ಆರ್.ಟಿ.ನಗರದ ಸೈಯದ್ ಯೂನಸ್ ಫಾಜಿಲ್ ಅಲಿಯಾಸ್ ಮುದಾಸಿರ್, ಭಾರತಿನಗರದ ಮೊಹಮ್ಮದ್ ಕಲೀಮುಲ್ಲಾ, ಬನಶಂಕರಿ ಹತ್ತಿರದ ಕಾವೇರಿನಗರದ ಸೈಯದ್ ಅರ್ಬಾಜ್ ಹಾಗೂ ಫ್ರೇಜರ್ ಟೌನ್‌ನ ಇಬ್ರಾಹಿಂ ಕರ್ನೂಲ್ ಬಂಧಿತರಾಗಿದ್ದು, ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ₹60 ಲಕ್ಷವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಬೆಂಗಳೂರು(ನ.29): ಆನ್‌ಲೈನ್‌ನಲ್ಲಿ ಅರೆಕಾಲಿಕ (ಪಾರ್ಟ್ ಟೈಮ್) ಕೆಲಸ ಕೊಡಿಸುವುದಾಗಿ ನಂಬಿಸಿ ಜನರಿಂದ ₹40 ಕೋಟಿಗೂ ಅಧಿಕ ಮೊತ್ತ ವಸೂಲಿ ಮಾಡಿ ವಂಚಿಸಿದ್ದ ನಾಲ್ವರು ಮೋಸಗಾರರು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆರ್.ಟಿ.ನಗರದ ಸೈಯದ್ ಯೂನಸ್ ಫಾಜಿಲ್ ಅಲಿಯಾಸ್ ಮುದಾಸಿರ್, ಭಾರತಿನಗರದ ಮೊಹಮ್ಮದ್ ಕಲೀಮುಲ್ಲಾ, ಬನಶಂಕರಿ ಹತ್ತಿರದ ಕಾವೇರಿನಗರದ ಸೈಯದ್ ಅರ್ಬಾಜ್ ಹಾಗೂ ಫ್ರೇಜರ್ ಟೌನ್‌ನ ಇಬ್ರಾಹಿಂ ಕರ್ನೂಲ್ ಬಂಧಿತರಾಗಿದ್ದು, ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ₹60 ಲಕ್ಷವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ಗಳು, ಸಿಮ್ ಕಾರ್ಡ್‌ಗಳು ಹಾಗೂ ವಿವಿಧ ಕಂಪನಿಗಳ ಸೀಲ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಹುಸೇನ್ ಹಾಗೂ ಮೊಯಿನ್ ಪತ್ತೆಗೆ ತನಿಖೆ ಮುಂದುವರೆದಿದೆ.
undefined
ಓದಿದ್ದು SSLC..ಗಳಿಸಿದ್ದು ಕೋಟಿ ಕೋಟಿ..! ಮೋಸಗಾರ ಸುಕೇಶ್ ತಗಲಾಕಿಕೊಂಡಿದ್ದು ಹೇಗೆ..?
ಕಳೆದ ಸೆಪ್ಟೆಂಬರ್‌ನಲ್ಲಿ ಆನ್‌ಲೈನ್ ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ₹88 ಸಾವಿರ ಕಳೆದುಕೊಂಡ ಬಗ್ಗೆ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ಪೂಜಾ ಸಾವಂತ್ ದೂರು ನೀಡಿದ್ದರು. ಅದರನ್ವಯ ಡಿಸಿಪಿ ಲಕ್ಷ್ಮೀಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ನೇತೃತ್ವದ ತಂಡವು, ಬ್ಯಾಂಕ್ ಖಾತೆಗಳ ವಿವರ ಬೆನ್ನುಹತ್ತಿ ವಂಚಕರನ್ನು ಸೆರೆ ಹಿಡಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
305 ಜನರಿಗೆ ಟೋಪಿ- ₹40 ಕೋಟಿ ವಂಚನೆ:
ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಅರೆಕಾಲಿಕ ಉದ್ಯೋಗ ಕೊಡಿಸುವುದಾಗಿ ಪ್ರಕಟಿಸಿದ್ದರು. ಈ ಮಾತು ನಂಬಿದ ಜನರಿಗೆ ವಿವಿಧ ಟಾಸ್ಕ್ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುವುದಾಗಿ ಹೇಳಿ ಆರೋಪಿಗಳು ಹಣ ವಸೂಲಿ ಮಾಡಿದ್ದರು. ಅಲ್ಲದೆ ತಾವು ನೀಡುವ ವಿವಿಧ ಪ್ರಾಡಕ್ಟ್‌ಗಳನ್ನು ಖರೀದಿ ಮಾಡಿದರೆ ಲಾಭ ಬರುವುದಾಗಿ ನಂಬಿಸಿ ಕೂಡ ಜನರಿಂದ ಹಣ ಸುಲಿಗೆ ಮಾಡಿದ್ದರು. ಹೀಗೆ 304 ಜನರಿಗೆ ಆರೋಪಿಗಳು ವಂಚಿಸಿ ₹40 ಕೋಟಿ ಲಪಟಾಟಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಕಲಿ ದಾಖಲೆ ನೀಡಿ ಬ್ಯಾಂಕ್ ಖಾತೆ ಸೃಷ್ಟಿ
ಆನ್‌ಲೈನ್ ವಂಚನೆ ಕೃತ್ಯದಲ್ಲಿ ಗಳಿಸಿದ ಹಣವನ್ನು ದೋಚಲು ಅನ್ಯರ ಹೆಸರಲ್ಲಿ ಚಾಲ್ತಿ ಖಾತೆಗಳನ್ನು ಆರೋಪಿಗಳು ತೆರೆದಿದ್ದರು. ಇದಕ್ಕಾಗಿ ಅಂಗಡಿಗಳನ್ನು ಬಾಡಿಗೆ ಪಡೆದು ನಕಲಿ ಕರಾರು ಪತ್ರಗಳನ್ನು ಸೃಷ್ಟಿಸಿ ಆ ಅಂಗಡಿಗಳಿಗೆ ವಿವಿಧ ಕಂಪನಿಗಳ ಹೆಸರುಗಳನ್ನಿಟ್ಟು ಯೂನಸ್, ಕಲೀಮುಲ್ಲಾ ಹಾಗೂ ಅರ್ಬಾಜ್ ಚಾಲ್ತಿ ಖಾತೆಗಳನ್ನು ತೆರೆಯುತ್ತಿದ್ದರು. ಈ ಬ್ಯಾಂಕ್ ಖಾತೆಗಳಿಗೆ ಮೊಬೈಲ್ ನಂಬರನ್ನು ಲಿಂಕ್ ಮಾಡಲು ಅಗತ್ಯವಿದ್ದ ಸಿಮ್‌ಗಳನ್ನು ಫ್ರೇಜರ್ ಟೌನ್‌ನ ಮೊಬೈಲ್ ಅಂಗಡಿ ಮಾಲಿಕ ಇಬ್ರಾಹಿಂ ಪೂರೈಸುತ್ತಿದ್ದ. ಯಾವುದೇ ದಾಖಲಾತಿಗಳನ್ನು ಪಡೆಯದೆ ಸಾರ್ವಜನಿಕರು ನೀಡಿದ್ದ ದಾಖಲೆಗಳನ್ನು ನಕಲು ಮಾಡಿ ತನ್ನ ಸಹಚರರಿಗೆ ಆತ ಸಿಮ್ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಇನ್‌ಸ್ಪೆಕ್ಟರ್‌ಗೆ ನಾಮ ಹಾಕಿದ ವಂಚಕರು: ಖಾತೆಯಲ್ಲಿದ್ದ ಲಕ್ಷ-ಲಕ್ಷ ಹಣ ಮಂಗಮಾಯ!
ದುಬೈನಲ್ಲಿ ಕುಳಿತು ಕೃತ್ಯ?
ಮಹಾರಾಷ್ಟ್ರದ ಮುಂಬೈನ ಹುಸೇನ್ ಈ ಕೃತ್ಯದ ಕಿಂಗ್‌ಪಿನ್ ಆಗಿದ್ದು, ದುಬೈನಲ್ಲೇ ಕುಳಿತೇ ಸೈಬರ್ ವಂಚನೆಯಲ್ಲಿ ಆತ ತೊಡಗಿದ್ದಾನೆ. ತನ್ನ ಸಹಚರ ಮೊಹಿನ್ ಮೂಲಕ ಇನ್ನುಳಿದ ಆರೋಪಿಗಳನ್ನು ಹುಸೇನ್ ಪರಿಚಯಿಸಿಕೊಂಡಿದ್ದ. ಬ್ಯಾಂಕ್ ಖಾತೆಗಳನ್ನು ತೆರೆಯಲು ತಲಾ ಖಾತೆಗೆ ₹75 ಸಾವಿರ ಹಾಗೂ ತಲಾ ಸಿಮ್ ಕಾರ್ಡ್‌ಗೆ ₹500 ಹಣವನ್ನು ಹುಸೇನ್ ಕೊಡುತ್ತಿದ್ದ. ತಿಂಗಳಿಗೊಮ್ಮೆ ದುಬೈನಿಂದ ನಗರಕ್ಕೆ ಬಂದು ಬ್ಯಾಂಕ್ ವಿವರಗಳನ್ನು ಸಂಗ್ರಹಿಸಿ ಆತ ಮರಳುತ್ತಿದ್ದ. ಬಳಿಕ ಈ ಮಾಹಿತಿ ಪಡೆದು ಆತ ವಂಚನೆ ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
26 ಖಾತೆಗಳಲ್ಲಿ ₹40 ಕೋಟಿ
ವಂಚನೆ ಕೃತ್ಯದ ಆರೋಪಿಗಳಿಂದ 30 ಬ್ಯಾಂಕ್ ಖಾತೆಗಳ ವಿವರ ಸಿಕ್ಕಿದ್ದು, ಅದರಲ್ಲಿ 26 ಖಾತೆಗಳಲ್ಲಿ ₹40 ಕೋಟಿ ವರ್ಗಾವಣೆ ನಡೆದಿರುವ ಮಾಹಿತಿ ಸಿಕ್ಕಿದೆ. ಇನ್ನುಳಿದ ಖಾತೆಗಳ ಪರಿಶೀಲಿಸಿದಾಗ ವಂಚನೆ ಕೃತ್ಯದ ಮೊತ್ತವು ಹೆಚ್ಚಾಗಬಹುದು. ಐದು ತಿಂಗಳ ಅವಧಿಯಲ್ಲಿ ಆರೋಪಿಗಳು ಈ ವಂಚನೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.