ಬಾಹ್ಯಾಕಾಶ ಕ್ಷೇತ್ರದಲ್ಲಿ ದಿನೇ ದಿನೇ ಪ್ರಗತಿ ಸಾಧಿಸುತ್ತಿರುವ ಭಾರತ ಇದೀಗ ಸೌರಮಂಡಲದ ಮಾತೃ ನಕ್ಷತ್ರವಾದ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ಸೆಪ್ಟೆಂಬರ್ 2ರಂದು ಬೆಳಗೆ 11.50ಕ್ಕೆ ಇಸ್ರೋದ ಪಿಎಸ್‌ಎಲ್‌ವಿ- ಎಕ್ಸ್‌ಎಲ್ ಸಿ-57 ರಾಕೆಟ್ ‘ಆದಿತ್ಯ ಎಲ್1’ ನೌಕೆಯನ್ನು ಹೊತ್ತು ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ನಭಕ್ಕೆ ಚಿಮ್ಮಿದೆ. ಇದು ಸೂರ್ಯನ ಅಧ್ಯಯನಕ್ಕೆ ಭಾರತ ರೂಪಿಸಿರುವ ಮೊದಲ ಅಂತರಿಕ್ಷ ಯೋಜನೆ. ಆದಿತ್ಯ ಎಲ್-1 ನೌಕೆಯನ್ನು ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಲ್ಯಾಗ್ರೇಜ್ ಪಾಯಿಂಟ್-1ರಲ್ಲಿ ನೌಕೆಯನ್ನು ಸ್ಥಾಪಿಸುವ ಮೂಲಕ ಸೂರ್ಯನ ಅಧ್ಯಯನಕ್ಕೆ ಯೋಜಿಸಲಾಗಿದೆ. ಈಗಾಗಲೇ ಚಂದ್ರ, ಮಂಗಳ ಯೋಜನೆಗಳಲ್ಲಿ ಯಶಸ್ವಿಯಾಗಿಸಿರುವ ಇಸ್ರೋದ ಈ ಯೋಜನೆಯ ಮೇಲೆ ಇಡೀ ಜಗತ್ತಿನ ಕಣ್ಣು ನೆಟ್ಟಿದೆ.
ಸೂರ್ಯನ ಅಧ್ಯಯನಕ್ಕೆ ಹೀಗೆ ಸಾಗಲಿದೆ ಆದಿತ್ಯ ಎಲ್-1 ನೌಕೆ
ಮೊದಲ ಹಂತದಲ್ಲಿ ನಭಕ್ಕೆ ನೆಗೆಯಲಿರುವ ಪಿಎಸ್‌ಎಲ್‌ವಿ ರಾಕೆಟ್ ಆದಿತ್ಯ ಎಲ್-1 ನೌಕೆಯನ್ನು ಭೂಮಿಯ ಕೆಳಕಕ್ಷೆಯಲ್ಲಿ ಸ್ಥಾಪಿಸಲಿದೆ. ಒಮ್ಮೆ ಇಲ್ಲಿ ಸೇರಿದ ಉಪಗ್ರಹ ಭೂಮಿಯ ಗುರುತ್ವಾಕರ್ಷಣೆಗೆ ಒಳಪಟ್ಟು ಭೂಮಿಯನ್ನು ಸುತ್ತಲು ಆರಂಭಿಸುತ್ತದೆ. ಭೂಮಿಯನ್ನು ದೀರ್ಘವೃತ್ತಾಕಾರದಲ್ಲಿ ಸುತ್ತುವ ಉಪಗ್ರಹದ ಕಕ್ಷೆಯನ್ನು ಹಂತಹಂತವಾಗಿ ಮತ್ತಷ್ಟು ದೂರ ಮಾಡಲಾಗುತ್ತದೆ. ಭೂಮಿಯ ಗುರುತ್ವ ಸೆಳೆತವನ್ನು ತಪ್ಪಿಸಿಕೊಂಡು ಹೊರಹೋಗಬಲ್ಲಷ್ಟು ದೂರ ತಲುಪಿದ ಕೂಡಲೇ ನೌಕೆಯಲ್ಲಿ ಅಳವಡಿಸಿರುವ ಎಂಜಿನನ್ನು