ಸತ್ಯ ಜಯಿಸಲಿದೆ.. ಅನಿತಾ ಗೋಯಲ್ ನಿಧನಕ್ಕೆ ಸಂತಾಪ: ವಿಜಯ್‌ ಮಲ್ಯ ಮಾಡಿದ ಟ್ವಿಟ್ ಮರ್ಮವೇನು?

Published : May 17, 2024, 04:26 PM IST
ಸತ್ಯ ಜಯಿಸಲಿದೆ.. ಅನಿತಾ ಗೋಯಲ್ ನಿಧನಕ್ಕೆ ಸಂತಾಪ: ವಿಜಯ್‌ ಮಲ್ಯ ಮಾಡಿದ ಟ್ವಿಟ್ ಮರ್ಮವೇನು?

ಸಾರಾಂಶ

ಜೆಟ್ ಏರ್‌ವೇಸ್‌ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ನಿಧನಕ್ಕೆ ಭಾರತದ ಒಂದು ಕಾಲದ ಉದ್ಯಮಿ ವಿಜಯ್ ಮಲ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಜಯ್‌ ಮಲ್ಯ ಕೂಡ ಒಂದು ಕಾಲದಲ್ಲಿ ಭಾರತದ ವಾಯುಯಾನದಲ್ಲಿ ಹೆಸರಾಗಿ ಮರೆಯಾದ ಕಿಂಗ್ ಫಿಶರ್ ಏರ್‌ವೇಸ್‌ನ ಸಂಸ್ಥಾಪಕರಾಗಿದ್ದು, ಈ ಹಿನ್ನೆಲೆಯಲ್ಲಿ ಇವರ ಈ ಸಂತಾಪದ ಬರಹ ಕುತೂಹಲ ಹೆಚ್ಚಿಸಿದೆ. 

ನವದೆಹಲಿ: ಜೆಟ್ ಏರ್‌ವೇಸ್‌ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ನಿನ್ನೆಯಷ್ಟೇ ಕ್ಯಾನ್ಸರ್‌ನಿಂದ ನಿಧನರಾಗಿದ್ದರು. ಇವರ ನಿಧನಕ್ಕೆ ಭಾರತದ ಒಂದು ಕಾಲದ ಉದ್ಯಮಿ, ಪ್ರಸ್ತುತ ದೇಶ ಬಿಟ್ಟು ಹೋಗಿರುವ ವಿಜಯ್ ಮಲ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಮದ್ಯದ ದೊರೆ ಎಂದೇ ಫೇಮಸ್ ಆಗಿರುವ ವಿಜಯ್‌ ಮಲ್ಯ ಕೂಡ ಒಂದು ಕಾಲದಲ್ಲಿ ಭಾರತದ ವಾಯುಯಾನದಲ್ಲಿ ಹೆಸರಾಗಿ ಮರೆಯಾದ ಕಿಂಗ್ ಫಿಶರ್ ಏರ್‌ವೇಸ್‌ನ ಸಂಸ್ಥಾಪಕರಾಗಿದ್ದು, ಈ ಹಿನ್ನೆಲೆಯಲ್ಲಿ ಇವರ ಈ ಸಂತಾಪದ ಬರಹ ಕುತೂಹಲ ಹೆಚ್ಚಿಸಿದೆ. 

ಅನಿತಾ ಅವರ ಅಗಲಿಕೆಯ ನೋವಿನಲ್ಲಿರುವ ಗೋಯಲ್ ಕುಟುಂಬಕ್ಕೆ ನನ್ನ ಹೃದಯ ತುಂಬಿದ ಸಂತಾಪಗಳು. ವಿಮಾನಯಾನ ಸೇವೆಯಲ್ಲಿ ಅನಿತಾ ಅವರು ಅಸಾಧಾರಣವೆನಿಸಿದ ಪ್ರತಿಸ್ಪರ್ಧಿಯಾಗಿದ್ದರು. ಜೊತೆಗೆ ಒಬ್ಬ ಉತ್ತಮ ಮನುಷ್ಯರಾಗಿದ್ದರು. ಕಿಂಗ್ ಫಿಶರ್ ಏರ್ ಲೈನ್ಸ್‌ಗೆ ಅರ್ಹ ಹಾಗೂ ದೀರ್ಘಕಾಲದ ಪ್ರತಿಸ್ಪರ್ಧಿಯಾಗಿದ್ದ ಜೆಟ್ ಏರ್‌ವೇಸ್‌ನ್ನು ಸೃಷ್ಟಿಸಿದ ನರೇಶ್ ಅವರಿಗೆ ಏನು ನೀಡಲಾಗಿದೆ ಎಂಬುದನ್ನು ನರೇಶ್ ಸಹಿಸಿಕೊಂಡಿರುವುದಕ್ಕೂ ನನಗೂ ಬೇಸರವಿದೆ.  ಭಾರತದ ಎರಡು ಅದ್ಭುತವಾದ ಏರ್‌ಲೈನ್ಸ್‌ಗಳು ಇನ್ನಿಲ್ಲದಂತೆ ವಿನಾಶವಾಗಿದ್ದು, ಬೇಸರದ ವಿಚಾರ. ಅಚ್ಚರಿ ಏಕೆ ಬಹುಶಃ ಸತ್ಯವೂ ಅಂತಿಮವಾಗಿ ಜಯಿಸಲಿದೆ ಎಂದು ವಿಜಯ್ ಮಲ್ಯ ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. 

