ನಿದ್ರಾ ಕೊರತೆ: ಹಾಳುಗೆಡವೀತು ಪ್ರಣಯ ಮತ್ತು ಲೈಂಗಿಕತೆ

By Chethan Kumar  |  First Published Nov 10, 2024, 6:34 PM IST

ಸರಿಯಾಗಿ ನಿದ್ದೆಯಾಗುತ್ತಿಲ್ಲ ಎಂದರೆ ನಿರ್ಲಕ್ಷಿಸುವುದು ಮತ್ತಷ್ಟು ಅಪಾಯಕ್ಕೆ ಆಹ್ವಾನ ನೀಡಿದಂತೆ. ಕಾರಣ ನಿದ್ದೆಯಲ್ಲೇ ಮನುಷ್ಯನ ಸಂಪೂರ್ಣ ಜೀವನದ ಸತ್ವ ಅಡಗಿದೆ. ನಿದ್ರಾ ಕೊರತೆ ನಿಮ್ಮ ಮಾತ್ರವಲ್ಲ, ಕುಟುಂಬದ ನಗುವನ್ನೇ ಮರೆಸಲಿದೆ.
 


ಗಿರೀಶ್ ಲಿಂಗಣ್ಣ
(ಲೇಖಕರು ವಿಜ್ಞಾನ ಬರಹಗಾರ)

ಅಮೆರಿಕಾದ 'ವಾಲ್ ಸ್ಟ್ರೀಟ್ ಜರ್ನಲ್' ಪತ್ರಿಕೆ ಇತ್ತೀಚೆಗೆ ಒಂದು ವರದಿ ಮಾಡಿದ್ದು, ಅದರಲ್ಲಿ ಮಿಲಿಯಾಂತರ ಅಮೆರಿಕನ್ನರು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದಾರೆ. ಇದರಿಂದ ಅವರ ಲೈಂಗಿಕ ಇಚ್ಛೆಯ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ ಎಂದಿದೆ. ಲ್ಯೂಕ್ ಜಾನ್ಸ್ ಎಂಬ ವ್ಯಕ್ತಿ ಇತ್ತೀಚೆಗೆ ತನ್ನ ಗೆಳತಿಯೊಡನೆ ನಮ್ಮ ಸಂಬಂಧದಲ್ಲಿರುವ ಸಮಸ್ಯೆಗಳ ಕುರಿತು ಮಾತನಾಡಬೇಕು ಎಂದು ತಿಳಿಸಿದ್ದರು. ಆಕೆ ಬಹುಶಃ ಸಮಸ್ಯೆ ತನ್ನಲ್ಲೇ ಇದೆ ಎಂದುಕೊಂಡಿದ್ದಳು. ಆದರೆ ನಿಜವಾದ ಸಮಸ್ಯೆ ನಿದ್ರೆಯ ಕೊರತೆಯಲ್ಲಿ.

Tap to resize

Latest Videos

undefined

ಇಂದಿನ ಬಹಳಷ್ಟು ಜನರಂತೆ, ಲ್ಯೂಕ್ ಜಾನ್ಸ್ ಸಹ ಅಗತ್ಯವಿರುವಷ್ಟು ನಿದ್ರೆ ಪಡೆಯುತ್ತಿರಲಿಲ್ಲ. ಈ ಕಾರಣದಿಂದಾಗಿ ಆತ ಇಡೀ ದಿನ ಸುಸ್ತು ಹೊಂದಿರುತ್ತಿದ್ದು, ರಾತ್ರಿಯ ವೇಳೆ ಗಮನ ಕೇಂದ್ರೀಕರಿಸುವುದು ಅವರಿಗೆ ಪ್ರಯಾಸದ ವಿಚಾರವಾಗಿತ್ತು.

45 ವರ್ಷ ವಯಸ್ಸಿನ, ಟಾರಿಂಗ್ಟನ್ ಪ್ರದೇಶದ ಮನಶ್ಶಾಸ್ತ್ರಜ್ಞ ಜಾನ್ಸ್, ಪ್ರಣಯದ ಕುರಿತು ತನಗೆ ಆಸಕ್ತಿ ಇದೆ, ಆದರೆ ತಾನು ಯಾವಾಗಲೂ ಸುಸ್ತಾಗಿಯೇ ಇರುತ್ತೇನೆ ಎಂದಿದ್ದಾರೆ. ತಾನು ಗೆಳತಿಯೊಡನೆ ನಿಕಟವಾಗಿರಲು ಬಯಸಿದರೂ, ತನ್ನೊಡನೆ ನಿರಂತರವಾಗಿರುವ ಸುಸ್ತು ತನ್ನನ್ನು ತಡೆಯುತ್ತದೆ ಎಂದು ಆತ ವಿವರಿಸಿದ್ದಾರೆ.

