ಕೊರೋನಾ ಕೇಸ್ ಹೆಚ್ಚಳ: 50ನೇ ಸ್ಥಾನದಲ್ಲಿದ್ದ ಭಾರತ, ವಿಶ್ವದಲ್ಲೇ ನಂ.10!

ವಿಶ್ವದಲ್ಲೇ ಭಾರತ ನಂ.10!| ಭಾರೀ ವೇಗದಲ್ಲಿ ಕೊರೋನಾ ಕೇಸ್‌ ಹೆಚ್ಚಳ| 2 ತಿಂಗಳ ಹಿಂದೆ 50ನೇ ಸ್ಥಾನದಲ್ಲಿದ್ದ ಭಾರತ| ಇರಾನ್‌ ಹಿಂದಿಕ್ಕಿ 10ನೇ ಸ್ಥಾನಕ್ಕೆ| ಕೇವಲ 25 ದಿನಗಳಲ್ಲಿ 1 ಲಕ್ಷ ಸೋಂಕು| ಇದೇ ವೇಗವಿದ್ದರೆ ವಾರದಲ್ಲಿ ನಂ.7

India moves into world top 10 worst hit by Coronavirus

ನವದೆಹಲಿ(ಮೇ.26): ಸೋಂಕಿತರ ಸಂಖ್ಯೆ ದಿನೇದಿನೇ ಅಗಾಧ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅತಿ ಹೆಚ್ಚು ಕೊರೋನಾ ವೈರಸ್‌ಪೀಡಿತರು ಇರುವ ವಿಶ್ವದ ಟಾಪ್‌ 10 ದೇಶಗಳ ಪಟ್ಟಿಗೆ ಭಾರತ ಸೋಮವಾರ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ಮಾ.20ರಂದು ದೇಶದಲ್ಲಿ ಕೇವಲ 194 ಮಂದಿ ಸೋಂಕಿತರು ಇದ್ದರು. ಆಗ ವಿಶ್ವದ ಕೊರೋನಾ ದೇಶಗಳ ಪಟ್ಟಿಯಲ್ಲಿ ಭಾರತ 50ನೇ ಸ್ಥಾನದಲ್ಲಿತ್ತು. ಆದರೆ ಕೇವಲ 2 ತಿಂಗಳು 5 ದಿನಗಳಲ್ಲೇ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆಯಾಗಿರುವುದರಿಂದ, ಭಾರತದ ರಾರ‍ಯಂಕ್‌ 40 ಸ್ಥಾನ ಜಿಗಿತ ಕಂಡಿದೆ. ಕಳೆದ ವಾರ ಚೀನಾವನ್ನು ಹಿಂದಿಕ್ಕಿದ್ದ ಭಾರತ 11ನೇ ಸ್ಥಾನದಲ್ಲಿತ್ತು. ಈಗ ಇರಾನ್‌ ಅನ್ನು ಹಿಂದಿಕ್ಕಿ 10ನೇ ಸ್ಥಾನಕ್ಕೆ ಜಿಗಿದಿದೆ. ಇದೇ ಪ್ರಮಾಣದಲ್ಲಿ ಸೋಂಕು ದೃಢಪಡುತ್ತಾ ಹೋದರೆ ಟರ್ಕಿ, ಜರ್ಮನಿ, ಫ್ರಾನ್ಸ್‌ ದೇಶಗಳನ್ನೂ ಹಿಂದೂಡಿ ವಾರದೊಪ್ಪತ್ತಿನಲ್ಲಿ ಭಾರತ 7ನೇ (ಇಟಲಿ ನಂತರದ) ಸ್ಥಾನಕ್ಕೆ ಏರಿಕೆ ಕಂಡರೂ ಅಚ್ಚರಿಪಡಬೇಕಿಲ್ಲ. ಸದ್ಯ ಅಮೆರಿಕ, ಬ್ರೆಜಿಲ್‌, ರಷ್ಯಾ, ಸ್ಪೇನ್‌, ಬ್ರಿಟನ್‌ ಟಾಪ್‌ 5ರಲ್ಲಿವೆ.

ರಾಜ್ಯದ 8 ಜಿಲ್ಲೆಗಳಲ್ಲಿ ಈಗ ಕೊರೋನಾ ಶತಕ!

ಮೇ 1ರಂದು ಭಾರತದಲ್ಲಿ 39248 ಸೋಂಕಿತರು ಇದ್ದರೆ, 1295 ಜನ ಸಾವನ್ನಪ್ಪಿದ್ದರು. ಇನ್ನು ಭಾರತ 10ನೇ ಸ್ಥಾನಕ್ಕೆ ಏರಿದ ದಿನವಾದ ಮೇ 25ರಂದು ಭಾರತದಲ್ಲಿ ಸೋಂಕಿತರ ಸಂಖ್ಯೆ 1.40 ಲಕ್ಷ ದಾಟುವ ಮೂಲಕ ಕೇವಲ 25 ದಿನದಲ್ಲಿ 1 ಲಕ್ಷ ಹೊಸ ಕೇಸು ದಾಖಲಾದಂತೆ ಆಗಿದೆ. ಅದೇ ರೀತಿ ಸೋಮವಾರ ಸಾವಿನ ಸಂಖ್ಯೆ 4000 ದಾಟುವ ಮೂಲಕ 25 ದಿನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 2700 ದಾಟಿದೆ.