ಪತಿ ಸಮ್ಮುಖದಲ್ಲೇ ಕಣ್ಮುಚ್ಚಿದ ಅನಿತಾ : ಜೆಟ್ ಏರ್‌ವೇಸ್‌ನ ನರೇಶ್ ಗೋಯಲ್ ಪತ್ನಿ ಕ್ಯಾನ್ಸರ್‌ಗೆ ಬಲಿ

ಅನಿತಾ ಗೋಯಲ್ ಅವರ ಪತಿ ನರೇಶ್ ಗೋಯಲ್ ಅವರನ್ನು ಕಳೆದ ವರ್ಷ ಸೆಪ್ಟೆಂಬರ್‌ 1 ರಂದು ಅವರನ್ನು ಜಾರಿ ನಿರ್ದೇಶನಾಲಯವೂ ಬಂಧಿಸಿತ್ತು. ಆದರೆ ಇದಕ್ಕೂ ಮೊದಲೇ 2019ರಲ್ಲಿ ವಿಜಯ್ ಮಲ್ಯರಂತೆ ನರೇಶ್ ಗೋಯಲ್ ಹಾಗೂ ಪತ್ನಿ ಅನಿತಾ ಗೋಯಲ್ ದೇಶ ತೊರೆಯಲು ಸಜ್ಜಾಗಿದ್ದರು ಎಂಬುದು ಕೂಡ ಅಚ್ಚರಿಯೇ. 2019ರಲ್ಲಿ ಸಾಲದ ಸುಳಿಗೆ ಸಿಲುಕಿದ ನಂತರ ವಿದೇಶಕ್ಕೆ ತೆರಳಲು ಮುಂದಾದ ನರೇಶ್ ಗೋಯಲ್ ಹಾಗೂ ಪತ್ನಿ ಅನಿತಾ ಗೋಯಲ್ ಅವರನ್ನು ವಲಸೆ ವಿಭಾಗದ ಅಧಿಕಾರಿಗಳು ವಿಮಾನದಿಂದ ಕೆಳಗೆ ಇಳಿಸಿದ್ದ ಘಟನೆ ನಡೆದಿತ್ತು.ಬ್ಯಾಂಕ್‌ಗಳಿಗೆ ಜೆಟ್‌ ಏರ್‌ವೇಸ್‌ ಸಂಸ್ಥೆ ಸಾವಿರಾರು ಕೋಟಿ ಸಾಲ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ, ಗೋಯಲ್‌ ವಿರುದ್ಧ ಲುಕೌಟ್‌ ನೋಟಿಸ್‌ ಜಾರಿಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ಹೇಳಿತ್ತು.

ಇತ್ತ ವಿಜಯ್ ಮಲ್ಯ ಅವರ ಬಗ್ಗೆ ಹೇಳುವುದಾದರೆ ಒಂದು ಕಾಲದಲ್ಲಿ ತಮ್ಮ ಅದ್ದೂರಿ ಐಷಾರಾಮಿ ಲೈಫ್‌ಸ್ಟೈಲ್‌ನಿಂದ ಕಿಂಗ್ ಆಫ್ ಗುಡ್‌ ಟೈಮ್ಸ್ ಎಂದೇ ಹೆಸರಾದವರು. ಕಿಂಗ್ ಫಿಷರ್‌ ಮದ್ಯ, ಕಿಂಗ್ ಫಿಷರ್ ಏರ್‌ ಲೈನ್ಸ್ ಎಲ್ಲವೂ ಇವರದೇ ಕೊಡುಗೆ. ಆದರೆ ಎಲ್ಲೋ ಹಿಡಿತ ತಪ್ಪಿದ ಇವರ ಆರ್ಥಿಕ ಲೆಕ್ಕಾಚಾರ ಇಡೀ ಸಾಮ್ರಾಜ್ಯವನ್ನೇ ಮುಳುಗಿಸಿ ದೇಶ ಬಿಟ್ಟು ಹೊರಡುವಂತೆ ಮಾಡಿತ್ತು. 2016ರ ಮಾರ್ಚ್‌ನಲ್ಲಿ ಇವರು ಬ್ಯಾಂಕ್‌ಗಳಿಗೆ ಕೋಟ್ಯಾಂತರ ರೂ ಸಾಲ ಬಾಕಿ ಇಟ್ಟು ದೇಶ ತೊರೆದಿದ್ದರು. ಒಂದು ವೇಳೆ ಇವರು ದೇಶದಲ್ಲೇ ಇದ್ದಿದ್ದರೆ ಇಂದು ಇವರು ಕೂಡ ನರೇಶ್ ಗೋಯಲ್ ರೀತಿ ಇಡಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುತ್ತಿದ್ದರೇನೋ ಆದರೆ ತಲೆ ಬಳಸಿದ  ಮಲ್ಯ ಸರ್ಕಾರ ಎಚ್ಚೆತ್ತುಕೊಳ್ಳುವ ಮೊದಲು ದೇಶ ತೊರೆದು ಜೈಲುವಾಸದಿಂದ ಪಾರಾಗಿದ್ದರು.  