ಸಾರ್ವಜನಿಕರ ಬಳಕೆಗೆ ಸಿದ್ಧವಾದ ಭಾರತದ ಸ್ವಂತ ಜಿಪಿಎಸ್: ನಾವಿಕ್ ಯೋಜನೆಯ ಪ್ರಯೋಜನಗಳು

ಇತ್ತೀಚೆಗೆ ನಿಮ್ಮ ನಿದ್ರೆ ಹೇಗಿತ್ತು?
ಅಮೆರಿಕಾದ ದ ನ್ಯಾಷನಲ್ ಹಾರ್ಟ್, ಲಂಗ್, ಆ್ಯಂಡ್ ಬ್ಲಡ್ ಇನ್ಸ್ಟಿಟ್ಯೂಟ್ ವರದಿಯ ಪ್ರಕಾರ, 50ರಿಂದ 70 ಮಿಲಿಯನ್ ಅಮೆರಿಕನ್ನರು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಭಾರತದ ಜನಸಂಖ್ಯೆಯ ಅತಿದೊಡ್ಡ ಪಾಲಿಗೆ ತೊಂದರೆ ಉಂಟುಮಾಡಿದೆ. 93%ದಷ್ಟು ಜನರು ಒಂದಲ್ಲ ಒಂದು ರೀತಿಯಲ್ಲಿ ನಿದ್ರೆಯ ತೊಂದರೆ, ನಿದ್ದೆಯ ಕೊರತೆಯನ್ನು ಎದುರಿಸುತ್ತಿದ್ದಾರೆ. ಅದರೊಡನೆ, 34% ಜನರು ಸ್ಲೀಪ್ ಆ್ಯಪ್ನಿಯಾ ಎಂಬ ಸಮಸ್ಯೆ ಹೊಂದಿದ್ದು, ಇದು ಕಾಲಕ್ರಮೇಣ ಬೊಜ್ಜು ಬೆಳೆಯುವ ಮತ್ತು ಹೃದಯ ಸಂಬಂಧಿ ಸಮಸ್ಯೆ ಉಂಟುಮಾಡುವ ಅಪಾಯವಿದೆ.

ಅಮೆರಿಕನ್ ಇನ್ಸ್ಟಿಟ್ಯೂಟ್ ಪ್ರಕಾರ, ಮೂರನೇ ಒಂದರಷ್ಟು (ಅಥವಾ ಮೂವರಲ್ಲಿ ಒಬ್ಬರು) ವಯಸ್ಕರು ತಮಗೆ ಅಗತ್ಯವಿರುವಷ್ಟು ಪ್ರಮಾಣದ ನಿದ್ದೆಯನ್ನು ಪಡೆಯುತ್ತಿಲ್ಲ.

ಭಾರತದಲ್ಲಿ ನಿದ್ರಾಹೀನತೆ ಈಗ ಬೆಳೆಯುತ್ತಿರುವ ಸಮಸ್ಯೆಯಾಗಿದೆ. ವಿಶ್ವ ನಿದ್ರಾ ದಿನದ ಪ್ರಯುಕ್ತ, ಲೋಕಲ್ ಸರ್ಕಲ್ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ, 61% ಭಾರತೀಯರು ಪ್ರತಿ ರಾತ್ರಿ 6 ಗಂಟೆಗಳಿಗಿಂತಲೂ ಕಡಿಮೆ ಅನಿರ್ಬಂಧಿತ ನಿದ್ರೆ ಪಡೆಯುತ್ತಿದ್ದಾರೆ. 2022ರಲ್ಲಿ 50% ಇದ್ದ ಈ ಪ್ರಮಾಣ, 2023ರಲ್ಲಿ 55%, 2024ರಲ್ಲಿ ಇನ್ನಷ್ಟು ಹೆಚ್ಚಿ 61%ಗೆ ತಲುಪಿದೆ. ಸಂಶೋಧನೆಗಳ ಪ್ರಕಾರ, 72% ಭಾರತೀಯರು ರಾತ್ರಿ ಒಂದರಿಂದ ಮೂರು ಬಾರಿ ನಿದ್ದೆಯಿಂದ ಎಚ್ಚರಗೊಳ್ಳುತ್ತಾರೆ. 87% ಜನರಿಗೆ ನಿದ್ರೆಯ ಕೊರತೆ ತಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎನಿಸುತ್ತಿದೆ.

