್ಚಿಯ ಮೇಲೆ ಕುಳಿತು ಕೆಲಸ ಮಾಡುವುದು ನಿಮ್ಮ ಜೀವಕ್ಕೆ ಅಪಾಯ ಉಂಟುಮಾಡಬಹುದು. ಡೆಸ್ಕ್ (desk) ಜಾಬ್ ಒಬ್ಬ ವ್ಯಕ್ತಿಯ ಸಾವಿನ ಅಪಾಯವನ್ನು ಪ್ರತಿಶತ 16 ರಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

Latest Videos

undefined

ಕ್ಯಾನ್ಸರ್ ತಡೆ ಲಸಿಕೆ ತಯಾರಿಕೆ ಅಂತಿಮ ಹಂತದಲ್ಲಿ ರಷ್ಯಾ; ಪುಟಿನ್

JAMA ನೆಟ್ ವರ್ಕ್ ಓಪನ್ ಜರ್ನಲ್  ನಲ್ಲಿ ಪ್ರಕಟವಾದ ವರದಿ ಮತ್ತು ಸುಮಾರು 13 ವರ್ಷಗಳಲ್ಲಿ 4,81,688 ಜನರ ಮೇಲೆ ನಡೆಸಿದ ಸಂಶೋಧನೆ (Research) ಯಲ್ಲಿ ಈ ವಿಷಯ ಸಾಬೀತಾಗಿದೆ. ಬಹಳ ಹೊತ್ತು ಕುಳಿತಲ್ಲೇ ಕೆಲಸ ಮಾಡುವ ಜನರಿಗೆ ಹೃದಯ ರಕ್ತನಾಳದ ಖಾಯಿಲೆ (ಸಿವಿಡಿ)ಯ ಅಪಾಯವೂ ಪ್ರತಿಶತ 30 ರಷ್ಟು ಹೆಚ್ಚಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಮನುಷ್ಯನ ಶರೀರದ ರಚನೆ ಅವನು ನಡೆಯಲು, ಓಡಲು, ಜಿಗಿಯಲು ಅನುಕೂಲವಾಗಿದೆ. ಆತನ ದೇಹದ ರಚನೆ ಹೀಗಿರುವಾಗ ಒಬ್ಬ ಮನುಷ್ಯ ನಡೆದಾಡದೇ ಹೆಚ್ಚು ಹೊತ್ತು ಕುಳಿತಿರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ವ್ಯಕ್ತಿ ಹಲವು ಗಂಟೆಗಳು ಕುಳಿತಿರುವುದರಿಂದ ಆತ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಬೊಜ್ಜು, ಮೆಟಾಬಾಲಿಕ್ ಸಿಂಡ್ರೋಮ್. ಹೃದಯ ಮತ್ತು ಕ್ಯಾನ್ಸರ್ ನಂತಹ ಗಂಭೀರ ಖಾಯಿಲೆಗಳಿಗೆ ಗುರಿಯಾಗುತ್ತಾನೆ.

ಕ್ಯಾನ್ಸರ್‌ ರೋಗಿಗೆ ರೊಬೋಟ್‌ನಿಂದ ಸರ್ಜರಿ, ಅಂಗಾಂಗ ಸುಟ್ಟು ಹೋಗಿ ಮಹಿಳೆ ಸಾವು

8 ಗಂಟೆಗೂ ಹೆಚ್ಚಿನ ಕಾಲ ಕುಳಿತಿರಬೇಡಿ : ಒಬ್ಬ ವ್ಯಕ್ತಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿದ್ದಾಗ ಮಾತ್ರ ಆತ ಆರೋಗ್ಯವಂತನಾಗಿರಲು ಸಾಧ್ಯ. ಆದರೆ ಈಗಿನ ಒತ್ತಡಹಾಗೂ ಬಿಡುವಿಲ್ಲದ ಜೀವನಶೈಲಿಯಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ಅನೇಕ ಮಂದಿ ದಿನಪೂರ್ತಿ ಕಂಪ್ಯೂಟರ್, ಮೊಬೈಲ್ ಮುಂದೆ ಕುಳಿತಿರುತ್ತಾರೆ. ಕೆಲವೊಮ್ಮೆ ನಾವು ಕುಳಿತುಕೊಳ್ಳುವ ಭಂಗಿ ಕೂಡ ನಮ್ಮ ಬೆನ್ನು ನೋವು ಹಾಗೂ ಕುತ್ತಿಗೆ ನೋವಿಗೆ ಕಾರಣವಾಗುತ್ತದೆ. ಒಬ್ಬ ವ್ಯಕ್ತಿ ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ಕುಳಿತಿದ್ದರೆ ಅದರಿಂದ ಸಾವಿನ ಅಪಾಯ, ಸ್ಥೂಲಕಾಯತೆಯ ಅಪಾಯ ಹೆಚ್ಚಿಗೆ ಇದೆ ಹಾಗೂ ಕುಳಿತಿರುವುದು ಧೂಮಪಾನದಷ್ಟೇ ಅಪಾಯಕರ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ.

ಹೆಚ್ಚಿನ ಸಮಯ ಕುಳಿತು ಕೆಲಸ ಮಾಡುವವರಿಗೆ ದೈಹಿಕ ಚಟುವಟಿಕೆಯ ಅವಶ್ಯಕತೆ ಇರುತ್ತದೆ. ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ ಮೆಡಿಸಿನ್ ನಲ್ಲಿ ಪ್ರಕಟವಾದ ಅಧ್ಯಯನ, ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ದಿನವೊಂದಕ್ಕೆ 22 ನಿಮಿಷಗಳ ದೈಹಿಕ ಚಟುವಟಿಕೆಯ ಅಗತ್ಯವಿದೆ. ದೈಹಿಕ ಚಟುವಟಿಕೆಯು ಕುಳಿತು ಕೆಲಸ ಮಾಡುವುದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ವಾರದಲ್ಲಿ 150 ನಿಮಿಷಗಳ ದೈಹಿಕ ಚಟುವಟಿಕೆ, ಚುರುಕಾದ ನಡಿಗೆ, ವ್ಯಾಯಾಮ, ಬೆಟ್ಟ ಹತ್ತುವುದು ಅಥವಾ ತೋಟಗಾರಿಕೆ ಮುಂತಾದ ಚಟುವಟಿಕೆಯನ್ನು ತೊಡಗುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಕೆಲಸದ ಸಮಯದ ನಡುವೆ 5 ನಿಮಿಷ ವಿಶ್ರಾಂತಿ ತೆಗೆದುಕೊಂಡು ವ್ಯಾಯಾಮ ಮಾಡುವುದರಿಂದಲೂ ಸ್ನಾಯುಗಳು ಸಡಿಲಗೊಳ್ಳುತ್ತವೆ.

click me!