ಮಲೆನಾಡಲ್ಲಿ ಮಾತ್ರ ಅಲ್ಲ, ಬಯಲುಸೀಮೆಯಲ್ಲೂ ಕಾಫಿ ಬೆಳೆಯಬಹುದೆಂದು ಸಾಧಿಸಿ ತೋರಿಸಿದ ರೈತ!

Published : Jul 30, 2024, 10:32 PM ISTUpdated : Jul 31, 2024, 09:09 AM IST

ಕಾಫಿ ಬೆಳೆಯನ್ನು ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಆದರೆ ಬಯಲುಸೀಮೆಯಲ್ಲೂ ಕಾಫಿ ಬೆಳೆಯಬಹುದು ಎಂದು ಸಾಬೀತುಪಡಿಸಿದ್ದಾರೆ ಈ ರೈತ. -ಮಹೇಶ ಅರಳಿ 

PREV
14
ಮಲೆನಾಡಲ್ಲಿ ಮಾತ್ರ ಅಲ್ಲ, ಬಯಲುಸೀಮೆಯಲ್ಲೂ ಕಾಫಿ ಬೆಳೆಯಬಹುದೆಂದು ಸಾಧಿಸಿ ತೋರಿಸಿದ ರೈತ!

ಕಾಫಿ ಬೆಳೆ ಅಂದರೆ ಥಟ್ಟನೆ ನೆನಪಾಗೋದು ಚಿಕ್ಕಮಗಳೂರು, ಕೊಡಗು ಶಿವಮೊಗ್ಗ, ಹಾಸನ ಜಿಲ್ಲೆಗಳು. ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿಯನ್ನು ಬೆಳೆಯುತ್ತಾರೆ. ಕಾರಣ ಇದಕ್ಕೆ ಪೂರಕವಾದ ಮಣ್ಣು, ಹವಾಗುಣ ಇರುವುದು. ಆದರೆ ಇಲ್ಲೊಬ್ಬ ರೈತರು ಬಯಲು ಸೀಮೆಯಲ್ಲೂ ಕಾಫಿ ಬೆಳೆದು ಸಾಹಸ ಮೆರೆದಿದ್ದಾರೆ. 
 

24

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಣತೂರು ಎಂಬ ಪುಟ್ಟ ಗ್ರಾಮದ ಅರವಿಂದ ಕಟಗಿ(Arvind katagi) ರೈತರೇ ಇಂಥದ್ದೊಂದು ಸಾಹಸಕ್ಕೆ ಕೈಹಾಕಿ ಯಶಸ್ಸಿನ ಹಾದಿಯಲ್ಲಿದ್ದಾರೆ. ಇವರದು ಒಟ್ಟು 30 ಎಕರೆ ಜಮೀನಿದೆ. ಮೊದ ಮೊದಲು ಸಾಂಪ್ರದಾಯಿಕ ಬೇಸಾಯವನ್ನೇ ಮಾಡುತ್ತಿದ್ದರು. ಆದರೆ 4 ವರ್ಷದ ಹಿಂದೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಅವರು ಇಷ್ಟೊಂದು ಜಮೀನಿದೆ, ಇದರಲ್ಲಿ ಹೊಸ ಹೊಸ ಪ್ರಯೋಗ ಮಾಡಬಹುದು, ಆ ಮೂಲಕ ಕೃಷಿಯನ್ನು ಇನ್ನಷ್ಟು ಲಾಭದಾಯಕ ಕಸುಬನ್ನಾಗಿ ಮಾಡಬಹುದು ಎಂದು ಸಲಹೆ ನೀಡಿದರು. ಇವರ ಮಾತು ಅರವಿಂದ ಅವರಿಗೆ ಹಿಡಿಸಿತು. ಹೌದಲ್ವಾ ಯಾಕೆ ಪ್ರಯೋಗಕ್ಕೆ ಕೈ ಹಾಕಬಾರದು ಎಂದು ಯೋಚಿಸಿ ತಮಗೆ ಅಗತ್ಯ ಸಲಹೆ ನೀಡುವಂತೆ ತೋಟಗಾರಿಕೆ ಇಲಾಖೆಯ ಅಧಿಕಾರಿ ಸುರೇಶ ಕುಂಬಾರ ಅವರಲ್ಲಿ ಭಿನ್ನವಿಸಿಕೊಂಡರು. ಅದಕ್ಕೆ ಅಗತ್ಯ ಸಲಹೆ ನೀಡಿದರು.