ಈ ಅಂಕಿಅಂಶಗಳು ಭಾರತದಲ್ಲಿ ನಿದ್ರಾಹೀನತೆ ಹೆಚ್ಚಾಗುತ್ತಿರುವುದನ್ನು ಸಾಬೀತುಪಡಿಸಿವೆ. ಕೋವಿಡ್-19 ಸಾಂಕ್ರಾಮಿಕದ ಬಳಿಕ, ಭಾರತದಲ್ಲಿ ನಿದ್ರಾಹೀನತೆ ಬಹಳಷ್ಟು ತೀವ್ರ ಹೆಚ್ಚಳ ಕಂಡಿದೆ. ಒಟ್ಟಾರೆ ಆರೋಗ್ಯ ಮತ್ತು ಒಳಿತಿಗಾಗಿ ಈ ಸಮಸ್ಯೆಯನ್ನು ನಿವಾರಿಸುವುದು ಬಹಳ ಮುಖ್ಯವಾಗಿದೆ.

ನಿರಂತರವಾಗಿ ನಿದ್ರೆಯ ಗುಣಮಟ್ಟ ಕಡಿಮೆಯಾಗುವುದು ಮತ್ತು ನಿದ್ರೆಯ ಅವಧಿ ಕಡಿಮೆಯಾಗುವುದರ ಪರಿಣಾಮವಾಗಿ, ಮಧುಮೇಹ, ಹೆಚ್ಚಿನ ರಕ್ತದೊತ್ತಡ, ಹಾಗೂ ಬೊಜ್ಜು ಬೆಳೆಯುವಿಕೆಯಂತಹ ಸಮಸ್ಯೆಗಳು ಎದುರಾಗುತ್ತವೆ. ನಿದ್ರೆಯ ಕೊರತೆ ಮನಸ್ಸಿನ ತೀಕ್ಷ್ಣತೆಯನ್ನು ಕಡಿಮೆಗೊಳಿಸಿ, ಗಮನ ಕೇಂದ್ರೀಕರಿಸುವ ಸಾಮರ್ಥ್ಯವನ್ನು ಕುಂಠಿತಗೊಳಿಸಿ, ಪ್ರತಿಕ್ರಿಯೆ ನೀಡುವುದು ನಿಧಾನವಾಗುವಂತೆ ಮಾಡುತ್ತದೆ.

ಆದರೆ ಹೆಚ್ಚಾಗಿ ಚರ್ಚೆಗೆ ಒಳಗಾಗದಿದ್ದರೂ, ನಿದ್ರೆಯ ಕೊರತೆಯಿಂದ ಉಂಟಾಗುವ ಇನ್ನೊಂದು ದೊಡ್ಡ ಸಮಸ್ಯೆ ಎಂದರೆ, ಲೈಂಗಿಕ ಜೀವನದ ಮೇಲಿನ ದುಷ್ಪರಿಣಾಮ. ಸಂಶೋಧನೆಗಳ ಪ್ರಕಾರ, ಸಾಕಷ್ಟು ನಿದ್ರೆ ಲಭಿಸದಿರುವುದರಿಂದ, ಲೈಂಗಿಕ ಆಸಕ್ತಿ ಕಡಿಮೆಯಾಗಿ, ಲೈಂಗಿಕತೆ ಪರಾಕಾಷ್ಠೆ ತಲುಪಲು ಕಷ್ಟಕರವಾಗುತ್ತದೆ. ಇದರ ಪರಿಣಾಮವಾಗಿ, ಒಟ್ಟಾರೆ ಲೈಂಗಿಕ ತೃಪ್ತಿಯೂ ಕಡಿಮೆಯಾಗುತ್ತದೆ.

ವ್ಯಕ್ತಿಗಳು ಸದಾ ಸುಸ್ತಾಗಿರುವಾಗ, ಅವರಿಗೆ ತಮ್ಮ ಸಂಗಾತಿಯೊಡನೆ ಪ್ರಣಯದಿಂದಿರಲು, ಅವರ ಅವಶ್ಯಕತೆಗಳನ್ನು ಪೂರೈಸಲು ಅವಶ್ಯಕ ಶಕ್ತಿಯೇ ಇಲ್ಲವೆನಿಸುತ್ತದೆ. ಇದರೊಡನೆ, ‌ಸದಾ ಕಿರಿಕಿರಿ ಎನಿಸುವ ಭಾವನೆಯೂ ಇದ್ದು, ಒಟ್ಟಾರೆಯಾಗಿ ಲೈಂಗಿಕ ಆಸಕ್ತಿಯೇ ಕಡಿಮೆಯಾಗಿಬಿಡಬಹುದು.