ಆನ್ ಮಾಡುವ ಮೂಲಕ ಅದನ್ನು ಗುರುತ್ವ ಸೆಳೆತದಿಂದ ತಪ್ಪಿಸಲಾಗುತ್ತದೆ. ಇದಾದ ಬಳಿಕ ಸುಮಾರು ಮೂರುವರೆ ತಿಂಗಳು ಯಾನ ಕೈಗೊಳ್ಳುವ ನೌಕೆ ಅಂತಿಮವಾಗಿ ಎಲ್-1 ಪಾಯಿಂಟ್ ತಲುಪಲಿದೆ. ಭೂಮಿಯ ಗುರುತ್ವ ಸೆಳೆತದಿಂದ ತಪ್ಪಿಸಿಕೊಂಡ ಬಳಿಕ ಎಲ್-1 ತಲುಪುವ ಅವಧಿಯನ್ನು ‘ಕ್ರೂಸ್ ಹಂತ’ ಎಂದು ಕರೆಯಲಾಗಿದ್ದು, ನೌಕೆಯಲ್ಲಿರುವ ಎಂಜಿನ್ ಈ ಪಯಣವನ್ನು ಸುಸೂತ್ರವಾಗಿಸಲಿದೆ. ಬಳಿಕ ನೌಕೆಯನ್ನು ಎಲ್-1 ಪಾಯಿಂಟ್ ಬಳಿ ಇರುವ ಗುರುತ್ವ ಸೆಳೆತ ಇಲ್ಲದ ಕಕ್ಷೆಗೆ ಸೇರಿಸಲಾಗುತ್ತದೆ. ಇಲ್ಲಿರುವ ಗುರುತ್ವ ಬಲದ ಸಹಾಯದಿಂದ ನೌಕೆ ಎಲ್-1 ಪಾಯಿಂಟ್‌ನಲ್ಲೇ ಸುತ್ತಲು ಆರಂಭಿಸುತ್ತದೆ.
ಬಾಹ್ಯಾಕಾಶದ ಪಾರ್ಕಿಂಗ್ ಸ್ಟೇಷನ್ ಖ್ಯಾತಿಯ ಲ್ಯಾಗ್ರೇಜ್ ಪಾಯಿಂಟ್
ಅಂತರಿಕ್ಷದಲ್ಲಿ ಸುತ್ತುತ್ತಿರುವ ಯಾವುದೇ 2 ಬೃಹತ್ ಆಕಾಶಕಾಯಗಳ ನಡುವೆ 5 ಲ್ಯಾಗ್ರೇಜ್ ಪಾಯಿಂಟ್‌ಗಳಿರುತ್ತವೆ. ಇವುಗಳನ್ನು ಅಂತರಿಕ್ಷದ ಪಾರ್ಕಿಂಗ್ ಸ್ಟೇಶನ್ ಎನ್ನಲಾಗುತ್ತದೆ. ಏಕೆಂದರೆ ಇಲ್ಲಿ ಯಾವುದೇ ವಸ್ತುಗಳನ್ನು ಇಟ್ಟರೂ ಎಷ್ಟು ವರ್ಷವಾದರೂ ಅವುಗಳ ಸ್ಥಾನ ಬದಲಾಗುವುದಿಲ್ಲ. ಆಕಾಶಕಾಯಗಳ ಗುರುತ್ವ ಶಕ್ತಿಯಿಂದಾಗಿ ಈ ಲ್ಯಾಗ್ರೇಜ್ ಪಾಯಿಂಟ್‌ಗಳು ಉಂಟಾಗುತ್ತವೆ. 2 ಆಕಾಶಕಾಯಗಳ ಗುರುತ್ವ ಸೆಳೆತದ ಪ್ರಮಾಣ ಈ ಬಿಂದುವಿನಲ್ಲಿ ಸಮನಾಗಿರುತ್ತದೆ. ಹಾಗಾಗಿ ಈ ಪ್ರದೇಶಗಳಲ್ಲಿ ಗುರುತ್ವ ಸೆಳೆತ ಇಲ್ಲದ ಒಂದಷ್ಟು ಖಾಲಿ ಜಾಗ ಉಂಟಾಗುತ್ತದೆ. ಅಲ್ಲದೇ ಇಲ್ಲಿ ಆಕಾಶಕಾಯಗಳ ಗುರುತ್ವ ಬಲ ಸಮನಾಗಿರುವುದರ ಜೊತೆಗೆ ಅವು ಈ ಖಾಲಿ ಜಾಗದಲ್ಲಿ ಕೇಂದ್ರಾಭಿಗಮನ ಶಕ್ತಿಯನ್ನು ಸೃಷ್ಟಿ ಮಾಡುತ್ತವೆ. ಹಾಗಾಗಿ ಇಲ್ಲಿ ಬಿಟ್ಟ ಗಗನನೌಕೆಗಳು ದಾರಿತಪ್ಪದೇ ಸದಾ ಕಾಲ ಇಲ್ಲೇ ಗಿರಕಿ ಹೊಡೆಯುತ್ತವೆ. ಈ ಆಕಾಶಕಾಯಗಳ ನಡುವೆ ಎಲ್-1 ಇದ್ದರೆ, ಚಿಕ್ಕ ಆಕಾಶಕಾಯದ ಹಿಂಭಾಗದಲ್ಲಿ ಎಲ್-2, ದೊಡ್ಡ ಆಕಾಶಕಾಯದ ಹಿಂಭಾಗದಲ್ಲಿ ಎಲ್-3 ಹಾಗೂ ಸಣ್ಣ ಆಕಾಶಕಾಯದ ಕಕ್ಷೆಯ ಸಮಾನ ಅಂತರದಲ್ಲಿ ಎಲ್-4 ಮತ್ತು ಎಲ್-5 ಗಳು ಇರುತ್ತವೆ. ಈ ಎಲ್ಲಾ ಪಾಯಿಂಟ್‌ಗಳಲ್ಲಿ ಗುರುತ್ವ ಸೆಳೆತ ಇಲ್ಲದ ಕಾರಣ ಇಲ್ಲಿ ಬಿಟ್ಟ ನೌಕೆಗಳ ಸ್ಥಳ ಬದಲಾವಣೆಯಾಗುವುದಿಲ್ಲ.
ಎಲ್-1 ಪಾಯಿಂಟ್‌ಗೆ ಯಾವುದೇ ಆಕಾಶಕಾಯ ಅಡ್ಡ ಬರುವುದಿಲ್ಲ
ಎಲ್-1 ಪಾಯಿಂಟ್ ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿದೆ. ಅಂದರೆ ಭೂಮಿಯಿಂದ ಚಂದ್ರನಿರುವ ದೂರಕ್ಕಿಂತ 4 ಪಟ್ಟು ಹೆಚ್ಚು. ಆದರೆ ಸೂರ್ಯನಿರುವ ದೂರಕ್ಕೆ ಹೋಲಿಸಿದರೆ ಇದು ಭೂಮಿಯಿಂದ ಶೇ.1ರಷ್ಟುಮಾತ್ರ ದೂರದಲ್ಲಿದೆ. ಎಲ್-1 ಹಾಗೂ ಸೂರ್ಯನ ನಡುವೆ ವರ್ಷದ ಯಾವುದೇ ಕಾಲದಲ್ಲೂ ಯಾವುದೇ ಆಕಾಶಕಾಯ ಅಡ್ಡಬರುವುದಿಲ್ಲ. ಹಾಗಾಗಿ ಸೂರ್ಯನ ಅಧ್ಯಯನಕ್ಕೆ ಇಸ್ರೋ ಈ ಪಾಯಿಂಟನ್ನು ಆಯ್ಕೆ ಮಾಡಿಕೊಂಡಿದೆ. ಇಲ್ಲಿಂದ ದಿನದ 24 ಗಂಟೆಯೂ ಇಲ್ಲಿಂದ ಸೂರ್ಯ ಕಾಣುವುದರಿಂದ ಸೌರಜ್ವಾಲೆಗಳು ಹಾಗೂ ಕೊರೋನಾ ಭಾಗದ ಅಧ್ಯಯನಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಅಲ್ಲದೇ ಭೂಮಿಯತ್ತ ಸಾಗಿ ಬರುವ ಸೂರ್ಯನ ಎಲ್ಲಾ ಕಿರಣಗಳೂ ಎಲ್-1 ಪಾಯಿಂಟನ್ನು ಹಾದು ಬರುತ್ತವೆ. ಈ ಪ್ರದೇಶದ ಮೇಲೆ ಸೂರ್ಯನ ಅತಿ ನೇರಳೆ ಕಿರಣಗಳು ನೇರವಾಗಿ ಬೀಳುತ್ತವೆ. ಹಾಗಾಗಿ ಇವುಗಳಿಂದಾಗುವ ಹಾನಿಯನ್ನು ಅಧ್ಯಯನ ಮಾಡುವುದು ಮತ್ತಷ್ಟುಸರಾಗವಾಗಲಿದೆ.
ಏನೇನು ಅಧ್ಯಯನ ನಡೆಯಲಿದೆ?