34

5 ಎಕರೆ ಜಮೀನು ಮೀಸಲು:
ಪ್ರಯೋಗಕ್ಕಾಗಿ 5 ಎಕರೆ ಜಮೀನನ್ನು ಮೀಸಲಿಟ್ಟರು. ಮೊದಲು 600 ಪೇರಲ ಗಿಡದ ಸಸಿಗಳನ್ನು ನೆಟ್ಟರು. ಬಳಿಕ 2 ಸಾವಿರ ಅಡಕೆ ಸಸಿ, 300 ಮಹಾಗನಿ, 300 ತೆಂಗು, 1 ಎಕರೆಯಲ್ಲಿ ಸುಮಾರ 90 ಗೋಡಂಬಿ ಗಿಡಗಳನ್ನು ಹಾಕಿದರು. ಜತೆಗೆ ಕಾಳುಮೆಣಸು ಬಳ್ಳಿಯನ್ನು ಗಿಡಗಳಿಗೆ ಹಬ್ಬಿಸಿದರು. ಇವೆಲ್ಲ ಆಗಿದ್ದು 4 ವರ್ಷದ ಕೆಳಗೆ. ನಾವು ಕಾಫಿಯನ್ನು ಯಾಕೆ ಬೆಳೆಯಬಾರದು ಎಂದುಕೊಂಡರು. ಅದಕ್ಕೆ ಸುರೇಶ ಅವರು ಸಲಹೆ ನೀಡಿದರು. ಕಳೆದ ಡಿಸೆಂಬರ್ ನಲ್ಲಿ 2 ಸಾವಿರ ಸಸಿಗಳನ್ನು ಅಡಕೆ ಗಿಡಗಳ ಮಧ್ಯೆ 8 ಅಡಿಗಳ ಅಂತರದಲ್ಲಿ ನೆಟ್ಟರು. ಈ ಭಾಗದಲ್ಲಿ ಕಾಫಿ ಬೆಳೆಯಲು ಆಗುತ್ತಾ ಹಲವರು ಪ್ರಶ್ನಿಸಿದ್ದರು. ಅವರ ಮಾತಿಗೆ ತಲೆಕೆಡಿಸಿಕೊಳ್ಳಲಿಲ್ಲ. 9 ತಿಂಗಳಿನಿಂದ ಯಾವುದೇ ರೋಗವಿಲ್ಲದೇ ಉತ್ತಮವಾಗಿ ಬೆಳೆಯುತ್ತಿದೆ. ಆಗಾಗ ಗಿಡಗಳಿಗೆ ಅಗತ್ಯ ನೀರು, ಸಾವಯವ ಗೊಬ್ಬರ ನೀಡುತ್ತೇವೆ. ಇನ್ನೊಂದು ವರ್ಷದಲ್ಲಿ ಇಳುವರಿ ಸಿಗಲಿದೆ ಎನ್ನುತ್ತಾರೆ ರೈತ ಅರವಿಂದ ಕಟಗಿ. 
 

44

ಅಗತ್ಯ ವ್ಯವಸ್ಥೆ:ಕಾಫಿ ಬೆಳೆಗೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿದ್ದೇವೆ. ಅಲ್ಲದೇ ಕಾಫಿಗೆ ಅಗತ್ಯವಾಗಿ ಬೇಕಾದ ಸಿಹಿ ನೀರನ್ನು ಬೋರ್ವೆಲ್ ಮೂಲಕ ಕೊಡುತ್ತಿದ್ದೇವೆ. ಹೀಗಾಗಿ ಉತ್ತಮವಾಗಿ ಬೆಳೆಯುತ್ತಿದೆ. ಈ ಭಾಗದಲ್ಲೂ ಕಾಫಿ ಬೆಳೆಯಬಹುದು ಎಂಬುದಕ್ಕೆ ನಮ್ಮ ತೋಟದ ಗಿಡವೇ ಸಾಕ್ಷಿ ಎಂದು ಮುಗುಳ್ನಕ್ಕರು.
ಸಾವಯವ ವಿಧಾನ:  ಇನ್ನು ಕೃಷಿ ನಿರ್ವಹಣೆಗೆ 2 ಎತ್ತುಗಳನ್ನು ಸಾಕಿದ್ದೇವೆ. 4 ಎಮ್ಮೆಗಳಿವೆ. ಇವು ಹೈನು ನೀಡುವುದರ ಜತೆಗೆ ಜಮೀನಿಗೆ ಗೊಬ್ಬರವನ್ನು ನೀಡುತ್ತವೆ. ಹೀಗಾಗಿ 5 ಎಕರೆ ಜಮೀನನ್ನು ಸಂಪೂರ್ಣವಾಗಿ ಸಾವಯವ ವಿಧಾನದಲ್ಲೇ ಮಾಡುತ್ತಿದ್ದಾರೆ. 

ಇನ್ನು ಉಳಿದ 25 ಎಕರೆ ಜಮೀನಿನಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿ ಇದೆ. ಅದರಲ್ಲಿ ಮಳೆಯಾಶ್ರೀತವಾಗಿ ಮೆಕ್ಕೆಜೋಳ, ಬಿಳಿಜೋಳ, ಬಿಳಿ ಉಳ್ಳಾಗಡ್ಡಿ, ಹೆಸರು ಸೇರಿದಂತೆ ನಾನಾ ಬಗೆಯ ಬೆಳೆಗಳನ್ನು ಬೆಳೆಯುತ್ತಾರೆ. ಇವರಿಗೆ ಸಹೋದರರಾದ ಯಲ್ಲಪ್ಪ ಮತ್ತು ರವಿ ಸಾಥ್ ನೀಡುತ್ತಾರೆ. ಹೆಚ್ಚಿನ ಮಾಹಿತಿಗೆ ಅರವಿಂದ ಕಟಗಿ ಅವರ ಮೊ. 9986612618 ಅವರನ್ನು ಸಂಪರ್ಕಿಸಬಹುದು.

Read more Photos on
click me!

Recommended Stories