ವಿಶ್ವ ಆರ್ಥಿಕ ಶೃಂಗಕ್ಕೆ 50 ರ ವಸಂತ; ಪಂಚೆಯುಟ್ಟು ಹೋಗಿದ್ರು ಗೌಡರು!

By Suvarna NewsFirst Published Jan 20, 2020, 6:30 PM IST
Highlights

ವಿಶ್ವ ಆರ್ಥಿಕ ಶೃಂಗಕ್ಕೆ 50 ವಸಂತ | ಕಳೆದ ವರ್ಷ ಗೈರಾಗಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾಗಿ | 20 ವರ್ಷದ ನಂತರ ಭಾರತದ ಪ್ರಧಾನಿ ಭಾಗಿ | ಪಂಚೆಯುಟ್ಟು ಹೋಗಿದ್ದ ಗೌಡರು!

ನವದೆಹಲಿ (ಜ. 20): ದಾವೋಸ್‌ ಎಂಬುದು ಸ್ವಿಜರ್ಲೆಂಡ್‌ನ ಮೌಂಟೇನ್‌ ರೆಸಾರ್ಟ್‌. ಇಲ್ಲಿ ಪ್ರತಿ ವರ್ಷ ವಿಶ್ವ ಆರ್ಥಿಕ ಶೃಂಗ ನಡೆಯುತ್ತದೆ. ವಿಶ್ವ ಆರ್ಥಿಕ ವೇದಿಕೆ ಎಂಬುದು ಜಾಗತಿಕ, ಸ್ಥಳೀಯ ಕೈಗಾರಿಕಾ ಕಾರ್ಯಸೂಚಿ ರೂಪಿಸಲು ವಿಶ್ವದ ಉದ್ಯಮ, ರಾಜಕೀಯ, ಆಡಳಿತ ಮತ್ತು ಇತರ ನಾಯಕರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಸಂಘಟನೆ. ಇದು ಜಿನೆವಾ ಮೂಲದ, ಲಾಭಗಳಿಕೆಯ ಉದ್ದೇಶವಿಲ್ಲದ ಸರ್ಕಾರೇತರ ಪ್ರತಿಷ್ಠಾನವಾಗಿದ್ದು, ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುವ ತನ್ನ ವಾರ್ಷಿಕ ಸಭೆಯಿಂದಾಗಿ ಸುಪರಿಚಿತವಾಗಿದೆ.

ಇಲ್ಲಿ ಜಗತ್ತಿನ ಸುಮಾರು 1000 ಕ್ಕೂ ಪ್ರಮುಖ ಕಂಪನಿಗಳು, ಸಾವಿರಾರು ಉದ್ಯಮಿಗಳು, ರಾಜಕಾರಣಿಗಳು ಒಟ್ಟಾಗುತ್ತಾರೆ. ಆರೋಗ್ಯ ಮತ್ತು ಪರಿಸರ-ಸಂಬಂಧಿ ವಿಷಯಗಳೂ ಸೇರಿದಂತೆ, ವಿಶ್ವವು ಎದುರಿಸುತ್ತಿರುವ ಅತ್ಯಂತ ಜರೂರಾದ ಸಮಸ್ಯೆಗಳ ಕುರಿತು ಚರ್ಚಿಸಲು, ವ್ಯವಹಾರ ವಲಯದ ಅಗ್ರಗಣ್ಯ ನಾಯಕರು, ಅಂತಾರಾಷ್ಟ್ರೀಯ ರಾಜಕೀಯ ನಾಯಕರು, ಬುದ್ಧಿಜೀವಿಗಳು ಮತ್ತು ಪತ್ರಕರ್ತರನ್ನು ಒಂದೆಡೆ ಸೇರಿಸುವ ವಾರ್ಷಿಕ ಸಭೆ ಇದಾಗಿದೆ. ಸಭೆಗಳು ಮಾತ್ರವೇ ಅಲ್ಲದೇ, ವರ್ಷವಿಡೀ ಇಲ್ಲಿ ಪ್ರಾದೇಶಿಕ ಸಭೆಗಳ ಸರಣಿಯೇ ನಡೆಯುತ್ತಿರುತ್ತದೆ.

ಒಂದು ವಿಲ್ಲಾ ಕುಸಿದರೇನಂತೆ, ಮಲ್ಯ ಬಳಿ ಇನ್ನೂ ಇವೆ ಅರಮನೆಗಳು!

