ಕ್ಯಾನ್ಸರ್ ಮಣಿಸಿದ ಪುಟ್ಟ ಕಂದ: ಅಪ್ಪ, ಮಗನ ಖುಷಿಗೆ ಮಿತಿಯೇ ಇಲ್ಲ!
300 ದಿನದಲ್ಲಿ ಕ್ಯಾನ್ಸರ್ ಮಣಿಸಿದ ಬಾಲಕ| ಬಾಲಕನಿಗಿಂತ ಅಪ್ಪನ ಸಂಭ್ರಮವೇ ಹೆಚ್ಚು| ಮಗ ಗುಣಮುಖನಾಗಿದ್ದೇ ತಡ ವಿಡಿಯೋ ಮಾಡಿ ಪೋಸ್ಟ್ ಮಾಡಿದ ಕೈನಿ
ಕ್ರಿಸ್ಟಿಯಾನ್ ಹುಟ್ಟಿನಿಂದಲೇ ಡೌನ್ ಸಿಂಡ್ರೋಮ್ ಇತ್ತು. ಆದರೆ 14 ತಿಂಗಳ ಬಳಿಕ ಆತನಿಗೆ ಲುಕೇಮಿಯಾ ಕ್ಯಾನ್ಸರ್ ಕೂಡಾ ಇದೆ ಎಂಬ ವಿಚಾರ ತಿಳಿದು ಬಂದಿದೆ. ಆದರೆ ಬಲಶಾಲಿ ಬಾಲಕ ತನ್ನ ಹೆಸರಿನ ಅರ್ಥಕ್ಕೆ ತಕ್ಕಂತೆ, ಓರ್ವ 'ಸೇನಾನಿ'ಯಂತೆ ಕ್ಯಾನ್ಸರ್ ವಿರುದ್ಧ 11 ತಿಂಗಳು ಹೋರಾಡಿ, ಅದನ್ನು ಹೊಡೆದೋಡಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಇನ್ನು ಮಗ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ ಎಂಬ ವಿಚಾರ ತಂದೆಗೆ ತಿಳಿದರೆ ಈ ಖುಷಿಯನ್ನು ಸಲೆಬ್ರೆಟ್ ಮಾಡದಿರುತ್ತಾರೆಯೇ? ಇದು ಅಸಾಧ್ಯ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕ್ರಿಸ್ಟಿಯಾನ್ ಹಾಗು ಆತನ ತಂದೆಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಮಗನಿಗಿಂತ ತಂದೆಯೇ ಹೆಚ್ಚು ಸಂಭ್ರಮಿಸುತ್ತಿರುವುದನ್ನು ನೋಡಬಹುದಾಗಿದೆ.
ತಂದೆ ಕೈನಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿದ್ದು, ನೆಟ್ಟಿಗರೂ ಆತನ ಖುಷಿಗೆ ಜೊತೆಯಾಗಿದ್ದಾರೆ. ಈ ಕುರಿತು ಬರೆದುಕೊಂಡಿರುವ ಕೈನಿ 'ಕ್ರಿಸ್ಟಿಯಾನ್ ಜನಿಸಿದ 14 ತಿಂಗಳ ಬಳಿಕ ಆತನಿಗೆ ಕ್ಯಾನ್ಸರ್ ಇದೆ ಎಂಬ ವಿಚಾರ ನಮಗೆ ತಿಳಿಯಿತು. ಹುಟ್ಟಿದಾಗ ರಕ್ತ ಕಣಗಳ ಸಂಖ್ಯೆಯೂ ಬಹಳ ಕಡಿಮೆ ಇತ್ತು' ಎಂದಿದ್ದಾರೆ.
300 ದಿನದೊಳಗೆ ಕ್ಯಾನ್ಸರ್ ಗೆ ಗುಡ್ ಬೈ
ಕ್ರಿಸ್ಟಿಯಾನ್ 300 ದಿನದೊಳಗೆ ಕ್ಯಾನ್ಸರ್ ಮಣಿಸಿದ್ದಾನೆ. ಬಾಲಕನ ಈ ಆತ್ಮಸ್ಥೈರ್ಯಕ್ಕೆ ವೈದ್ಯರೂ ಅಚ್ಚರಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ತನ್ನ ಪುಟ್ಟ ಕಂದ ಧೈರ್ಯ ಕಳೆದುಕೊಳ್ಳಬಾರದೆಂದು ಕೈನಿ ಯಾವತ್ತೂ ಆತನೊಂದಿಗಿರುತ್ತಿದ್ದರಂತೆ.