ಆದಿತ್ಯ ಎಲ್-1 ನೌಕೆಯಲ್ಲಿ ಒಟ್ಟು 7 ಪೇಲೋಡ್‌ಗಳಿದ್ದು, ಇವುಗಳಲ್ಲಿ 4 ಪೇಲೋಡ್‌ಗಳು ನೇರವಾಗಿ ಸೂರ್ಯನ ಅಧ್ಯಯನ ಮಾಡಿದರೆ, 3 ಪೇಲೋಡ್‌ಗಳು ಬಾಹ್ಯಾಕಾಶ ಮತ್ತು ಎಲ್-1 ಬಗ್ಗೆ ಅಧ್ಯಯನ ಮಾಡಲಿವೆ. ಪ್ರಮುಖವಾಗಿ ಸೂರ್ಯನ ಒಳಭಾಗವಾದ ಫೋಟೋಸ್ಪಿಯರ್‌ನ ನೇರವಾದ ಅಧ್ಯಯನಕ್ಕೆ ಈ ಯೋಜನೆ ಕೈಗೊಳ್ಳಲಾಗಿದೆ. ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಲೆಗಳನ್ನು ಬಳಕೆ ಮಾಡುವ ಮೂಲಕ ಉಪಗ್ರಹ ಈ ಭಾಗದ ಅಧ್ಯಯನ ನಡೆಸಲಿದೆ. ಇದರ ಜೊತೆಗೆ ಫೋಟೋಸ್ಪಿಯರ್‌ನ ಮೇಲ್ಭಾಗದಲ್ಲಿ 400 ಕಿ.ಮೀ.ನಿಂದ 2100 ಕಿ.ಮೀ.ವರೆಗೆ ವ್ಯಾಪಿಸಿರುವ ಕ್ರೋಮೋಸ್ಪಿಯರ್ ಹಾಗೂ ಸೂರ್ಯನ ಅತ್ಯಂತ ಹೊರಭಾಗವಾದ ಕೊರೋನಾವನ್ನು ಈ ನೌಕೆ ಅಧ್ಯಯನ ಮಾಡಲಿದೆ. ಇತ್ತೀಚಿನ ದಿನಗಳಲ್ಲಿ ಸೂರ್ಯನ ಹೊರಭಾಗ (ಕೊರೋನಾ) ಅತ್ಯಂತ ಬಿಸಿಯಾಗುತ್ತಿರುವುದಕ್ಕೆ ಕಾರಣವೇನು?, ಸೌರಜ್ವಾಲೆಗಳ ವೇಗ ಮತ್ತು ವಿಸ್ತಾರ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು?, ಬಾಹ್ಯಾಕಾಶದ ವಾತಾವರಣದಲ್ಲೇನು ಬದಲಾವಣೆಯಾಗುತ್ತಿದೆ?, ಎಲ್-1 ಹಾಗೂ ಸುತ್ತಮುತ್ತಲಿನ ಪರಿಸರ ಹೇಗಿದೆ ಎಂಬುದನ್ನು ಈ ಯೋಜನೆ ಅಧ್ಯಯನ ಮಾಡಲಿದೆ. ಅಲ್ಲದೇ ಶತಮಾನಗಳವರೆಗೆ ಭೂಮಿಯ ವಾಯುಗುಣದಲ್ಲಿ ಉಂಟಾಗುವ ಬದಲಾವಣೆಯನ್ನು ಅಧ್ಯಯನ ಮಾಡುವುದಕ್ಕೆ ಈ ನೌಕೆ ಅಡಿಗಲ್ಲಾಗಲಿದೆ.
ಆದಿತ್ಯ ಎಲ್-1ರಲ್ಲಿರುವ ಪೇಲೋಡ್‌ಗಳು
ವಿಸಿಎಲ್‌ಇ: (ವಿಸಿಬಲ್ ಎಮಿಶನ್ ಲೈನ್ ಕೋರೋನಾಗ್ರಾಫ್)
ಸೂರ್ಯನ ಕೊರೋನಾ ಭಾಗ ಮತ್ತು ಇಲ್ಲಿ ಉಂಟಾಗುತ್ತಿರುವ ಸೌರ ಶಾಖದ ಚಿಮ್ಮುವಿಕೆಯನ್ನು ಈ ಪೇಲೋಡ್ ಅಧ್ಯಯನ ಮಾಡುತ್ತದೆ. ಇದನ್ನು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಅಭಿವೃದ್ಧಿಪಡಿಸಿದೆ.