ಪ್ರಾರಂಭಿಸಿದ್ದು ಕ್ಲೌಸ್‌ ಮಾರ್ಟಿನ್‌ ಷ್ವಾಬ್‌

1971ರಲ್ಲಿ ಜರ್ಮನಿಯ ಅರ್ಥಶಾಸ್ತ್ರಜ್ಞ ಕ್ಲೌಸ್‌ ಮಾರ್ಟಿನ್‌ ಷ್ವಾಬ್‌ ಯುರೋಪಿಯನ್‌ ಮ್ಯಾನೇಜ್‌ಮೆಂಟ್‌ ಫೋರಂ ಎಂಬ ಹೆಸರಿನಲ್ಲಿ ಯುರೋಪಿಯನ್‌ ಉದ್ಯಮಿಗಳಿಗೆ ನೆರವಾಗುವ ದೃಷ್ಟಿಯಿಂದ ಸಂಘಟನೆಯೊಂದನ್ನು ಸ್ಥಾಪಿಸಿದ್ದರು. ಮುಂದೆ ಇದರ ಕಾರ‍್ಯವ್ಯಾಪ್ತಿ ವಿಸ್ತಾರವಾಗಿ 1987ರಲ್ಲಿ ವಿಶ್ವ ಆರ್ಥಿಕ ವೇದಿಕೆ ಎಂದು ಮರುನಾಮಕರಣ ಮಾಡಲಾಯಿತು. ಮುಂದೆ ಅದು ಅಂತಾರಾಷ್ಟ್ರೀಯ ಘರ್ಷಣೆಗಳನ್ನು ಪರಿಹರಿಸುವ ವೇದಿಕೆಯಾಗಿಯೂ ಬದಲಾಯಿತು.

ಯಾರು ಹಣ ಪಾವತಿಸ್ತಾರೆ?

ವಿಶ್ವ ಆರ್ಥಿಕ ವೇದಿಕೆಯ ಸದಸ್ಯತ್ವ ಪಡೆದ ರಾಷ್ಟ್ರಗಳು ಮತ್ತು 5 ದಿನದ ಶೃಂಗಕ್ಕೆ ಪಾಲುದಾರಿಕೆಯನ್ನು ಪಡೆದ ರಾಷ್ಟ್ರಗಳು ಈ ವೇದಿಕೆಗೆ ಹಣ ಒದಗಿಸುತ್ತವೆ. ಈ ವೇದಿಕೆಯ ಸದಸ್ಯರಾಗಬಯಸುವ ರಾಷ್ಟ್ರಗಳು 3,990 ರು.ನಿಂದ 39 ಲಕ್ಷ ರು.ವರೆಗೆ ಪಾವತಿಸಬೇಕಾಗಿರುತ್ತದೆ (ಸದಸ್ಯತ್ವದಲ್ಲಿ ಶ್ರೇಣಿಗಳಿರುತ್ತವೆ). ಈ ಸಂಘಟನೆಯ ವಾರ್ಷಿಕ ವಹಿವಾಟು 28 ಕೋಟಿ ರು. ವರ್ಷಕ್ಕೆ 12 ಲಕ್ಷ ರು. ಉಳಿತಾಯ ಮಾಡಲಾಗುತ್ತದೆ.

ಈ ಬಾರಿ ಯಾರು ಭಾಗವಹಿಸುತ್ತಾರೆ?

ವಿಶ್ವ ಆರ್ಥಿಕ ವೇದಿಕೆಯು ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿದ್ದು ಇತ್ತೀಚೆಗೆ. ಪ್ರತಿ ವರ್ಷ ಜನವರಿಯಲ್ಲಿ ನಡೆಯುವ ಈ ಶೃಂಗದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಕಂಪನಿಗಳ ಸಿಇಒಗಳು, ರಾಜಕಾರಣಿಗಳು, ಧಾರ್ಮಿಕ ನಾಯಕರು, ಶೈಕ್ಷಣಿಕ ಪ್ರತಿನಿಧಿಗಳು, ಮಾಧ್ಯಮಗಳು, ಸರ್ಕಾರೇತರ ಸಂಘಟನೆಗಳು ಭಾಗವಹಿಸಿರುತ್ತವೆ. ಈ ಬಾರಿ 85 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಒಟ್ಟಾರೆ ಈ ಬಾರಿ 682 ಮಹಿಳೆಯರು ಮತ್ತು 2,139 ಪುರುಷರು ಭಾಗಿಯಾಗಲಿದ್ದಾರೆ.