"ನೀವು ಶಕ್ತಿಯೇ ಇಲ್ಲದಂತಾದಾಗ, ಅಥವಾ ವಿಪರೀತ ಸುಸ್ತಾಗಿರುವಾಗ, ಹಾಸಿಗೆ - ದಿಂಬು ನೋಡಿದಾಗಲೂ ನಿಮ್ಮ ಮನಸ್ಸಿಗೆ ಲೈಂಗಿಕತೆಯ ಆಲೋಚನೆಯೇ ಬರುವುದಿಲ್ಲ" ಎಂದು ನಾರ್ತ್‌ವೆಸ್ಟರ್ನ್ ಯುನಿವರ್ಸಿಟಿಯ ವೈದ್ಯಕೀಯ ವಿಭಾಗದ ಹಿರಿಯ ಸಂಶೋಧಕರು, ಪ್ರಸೂತಿ ಮತ್ತು ಸ್ತ್ರೀರೋಗ ಉಪನ್ಯಾಸಕರು, ಮತ್ತು ಇಂಡಿಯಾನಾ ವಿಶ್ವವಿದ್ಯಾಲಯದ ಹಿರಿಯ ಸಂಶೋಧಕರಾದ ಡಾ. ಲಾರೆನ್ ಸ್ಟ್ರೀಚರ್ ವಿವರಿಸಿದ್ದಾರೆ.

ಹೆಚ್ಚಾದ ಹತಾಶೆ ಮತ್ತು ತೀವ್ರ ಪ್ರತಿಕ್ರಿಯೆಗಳು
ನಿದ್ರೆಯ ಕೊರತೆಯ ಪರಿಣಾಮವಾಗಿ, ಪುರುಷರಲ್ಲಿ ಟೆಸ್ಟೋಸ್ಟಿರಾನ್ ಮಟ್ಟ ಕಡಿಮೆಯಾದರೆ, ಮಹಿಳೆಯರಲ್ಲಿ ಈಸ್ಟ್ರೋಜನ್ ಮಟ್ಟ ಕಡಿಮೆಯಾಗುತ್ತದೆ. ಇವೆರಡರ ಕುಸಿತ ಲೈಂಗಿಕ ಆಸಕ್ತಿಯನ್ನು ಕಡಿಮೆಗೊಳಿಸುತ್ತದೆ. ಇದರ ಪರಿಣಾಮವಾಗಿ, ಒತ್ತಡದ ಹಾರ್ಮೋನ್‌ಗಳು ಬಿಡುಗಡೆಯಾಗಿ, ಯಾವುದೇ ಬಯಕೆ ಹೊಂದಲೂ ಸಾಧ್ಯವಿಲ್ಲದಂತಹ ಒತ್ತಡದ ಭಾವನೆ ಮೂಡಿಸುತ್ತದೆ.

ವೈಜ್ಞಾನಿಕ ಸಂಶೋಧನೆಗಳು ನಿದ್ರೆಯ ಕೊರತೆಯಿಂದಾಗಿ ಕಿರಿಕಿರಿ, ಉದ್ವೇಗ ಮತ್ತು ಖಿನ್ನತೆ ಕಾಣಿಸಿಕೊಳ್ಳುತ್ತವೆ ಮತ್ತು ಶಕ್ತಿ ಮತ್ತು ಸ್ಫೂರ್ತಿ ಕಡಿಮೆಯಾಗುತ್ತದೆ ಎಂದು ಸಾಬೀತುಪಡಿಸಿವೆ. ಇದರಿಂದಾಗಿ ನಾವು ಬೇಗ ಕಿರಿಕಿರಿಗೊಳಗಾಗುತ್ತೇವೆ, ಹತಾಶರಾಗುತ್ತೇವೆ, ಪ್ರತಿಕ್ರಿಯೆ ನೀಡುತ್ತೇವೆ ಮತ್ತು ಜಗಳಕ್ಕೆ ಇಳಿಯುವ ಸಾಧ್ಯತೆಗಳೂ ಹೆಚ್ಚಾಗುತ್ತವೆ.