ಎಸ್‌ಯುಐಟಿ: (ಸೋಲಾರ್ ಅಲ್ಟ್ರಾ ವಯಲೆಟ್ ಇಮೇಜಿಂಗ್ ಟೆಲಿಸ್ಕೋಪ್)
ಸೂರ್ಯನ ಫೋಟೋಸ್ಪಿಯರ್ ಮತ್ತು ಕ್ರೋಮೋಸ್ಪಿಯರ್ ಹಾಗೂ ಸೂರ್ಯನಿಂದ ಹೊರ ಹೊಮ್ಮುವ ಅತಿ ನೇರಳೆ ವಿಕಿರಣಗಳ ಪ್ರಮಾಣಗಳನ್ನು ಈ ಪೇಲೋಡ್ ಅಧ್ಯಯನ ಮಾಡುತ್ತದೆ. ಇದನ್ನು ಪುಣೆಯ ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೋನಮಿ ಅಂಡ್ ಆಸ್ಟ್ರೋಫಿಸಿಕ್ಸ್ ಅಭಿವೃದ್ಧಿಪಡಿಸಿದೆ.
ಎಸ್‌ಒಎಲ್‌ಇಎಕ್ಸ್‌ಎಸ್: (ಸೋಲಾರ್ ಲೋ ಎನರ್ಜಿ ಎಕ್ಸ್-ರೇ ಸ್ಪೆಕ್ಟ್ರೋಮೀಟರ್)
ಎಚ್‌ಇಎಲ್1ಒಎಸ್: (ಹೈ ಎನರ್ಜಿ ಎಲ್1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್)
ಸೂರ್ಯನಿಂದ ಹೊರ ಹೊಮ್ಮುವ ಎಕ್ಸ್ ಕಿರಣಗಳು ಹಾಗೂ ಎಲ್-1 ಕಕ್ಷೆಯ ಸಮೀಪದಲ್ಲಿರುವ ಎಕ್ಸ್ ಕಿರಣಗಳನ್ನು ಈ ಪೇಲೋಡ್ ಅಧ್ಯಯನ ಮಾಡುತ್ತದೆ. ಈ 2 ಪೇಲೋಡ್‌ಗಳನ್ನು ಬೆಂಗಳೂರಿನ ಯು.ಆರ್.ರಾವ್ ಸ್ಯಾಟೆಲೈಟ್ ಸೆಂಟರ್ ಅಭಿವೃದ್ಧಿ ಪಡಿಸಿದೆ.
ಎಎಸ್‌ಪಿಇಎಕ್ಸ್: (ಆದಿತ್ಯ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪರಿಮೆಂಟ್)
ಪಿಎಪಿಎ: (ಪ್ಲಾಸ್ಮಾ ಅನಲೈಸರ್ ಪ್ಯಾಕೇಜ್ ಫಾರ್ ಆದಿತ್ಯ)
ಸೌರ ಗಾಳಿ ಮತ್ತು ಶಕ್ತಿಯುತ ಅಯಾನುಗಳು ಹಾಗೂ ಸೂರ್ಯನಿಂದ ಉಂಟಾಗುವ ಶಕ್ತಿ ವಿತರಣೆಯನ್ನು ಈ ಪೇಲೋಡ್‌ಗಳು ಅಧ್ಯಯನ ಮಾಡಲಿವೆ. ಎಎಸ್‌ಪಿಇಎಕ್ಸ್‌ನ್ನು ಅಹಮದಾಬಾದ್‌ನ ಫಿಸಿಕಲ್ ರೀಸರ್ಚ್ ಲ್ಯಾಬೋರೇಟರಿ ಮತ್ತು ಪಿಎಪಿಎಯನ್ನು ತಿರುವನಂತಪುರದ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಅಭಿವೃದ್ಧಿ ಪಡಿಸಿದೆ.
ಎಂಎಜಿ: (ಮ್ಯಾಗ್ನೆಟೋಮೀಟರ್)
ಸೂರ್ಯ ಹಾಗೂ ಭೂಮಿಯ ಗುರುತ್ವ ಬಲದಿಂದ ಉಂಟಾಗಿರುವ ಎಲ್-1ರ ಗುರುತ್ವ ಬಲವನ್ನು ಈ ಪೇಲೋಡ್ ಅಧ್ಯಯನ ಮಾಡುತ್ತದೆ. ಇದನ್ನು ಬೆಂಗಳೂರಿನ ಲ್ಯಾಬೋರೇಟರಿ ಫಾರ್ ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ ಅಭಿವೃದ್ಧಿಪಡಿಸಿದೆ.
ಸೂರ್ಯನ ಅಧ್ಯಯನದಿಂದ ಏನೇನು ಲಾಭವಾಗಲಿದೆ..?