ಬೆಂಗಳೂರಿನಲ್ಲಿದೆ ವಿಜಯ್ ಮಲ್ಯ ನೂರು ಕೋಟಿಯ ಕಿಂಗ್‌ ಫಿಶರ್ ಟವರ್, ಏನ್ ಪ್ರಯೋಜನ ಗುರು ?

ಜೆಟ್ ಏರ್‌ವೇಸ್‌ನ ಆರಂಭ ಅವಸಾನ: 
ಮುಂಬೈ ಮೂಲದ ಜೆಟ್‌ ಏರ್‌ವೇಸ್‌ ಭಾರತದ ಬಾನಯಾನದಲ್ಲಿ ಇಂಡಿಗೋ ನಂತರ 2ನೇ ಸ್ಥಾನದಲ್ಲಿತ್ತು. ಭಾರತದ ಒಟ್ಟು ವಿಮಾನ ಪ್ರಯಾಣಿಕರಲ್ಲಿ ಶೇ.17.8ರಷ್ಟುಮಂದಿ ಜೆಟ್‌ ಏರ್‌ವೇಸ್‌ನಲ್ಲಿ ಪ್ರಯಾಣಿಸುತ್ತಿದ್ದರು. 1993ರಲ್ಲಿ ತನ್ನ ಸೇವೆ ಆರಂಭಿಸಿದ ಜೆಟ್‌ ಏರ್‌ವೇಸ್‌, 2004ರಲ್ಲಿ ಅಂತಾರಾಷ್ಟ್ರೀಯ ಸೇವೆಯನ್ನೂ ಆರಂಭಿಸಿತು. 2007 ಜೆಟ್‌ ಏರ್‌ವೇಸ್‌ನ ಉಚ್ಛ್ರಾಯ ದಿನಗಳು. ಏರ್‌ ಸಹಾರಾವನ್ನು ಖರೀದಿಸಿದ ಕಂಪನಿ ತಾನು ಆರ್ಥಿಕವಾಗಿ ಬಲಿಷ್ಠ ಎಂಬುದನ್ನು ನಿರೂಪಿಸಿತು. 2012ರವರೆಗೂ ಉತ್ತಮ ಸ್ಥಿತಿಯಲ್ಲಿದ್ದ ಕಂಪನಿ, ತದನಂತರ ಆರ್ಥಿಕ ಹೊಡೆದ ಅನುಭವಿಸಲು ಆರಂಭಿಸಿತ್ತು. 2019ರ ಫೆಬ್ರವರಿಯಲ್ಲಿ ಕಂಪನಿಗೆ ನಿಜವಾದ ಬಿಕ್ಕಟ್ಟು ಆರಂಭವಾಯಿತು. ಮಾಚ್‌ರ್‍ 25ರಂದು ಕಂಪನಿಯ ಅಧ್ಯಕ್ಷ ನರೇಶ್‌ ಗೋಯಲ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2019ರ ಏಪ್ರಿಲ್‌ 12ರಂದು ಜೆಟ್‌ಏರ್‌ವೇಸ್‌ನ ಅಂತಾರಾಷ್ಟ್ರೀಯ ಸೇವೆ ಸ್ಥಗಿತಗೊಂಡಿತು. 400 ಕೋಟಿ ಹಣ ಹೊಂದಿಸಲಾಗದ ಕಂಪನಿ 2019ರ ಏಪ್ರಿಲ್‌ 17ರಂದು ತನ್ನ ಎಲ್ಲ ವಿಮಾನಗಳ ಸೇವೆಯನ್ನು ನಿಲ್ಲಿಸಿತು. 

ಉದ್ಯಮಿಗಳಾದ ವಿಜಯ್‌ ಮಲ್ಯ, ನೀರವ್‌ ಮೋದಿ ಸೇರಿದಂತೆ ಹಲವು ಸಾವಿರಾರು ಕೋಟಿ ರು. ಸಾಲ ಮಾಡಿ ವಿದೇಶಕ್ಕೆ ಪರಾರಿಯಾದ ನಂತರ ಭಾರೀ ಪ್ರಮಾಣದಲ್ಲಿ ಬ್ಯಾಂಕ್‌ ಸಾಲ ಉಳಿಸಿಕೊಂಡವರ ವಿದೇಶ ಪ್ರಯಾಣದ ಮೇಲೆ ತೀವ್ರ ನಿಗಾ ಇಡಲಾದ ಹಿನ್ನೆಲೆಯಲ್ಲಿ ನರೇಶ್ ದೇಶ ತೊರೆಯಲು ಸಾಧ್ಯವಾಗಿರಲಿಲ್ಲ. 

 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