"ಇವೆಲ್ಲವೂ ಲೈಂಗಿಕ ಜೀವನಕ್ಕೆ ಧಕ್ಕೆ ಉಂಟುಮಾಡುವ ಮುಖ್ಯ ಅಂಶಗಳಾಗಿವೆ" ಎಂದು ವರ್ತನೆಯ ವಿಜ್ಞಾನಿ ಮತ್ತು ದಂಪತಿಗಳು ಮತ್ತು ನಿದ್ರೆಯ ಕುರಿತು ಪುಸ್ತಕವನ್ನೂ ಬರೆದಿರುವ ವೆಂಡಿ ಟ್ರಾಕ್ಸೆಲ್ ಅಭಿಪ್ರಾಯ ಪಡುತ್ತಾರೆ. ನಿದ್ರಾಹೀನತೆಯ ಪರಿಣಾಮವಾಗಿ, ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗುತ್ತದೆ ಎಂದು ಅವರು ವಿವರಿಸುತ್ತಾರೆ.

ಆದರೆ, ಉತ್ತಮವಾಗಿ ನಿದ್ದೆ ಮಾಡುವುದರಿಂದ ಲೈಂಗಿಕತೆಯನ್ನು ಉತ್ತಮಪಡಿಸಬಹುದು ಎಂದು ಟ್ರಾಕ್ಸೆಲ್ ಹೇಳಿದ್ದಾರೆ. ಜರ್ನಲ್ ಆಫ್ ಸೆಕ್ಷುವಲ್ ಮೆಡಿಸಿನ್ ಪತ್ರಿಕೆಯ ಅಧ್ಯಯನವೊಂದರ ಪ್ರಕಾರ, ಮಹಿಳೆಯರು ಒಂದು ಗಂಟೆ ಹೆಚ್ಚು ನಿದ್ದೆ ಮಾಡಿದರೆ, ಮರುದಿನ ಅವರ ಲೈಂಗಿಕ ಚಟುವಟಿಕೆ 14% ಹೆಚ್ಚಳ ಕಾಣುವ ಸಾಧ್ಯತೆಗಳಿವೆ.

ಇನ್ನೊಂದು ಅಧ್ಯಯನದ ಪ್ರಕಾರ, ಸಂಗಾತಿಯೊಡನೆ ಲೈಂಗಿಕ ಚಟುವಟಿಕೆ ಉನ್ನತ ಸ್ಥಿತಿ ತಲುಪಿದರೆ, ಅದು ನಿದ್ದೆಯನ್ನು ಉತ್ತಮಪಡಿಸಲು ನೆರವಾಗುತ್ತದೆ. "ಉತ್ತಮ ಲೈಂಗಿಕ ಕ್ರಿಯೆ ಉತ್ತಮ ನಿದ್ದೆ ಬರುವಂತೆ ಮಾಡಲು ನೆರವಾಗುತ್ತದೆ" ಎಂದು ಎಮ್ರಾಯ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಉಪನ್ಯಾಸಕರು, ಮನಶ್ಶಾಸ್ತ್ರಜ್ಞರಾದ ಕ್ಯಾಂಡೈಸ್ ಹಾರ್ಗನ್ಸ್ ಹೇಳಿದ್ದಾರೆ. ಅವರು ಲೈಂಗಿಕ ಆರೋಗ್ಯದ ಕುರಿತು ಹೆಚ್ಚಿನ ಅಧ್ಯಯನ ನಡೆಸಿದ್ದಾರೆ.

ಹೆಸರು ಹೇಳಲಿಚ್ಛಿಸದ ಒಂದಷ್ಟು ಜನರು, ತಮ್ಮ ಲೈಂಗಿಕತೆಯ ಸಮಸ್ಯೆಗೆ ಮುಖ್ಯ ಕಾರಣವೇ ಸುಸ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಲೈಂಗಿಕ ಚಟುವಟಿಕೆಯ ನಡುವೆ ನಿದ್ದೆ ಹೋಗುವುದು, ಅಥವಾ ಸಂಗಾತಿಯೊಡನೆ ವಾದಕ್ಕೆ ತೊಡಗುವುದು ನಡೆಯುತ್ತದೆ ಎಂದು ಅವರು ಹೇಳಿದ್ದಾರೆ. ಓರ್ವ ಮಹಿಳೆಯಂತೂ ತನ್ನ ಸಂಗಾತಿಯೊಡನೆ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದಾಗ, "ಬೇಗ, ನನಗೆ ಸುಸ್ತಾಗಿದೆ!" ಎಂದು ಕೂಗಿಕೊಂಡಿದ್ದರಂತೆ.

