ಅನಂತ್ ‘ಸಿಕ್ಸರ್’ಗೆ ಆನಂದ್ ಭಂಗ ತರ‌್ತಾರಾ?

By Web DeskFirst Published Apr 19, 2019, 3:13 PM IST
Highlights

6ನೇ ಬಾರಿ ಸಂಸತ್ತಿಗೆ ಪ್ರವೇಶಿಸಲು ಅನಂತ್ ಹೆಗಡೆ ಯತ್ನ | ಮೈತ್ರಿಕೂಟದ ಅಭ್ಯರ್ಥಿ ಅಸ್ನೊ ೀಟಿಕರ್ ಪೈಪೋಟಿ ಹಿಂದುತ್ವವಾದ, ಮೋದಿ ಬಲ ಬಿಜೆಪಿ ಸಂಸದಗೆ ವರ | ಕಾಂಗ್ರೆಸ್ ಮತ ವರ್ಗಾವಣೆಯಾಗದಿದ್ದರೆ ಜೆಡಿಎಸ್‌ಗೆ ಕಷ್ಟ

ವಸಂತಕುಮಾರ್ ಕತಗಾಲ

ಕಾರವಾರ[ಏ.19]: ಕರಾವಳಿ, ಮಲೆನಾಡು, ಬಯಲುಸೀಮೆ ಈ ಮೂರೂ ಭೌಗೋಳಿಕತೆಯನ್ನು ಹೊಂದಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಈ ಬಾರಿ ಬಿಜೆಪಿಯ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ನಡುವಿನ ನೇರ ಕದನಕ್ಕೆ ಸಾಕ್ಷಿಯಾಗಿದೆ.

ಐದು ಬಾರಿ ಗೆಲುವು ಸಾಧಿಸಿ ಆರನೇ ಬಾರಿ ಲೋಕಸಭೆ ಪ್ರವೇಶಿಸಲು ಸಜ್ಜಾಗಿರುವ ಅನಂತಕುಮಾರ್ ಹೆಗಡೆ ಅವ ರನ್ನು ಕಟ್ಟಿ ಹಾಕಬೇಕು ಎಂಬ ಪ್ರಯತ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರಿಂದ ತೀವ್ರವಾಗಿ ನಡೆದಿರುವುದು ಕುತೂಹಲಕರವಾಗಿದೆ.

್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಿದ್ದರೂ ಮೈತ್ರಿ ಸೂತ್ರದ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿದೆ. ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರನ್ನು ಒಂದೇ ವೇದಿಕೆಗೆ ತರಲು ಜೆಡಿಎಸ್‌ನ ಆನಂದ ಅಸ್ನೋಟಿಕರ್ ಭಾರಿ ಪ್ರಯತ್ನ ನಡೆಸಿದ್ದಾರೆ. ಜತೆಗೆ ಜೆಡಿಎಸ್ ಆನಂದ ಅಸ್ನೋಟಿಕರ್ ಹೆಸರು ಘೋಷಿಸುವಲ್ಲಿ ವಿಳಂಬ ಮಾಡಿದ್ದ ರಿಂದ ಅವರು ಪ್ರಚಾರಕ್ಕೆ ಇಳಿಯುವಷ್ಟರಲ್ಲಿ ಹೆಗಡೆ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದರು. ಈಗ ಇಬ್ಬರೂ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ಬೃಹತ್ ಕ್ಷೇತ್ರ, ಪ್ರಚಾರವೇ ಸವಾಲು