ಭೂಮಿ ಮೇಲೆ ಸೂರ್ಯನ ಪರಿಣಾಮ:
ಭೂಮಿ ಉಗಮವಾದಾಗಿನಿಂದ ಹಲವು ಬಗೆಯ ಕಿರಣಗಳು ಸೂರ್ಯನಿಂದ ಭೂಮಿಯನ್ನು ತಲುಪಿವೆ. ಇವುಗಳು ಎಷ್ಟುಅಪಾಯಕಾರಿ ಎಂಬುದನ್ನು ಇನ್ನೂ ಸಮರ್ಥವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲದೇ ಈ ಕಿರಣಗಳು ನಮ್ಮ ಸಂಶೋಧನೆಗಳ ಮೇಲೆ ಯಾವ ಬಗೆಯ ಪರಿಣಾಮ ಬೀರಬಹುದು ಎಂಬುದು ತಿಳಿದುಬಂದಿಲ್ಲ. ಇವುಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಭವಿಷ್ಯದಲ್ಲಿ ಭೂಮಿಯನ್ನು ತಲುಪಬಹುದಾದ ಸೂರ್ಯನ ಕಿರಣಗಳನ್ನು ಅಧ್ಯಯನ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ.
ನಕ್ಷತ್ರಗಳ ಅಧ್ಯಯನಕ್ಕೆ ಸಹಾಯ:
ಸೂರ್ಯ ಭೂಮಿಗೆ ಅತ್ಯಂತ ಸಮೀಪದಲ್ಲಿರುವ ನಕ್ಷತ್ರ. ಹೀಗಾಗಿ ಸೂರ್ಯನನ್ನು ಅಧ್ಯಯನ ಮಾಡುವ ಮೂಲಕ ನಮ್ಮ ಗ್ಯಾಲಕ್ಸಿಯಲ್ಲಿರುವ ಇತರ ನಕ್ಷತ್ರಗಳ ಬಗ್ಗೆ ಅರ್ಥ ಮಾಡಿಕೊಳ್ಳಬಹುದಾಗಿದೆ. ಸೂರ್ಯನಲ್ಲಿ ನಿರಂತರವಾಗಿ ಶಾಖ ಹಾಗೂ ಬೆಳಕು ಹೇಗೆ ಉತ್ಪತ್ತಿಯಾಗುತ್ತಿದೆ. ಇದರ ಪ್ರಮಾಣ ಮತ್ತು ವಿಸ್ತಾರ ಎಷ್ಟಿದೆ ಎಂಬುದನ್ನು ಅರಿಯುವ ಮೂಲಕ ಇಷ್ಟೇ ಪ್ರಮಾಣದ ಶಾಖ ಹೊಂದಿರುವ ನಕ್ಷತ್ರಗಳನ್ನು ಗುರುತಿಸಿ ಅಧ್ಯಯನ ಮಾಡಲು ಈ ಯೋಜನೆ ನೆರವಾಗಲಿದೆ.
ಬಾಹ್ಯಾಕಾಶದ ಹವಾಮಾನದ ಅಧ್ಯಯನ:
ಸೂರ್ಯನ ಹೊರಭಾಗವಾದ ಕೊರೋನಾದಲ್ಲಿ ನಿರಂತರವಾಗಿ ಹೆಚ್ಚಾಗುತ್ತಿರುವ ಶಾಖದ ಪರಿಣಾಮ ಬಾಹ್ಯಾಕಾಶದ ಹವಾಮಾನದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಈ ಯೋಜನೆ ಅಧ್ಯಯನ ಮಾಡಲಿದೆ. ಶಾಖ ಹೆಚ್ಚಾಗುತ್ತಿರುವುದರಿಂದ ಆಕಾಶಕಾಯಗಳ ಚಲನೆಯ ಪಥ ಬದಲಾವಣೆಯಾಗುತ್ತಿದೆಯೇ ಎಂಬುದರ ಬಗ್ಗೆ ಈ ಯೋಜನೆ ಬೆಳಕು ಚೆಲ್ಲಲಿದೆ.