ವುಹಾನ್‌ನಿಂದ ಕೇರಳಕ್ಕೆ ಮರಳಿದ ವಿದ್ಯಾರ್ಥಿನಿಯಲ್ಲಿ ಸೋಂಕು ದೃಢಪಡುವುದರೊಂದಿಗೆ ಜ.30ರಂದು ದೇಶದಲ್ಲಿ ಮೊದಲ ಕೊರೋನಾ ವೈರಸ್‌ ಪ್ರಕರಣ ಪತ್ತೆಯಾಗಿತ್ತು. ಅಂದು ಕೊರೋನಾ ದೃಢಪಟ್ಟ19ನೇ ದೇಶ ಭಾರತವಾಗಿತ್ತು. ಅದೇ ದಿನ ಚೀನಾದಲ್ಲಿ ಸೋಂಕಿತರ ಸಂಖ್ಯೆ 7711ಕ್ಕೆ ತಲುಪಿ 170 ಜನ ಸಾವನ್ನಪ್ಪಿದ್ದರು.

ಮಾ.20ರಂದು ಭಾರತ 50ನೇ ಸ್ಥಾನದಲ್ಲಿತ್ತು. ಅಪಾರ ಜನಸಂಖ್ಯೆ ಹೊಂದಿದ್ದರೂ ಕೊರೋನಾ ವೈರಸ್‌ ಹರಡುವಿಕೆಯನ್ನು ತಡೆಯುವಲ್ಲಿ ಸಫಲವಾಗಿದೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಮಾ.31ರ ವೇಳೆಗೆ 40, ಏ.5ರ ವೇಳೆಗೆ 30ನೇ ಸ್ಥಾನಕ್ಕೇರಿತು. ಯಾವಾಗ ಲಾಕ್‌ಡೌನ್‌ ಸಡಿಲವಾಯಿತೋ, ಅಂದಿನಿಂದ ಸೋಂಕು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಯಿತು. ಅದು ಈಗ ಭಾರತವನ್ನು ಟಾಪ್‌ 10 ದೇಶಗಳ ಸಾಲಿಗೆ ಸೇರ್ಪಡೆ ಮಾಡಿದೆ.

ತಾಯಿ ಮಡಿಲು ಸೇರಲು ವಿಮಾನದಲ್ಲಿ ಒಬ್ಬನೇ ಬಂದ 5ರ ಬಾಲಕ!

ಭಾರತದಲ್ಲಿ ಮೊದಲ ಸೋಂಕು ಪತ್ತೆಯಾದಾಗ ಬ್ರಿಟನ್‌, ಸ್ಪೇನ್‌, ರಷ್ಯಾ ಹಾಗೂ ಬ್ರೆಜಿಲ್‌ನಂತಹ ದೇಶಗಳಲ್ಲಿ ಒಂದೇ ಒಂದು ಕೊರೋನಾ ಪ್ರಕರಣವೂ ಇರಲಿಲ್ಲ. ಆದರೆ ಭಾರತಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದ್ದರೂ ಆ ದೇಶಗಳು ಕೊರೋನಾದಿಂದ ಅತಿ ಹೆಚ್ಚು ತತ್ತರಿಸಿದ್ದು, ಟಾಪ್‌ 5ರೊಳಗೆ ಸ್ಥಾನ ಪಡೆದಿವೆ. ಆ ದೇಶಗಳಿಗೆ ಹೋಲಿಸಿದರೆ ಭಾರತ ಕೊರೋನಾ ಹಾವಳಿಯನ್ನು ತಗ್ಗಿಸುವಲ್ಲಿ ಸದ್ಯದ ಮಟ್ಟಿಗೆ ಯಶಸ್ವಿಯಾಗಿದೆ. ಆದರೆ ಭಾರತದಲ್ಲಿ ಮೊದಲ ಪ್ರಕರಣ ಪತ್ತೆಯಾದಾಗ ವಿಶ್ವದಲ್ಲೇ ನಂ.1 ಸ್ಥಾನದಲ್ಲಿದ್ದ ಚೀನಾ, ಅದು ಹೇಗೋ ಪರಿಸ್ಥಿತಿಯನ್ನು ನಿಭಾಯಿಸುವ ಮೂಲಕ ಈಗ 14ನೇ ಸ್ಥಾನಕ್ಕೆ ಕುಸಿದಿರುವುದು ಅಚ್ಚರಿಗೆ ಕಾರಣವಾಗಿದೆ.

Latest Videos
Follow Us:
Download App:
  • android
  • ios