ಉತ್ತರ ಕನ್ನಡದ ಆರು ವಿಧಾನಸಭೆ ಕ್ಷೇತ್ರಗಳು ಹಾಗೂ ಬೆಳಗಾವಿಯ ಕಿತ್ತೂರು, ಖಾನಾಪುರ ಕ್ಷೇತ್ರಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ವಿಸ್ತಾರವಾದ ಕ್ಷೇತ್ರದ ಎಲ್ಲೆಡೆ ಭೇಟಿ ನೀಡುವುದೇ ಅಭ್ಯರ್ಥಿಗಳಿಗೆ ಭಾರಿ ಸವಾಲಿನ ಸಂಗತಿಯಾ ಗಿದೆ. ಭೌಗೋಳಿಕವಾಗಿ ಅಷ್ಟೆ ಅಲ್ಲ, ಕ್ಷೇತ್ರದಲ್ಲಿ ಹಲವು ಜಾತಿ, ಜನಾಂಗಗಳಿವೆ. ಅಲ್ಪಸಂಖ್ಯಾತರ ಮತಗಳೂ ಕಡಿಮೆ ಯೇನಿಲ್ಲ. ಎಲ್ಲ ಜಾತಿ, ಜನಾಂಗ, ಧರ್ಮಗಳು, ಬೇರೆ ಬೇರೆ ಭೌಗೋಳಿಕತೆ, ಕನ್ನಡ, ಮರಾಠಿ, ಕೊಂಕಣಿ ಭಾಷೆಗಳು, ಗಡಿ ಸಮಸ್ಯೆ ಇವುಗಳ ನಡುವೆ ಸಮನ್ವಯ ಸಾಧಿಸಿ ಮತ ಯಾಚಿಸುವ ಸವಾಲು ಅಭ್ಯರ್ಥಿಗಳ ಮೇಲಿದೆ.

ಕಳೆದ ಬಾರಿ ಹಾಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆರ್.ವಿ. ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದ ವೇಳೆ ಅನಂತಕುಮಾರ್ ಹೆಗಡೆ ಅವರಿಗೆ ಪೈಪೋಟಿ ಕೊಟ್ಟಿದ್ದರು. ಆದರೆ, ಈ ಬಾರಿ ಕಾಂಗ್ರೆಸ್‌ನಿಂದ ಅಭ್ಯರ್ಥಿಯೇ ಇಲ್ಲದ್ದರಿಂದ ಆ ಪಕ್ಷದ ಮುಖಂಡರು ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡಲು ಅಷ್ಟಾಗಿ ಉತ್ಸಾಹ ತೋರುತ್ತಿಲ್ಲ.

ಒಮ್ಮೆ ಮಾತ್ರ ಅನಂತ ಹೆಗಡೆ ಸೋಲು

ಮೊದಲು ಈ ಕ್ಷೇತ್ರ ಕೆನರಾ ಲೋಕಸಭೆ ಕ್ಷೇತ್ರವಾಗಿತ್ತು. 1951ರಿಂದ 1991ರ ತನಕ ನಡೆದ ಹತ್ತು ಚುನಾವಣೆಗಳಲ್ಲಿ 9ರಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಶಿವರಾಮ ಕಾರಂತ, ದಿನಕರ ದೇಸಾಯಿ, ಅನಂತನಾಗ್, ಆರ್.ವಿ. ದೇಶಪಾಂಡೆ, ಮಾರ್ಗರೆಟ್ ಆಳ್ವ ಮೊದಲಾದ ಘಟಾನುಘಟಿಗಳೇ ಈ ಕ್ಷೇತ್ರದಲ್ಲಿ ಸೋಲಿನ ರುಚಿ ಕಂಡಿದ್ದಾರೆ (ಮ್ಯಾರ್ಗರೆಟ್ ಮತ್ತು ದಿನಕರ ದೇಸಾಯಿ ಒಮ್ಮೆ ಗೆಲುವನ್ನೂ ಸಾಧಿಸಿದ್ದರು). ಕೈವಶದಲ್ಲಿದ್ದ ಕ್ಷೇತ್ರವನ್ನು ಮೊದಲ ಬಾರಿಗೆ 1996ರಲ್ಲಿ ಬಿಜೆಪಿ ಕೋಟೆಗೆ ತಂದವರು ಈಗಿನ ಸಂಸದ ಅನಂತಕುಮಾರ್ ಹೆಗಡೆ. ಅಲ್ಲಿಂದ ನಂತರ ಕೇವಲ ಒಂದು ಬಾರಿ (1999ರಲ್ಲಿ) ಮಾತ್ರ ಅವರು ಸೋಲನ್ನು ಅನುಭವಿಸಿದ್ದು ಉಳಿದ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾರವಾರ, ಕುಮಟಾ, ಶಿರಸಿ, ಭಟ್ಕಳ ಹಾಗೂ ಕಿತ್ತೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಹಳಿಯಾಳ, ಯಲ್ಲಾಪುರ ಹಾಗೂ ಖಾನಾಪುರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ಅನಂತ್ ಹೆಗಡೆ ಈ ಬಾರಿ ಬದಲು