ಜಾನ್ ಹಲವಾರು ವರ್ಷಗಳ ಕಾಲ ನಿದ್ರಾಹೀನತೆಯನ್ನು ಅನುಭವಿಸಿದ್ದಾರೆ. ಬಹಳಷ್ಟು ರಾತ್ರಿಗಳಲ್ಲಿ, ಐದು ಗಂಟೆಗಳಷ್ಟು ವಿಶ್ರಾಂತಿ ಲಭಿಸಿದರೂ ಅದು ಭಾಗ್ಯ ಎಂದೇ ಜಾನ್ ಭಾವಿಸಿದ್ದಾರೆ. ಇಂತಹ ನಿದ್ರಾಹೀನತೆ ಜಾನ್ ಅವರನ್ನು ಸುಸ್ತಾಗಿಸಿ, ಲೈಂಗಿಕ ಕ್ರಿಯೆ ನಡೆಸಲು ಶಕ್ತಿ ಇಲ್ಲದಂತೆ ಮಾಡುತ್ತದೆ. ಅವರು ಬಹುತೇಕ ದಿನಗಳಲ್ಲಿ ಬೆಳಗಿನ ಜಾವ 4 ಗಂಟೆಗೆ ಎಚ್ಚರಗೊಂಡು, ಬಳಿಕ ನಿದ್ದೆ ಬರದ ಕಾರಣ ದೈನಂದಿನ ಕೆಲಸಗಳಲ್ಲಿ ತೊಡಗುತ್ತಾರೆ.

ಜಾನ್ ಅವರ ಗೆಳತಿ, ನಿಕೋಲ್ ಮಕಿಂತೋಷ್ ಅವರು ಜಾನ್ ಯಾವಾಗಲೂ ಸುಸ್ತಾಗಿರುವಂತೆ ಕಾಣುವುದರಿಂದ ಆತನ ಬಳಿ ಲೈಂಗಿಕತೆಯ ಕುರಿತು ತಾನು ಈಗ ಮಾತನಾಡುವುದಿಲ್ಲ ಎಂದಿದ್ದಾರೆ. 50 ವರ್ಷ ವಯಸ್ಸಿನ, ಶಾಲೆಯೊಂದರಲ್ಲಿ ಸಮಾಲೋಚಕಿಯಾಗಿರುವ ಮೆಕಿಂತೋಷ್ ಅವರು "ನನಗೆ ಜಾನ್ ಮೇಲೆ ಒತ್ತಡ ಹೇರುವ ಇಚ್ಛೆಯಿಲ್ಲ" ಎಂದಿದ್ದಾರೆ.

ನಿದ್ದೆ ಬರುವಂತೆ ಮಾಡುವ ಔಷಧಿಗಳು ತನಗೆ ಇತ್ತೀಚೆಗೆ ಪ್ರಯೋಜನಕಾರಿಯಾಗಿದ್ದು, ತನ್ನ ವೈದ್ಯರು ಇತ್ತೀಚೆಗೆ ಲೈಂಗಿಕ ದೌರ್ಬಲ್ಯ ಪರಿಹರಿಸಲು ಔಷಧ ನೀಡಿದ್ದಾರೆ ಎಂದಿದ್ದಾರೆ. ಜಾನ್ ಮತ್ತವರ ಗೆಳತಿ ಪ್ರಣಯದ ಕುರಿತು ಆಲೋಚಿಸುವಾಗ, ಜಾನ್ ಮೊದಲು ಲೈಂಗಿಕ ದೌರ್ಬಲ್ಯದ ಔಷಧಿ ತೆಗೆದುಕೊಂಡು, ಬಳಿಕ ನಿದ್ರೆಯ ಔಷಧಿ ತೆಗೆದುಕೊಳ್ಳುತ್ತಾರೆ.

"ಈಗ ಲೈಂಗಿಕತೆ ಎನ್ನುವುದು ಒಂದು ಸಹಜ ಪ್ರಕ್ರಿಯೆಯಾಗಿ ಉಳಿದಿಲ್ಲ. ಆದರೆ, ಕನಿಷ್ಟಪಕ್ಷ ಸಮಯ ಬಂದಾಗ ತಾನು ಅದರಲ್ಲಿ ತೊಡಗಲು ಸಾಧ್ಯವಾಗುತ್ತಿರುವುದೇ ಸಮಾಧಾನ" ಎಂದು ಜಾನ್ ಹೇಳಿದ್ದಾರೆ.

