ಕೊರೋನಾ ಶಂಕಿತ ರೋಗಿಗಳ ಮೇಲೆ ಚೀನಾ ಅಧಿಕಾರಿಗಳ ದಾಳಿ!
ಶಂಕಿತ ರೋಗಿಗಳ ಮೇಲೆ ಚೀನಾ ಅಧಿಕಾರಿಗಳ ದಾಳಿ| ಬಲವಂತವಾಗಿ ಆಸ್ಪತ್ರೆಗೆ ಎಳೆದೊಯ್ಯುವ ವಿಡಿಯೋ ವೈರಲ್
ಬೀಜಿಂಗ್[ಫೆ.09]: ಚೀನಾದಲ್ಲಿ ವ್ಯಾಪಕವಾಗಿರುವ ಕೊರೋನಾ ವೈರಸ್ ವ್ಯಾಧಿಯನ್ನು ನಿಯಂತ್ರಿಸಲು ಹರಸಾಹಸ ಮಾಡುತ್ತಿರುವ ಚೀನಾ, ಈಗ ಶಂಕಿತ ಕರೋನಾ ವೈರಸ್ ಪೀಡಿತರನ್ನು ಬಲವಂತವಾಗಿ ಆಸ್ಪತ್ರೆಗೆ ಎಳೆದೊಯ್ಯುವ ವಿಡಿಯೋಗಳು ಬೆಳಕಿಗೆ ಬಂದಿವೆ. ವೈರಾಣುವಿನ ಕೇಂದ್ರ ಸ್ಥಾನವಾಗಿರುವ ವುಹಾನ್‌ನಲ್ಲಿನ ಮನೆಯೊಂದಕ್ಕೆ ನುಗ್ಗುವ ಆರೋಗ್ಯ ಸಿಬ್ಬಂದಿಯು, ವ್ಯಕ್ತಿಯೊಬ್ಬನನ್ನು ಬಲವಂತವಾಗಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಕೊರೋನಾ ವೈರಸ್ ಭೀತಿ; ಭಾರತದಲ್ಲಿ ಏನಾಗ್ತಿದೆ?
ಈ ಮನೆಗೆ ಆಗಮಿಸುವ ಮಾಸ್ಕ್ ಧರಿಸಿದ ಸರ್ಕಾರದ ಸಿಬ್ಬಂದಿ ಮೊದಲು ಇಬ್ಬರನ್ನು ಹೊರಗೆ ಕೈಹಿಡಿದು ತರುತ್ತಾರೆ. ಆದರೆ ಮೂರನೇ ವ್ಯಕ್ತಿ ಹೊರಬರಲು ಪ್ರತಿರೋಧ ತೋರುತ್ತಾನೆ. ಮನೆ ಬಾಗಿಲಲ್ಲೇ ಕುಳಿತು ಒದ್ದಾಡಲು ಆರಂಭಿಸುತ್ತಾನೆ. ಆಗ ಇಬ್ಬರು ಸಿಬ್ಬಂದಿ ಆತನನ್ನು ಮೇಲೆತ್ತಲು ಯತ್ನಿಸಿ ವಿಫಲರಾಗುತ್ತಾರೆ. ಆಗ ಅವರಿಗೆ ಸಹಾಯ ಮಾಡಲು ಇನ್ನೂ 3 ಸಿಬ್ಬಂದಿ ಆಗಮಿಸುತ್ತಾರೆ. ಆಗ ಅವರು ಹರಸಾಹಸ ಪಟ್ಟು ಆತನನ್ನು ಮೇಲೆತ್ತಿಕೊಂಡು ಬರುತ್ತಾರೆ. ಆಸ್ಪತ್ರೆಗೆ ಎಳೆದೊಯ್ಯುತ್ತಾರೆ.
ಇನ್ನು ಇನ್ನೊಂದು ವಿಡಿಯೋದಲ್ಲಿ, ಮಾಸ್ಕ್ ಹಾಕಿಕೊಳ್ಳದ ಮಹಿಳೆಯನ್ನು ಪೊಲೀಸರು ಬಲವಂತವಾಗಿ ಎಳೆದೊಯ್ಯುವ ದೃಶ್ಯ ವೈರಲ್ ಆಗಿದೆ.
ಕೊರೋನಾಗೆ ಭಾರತೀಯ ಮೂಲದ ವೈದ್ಯನಿಂದ ಲಸಿಕೆ: ಮಾದರಿಯಾದರು ವಿಶ್ವಕ್ಕೆ!
10 ಪಟ್ಟು ಹೆಚ್ಚು?:
ಕೊರೋನಾ ವೈರಸ್, ಚೀನಾ ಸೇರಿದಂತೆ ವಿಶ್ವದಲ್ಲಿ 34,800 ಜನರಿಗೆ ಅಂಟಿದೆ. ಆದರೆ ಅಂದುಕೊಂಡಿದ್ದಕ್ಕಿಂತ ಪೀಡಿತರ ಸಂಖ್ಯೆ 10 ಪಟ್ಟು ಹೆಚ್ಚು ಇರಬಹುದು ಎಂದು ಬ್ರಿಟನ್‌ನ ಮೆಡಿಸಿನ್ ಪ್ರೊಫೆಸರ್ ಜಾನ್ ಎಡ್ಮಂಡ್ಸ್ ಶಂಕಿಸಿದ್ದಾರೆ. ಅನೇಕ ಪ್ರಕರಣಗಳನ್ನು ಪತ್ತೆ ಮಾಡಲು ಸಾಧ್ಯವಾಗದೇ ಹೋಗಿರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.