ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಟೆಲ್‌ ತಿಂಡಿ-ತಿನಿಸು ದರ ಏರಿಕೆ

By Gowthami KFirst Published Jul 22, 2023, 11:07 AM IST
Highlights

ಆಗಸ್ಟ್ 1ರಿಂದ ಹಾಲಿನ ದರ ಏರಿಕೆ ಹಿನ್ನೆಲೆ ಹೋಟೆಲ್‌ ತಿಂಡಿ-ತಿನಿಸು ದರ ಏರಿಕೆಗೆ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರು (ಜು.22): ಆಗಸ್ಟ್ 1ರಿಂದ ಹಾಲಿನ ದರ ಏರಿಕೆ ಹಿನ್ನೆಲೆ ಹೋಟೆಲ್‌ ತಿಂಡಿ-ತಿನಿಸು ದರ ಏರಿಕೆಗೆ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಹೇಳಿಕೆ ನೀಡಿದ್ದಾರೆ. ತಿಂಡಿ ಜೊತೆಗೆ ಕಾಫಿ-ಟೀ ದರವೂ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಕನಿಷ್ಟ ಶೇ.10ರಷ್ಟು ದರ ಏರಿಕೆ ನಿರ್ಧರಿಸಲಾಗಿದೆ. ಕೆಲ ಹೋಟೆಲ್ ನವರು ಶೇ. 20ರಷ್ಟು ಹೆಚ್ಚಿಸಬೇಕೆಂದು ಅಭಿಪ್ರಾಯಪಡುತ್ತಿದ್ದಾರೆ. ದರ ಹೆಚ್ಚು ಮಾಡಿದ್ರೆ ಗ್ರಾಹಕರಿಗೂ ಕಷ್ಟ ಆಗಲಿದೆ. ಇದೇ ಜುಲೈ 25ರಂದು ಹೋಟೆಲ್ ಮಾಲಿಕರ ಸಂಘದ ಸಭೆಯಲ್ಲಿ ಚರ್ಚೆ ಆಗಲಿದೆ. ಆಗಸ್ಟ್ 1ರಿಂದಲೇ ಹೋಟೆಲ್ ತಿಂಡಿ, ತಿನಿಸು, ಕಾಫಿ, ಟೀ ದರ ಹೆಚ್ಚಳ ಆಗಲಿದೆ. ಈ ಬಗ್ಗೆ ಜುಲೈ 25ರಂದು ಅಧಿಕೃತವಾಗಿ ಘೋಷಿಸಲಿದ್ದೇವೆ. ಶೇ.10ರಷ್ಟು ದರ ಹೆಚ್ಚು ಮಾಡೋದು ಅನಿವಾರ್ಯವಾಗಿದೆ ಎಂದು ರಾವ್ ಹೇಳಿದ್ದಾರೆ.

Nandini Milk Price Hike: ನಂದಿನಿ ಹಾಲಿನ ದರ 3 ರು ಏರಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್

ಕರ್ನಾಟಕ ಹಾಲು ಮಹಾಮಂಡಲವು ಪ್ರತಿ ಲೀಟರ್‌ ಹಾಲಿನ ದರವನ್ನು 3 ರು. ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಪರಿಷ್ಕೃತ ದರವು ಆಗಸ್ಟ್‌ 1ರಿಂದ ಜಾರಿಗೆ ಬರಲಿದೆ. ಎಲ್ಲಾ ಮಾದರಿಯ ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 3 ರು. ಹೆಚ್ಚಾಗಲಿದೆ. ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕೆಎಂಎಫ್‌ ಹಾಗೂ ಹಾಲು ಒಕ್ಕೂಟಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯಕ್‌, ಪ್ರತಿ ಲೀಟರ್‌ ಹಾಲಿನ ಬೆಲೆಯನ್ನು 5 ರು. ಹೆಚ್ಚಿಸುವಂತೆ ಪ್ರಸ್ತಾವನೆ ಇಡಲಾಗಿತ್ತು. ಆದರೆ, ಮುಖ್ಯಮಂತ್ರಿಯವರು 3 ರು. ಏರಿಕೆಗೆ ಒಪ್ಪಿಗೆ ನೀಡಿದ್ದಾರೆ. ಆಗಸ್ಟ್‌ 1ರಿಂದ ಪರಿಷ್ಕೃತ ದರ ಜಾರಿಗೆ ಬರುತ್ತದೆ. ಎಲ್ಲಾ ಮಾದರಿಯ ಹಾಲಿಗೂ 3 ರು. ಹೆಚ್ಚಳ ಮಾಡಲಾಗುವುದು. ಹೆಚ್ಚಿಗೆ ಮಾಡಿದ ಹಣವನ್ನು ರೈತರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.

ಕೋಲಾರದ ಸರ್ಕಾರಿ ಪಿಯೂ ಕಾಲೇಜುಗಳಲ್ಲಿ ಸೌರಶಕ್ತಿ ವಿದ್ಯುತ್ ಸಂಪರ್ಕ

ಕೆಎಂಎಫ್‌ ಮತ್ತು ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಪ್ರತಿ ಲೀಟರ್‌ ಹಾಲಿಗೆ ತಲಾ 5 ರು. ಹೆಚ್ಚಳ ಮಾಡುವಂತೆ ನಿರಂತರವಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದವು. ಪ್ರಸ್ತುತ ಪ್ರತಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಪಶು ಆಹಾರ, ಮೇವು, ವಿದ್ಯುತ್‌, ಸಾಗಣಿಕೆ ವೆಚ್ಚದ ಹೆಚ್ಚಳದಿಂದ ಹೈನೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಖಾಸಗಿ ಸಂಸ್ಥೆಗಳು ರೈತರಿಗೆ ಹೆಚ್ಚಿನ ದರ ಕೊಟ್ಟು ಹಾಲು ಖರೀದಿಸುತ್ತಿವೆ. ಹಾಗಾಗಿ ರೈತರು ಖಾಸಗಿ ಸಂಸ್ಥೆಗಳಿಗೆ ಹಾಲು ಹಾಕುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಸಮರ್ಥವಾಗಿ ಪೈಪೋಟಿ ನಡೆಸಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಹಾಲು ಒಕ್ಕೂಟಗಳಿಗೆ ಬೇಡಿಕೆಗೆ ತಕ್ಕಂತೆ ಹಾಲು ಸಂಗ್ರಹಣೆ ಆಗುತ್ತಿಲ್ಲ ಎಂದು ಹಾಲು ಒಕ್ಕೂಟಗಳು ಕಳೆದ ಎರಡ್ಮೂರು ವರ್ಷಗಳಿಂದ ತಮ್ಮ ಅಳಲನ್ನು ಸರ್ಕಾರದ ಮುಂದಿಡುತ್ತಲೇ ಬಂದಿದ್ದವು.

ಸಭೆಯಲ್ಲಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌, ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಂ, ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಜಗದೀಶ್‌, ಕೆಎಂಎಫ್‌ ನಿರ್ದೇಶಕ ಎಚ್‌.ಡಿ.ರೇವಣ್ಣ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಮಾಲೂರು ಶಾಸಕ ನಂಜೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!