ಈ ವರ್ಷದ ಥೀಮ್‌ ಸುಸ್ಥಿರ ಅಭಿವೃದ್ಧಿ

ಸಾಂಪ್ರದಾಯಿಕವಾಗಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಂಡವರು ಆರ್ಥಿಕ ವಿಷಯಗಳ ಕುರಿತು ಚರ್ಚೆ ನಡೆಸುತ್ತಾರೆ. ಕಳೆದ 3 ವರ್ಷದಿಂದೀಚೆಗೆ ಬರೀ ಆರ್ಥಿಕತೆ ಬಗ್ಗೆ ಮಾತ್ರವಲ್ಲದೆ ಜಾಗತಿಕ ವಿಷಯಗಳ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾ, ಭಾರತ ಮತ್ತು ಬ್ರೆಜಿಲ್‌ನ ನಾಯಕರೂ ಭಾಗವಹಿಸುತ್ತಿದ್ದಾರೆ. ಪ್ರತಿ ವರ್ಷವೂ ಭಿನ್ನವಾದ ವಿಷಯ (ಥೀಮ್‌) ಇರಲಿದ್ದು, ಈ ವರ್ಷ ‘ಸಂಘಟನಾತ್ಮಕ ಮತ್ತು ಸುಸ್ಥಿರ ಅಭಿವೃದ್ಧಿ’ ಎಂಬ ಥೀಮ್‌ ಅಡಿಯಲ್ಲಿ ಸುಸ್ಥಿರ ಅಭಿವೃದ್ಧಿಗೆ ಪ್ರಾದಾನ್ಯತೆ ನೀಡುವ ಉದ್ದೇಶ ಹೊಂದಲಾಗಿದೆ.

ಮಂಗಳೂರಿನ ಕೆವಿ ಕಾಮತ್‌ಗೆ ಹಣಕಾಸು ಹೊಣೆ?: ಕನ್ನಡಿಗ ವಿತ್ತ ತಜ್ಞನಿಗೆ ಪ್ರಧಾನಿ ಮಣೆ?

ಅದರ ಜೊತೆಗೆ ಜಾಗತಿಕ ತಾಪಮಾನ ಇಳಿಕೆಗೆ ಹೇಗೆ ಪ್ರತಿಕ್ರಿಯಿಸಬಹುದು, ಜೀವವೈವಿಧ್ಯತೆಯನ್ನು ಹೇಗೆ ರಕ್ಷಿಸಬಹುದು, ತಂತ್ರಜ್ಞಾನಾಧಾರಿತ ಯುದ್ಧವನ್ನು ತಡೆಯುವುದು ಹೇಗೆ ಮತ್ತು ಮುಂದಿನ ವರ್ಷದಲ್ಲಿ ಕನಿಷ್ಠ 100 ಕೋಟಿ ಜನರ ಸಬಲೀಕರಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಈ ವರ್ಷದ ವಿಶೇಷತೆ ಏನು?

- ಕಳೆದ ವರ್ಷ ಗೈರಾಗಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾಗಿ

- ಯುವ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್‌ ಅವರಿಂದ ಜಾಗತಿಕ ತಾಪಮಾನ ಏರಿಕೆ ಬಗ್ಗೆ ಭಾಷಣ

- ಜಗತ್ತಿನ ಅತಿ ಕಿರಿಯ ಪ್ರಧಾನಿ ಫಿನ್‌ಲೆಂಡ್‌ನ ಸನ್ನಾ ಮರಿನ್‌ ಭಾಗಿ

- ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರಿಂದ ಖಿನ್ನತೆ ವಿರುದ್ಧ ಹೋರಾಟದ ಬಗ್ಗೆ ಮಾತು

