ಆಹಾರ ಪದಾರ್ಥಗಳ ಬೆಲೆಯೇರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಖುಷಿಯ ಸುದ್ದಿಯಿದೆ.ಅದೇನೆಂದ್ರೆ ಜೂನ್ ಬಳಿಕ ಧಾನ್ಯಗಳು ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.
ನವದೆಹಲಿ (ಏ.27): ನಿತ್ಯ ಬಳಕೆ ವಸ್ತುಗಳ ಬೆಲೆಯೇರಿಕೆಯಿಂದ ಜನಸಾಮಾನ್ಯರು ಪ್ರತಿದಿನ ಸಂಕಷ್ಟ ಎದುರಿಸುವಂತಾಗಿದೆ. ಹಣದುಬ್ಬರ, ಪೆಟ್ರೋಲ್ -ಡೀಸೆಲ್ , ಆಹಾರ ಉತ್ಪನ್ನಗಳು ಅಥವಾ ಇತರ ಯಾವುದೇ ವಸ್ತುಗಳ ಬೆಲೆಯೇರಿಕೆಯಿಂದ ಜನಸಾಮಾನ್ಯರು ಸಂಕಷ್ಟ ಪಡುವಂತಾಗಿದೆ. ಧಾನ್ಯಗಳು ಸೇರಿದಂತೆ ಆಹಾರ ಪದಾರ್ಥಗಳ ಬೆಲೆಯೇರಿಕೆಯಿಂದ ಚಿಂತಿತರಾಗಿರೋಗಿ ನೆಮ್ಮದಿಯ ಸುದ್ದಿಯೊಂದಿದೆ. ಭಾರತೀಯ ಮಾಪನಶಾಸ್ತ್ರ ಇಲಾಖೆ (ಐಎಂಡಿ) ಅಂದಾಜಿನ ಪ್ರಕಾರ ಆಹಾರ ಪದಾರ್ಥಗಳ ಬೆಲೆ ಜೂನ್ ಒಳಗೆ ತಗ್ಗುವ ನಿರೀಕ್ಷೆಯಿದೆ. ಏಕೆಂದ್ರೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿರುವ ಕಾರಣ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ. ಇದನ್ನು ತಲೆಯಲ್ಲಿಟ್ಟುಕೊಂಡಿರುವ ಹಣಕಾಸು ಸಚಿವಾಲಯ 2024ರ ಮಾರ್ಚ್ ಮಾಸಿಕ ಆರ್ಥಿಕ ಪರಿಷ್ಕರಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಮಳೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿರುವ ಕಾರಣ ಅಧಿಕ ಧಾನ್ಯಗಳ ಉತ್ಪಾದನೆಯಾಗುವ ನಿರೀಕ್ಷೆಯಿದೆ.
ಹಣಕಾಸು ಸಚಿವಾಲಯದ ಮಾಸಿಕ ಆರ್ಥಿಕ ಪರಿಷ್ಕರಣೆ ಮಾರ್ಚ್ 2024ರ ಪ್ರಕಾರ ಮಳೆಗಾಲದಲ್ಲಿ ಮಳೆಯ ಪ್ರಮಾಣ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿರಲಿದೆ, ಹೀಗಾಗಿ ಆಹಾರ ಪದಾರ್ಥಗಳ ಬೆಲೆ ತಗ್ಗಲಿದೆ ಎಂದು ಐಎಂಡಿ ಅಂದಾಜಿಸಿದೆ. ಇದು ಹೆಚ್ಚಿನ ಉತ್ಪಾದನೆ, ಮಳೆಯ ಉತ್ತಮ ವಿತರಣೆ ಮುಂತಾದ ಅಂಶಗಳನ್ನು ಆಧರಿಸಿದೆ ಎಂದು ತಿಳಿಸಿದೆ. ಭಾರತದಲ್ಲಿ ಆಹಾರ ಹಣದುಬ್ಬರ ಫೆಬ್ರವರಿಯಲ್ಲಿ ಶೇ.8.7ರಿಂದ ಮಾರ್ಚ್ ನಲ್ಲಿ ಶೇ. 8.5ಕ್ಕೆ ಇಳಿಕೆಯಾಗಿದೆ.
ಏಷ್ಯಾದಲ್ಲೇ ಪಾಕಿಸ್ತಾನ ಅತ್ಯಂತ ದುಬಾರಿ ರಾಷ್ಟ್ರ,ಇಲ್ಲಿ ಜೀವನ ನಿರ್ವಹಣೆ ಬಲುಕಷ್ಟ; ಎಡಿಬಿ ವರದಿ
ತರಕಾರಿಗಳು ಹಾಗೂ ಕಾಳುಗಳ ಬೆಲೆ ಅಧಿಕವಾಗಿರುವ ಕಾರಣ ಆಹಾರ ಹಣದುಬ್ಬರ ಹೆಚ್ಚಿದೆ. ಯಾವುದೇ ಆಹಾರ ಧಾನ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸದಂತೆ ಶೇಖರಣೆ ಮೇಲೆ ಮಿತಿ ವಿಧಿಸಲಾಗಿದೆ. ಪ್ರಮುಖ ಆಹಾರ ಧಾನ್ಯಗಳ ಬೆಲೆ ದೃಢಗೊಳಿಸುವ ಜೊತೆಗೆ ನಿಯಮಿತ ತೆರೆದ ಮಾರುಕಟ್ಟೆ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ.
