
ಮುಂಬೈ(ಡಿ.05): ಕೊರೋನಾ ವೈರಸ್‌ನಿಂದಾಗಿ ಕುಸಿದ ದೇಶದ ಆರ್ಥಿಕತೆ ನಿರೀಕ್ಷೆಗಿಂತ ಬೇಗ ಚೇತರಿಸಿಕೊಳ್ಳುತ್ತಿದ್ದು, ಒಟ್ಟಾರೆ ಈ ವರ್ಷದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದಲ್ಲಿ ಕುಸಿತ ಕೂಡ ಈ ಹಿಂದಿನ ಲೆಕ್ಕಾಚಾರಕ್ಕಿಂತ ಕಡಿಮೆಯಾಗಲಿದೆ ಎಂಬ ಸಿಹಿ ಸುದ್ದಿ ಹೊರಬಿದ್ದಿದೆ. ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ)ನ ಹಣಕಾಸು ನೀತಿ ಸಮಿತಿಯ ಸಭೆ ನಂತರ ಶುಕ್ರವಾರ ಗವರ್ನರ್ ಶಕ್ತಿಕಾಂತ ದಾಸ್ ಈ ಕುರಿತ ಅಂಕಿಅಂಶ ಪ್ರಕಟಿಸಿದ್ದಾರೆ.
‘ದೇಶದ ಆರ್ಥಿಕತೆ ನಾವಂದುಕೊಂಡಿದ್ದಕ್ಕಿಂತ ಬೇಗ ಚೇತರಿಸಿಕೊಳ್ಳುತ್ತಿದೆ. ಈಗ ನಡೆಯುತ್ತಿರುವ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲೇ ಜಿಡಿಪಿ ಬೆಳವಣಿಗೆ ದರ ಋುಣಾತ್ಮಕತೆಯಿಂದ ಧನಾತ್ಮಕತೆಗೆ ತಿರುಗಿ ಶೇ.0.1ರಷ್ಟುಬೆಳವಣಿಗೆ ಕಾಣಲಿದೆ. ನಂತರ ಜನವರಿ-ಮಾಚ್‌ರ್ ತ್ರೈಮಾಸಿಕದಲ್ಲಿ ಶೇ.0.7ರಷ್ಟುಬೆಳವಣಿಗೆ ಕಾಣಲಿದೆ. ಹೀಗಾಗಿ 2020-21ನೇ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಈ ಮೊದಲಿನ ಅಂದಾಜಿನಂತೆ ಶೇ.-9.5ರಷ್ಟುಕುಸಿಯುವ ಬದಲು ಶೇ.-7.5ರಷ್ಟುಕುಸಿಯಲಿದೆ. ಒಟ್ಟಾರೆಯಾಗಿ ದೇಶದ ಆರ್ಥಿಕ ಸ್ಥಿತಿಗತಿ ಆಶಾದಾಯಕವಾಗಿದೆ’ ಎಂದು ದಾಸ್ ತಿಳಿಸಿದ್ದಾರೆ.
ಹಣದುಬ್ಬರ ಹೆಚ್ಚುತ್ತಿರುವುದರಿಂದ ಸತತ 3ನೇ ಬಾರಿ ಹಣಕಾಸು ನೀತಿ ಪರಿಷ್ಕರಣೆಯಲ್ಲಿ ಆರ್‌ಬಿಐ ಸಾಲದ ಮೇಲಿನ ಬಡ್ಡಿ ದರಗಳನ್ನು ಬದಲಾವಣೆ ಮಾಡಿಲ್ಲ. ಈ ಬಾರಿಯೂ ರೆಪೋ ದರವನ್ನು ಶೇ.4ಕ್ಕೇ ಸ್ಥಿರಗೊಳಿಸಿದ್ದು, ಅದರಿಂದಾಗಿ ಬ್ಯಾಂಕ್ ಸಾಲ ಹಾಗೂ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರಗಳು ಇನ್ನು ಕೆಲ ತಿಂಗಳು ಬದಲಾಗುವುದಿಲ್ಲ. ಇದೇ ವೇಳೆ, 2020ರ ಮಾಚ್‌ರ್‍ಗೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ದೇಶದ ವಾಣಿಜ್ಯ ಬ್ಯಾಂಕುಗಳು ಹಾಗೂ ಕೋ ಆಪರೇಟಿವ್ ಬ್ಯಾಂಕುಗಳು ಷೇರುದಾರರಿಗೆ ಲಾಭಾಂಶ (ಡಿವಿಡೆಂಡ್) ವಿತರಿಸಬಾರದು ಎಂದು ಆರ್‌ಬಿಐ ಆದೇಶ ನೀಡಿದೆ.
ಶೀಘ್ರದಲ್ಲೇ ವಾರವಿಡೀ ಆರ್‌ಟಿಜಿಎಸ್:
ಬ್ಯಾಂಕುಗಳ ಮೂಲಕ 2 ಲಕ್ಷ ರು.ಗಿಂತ ಹೆಚ್ಚಿನ ಮೊತ್ತದ ಹಣವನ್ನು ಆನ್‌ಲೈನ್ ವರ್ಗಾವಣೆ ಮಾಡುವುದಕ್ಕಾಗಿ ಇರುವ ರಿಯಲ್ ಟೈಮ್ ಗ್ರಾಸ್ ಸೆಟ್‌್ಲಮೆಂಟ್ (ಆರ್‌ಟಿಜಿಎಸ್) ಸೌಕರ್ಯವನ್ನು ಶೀಘ್ರದಲ್ಲೇ ಗ್ರಾಹಕರಿಗೆ ವಾರವಿಡೀ ಲಭಿಸುವಂತೆ ಮಾಡುವುದಾಗಿ ಆರ್‌ಬಿಐ ಪ್ರಕಟಿಸಿದೆ. ಈ ವ್ಯವಸ್ಥೆ ಇನ್ನು ಕೆಲ ದಿನಗಳಲ್ಲಿ ವರ್ಷಪೂರ್ತಿ ಹಾಗೂ ವಾರದ ಎಲ್ಲಾ ದಿನ, ದಿನದ 24 ಗಂಟೆಯೂ ಲಭಿಸಲಿದೆ. ಇದರಿಂದ ಉದ್ಯಮಿಗಳ ಹಣಕಾಸು ವ್ಯವಹಾರಕ್ಕೆ ಹೆಚ್ಚು ಅನುಕೂಲವಾಗಲಿದೆ. ಇಷ್ಟುದಿನ ಇದು ವಾರದ ಐದು ದಿನ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮಾತ್ರ ಲಭ್ಯವಿತ್ತು.
ಕಾಂಟಾಕ್ಟ್ಲೆಸ್ ಪಾವತಿ 5000ಕ್ಕೆ ಏರಿಕೆ:
ಪ್ಲಾಸ್ಟಿಕ್ ಕಾರ್ಡ್‌ಗಳನ್ನು ಸ್ವೈಪ್ ಮಾಡದೆ ಸಂಪರ್ಕರಹಿತವಾಗಿ ಹಣ ಪಾವತಿಸುವ ವ್ಯವಸ್ಥೆಗಿದ್ದ ಮಿತಿಯನ್ನು 2000 ರು.ಗಳಿಂದ 5000 ರು.ಗಳಿಗೆ ಏರಿಸಲು ಆರ್‌ಬಿಐ ನಿರ್ಧರಿಸಿದೆ. 2021ರ ಜನವರಿ 1ರಿಂದ ಇದು ಜಾರಿಗೆ ಬರಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.