20 ವರ್ಷದ ನಂತರ ಭಾರತದ ಪ್ರಧಾನಿ ಭಾಗಿ

20 ವರ್ಷಗಳ ಬಳಿಕ 2018ರಲ್ಲಿ ಮೊದಲ ಬಾರಿಗೆ ಭಾರತೀಯ ಪ್ರಧಾನಿಯೊಬ್ಬರು ಇಲ್ಲಿಗೆ ಭೇಟಿ ನೀಡಿದ್ದರು. ಶೃಂಗದ 48 ವರ್ಷಗಳ ಇತಿಹಾಸದಲ್ಲೇ ಮೋದಿ ಅವರು ಬರೋಬ್ಬರಿ 130 ಮಂದಿಯ ನಿಯೋಗವನ್ನು ಕೊಂಡೊಯ್ದಿದ್ದರು. ಈ ಮೊದಲು 1997ರಲ್ಲಿ ಆಗಿನ ಪ್ರಧಾನಿ ಎಚ್‌.ಡಿ ದೇವೇಗೌಡ ಅವರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಅದಾದ ಬಳಿಕ 2018ರಲ್ಲಿ ಮೋದಿ ಭಾರತದಿಂದ ಆರು ಕೇಂದ್ರ ಸಚಿವರು, ಇಬ್ಬರು ಮುಖ್ಯಮಂತ್ರಿಗಳು, 100ಕ್ಕೂ ಅಧಿಕ ಕಂಪನಿಗಳ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಶೃಂಗದಲ್ಲಿ ಭಾಗವಹಿಸಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವವು ಎದುರಿಸುತ್ತಿರುವ ಭಯೋತ್ಪಾದನಾ ಸಮಸ್ಯೆ, ಆರ್ಥಿಕ ಅಸಮಾನತೆ, ಸೈಬರ್‌ ಅಪರಾಧ ಮುಂತಾದ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ನಿಮ್ಮ 1 ಬಿಲಿಯನ್‌ನಿಂದ ನಮಗೇನ್ರೀ ಪ್ರಯೋಜನ?: ಜೆಫ್‌ಗೆ ಗೋಯಲ್ ಪ್ರಶ್ನೆ!

ಪಂಚೆಯುಟ್ಟು ಹೋಗಿದ್ದ ಗೌಡರು!

ಇಪ್ಪತ್ತು ವರ್ಷಗಳ ಹಿಂದೆ 1997ರಲ್ಲಿ ಅಂದು ಪ್ರಧಾನಿಯಾಗಿದ್ದ ಎಚ್‌.ಡಿ.ದೇವೇಗೌಡರು ಸ್ಕಿ ರೆಸಾರ್ಟ್‌ನಲ್ಲಿ ನಡೆದ ಡಬ್ಲ್ಯುಇಎಫ್‌ನಲ್ಲಿ ಭಾಗವಹಿಸಿದ್ದರು. ಆ ಬಳಿಕ ಯಾವ ನಾಯಕರೂ ಇದರಲ್ಲಿ ಪಾಲ್ಗೊಂಡಿಲ್ಲ. ಅಂದು ದೇವೇಗೌಡರು ತಮ್ಮ ಕುಟುಂಬಸ್ಥರೊಂದಿಗೆ ಸಭೆಗೆ ತೆರಳಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಜತೆಗೆ ಸಭೆಯಲ್ಲಿ ಅವರು ಹಾಕಿಕೊಂಡಿದ್ದ ಉಡುಗೆ ಕುರ್ತಾ, ಧೋತಿ, ಶಾಲು ಕೂಡಾ ಚರ್ಚೆಯ ವಿಷಯವಾಗಿತ್ತು.

ಫೋರಂಗೂ ಮೊದಲು ದೇವೇಗೌಡರು ಸೂಟ್‌ ಧರಿಸಬೇಕೆಂಬುದು ಉದ್ಯಮಿಗಳ ಒತ್ತಾಯವಾಗಿತ್ತು. ಇನ್ನು ಅಲ್ಲಿ ಗೌಡರು ಮಾಡಿದ ಭಾಷಣಕ್ಕೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅವರಿಗೆ ಆರ್ಥಿಕ ವಿಚಾರಗಳ ಬಗ್ಗೆ ಹೆಚ್ಚಿನ ಅನುಭವ ಇಲ್ಲದಿದ್ದ ಕಾರಣದಿಂದ ಮೊದಲೇ ಸಿದ್ಧಪಡಿಸಲಾಗಿದ್ದ ಭಾಷಣವನ್ನು ಓದಿದ್ದರು ಮತ್ತು ಕೇಳಿದ ಪ್ರಶ್ನೆಗಳಿಗೆಲ್ಲ ಆಗಿನ ವಿತ್ತ ಸಚಿವರಾಗಿದ್ದ ಪಿ. ಚಿದಂಬರಂರತ್ತ ಕೈ ತೋರಿಸಿದ್ದರು.