ಹೊಸ ಅಂತಾರಾಷ್ಟ್ರೀಯ ಮಾರುಕಟ್ಟೆ ಜೊತೆಗೆ ಒಪ್ಪಂದ
ಕಾಳುಗಳ ಆಮದಿಗೆ ಸಂಬಂಧಿಸಿ ಬ್ರೆಜಿಲ್ ಹಾಗೂ ಅರ್ಜೆಂಟೈನದಂತಹ ಹೊಸ ಮಾರುಕಟ್ಟೆಗಳ ಜೊತೆಗೆ ದೀರ್ಘಾವಧಿಯ ಒಪ್ಪಂದಕ್ಕೆ ಸರ್ಕಾರ ಮುಂದಾಗಿದೆ. 20,000 ಟನ್ ಉದ್ದನ್ನು ಬ್ರೆಜಿಲ್ ನಿಂದ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ನು ಅರ್ಜೆಂಟೈನಾದಿಂದ ತೊಗರಿ ಬೇಳೆ ಆಮದಿಗೆ ಸಂಬಂಧಿಸಿ ಕೊನೆಯ ಹಂತದಲ್ಲಿ ಒಪ್ಪಂದಗಳು ನಡೆಯುತ್ತಿವೆ. ಹೀಗೆ ದೇಶದಲ್ಲಿ ಉತ್ಪಾದನೆ ಕುಂಠಿತಗೊಂಡಿರುವ ಧಾನ್ಯಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಮೂಲಕ ಅವುಗಳ ಕೊರತೆಯನ್ನು ನೀಗಿಸುವ ಮೂಲಕ ಬೆಲೆ ಇಳಿಕೆಗೆ ಸರ್ಕಾರ ಮುಂದಾಗಿದೆ. ಈ ಕ್ರಮ ಕೂಡ ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಇಳಿಕೆಗೆ ಕಾರಣವಾಗಲಿದೆ.
ಜಪಾನ್, ಬ್ರಿಟನ್ ಬಳಿಕ ಜರ್ಮನಿಗೀಗ ಆರ್ಥಿಕ ಹಿಂಜರಿತ
ಎಫ್‌ಎಂಸಿಜೆ ಹಣದುಬ್ಬರ ಏರಿಕೆ
ದೇಶದಲ್ಲಿ ದೈನಂದಿನ ಬಳಕೆಯ ವಸ್ತುಗಳ (ಎಫ್‌ಎಂಸಿಜೆ) ಮೇಲಿನ ಹಣದುಬ್ಬರ ಏರಿಕೆಯಾಗುತ್ತಿರುವ ಕಾರಣ, ಹಲವು ಕಂಪನಿಗಳು ತಮ್ಮ ಆಹಾರ ಉತ್ಪನ್ನಗಳ ಬೆಲೆಯನ್ನು ಶೇ.2-4ರಷ್ಟು ಏರಿಸಲು ಮುಂದಾಗಿದೆ. ಈ ಮೂಲಕ ಬಿಸ್ಕತ್ತು, ತಂಪು ಪಾನೀಯ, ಪ್ಯಾಕೇಜ್ ಆಹಾರ ಪದಾರ್ಥಗಳ ಬೆಲೆ ಏರಿಕೆ ನಿಚ್ಚಳವಾಗಿದೆ. ದೇಶದ ಬೃಹತ್ ಎಫ್‌ಎಂಜಿಸಿ ಕಂಪನಿಗಳಲ್ಲಿ ಒಂದಾದ ಹಿಂದುಸ್ತಾನ್ ಯುನಿಲಿವರ್ ಶೀಘ್ರದಲ್ಲಿ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ. ಇನ್ನು ಡಾಬರ್ ತನ್ನ ಎಲ್ಲ ಪದಾರ್ಥಗಳ ಮೇಲಿನ ದರವನ್ನು ಶೇ.2.5ರಷ್ಟು ಏರಿಸುವುದಾಗಿ ತಿಳಿಸಿದೆ. ಅಲ್ಲದೆ, ಇಮಾಮಿ ಕಂಪನಿಯು ಶೇ.3ರಷ್ಟು ಬೆಲೆ ಏರಿಸಲು ಮುಂದಾಗಿದೆ.
ಆಹಾರ ಪದಾರ್ಥಗಳ ಬೆಲೆಗಳಲ್ಲಿ ತಿಂಗಳಿಂದ ತಿಂಗಳಿಗೆ ಇಳಿಕೆ ಕಂಡುಬರುತ್ತಿದೆ. 2023ರ ಡಿಸೆಂಬರ್ ನಿಂದ ಆಹಾರ ಬೆಲೆ ಸೂಚ್ಯಂಕದಲ್ಲಿ ಶೇ.0.7ರಷ್ಟು ಇಳಿಕೆ ಕಂಡುಬಂದಿದೆ. ಇನ್ನು ಆಹಾರ ಪದಾರ್ಥಗಳಲ್ಲಿ ತರಕಾರಿಗಳ ಬೆಲೆ ಸೂಚ್ಯಂಕದಲ್ಲಿ ತಿಂಗಳಿಂದ ತಿಂಗಳಿಗೆ ಶೇ.4.2ರಷ್ಟು ಇಳಿಕೆಯಾಗಿದೆ. ಇನ್ನು ಹಣ್ಣುಗಳ ಬೆಲೆಗಳಲ್ಲಿ ಶೇ.2.0ರಷ್ಟು ಇಳಿಕೆ ಕಂಡುಬಂದಿದೆ.