ಯಾವ ರೀತಿಯಲ್ಲಿ ಜನರು ಸೂಕ್ತ ಕ್ರಮ ಕೈಗೊಳ್ಳಬಹುದು?
ನಿದ್ರೆಯ ಕೊರತೆ ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ, ವೈದ್ಯರು, ಚಿಕಿತ್ಸಕರು, ಮತ್ತು ನಿದ್ರಾ ತಜ್ಞರು ನೀಡಿರುವ ಒಂದಷ್ಟು ಸಲಹೆಗಳು ಇಲ್ಲಿವೆ.

ನಿದ್ರೆಯ ಸಮಯವನ್ನು ಕಡಿತಗೊಳಿಸಬೇಡಿ. ಒಂದಷ್ಟು ಜೋಡಿಗಳು, ಅದರಲ್ಲೂ ಸಣ್ಣ ಮಕ್ಕಳನ್ನು ಹೊಂದಿರುವ ಜೋಡಿಗಳು, ಸಮಯ ಸಿಕ್ಕಾಗ ಲೈಂಗಿಕ ಚಟುವಟಿಕೆಯಲ್ಲಿ ತೊಡಗಲು ಪ್ರಯತ್ನ ಪಡುತ್ತಾರೆ. ಬಹುತೇಕರು ತಮ್ಮ ನಿದ್ದೆಯ ಸಮಯವನ್ನೇ ಇದಕ್ಕಾಗಿ ತ್ಯಜಿಸುತ್ತಾರೆ. ಅದರ ಬದಲು, ನಿದ್ರಾ ತಜ್ಞರು ನೆಟ್‌ಫ್ಲಿಕ್ಸ್ ವೀಕ್ಷಿಸುವ, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುವ ವೇಳೆಯನ್ನು ಕಡಿಮೆಗೊಳಿಸುವಂತೆ ಸಲಹೆ ನೀಡುತ್ತಾರೆ. ಈ ಸಮಯದಲ್ಲಿ ದಂಪತಿಗಳು ಪರಸ್ಪರ ಅನ್ಯೋನ್ಯವಾಗಿರಲು ಪ್ರಯತ್ನಿಸಬಹುದು.

ಮರದ ಉಪಗ್ರಹಗಳು: ಬಾಹ್ಯಾಕಾಶ ಅನ್ವೇಷಣೆಯ ಭವಿಷ್ಯ!

ಕ್ಯಾಲಿಫೋರ್ನಿಯಾದ ಮೆನ್ಲೋ ಪಾರ್ಕ್‌ನ ಮನೋವೈದ್ಯರು ಮತ್ತು ನಿದ್ರಾ ತಜ್ಞರಾದ ಡಾ. ಅಲೆಕ್ಸ್ ಡಿಮಿಟ್ರಿ ಅವರು, "ನೀವು ಏನನ್ನಾದರೂ ನಿಜಕ್ಕೂ ಇಷ್ಟಪಡುತ್ತೀರಾದರೆ, ಅದನ್ನು ಯಾಕೆ ದಿನದ ಕೊನೆಗೆ ಇಡುತ್ತೀರಿ?" ಎಂದು ಪ್ರಶ್ನಿಸುತ್ತಾರೆ.

ಅಷ್ಟು ಸಮಸ್ಯೆ ಎದುರಾಗುತ್ತಿದ್ದರೆ, ಪ್ರತ್ಯೇಕವಾಗಿ ಮಲಗಲು ಪ್ರಯತ್ನಿಸಿ. ಒಬ್ಬರೇ ಮಲಗುವುದರಿಂದ, ನೀವು ನಿದ್ದೆ ಮಾಡಲು ಪ್ರಯತ್ನಿಸುವಾಗ ಯಾರೂ ಗೊರಕೆ ಹೊಡೆಯದೆ, ನಿಮ್ಮ ಕಂಬಳಿ ಕಿತ್ತುಕೊಳ್ಳದೆ, ಅಥವಾ ಟಿವಿ ನೋಡದಿರುವುದರಿಂದ, ನಿಮ್ಮ ನಿದ್ರೆಯ ಗುಣಮಟ್ಟ ಹೆಚ್ಚುವ ಸಾಧ್ಯತೆಗಳಿವೆ.