ಭಾರತದ ಕಿರೀಟಕ್ಕೆ ಮತ್ತೊಂದು ಗರಿ
ಚಂದ್ರ ಮತ್ತು ಮಂಗಳ ಗ್ರಹಗಳ ಅಧ್ಯಯನ ಮಾಡುವ ಮೂಲಕ ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿರುವ ಇಸ್ರೋದ ಕಿರೀಟಕ್ಕೆ ಈ ಯೋಜನೆಯ ಬಳಿಕ ಮತ್ತೊಂದು ಗರಿ ಸಿಕ್ಕಂತಾಗುತ್ತದೆ. ಈವರೆಗೆ ಕೆಲವೇ ದೇಶಗಳು ಸೂರ್ಯನ ಅಧ್ಯಯನಕ್ಕೆ ಮುಂದಾಗಿವೆ. ಹಾಗಾಗಿ ಸೂರ್ಯನನ್ನು ಅಧ್ಯಯನ ಮಾಡಲು ಅಂತರಿಕ್ಷ ನೌಕೆಯನ್ನು ಕಳುಹಿಸಿರುವುದು ಭಾರತದ ಶಕ್ತಿಯನ್ನು ಮತ್ತೊಮ್ಮೆ ಜಗತ್ತಿನ ಎದುರು ಪ್ರದರ್ಶಿಸುತ್ತಿದೆ.
ವಿಶ್ವದ ಈವರೆಗಿನ ಪ್ರಮುಖ ಸೂರ್ಯ ಯೋಜನೆಗಳು:
ಪಯೋನಿರ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 1960ರಿಂದ ಈ ಯೋಜನೆಯನ್ನು ಹಲವು ಹಂತಗಳಲ್ಲಿ ಕೈಗೊಂಡಿದೆ. ಸೂರ್ಯ ಗುರುತ್ವ ಬಲ, ಸೌರ ಜ್ವಾಲೆ, ಬಾಹ್ಯಾಕಾಶ ವಾಯುಗುಣ, ಸೌರ ಮಾರುತ, ವಿಕಿರಣಗಳ ಅಧ್ಯಯನಕ್ಕಾಗಿ ಈ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಇವೆಲ್ಲವೂ ಆರ್ಬಿಟರ್‌ಗಳನ್ನು ಹೊಂದಿರುವ ಯೋಜನೆಗಳಾಗಿದ್ದು, 5 ಯೋಜನೆಗಳು ಸಫಲವಾಗಿದ್ದು, 1 ಯೋಜನೆ ವಿಫಲವಾಗಿತ್ತು.
ಉಲ್ಲೇಸಿಸ್: ನಾಸಾ ಹಾಗೂ ಯುರೋಪ್ ಬಾಹ್ಯಾಕಾಶ ಸಂಸ್ಥೆ ಜಂಟಿಯಾಗಿ ಈ ಯೋಜನೆಯನ್ನು 3 ಹಂತಗಳಲ್ಲಿ ಕೈಗೊಂಡಿವೆ. 1994, 2000 ಮತ್ತು 2008ರಲ್ಲಿ ಈ ಬಾರಿ ಆರ್ಬಿಟರ್‌ಗಳನ್ನು ಈ ಯೋಜನೆ ಉಡಾವಣೆ ಮಾಡಿದೆ. ಇದು ಸೂರ್ಯನ ಉತ್ತರ ಹಾಗೂ ದಕ್ಷಿಣ ಧ್ರುವಗಳನ್ನು ಅಧ್ಯಯನ ಮಾಡಲು ಕೈಗೊಂಡ ಯೋಜನೆಯಾಗಿದೆ.
ಸೋಹೋ: ನಾಸಾ, ಯುರೋಪ್ ಹಾಗೂ ಜಪಾನ್‌ನ ಬಾಹ್ಯಾಕಾಶ ಸಂಸ್ಥೆಗಳು ಒಟ್ಟಾಗಿ ಈ ಯೋಜನೆಯನ್ನು ಕೈಗೊಂಡಿದ್ದು, ಇದು ಸೂರ್ಯನ ಒಳಭಾಗ, ಕೊರೋನಾ ಮತ್ತು ಸೌರ ಗಾಳಿ ಹಾಗೂ ಧೂಮಕೇತುಗಳನ್ನು ಅಧ್ಯಯನ ಮಾಡಲು ಕೈಗೊಂಡ ಯೋಜನೆಯಾಗಿತ್ತು. 1996ರಲ್ಲಿ ಉಡಾವಣೆಗೊಂಡ ಈ ಯೋಜನೆ 4 ಸಾವಿರಕ್ಕೂ ಹೆಚ್ಚು ಧೂಮಕೇತುಗಳನ್ನು ಗುರುತಿಸಿದೆ.
