Repo Rate:ಏರುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಮತ್ತೆ ರೆಪೋ ದರ ಹೆಚ್ಚಿಸಲಿದೆಯಾ RBI?

By Suvarna NewsFirst Published May 20, 2022, 4:59 PM IST
Highlights

*ಮೇ ಮೊದಲ ವಾರ ರೆಪೋ ದರ ಏರಿಕೆ ಮಾಡಿದ್ದ ಆರ್ ಬಿಐ
*ಏಪ್ರಿಲ್ ತಿಂಗಳಲ್ಲಿ 8 ವರ್ಷಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ
*ಮುಂದಿನ ತಿಂಗಳು ಆರ್ ಬಿಐ ಮತ್ತೆ ರೆಪೋ ದರ ಏರಿಕೆ ಮಾಡೋ ಸಾಧ್ಯತೆ

ನವದೆಹಲಿ (ಮೇ 20): ಏರುತ್ತಿರುವ ಹಣದುಬ್ಬರ (Inflation) ನಿಯಂತ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗಷ್ಟೇ ರೆಪೋ ದರ (Repo rate) ಹೆಚ್ಚಳ ಮಾಡಿತ್ತು. ಆದರೆ, ಹಣದುಬ್ಬರಕ್ಕೆ ಇನ್ನೂ ಬಿಗಿಯಾಗಿ ಲಗಾಮು ಹಾಕಲು ಮುಂದಿನ ತಿಂಗಳ ಮೊದಲ ವಾರ ಆರ್ ಬಿಐ ರೆಪೋ ದರವನ್ನು (Repo rate) ಮತ್ತಷ್ಟು ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಆರ್ ಬಿಐ (RBI) ಹಣಕಾಸು ಪರಾಮರ್ಶೆ ಸಭೆ ಜೂನ್ 6ರಿಂದ 8ರ ತನಕ ನಡೆಯಲಿದೆ. ಹಣದುಬ್ಬರ ಮಿತಿ ಮೀರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಭೆಯಲ್ಲಿ ಆರ್ ಬಿಐ ರೆಪೋ ದರವನ್ನು ಕನಿಷ್ಠ 50 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ನೋಮುರಾ ಹೋಲ್ಡಿಂಗ್ಸ್‌ ಇಂಕ್‌ ( Nomura Holdings Inc.), ಬರ್ಕ್ಲೇಸ್‌ ಪಿಎಲ್‌ಸಿ (Barclays Plc) ಮತ್ತಿತರ ಸಂಸ್ಥೆಗಳ ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. 

ಭಾರತದ ಆರ್ಥಿಕ ಪ್ರಗತಿ 6.4: ವಿಶ್ವದಲ್ಲೇ ಭಾರತ ನಂ.1

ಈ ತಿಂಗಳ ಮೊದಲ ವಾರ ಆರ್ ಬಿಐ ರೆಪೋ ದರವನ್ನು 40 ಮೂಲ ಅಂಕಗಳಷ್ಟು ಏರಿಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು. ಇದ್ರಿಂದ ರೆಪೋದರ ಈ ಹಿಂದಿನ ಶೇ.4ರಿಂದ ಶೇ.4.40ಕ್ಕೆ ಏರಿಕೆಯಾಗಿದೆ. ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರ (Retail Inflation) ಗರಿಷ್ಠ ಸಹನಾ ಮಟ್ಟವನ್ನು ಮೀರಿದ ಹಿನ್ನೆಲೆಯಲ್ಲಿ ರೆಪೋ ದರ ಏರಿಕೆ ಮಾಡುತ್ತಿರುವುದಾಗಿ ಆರ್ ಬಿಐ ತಿಳಿಸಿತ್ತು. 