ಟ್ರಾಕ್ಸೆಲ್ ಅವರು ಪ್ರಣಯವನ್ನು ರಾತ್ರಿಯ ದೈನಂದಿನ ಅಭ್ಯಾಸವಾಗಿಸಲು ಸಲಹೆ ನೀಡುತ್ತಾರೆ. ಒಂದು ಉತ್ತಮ ಹಾಸಿಗೆಯನ್ನು ಆರಿಸಿ, ಸಂಜೆಯ ವೇಳೆ ಬೇಗನೆ ಆರಂಭಿಸಿ, ಬಳಿಕ ನೀವು ಆರಾಮಾಗಿರಿ ಎಂದು ಅವರು ಸಲಹೆ ನೀಡುತ್ತಾರೆ.

ನಿದ್ದೆಯಿಂದ ಎಚ್ಚರಿಸದಿರುವ ನಿಯಮವನ್ನು ಪಾಲಿಸಿ. ನಿಮಗೆ ಲೈಂಗಿಕ ಆಸಕ್ತಿ ಇದ್ದಾಗ, ನಿದ್ರಿಸಿರುವ ನಿಮ್ಮ ಸಂಗಾತಿಯನ್ನು ಎಚ್ಚರಿಸುವ ಇಚ್ಛೆ ನಿಮಗೆ ಉಂಟಾಗಬಹುದು. ಆದರೆ, ಹಾಗೆ ಮಾಡುವುದರಿಂದ, ನಿದ್ದೆ ಮತ್ತು ಬಾಂಧವ್ಯ ಎರಡಕ್ಕೂ ತೊಂದರೆ ಉಂಟಾಗುವ ಅಪಾಯಗಳಿವೆ ಎಂದು ಲೈಂಗಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ನಿಮ್ಮ ಸಂಗಾತಿಯನ್ನು ಯಾವ ಸಮಯದಲ್ಲಿ ಎಚ್ಚರಿಸಿದರೆ ಸರಿ ಎಂದು ನಿಮ್ಮ ಸಂಗಾತಿಯೊಡನೆ ಚರ್ಚಿಸಿ ಎಂದು ಹಾರ್ಗನ್ಸ್ ಸಲಹೆ ನೀಡಿದ್ದಾರೆ. ಅದರೊಡನೆ, ನಿಮ್ಮ ಸಂಗಾತಿ ನಿದ್ರಿಸಲು ಬಯಸಿದರೆ, ಅವರಿಗೆ ಬೆಂಬಲ ಸೂಚಿಸಿ. ಇದು ದೀರ್ಘಾವಧಿಯಲ್ಲಿ ಇಬ್ಬರಿಗೂ ಪ್ರಯೋಜನಕಾರಿ ಎಂದು ಹಾರ್ಗನ್ಸ್ ವಿವರಿಸಿದ್ದಾರೆ.

ವಾಸ್ತವಿಕ ನಿರೀಕ್ಷೆಗಳನ್ನು ಇಟ್ಟುಕೊಳ್ಳಿ. ನಿದ್ರೆಯ ಮತ್ತಿನ ಲೈಂಗಿಕತೆ ಸಮಾಧಾನಕರವಾಗಿರಬಹುದು. ಯಾಕೆಂದರೆ ಆ ವೇಳೆಯ ಸ್ಪರ್ಶ ನರಮಂಡಲಕ್ಕೆ ಆರಾಮ ನೀಡುತ್ತದೆ. ಆದರೆ, ಅಂತಹ ಸಮಯದಲ್ಲಿ ತೀವ್ರವಾದುದು ಏನನ್ನೂ ಪ್ರಯತ್ನಿಸಬಾರದು ಎಂದು ನ್ಯೂಯಾರ್ಕ್‌ನ ಲೈಂಗಿಕ ತಜ್ಞರಾದ ಸಾರಿ ಕೂಪರ್ ವಿವರಿಸಿದ್ದಾರೆ.

ಲೈಂಗಿಕ ಪರಾಕಾಷ್ಠೆ ತಲುಪದೆ, ಸಂಗಾತಿಯನ್ನು ಗಾಢವಾಗಿ ತಬ್ಬುವುದರಿಂದಲೂ ಪ್ರಯೋಜನಗಳಿವೆ. ಇದು ಉತ್ತಮ ಬಾಂಧವ್ಯ ಹೊಂದಲು, ಬಳಿಕ ಬೇಗ ನಿದ್ರೆ ಹೋಗಲು ನೆರವಾಗುತ್ತದೆ ಎಂದು ಆಕೆ ಅಭಿಪ್ರಾಯ ಪಟ್ಟಿದ್ದಾರೆ.
 

click me!