ಅನಂತಕುಮಾರ್ ಹೆಗಡೆ ಈ ಬಾರಿ ಬದಲಾಗಿದ್ದಾರೆ. ಎಲ್ಲಿಯೂ ಕೋಮು ಪ್ರಚೋದಕ ಮಾತುಗಳು ಕೇಳಿಬರುತ್ತಿಲ್ಲ. ರಾಷ್ಟ್ರೀಯತೆಯ ಬಗ್ಗೆ ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಹಾಗೆಯೇ ಕಾಂಗ್ರೆಸ್‌ನ ಚುನಾವಣೆ ಪ್ರಣಾಳಿಕೆ ರಾಷ್ಟ್ರಘಾತುಕವಾದುದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ತೆರೆದಿಡುತ್ತಿದ್ದಾರೆ. ದೇಶದ ಭದ್ರತೆ, ಸ್ವಾವಲಂಬನೆ, ದೇಶಭಕ್ತಿಯ ಪಾಠವನ್ನು ಬಿಜೆಪಿ ಹೇಳುತ್ತಿದೆ ಎಂದು ಮತದಾರರ ಮನತಟ್ಟುತ್ತಿದ್ದಾರೆ. ಅವರೆಲ್ಲೂ ಗಂಭೀರವಾಗಿ ತಮ್ಮ ಎದುರಾಳಿ ಆನಂದ ಅಸ್ನೋಟಿಕರ್ ಅವರ ಹೆಸರನ್ನು ಪ್ರಸ್ತಾಪಿಸುವುದೇ ಇಲ್ಲ. ಹೆಚ್ಚು ಟೀಕಿಸುವುದೂ ಇಲ್ಲ.

ಜೆಡಿಎಸ್‌ನ ಆನಂದ ಅಸ್ನೋಟಿಕರ್ ಏನಿದ್ದರೂ ಅನಂತಕುಮಾರ್ ಹೆಗಡೆ ವಿರುದ್ಧ ಹರಿಹಾಯುತ್ತಾರೆ. ಕೋಮು ಭಾವನೆಯನ್ನು ಬಿತ್ತಿ ಮತದ ಬೆಳೆ ಬೆಳೆಯುತ್ತಾರೆ, ಬೊಗಳೆ ಬಿಡುವುದು, ಭಾಷಣ ಮಾಡುವುದಷ್ಟೇ ಅವರಿಗೆ ಗೊತ್ತು ಎನ್ನುತ್ತಾರೆ. ೫ ಬಾರಿ ಸಂಸದರಾದರೂ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜಿಲ್ಲೆಯ ಪ್ರಗತಿಗೆ ಅವರ ಕೊಡುಗೆ ಏನೂ ಇಲ್ಲ ಎಂದು ಪ್ರತಿಪಾದಿಸುತ್ತಾರೆ.

ಜಾತಿ ವರ್ಸಸ್ ಜಾತ್ಯತೀತ ರಾಜಕೀಯ

ಆನಂದ ಅಸ್ನೋಟಿಕರ್ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಜನರನ್ನು ಓಲೈಸುತ್ತಿದ್ದಾರೆ. ಬಹುಸಂಖ್ಯಾತರಾದ ಹಿಂದುಳಿದ ವರ್ಗದವರನ್ನು ಒಂದೇ ವೇದಿಕೆಯಡಿ ಸೇರಿಸಿದಲ್ಲಿ ತಮ್ಮ ಗೆಲುವು ಸುಲಭ ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ ಪ್ರಬಲ ಹಿಂದುತ್ವವಾದಿಯಾಗಿರುವ ಅನಂತಕುಮಾರ್ ಹೆಗಡೆ ಎಲ್ಲೂ ಜಾತಿಯ ರಾಜಕಾರಣ ಮಾಡಿದವರಲ್ಲ. ಹೀಗಾಗಿ ಆನಂದ್ ಲೆಕ್ಕಾಚಾರ ವರ್ಕ್ ಔಟ್ ಅಗುವ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದರೂ ಸ್ಥಾನ ಹೊಂದಾಣಿಕೆಯಲ್ಲಿ ಜೆಡಿಎಸ್‌ಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದು ಕಾಂಗ್ರೆಸ್ಸಿಗರಿಗೆ ನುಂಗಲಾರದ ತುತ್ತಾಗಿದೆ. ಬಹಿರಂಗವಾಗಿ ಕಾಂಗ್ರೆಸ್ಸಿಗರು ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕಿಳಿದರೂ ಮಾನಸಿಕವಾಗಿ ಹೊಂದಾಣಿಕೆ ಆಗುತ್ತಿಲ್ಲ. ಇದರಿಂದ ಕಾಂಗ್ರೆಸ್ಸಿನ ಎಲ್ಲ ಮತಗಳೂ ಆನಂದ್‌ಗೆ ಹರಿದು ಬರುವುದು ಅನುಮಾನ ಎಂದೇ ಹೇಳಲಾಗುತ್ತಿದೆ.