ಬಡ್ಡಿದರ ಏರಿಕೆ
ಆರ್ ಬಿಐ ರೆಪೋ ದರ ಏರಿಕೆ ಮಾಡಿದ ಬೆನ್ನಲ್ಲೇ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳು ಒಂದರ ಹಿಂದೆ ಮತ್ತೊಂದರಂತೆ ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿವೆ. ಈಗಾಗಲೇ ಎಚ್ ಡಿಎಫ್ ಸಿ ಬ್ಯಾಂಕ್ (HDFC bank), ಆಕ್ಸಿಸ್ ಬ್ಯಾಂಕ್ (Axis Bank), ಕೆನರಾ ಬ್ಯಾಂಕ್ (Canara Bank), ಬ್ಯಾಂಕ್ ಆಫ್ ಮಹಾರಾಷ್ಟ್ರ (Bank Of Maharastra), ಕೆನರಾ ಬ್ಯಾಂಕ್ (Canara Bank) ಹಾಗೂ ಇಂಡಿಯನ್ ಓವರ್‌ಸೀಸ್ (Indian Oversis) ಬ್ಯಾಂಕ್ ಗಳು ಸಾಲದ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿವೆ. ಇದರಿಂದ ವಾಹನ ಹಾಗೂ ಗೃಹ ಸಾಲಗಳ ಇಎಂಐ ಕೂಡ ಹೆಚ್ಚಲಿದ್ದು, ಗ್ರಾಹಕರ ಮೇಲಿನ ಹೊರೆ ಹೆಚ್ಚಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬ್ಯಾಂಕುಗಳು ಬಡ್ಡಿದರ ಹೆಚ್ಚಳ ಮಾಡುವ ನಿರೀಕ್ಷೆಯಿದೆ. 

Price Hike: ಸೋಪು, ಶ್ಯಾಂಪುನಿಂದ ಹಿಡಿದು ಟಿವಿ, ಎಸಿ ತನಕ ಎಲ್ಲವೂ ದುಬಾರಿ; ಇದಕ್ಕೇನು ಕಾರಣ? ಇಲ್ಲಿದೆ ಮಾಹಿತಿ

ಎಲ್ಲೆ ಮೀರಿದ ಚಿಲ್ಲರೆ ಹಣದುಬ್ಬರ
ದೇಶದಲ್ಲಿ ಚಿಲ್ಲರೆ (Retail) ಹಣದುಬ್ಬರ (Inflation) ಏಪ್ರಿಲ್ (April) ತಿಂಗಳಲ್ಲಿ 8 ವರ್ಷಗಳ ಗರಿಷ್ಠ ಮಟ್ಟ ಶೇ.7.79 ಏರಿಕೆಯಾಗಿದೆ. ಈ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿರೋ ಶೇ.6ರ ಗರಿಷ್ಠ ಸಹನಾ ಮಟ್ಟವನ್ನು (Tolerance level) ಸತತ ನಾಲ್ಕನೇ ಬಾರಿ ಮೀರಿದೆ. ಚಿಲ್ಲರೆ ಹಣದುಬ್ಬರ (Retail Inflation) ಏರಿಕೆಗೆ ಕಾರಣವಾಗಿರುವ ಆಹಾರ ಹಣದುಬ್ಬರ (Food inflation) ಶೇ.8.38ಕ್ಕೆ ಏರಿಕೆ ದಾಖಲಿಸಿದ್ದು, ಇದು ಈ ಹಣಕಾಸು ಸಾಲಿನಲ್ಲೇ ಈ ತನಕದ ಅತ್ಯಧಿಕ ಏರಿಕೆಯಾಗಿದೆ. ಕಳೆದ ತಿಂಗಳು ಅಂದ್ರೆ ಮಾರ್ಚ್ ನಲ್ಲಿ ಆಹಾರ ಹಣದುಬ್ಬರ ಶೇ.7.68ರಷ್ಟಿತ್ತು. 2021ರಲ್ಲಿ ಆಹಾರ ಹಣದುಬ್ಬರ ಶೇ.1.96ರಷ್ಟಿತ್ತು. ಅಂದ್ರೆ ಕೇವಲ ಒಂದು ವರ್ಷದ ಅವಧಿಯಲ್ಲಿ ಆಹಾರ ಹಣದುಬ್ಬರ ತೀವ್ರ ಗತಿಯ ಏರಿಕೆ ದಾಖಲಿಸಿದೆ. ಚಿಲ್ಲರೆ ಹಣದುಬ್ಬರದ ಪ್ರಭಾವ ಈಗಾಗಲೇ ವಿವಿಧ ಉತ್ಪನ್ನಗಳ ಬೆಲೆಯ ಮೇಲೆ ಆಗಿದ್ದು, ಸೋಪು, ಶಾಂಪುವಿನಿಂದ ಹಿಡಿದು ಟಿವಿ, ಫ್ರಿಜ್ ತನಕ ಎಲ್ಲವೂ ದುಬಾರಿಯಾಗಿದೆ. ಅಡುಗೆ ಅನಿಲ, ತರಕಾರಿ, ಗೋಧಿ ಹಿಟ್ಟು, ಧಾನ್ಯಗಳು ಹೀಗೆ ನಿತ್ಯ ಬಳಕೆ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. 

click me!