ಸ್ಟೀರಿಯೋ ಎ ಅಂಡ್ ಬಿ: ಇದು ಸೌರ ಜ್ವಾಲೆಗಳನ್ನು ಅಧ್ಯಯನ ಮಾಡಲು 2006ರಲ್ಲಿ ನಾಸಾ ಕೈಗೊಂಡಿರುವ ಯೋಜನೆಯಾಗಿದೆ. ಇದು ಸಹ ಆರ್ಬಿಟರ್ ಯೋಜನೆಯಾಗಿದ್ದು, ಸೂರ್ಯನ ಕೊರೋನಾ ಭಾಗ ಹಾಗೂ ಸೌರ ಜ್ವಾಲೆಗಳ ಫೋಟೋ ತೆಗೆದು ಅವುಗಳನ್ನು ಭೂಮಿಗೆ ರವಾನಿಸಿದೆ.
ಪಾರ್ಕರ್: ಇದು ಸೂರ್ಯನನ್ನು ಮುಟ್ಟಿದ ಮೊದಲ ಸೌರ ಯೋಜನೆಯಾಗಿದೆ. 2018ರ ಆಗಸ್ಟ್ 12ರಂದು ಉಡಾವಣೆಗೊಂಡ ಈ ಯೋಜನೆ 2021ರ ಡಿಸೆಂಬರ್‌ನಲ್ಲಿ ಮೊದಲ ಬಾರಿ ಸೂರ್ಯನ ಕೋರೋನಾ ಭಾಗವನ್ನು ಮುಟ್ಟಿತು. ಈ ಮೂಲಕ ಅತ್ಯಂತ ಹತ್ತಿರದಿಂದ ಸೂರ್ಯನ ಅಧ್ಯಯನ ಮಾಡಿದ ಮೊದಲ ಯೋಜನೆ ಎಂಬ ಕೀರ್ತಿಗೆ ಪಾತ್ರವಾಗಿದೆ.
ಪ್ರತಿದಿನ 1440 ಫೋಟೋ ಕಳಿಸಲಿರುವ ಆದಿತ್ಯ ಎಲ್-1
ಸೂರ್ಯನ ಅಧ್ಯಯನಕ್ಕೆ ತೆರಳುತ್ತಿರುವ ಆದಿತ್ಯ ಎಲ್-1 ನೌಕೆ ಪ್ರತಿದಿನ ಸೂರ್ಯನ 1,440 ಫೋಟೋಗಳನ್ನು ಭೂಮಿಗೆ ರವಾನಿಸಲಿದೆ. ಇದಕ್ಕಾಗಿಯೇ ಇದರಲ್ಲಿರುವ ವಿಇಎಲ್‌ಸಿ ಪೇಲೋಡನ್ನು ಅಭಿವೃದ್ಧಿ ಪಡಿಸಲಾಗಿದ್ದು, ಈ ಮೂಲಕ ವಿಸ್ತೃತವಾಗಿ ಸೂರ್ಯನ ಅಧ್ಯಯನವನ್ನು ಕೈಗೊಳ್ಳಲಾಗುತ್ತದೆ. ಇದಕ್ಕಾಗಿಯೇ ಈ ಪೇಲೋಡನ್ನು ಅಭಿವೃದ್ಧಿ ಪಡಿಸಿರುವ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಕೇಂದ್ರದಲ್ಲಿ ವಿಶೇಷ ಘಟಕವನ್ನು ಸ್ಥಾಪನೆ ಮಾಡಲಾಗಿದ್ದು, ಇಷ್ಟೂ ಫೋಟೋಗಳನ್ನು 24 ಗಂಟೆಗಳಲ್ಲಿ ಪರಿಷ್ಕರಿಸಿ ಇಸ್ರೋಗೆ ಕಳುಹಿಸಲಾಗುತ್ತದೆ.
ಚಂದ್ರಯಾನ ಯಶಸ್ಸಿನ ನಂತರ ಪುಟ್ಟ ಮಕ್ಕಳಲ್ಲೂ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಕೌತುಕ ಹೆಚ್ಚಿದೆ. ಸೂರ್ಯಯಾನವೂ ಮಕ್ಕಳನ್ನು ಆಕರ್ಷಿಸುತ್ತಿದೆ. ಬೆಂಗಳೂರಿನ ಸ್ವರ್ಗರಾಣಿ ಶಾಲೆಯ ಪುಟಾಣಿ ಬಾಲಕ ಸ್ಕಂದಪ್ರಥಮ ಜೋಶಿ ಕಾಗದದಲ್ಲೇ ‘ಆದಿತ್ಯ ಎಲ್-1’ ಹೊತ್ತ ಪಿಎಸ್‌ಎಲ್‌ವಿ ರಾಕೆಟ್‌ನ ಮಾದರಿ ತಯಾರಿಸಿದ್ದು ಇದಕ್ಕೊಂದು ಉದಾಹರಣೆ.