ಜೆಡಿಎಸ್ ಶಾಸಕರಿಲ್ಲ, ಸಂಘಟನೆಯೂ ಇಲ್ಲ

ಇದೇ ಪ್ರಥಮ ಬಾರಿಗೆ ಆನಂದ ಅಸ್ನೋಟಿಕರ್ ಲೋಕಸಭೆ ಚುನಾವಣೆ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪಕ್ಷದ ಅಡಿಪಾಯವೇನೂ ಭದ್ರವಾಗಿಲ್ಲ. ಕ್ಷೇತ್ರದಲ್ಲಿ ಒಟ್ಟು ೮ ವಿಧಾನಸಭೆ ಕ್ಷೇತ್ರಗಳಿದ್ದು, ಐದು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಜೆಡಿಎಸ್ ಶಾಸಕರು ಇಲ್ಲದೇ ಇರುವುದು ಕೂಡ ಆನಂದ ಅಸ್ನೋಟಿಕರ್ ಅವರಿಗೆ ತೊಡಕಾಗಿದೆ.

ನಾಮಧಾರಿಗಳ ಮತ ಹೆಚ್ಚು

ಕ್ಷೇತ್ರದಲ್ಲಿ ನಾಮಧಾರಿಗಳು, ಬ್ರಾಹ್ಮಣರು, ಮುಸ್ಲಿಂ, ಹಾಲಕ್ಕಿ ಒಕ್ಕಲಿಗರು, ಮರಾಠರು ಹಾಗೂ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾಮಧಾರಿಗಳು 2 ಲಕ್ಷ, ಬ್ರಾಹ್ಮಣರು 1.25 ಲಕ್ಷ, ಮುಸ್ಲಿಂ 1.40 ಲಕ್ಷ, ಹಾಲಕ್ಕಿ ಒಕ್ಕಲಿಗರು 1.20 ಲಕ್ಷ , ಮರಾಠ 1.50 ಲಕ್ಷ, ಲಿಂಗಾಯತರು 1.5 ಲಕ್ಷ, ಎಸ್‌ಸಿ 1.40 ಲಕ್ಷ, ಎಸ್‌ಟಿ 30 ಸಾವಿರದಷ್ಟು ಮತದಾರರಿದ್ದಾರೆ.

ಕಣದಲ್ಲಿ 13 ಅಭ್ಯರ್ಥಿಗಳು

ಬಿಜೆಪಿಯಿಂದ ಅನಂತಕುಮಾರ್ ಹೆಗಡೆ, ಜೆಡಿಎಸ್‌ನಿಂದ ಆನಂದ್ ಅಸ್ನೋಟಿಕರ್ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

2014ರ ಫಲಿತಾಂಶ:

ಅನಂತಕುಮಾರ್ ಹೆಗಡೆ (ಬಿಜೆಪಿ): 5,46,476

ಪ್ರಶಾಂತ ದೇಶಪಾಂಡೆ (ಕಾಂಗ್ರೆಸ್) : 4,06,116

ಗೆಲುವಿನ ಅಂತರ: 1,40,360

ಮತದಾರರು:15,34,036| ಪುರುಷ:7,78,350| ಮಹಿಳೆ:7,55,678

 

click me!