ಪೊಲೀಸರ ಹೆಸರಲ್ಲಿ ಆನ್‌ಲೈನ್‌ ವಂಚನೆ: ನಾಲ್ವರು ಕಳ್ಳರು ಅಂದರ್‌

By Kannadaprabha News  |  First Published Oct 23, 2020, 7:54 AM IST

ಡಿಜಿಪಿ ಪ್ರವೀಣ್‌ ಸೂದ್‌ ಸೇರಿದಂತೆ ಪೊಲೀಸ್‌ ಅಧಿಕಾರಗಳ ಹೆಸರಲ್ಲಿ ಎಫ್‌ಬಿ, ಟ್ವಿಟರ್‌ ಖಾತೆ ತೆರದು ವಂಚನೆ| ಸರ್ಕಾರ ಯೋಜನೆ ಅರ್ಜಿಗಳು ದುರ್ಬಳಕೆ| ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಗಣ್ಯರ ಹೆಸರಿನಲ್ಲಿ ಸ್ನೇಹ ಮಾಡುವ ಮುನ್ನ ಎಚ್ಚರ| 


ಬೆಂಗಳೂರು(ಅ.23): ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಡಿಜಿಪಿ ಪ್ರವೀಣ್‌ ಸೂದ್‌ ಸೇರಿದಂತೆ ಹಿರಿ-ಕಿರಿಯ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ವಂಚಿಸುತ್ತಿದ್ದ ನಾಲ್ವರು ಸಿಐಡಿ ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ರಾಜಸ್ಥಾನ ಮೂಲದ ಅನ್ಸರ್‌, ಬಲ್ವಿಂದರ್‌ ಸಿಂಗ್‌, ಸದ್ದಾಂ ಹಾಗೂ ಸೈನಿ ಬಂಧಿತರು. ಆರೋಪಿಗಳಿಂದ ಮೊಬೈಲ್‌ ಹಾಗೂ ನಕಲಿ ದಾಖಲೆಗಳು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಶಕೀಲ್‌ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ. ಕೆಲ ತಿಂಗಳಿಂದ ನಿರಂತರವಾಗಿ ಫೇಸ್‌ಬುಕ್‌ ಹಾಗೂ ವಾಟ್ಸಾಪ್‌ಗಳಲ್ಲಿ ಪೊಲೀಸ್‌ ಅಧಿಕಾರಿಗಳ ಭಾವಚಿತ್ರ ಕದ್ದು ನಕಲಿ ಖಾತೆ ತೆರೆದು ಜನರಿಂದ ಹಣ ಪಡೆದು ಮೋಸಗೊಳಿಸುತ್ತಿದ್ದರು. ಐಪಿ ಅಡ್ರೆಸ್‌ ಆಧರಿಸಿ ವಂಚಕ ಜಾಲವನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos

undefined

ಮೊಬೈಲ್‌ ಅಂಗಡಿ ಮಾಲೀಕ ಮಾಸ್ಟರ್‌ ಮೈಂಡ್‌:

ಈ ವಂಚಕರ ತಂಡಕ್ಕೆ ಮೊಬೈಲ್‌ ಅಂಗಡಿ ಮಾಲೀಕ ಅನ್ಸರ್‌ ಮಾಸ್ಟರ್‌ ಮೈಂಡ್‌. ಆತ ಸಿಮ್‌ ಕಾರ್ಡ್‌ ಆಕ್ಟಿವೇಷನ್‌ಗೆ ನಕಲಿ ಆಧಾರ್‌ ಕಾರ್ಡ್‌ಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡುತ್ತಿದ್ದ. ಬಳಿಕ ಏರ್‌ಟೆಲ್‌ ಸಿಮ್‌ ವಿತರಕ ಬಲ್ವಿಂದರ್‌ ಸಿಂಗ್‌, ದಾಖಲೆ ಪರಿಶೀಲಿಸದೆ ಸಿಮ್‌ ಆಕ್ಟಿವೇಷನ್‌ ಮಾಡಿಕೊಡುತ್ತಿದ್ದ. ಇದಕ್ಕೆ ಬೇಕಾದ ನಕಲಿ ಆಧಾರ್‌ಗಳನ್ನು ಸೈನಿ ತಯಾರಿಸುತ್ತಿದ್ದ. ಈ ದಾಖಲೆಗಳನ್ನು ಬಳಸಿ ಬ್ಯಾಂಕ್‌ ಖಾತೆ ಮತ್ತು ವ್ಯಾಲೆಟ್‌ ತೆರೆದು ಸದ್ದಾಂ ವಂಚನೆ ಹಣ ಸ್ವೀಕರಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಡಿಮೆ ಬೆಲೆಗೆ ಸೈಟ್‌ ಆಸೆ ತೋರಿಸಿ 38 ಲಕ್ಷ ಮೋಸ: ಕಂಗಾಲಾದ ವ್ಯಕ್ತಿ