ಆರ್ಥಿಕ ವಿಷಯವಷ್ಟೇ ಅಲ್ಲ, ನಾನಾ ಕ್ಷೇತ್ರಗಳಲ್ಲಿ ಕೆಲಸ

ಶೇರುದಾರರ ಸಂಘಟನೆಯ ಉದ್ದೇಶದಿಂದ ಸ್ಥಾಪನೆಯಾದ ಸರ್ಕಾರೇತರ ಸಂಘಟನೆ ಇಂದು ಜಾಗತಿಕ ಆರ್ಥಿಕ ವೇದಿಕೆಯಾಗಿ 50 ವಸಂತಗಳನ್ನು ಪೂರೈಸಿದೆ. ಶೇರುದಾರರ ಹಿತಾಸಕ್ತಿ ರಕ್ಷಣೆ ಮಾತ್ರವಲ್ಲದೆ, ಉದ್ಯೋಗಿಗಳು, ವಿತರಕರ ಹಿತಾರಕ್ಷಣೆಯ ಜವಾಬ್ದಾರಿಯನ್ನೂ ಹೊತ್ತಿದೆ. ಜೊತೆಗೆ ಜಾಗತಿಕ ವಿಷಯಗಳ ಬಗ್ಗೆಯೂ ಗಮನ ನೀಡುತ್ತಿದೆ.

ಈ 50 ವರ್ಷಗಳಲ್ಲಿ ವಿಶ್ವ ಆರ್ಥಿಕ ವೇದಿಕೆಯು ಐತಿಹಾಸಿಕ ನಿರ್ಣಯಗಳನ್ನು ಕೈಗೊಂಡಿದೆ. ಬರ್ಲಿನ್‌ ಗೋಡೆಯನ್ನು ಕೆಡವುವುದರಿಂದ ಹಿಡಿದು, ರನ್‌ವೇ ಕ್ಲೈಮೇಟ್‌ ಚೇಂಜ್‌, ಎಕನಾಮಿಕ್‌ ಗ್ಲೋಬಲೈಸೇಶನ್‌ ಹೀಗೆ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಗ್ರೀಸ್‌ ಮತ್ತು ಟರ್ಕಿಯ ನಡುವಿನ ಯುದ್ಧ ನಿಲುಗಡೆಗೆ ಶ್ರಮಿಸಿದೆ. ವಿಶ್ವದಾದ್ಯಂತ ಆರ್ಥಿಕ ಸೇತುವೆಯನ್ನು ನಿರ್ಮಿಸಿದೆ. ಎಲ್ಲ ದೇಶಗಳ ಸಹಭಾಗಿತ್ವದೊಂದಿಗೆ 70 ಕೋಟಿ ಮಕ್ಕಳಿಗೆ ಲಸಿಕೆ ಹಾಕಿಸಿದೆ. ಪರಿಸರ ತಜ್ಞರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ.

ಸೂಟ್‌ಕೇಸ್‌ನಲ್ಲಿ 1 ಬಿಲಿಯನ್ ಡಾಲರ್ ಇಟ್ಕೊಂಡು ಭಾರತಕ್ಕೆ ಬಂದ ಅಮೆಜಾನ್ ಮುಖ್ಯಸ್ಥ!

ಇದು ಶ್ರೀಮಂತರ ನಿರರ್ಥಕ ಶೃಂಗವೇ?!

ಈವರೆಗೆ ದಾವೋಸ್‌ನಲ್ಲಿ 49 ಸಭೆಗಳು ನಡೆದಿವೆ. ವಿಶ್ವ ಆರ್ಥಿಕ ವೇದಿಕೆ ಆರಂಭವಾದಾಗಿನಿಂದ ಇದೊಂದು ಗಣ್ಯರ, ಉಳ್ಳವರ ವೇದಿಕೆ ಎಂಬ ಅಪವಾದವಿದೆ. ಹಾಗೆಯೇ ನಿರರ್ಥಕ ವೇದಿಕೆ ಎಂಬ ಟೀಕೆಯೂ ಕೇಳಿಬರುತ್ತದೆ. ಇನ್ನೊಂದು ಪ್ರಮುಖ ಟೀಕೆ ಎಂದರೆ ದಾವೋಸ್‌ ಶೃಂಗದಲ್ಲಿ ಪುರುಷರ ಪ್ರಾಬಲ್ಯವೇ ಹೆಚ್ಚಾಗಿರುತ್ತದೆ. ಮಹಿಳೆಯರಿಗೆ ಇಲ್ಲಿ ಅವಕಾಶವಿಲ್ಲ ಎಂದು ಉಕ್ರೇನ್‌ ಹೋರಾಟಗಾರ್ತಿ ಪ್ರತಿಭಟಿಸಿದ್ದರು. ಅದಕ್ಕೆ ಕಾರಣವೂ ಇದೆ.

ಈವರೆಗಿನ ಎಲ್ಲಾ ಶೃಂಗಗಳ್ಲೂ ಮಹಿಳೆಯರ ಭಾಗವಹಿಸುವಿಕೆ ಪಾಲು ತೀರಾ ಕಡಿಮೆ. ಪ್ರತಿ ವರ್ಷ ದಾವೋಸ್‌ ಸಮ್ಮೇಳನದ ಫೋಟೋವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿ, ‘ಮಹಿಳೆಯರನ್ನು ಹುಡುಕಿ’ ಎನ್ನುವ ಒಕ್ಕಣೆ ಬರೆದಿರುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಈ ವರ್ಷ ಒಟ್ಟು ಸದಸ್ಯರಲ್ಲಿ ಕಳೆದ ವರ್ಷ 22% ಮಹಿಳೆಯರು ಭಾಗವಹಿಸಿದ್ದರು. 2015ರಲ್ಲಿ ಒಟ್ಟು ಭಾಗವಹಿಸುವಿಕೆಯಲ್ಲಿ 17% ಮಹಿಳೆಯರಿದ್ದರು.

50 ವರ್ಷದ ಮೈಲುಗಲ್ಲು

1971- ಸ್ವಿಜರ್ಲೆಂಡ್‌ನ ದಾವೊಸ್‌ನಲ್ಲಿ ‘ಯುರೋಪಿಯನ್‌ ಮ್ಯಾನೇಜ್‌ಮೆಂಟ್‌ ಫೋರಂ’ನ ಮೊದಲ ಶೃಂಗ ಆಯೋಜನೆಗೊಂಡಿತ್ತು. ಇದರಲ್ಲಿ 31 ದೇಶಗಳ 450 ಜನರು ಭಾಗಿಯಾಗಿದ್ದರು.

1973- ಆರ್ಥಿಕತೆಯ ಕುರಿತ ವೇದಿಕೆಯಲ್ಲಿ ಮೊದಲ ಬಾರಿಗೆ ಪರಿಸರದ ಉಳಿವಿನ ಬಗ್ಗೆ ಚರ್ಚೆ ನಡೆಸಲಾಗಿತ್ತು.

1979- ವಿಶ್ವ ಆರ್ಥಿಕ ವೇದಿಕೆಯಲ್ಲಿ ಮೊದಲ ಬಾರಿಗೆ ಚೀನಾ ಭಾಗಿ.

1988-ಗ್ರೀಸ್‌ ಮತ್ತು ಟರ್ಕಿಯ ಯುದ್ಧ ನಿಲುಗಡೆಗೆ ಕಾರಣವಾದ ಸಮ್ಮೇಳನ.

1992-ಆಫ್ರಿಕನ್‌ ನ್ಯಾಷನಲ್‌ ಕಾಂಗ್ರೆಸ್‌ ಮುಖ್ಯಸ್ಥ ನೆಲ್ಸನ್‌ ಮಂಡೇಲಾ ಭಾಗಿ.

2000- ಉದ್ಯಮಿಗಳು ಭಾಗಿಯಾಗುತ್ತಿದ್ದ ಈ ಸಮ್ಮೇಳನಕ್ಕೆ ಮೊಟ್ಟಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್‌ ಕ್ಲಿಂಟನ್‌ ಭೇಟಿ ನೀಡಿದ್ದರು. ಆಗ ರೋಗನಿರೋಧಕ ಲಸಿಕೆ ಯೋಜನೆಗಳ ಉತ್ತೇಜನಕ್ಕೆ ನಿರ್ಧಾರ ಕೈಗೊಳ್ಳಲಾಗಿತ್ತು.

2002- ವಿಶ್ವ ಆರ್ಥಿಕ ವೇದಿಕೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಾವೋಸ್‌ ಬಿಟ್ಟು ಅಮೆರಿಕದ ನ್ಯೂಯಾರ್ಕ್ನಲ್ಲಿ ಶೃಂಗ ಆಯೋಜಿಸಲಾಗಿತ್ತು. ಅಮೆರಿಕದ ಮೇಲಿನ 9/11 ಉಗ್ರ ದಾಳಿಯನ್ನು ವಿರೋಧಿಸಿ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಅಲ್ಲಿ ಶೃಂಗ ಆಯೋಜನೆಗೊಂಡಿತ್ತು.

click me!