ಫೇಸ್‌ಬುಕ್‌, ಟ್ವಿಟರ್‌ ಮತ್ತು ವಾಟ್ಸಾಪ್‌ಗಳ ಡಿಪಿಗೆ ಪೊಲೀಸರು, ಸರ್ಕಾರಿ ಅಧಿಕಾರಿಗಳು ಮತ್ತು ಗಣ್ಯರು ಅಪ್‌ಲೋಡ್‌ ಮಾಡಿರುವ ಫೋಟೋಗಳನ್ನು ಕದ್ದು, ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆಯುತ್ತಿದ್ದರು. ವಾಟ್ಸಾಪ್‌ ಡಿಪಿಗೆ ಬಳಸುತ್ತಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಸ್ನೇಹಿತರನ್ನು ಗುರುತಿಸಿ ಅವರ ಜೊತೆ ‘ಚಾಟಿಂಗ್‌’ ಶುರು ಮಾಡುತ್ತಿದ್ದರು. ನಂತರ ಕುಶಲೋಪರಿ ಮಾತನಾಡಿಸುತ್ತ ಕಷ್ಟದಲ್ಲಿರುವುದಾಗಿ ಹೇಳಿ ಹಣ ಪಡೆಯುತ್ತಿದ್ದರು. ಹೀಗೆ ರಾಜ್ಯದಲ್ಲಿ ಡಿಜಿಪಿ ಪ್ರವೀಣ್‌ ಸೂದ್‌ ಹಾಗೂ ಐಜಿಪಿ ಹರಿಶೇಖರನ್‌ ಸೇರಿದಂತೆ ಹಲವರ ಹೆಸರಿನಲ್ಲಿ ಮೋಸ ನಡೆದಿದ್ದವು. ಸಿಐಡಿ ಕ್ರೈಂ ವಿಭಾಗದಲ್ಲಿ ಮೂರು ಪ್ರಕರಣ ಸೇರಿದಂತೆ ರಾಜ್ಯದಲ್ಲಿ 10ಕ್ಕೂ ಹೆಚ್ಚು ಎಫ್‌ಐಆರ್‌ ದಾಖಲಾಗಿದ್ದವು.

ಈ ವಂಚನೆಯನ್ನು ಗಂಭೀರವಾಗಿ ಪರಿಗಣಿಸಿದ ಸಿಐಡಿ ಡಿಜಿಪಿ ಪಿ.ಎಸ್‌.ಸಂಧು ಅವರು ಸೈಬರ್‌ ಎಸ್ಪಿ ಡಾ.ರೋಹಿಣಿ ಕಟೋಚ್‌ ಹಾಗೂ ಆರ್ಥಿಕ ಅಪರಾಧಗಳ ವಿಭಾಗದ ಎಸ್‌ಪಿ ಎಂ.ಡಿ.ಶರತ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ರಾಜಸ್ಥಾನದಲ್ಲಿ ವಂಚಕರನ್ನು ಸೆರೆ ಹಿಡಿದಿದ್ದಾರೆ.

ಸರ್ಕಾರ ಯೋಜನೆ ಅರ್ಜಿಗಳು ದುರ್ಬಳಕೆ

ಸರ್ಕಾರದ ಹಲವು ಯೋಜನಗಳಿಗೆ ರಾಜಸ್ಥಾನದ ಭರತ್‌ಪುರದಲ್ಲಿ ಇ-ಮಿತ್ರ ಸೇವಾ ಕೇಂದ್ರಗಳಲ್ಲಿ ಜನರು ಸಲ್ಲಿಸುತ್ತಿದ್ದ ಆಧಾರ್‌, ಪೋಟೋ ಹಾಗೂ ಮತದಾರರ ಗುರುತಿನ ಪತ್ರಗಳನ್ನು ಆರೋಪಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಆ ದಾಖಲೆಗಳನ್ನು ಬಳಸಿಯೇ ನಕಲಿ ಸಿಮ್‌ ಕಾರ್ಡ್‌ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ವಂಚಕರ ಬಗ್ಗೆ ಎಚ್ಚರವಿರಲಿ-ಸಿಐಡಿ

ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಗಣ್ಯರ ಹೆಸರಿನಲ್ಲಿ ಸ್ನೇಹ ಮಾಡುವ ಮುನ್ನ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸಿಐಡಿ ಹೇಳಿದೆ. ಈ ರೀತಿ ವಂಚನೆಗಳ ಬಗ್ಗೆ ಮಾಹಿತಿ ಇದ್ದರೆ ಕೂಡಲೇ ಸೈಬರ್‌ ಅಪರಾಧ ವಿಭಾಗ ದೂರವಾಣಿ ಸಂಖ್ಯೆ 080- 2209 4601ಗೆ ಕರೆ ಮಾಡಿ ಅಥವಾ cybercomplaints@gmail.com ಇಮೇಲ್‌ನಲ್ಲಿ ಮೂಲಕ ಸಂಪರ್ಕಿಸುವಂತೆ ಸಿಐಡಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
 

click me!