ಭಾರತ ಔಷಧಿ ರಫ್ತು ಮಾಡದಿದ್ದರೆ ಪ್ರತೀಕಾರ: ಟ್ರಂಪ್ ಎಚ್ಚರಿಕೆ!
ಮಲೇರಿಯಾ ತಡೆಗಟ್ಟುವ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿನ ಮೇಲಿನ ನಿಷೇಧ ಹಿಂಪಡೆಯಲು ಅಮೆರಿಕ ಒತ್ತಡ| ನಿಇಷೇಧ ಹಿಂಪಡೆಯದಿದ್ದರೆ ಪ್ರತೀಕಾರದ ಎಚ್ಚರಿಕೆ| ಹೈಡ್ರೋಕ್ಸಿಕ್ಲೋರೋಕ್ವಿನ್ ಕೊರೋನಾ ತಡೆಯುವ ಸಾಮರ್ಥ್ಯ ಹೊಂದಿದೆ ಎಂದು ಸಂಶೋಧನೆಯಲ್ಲಿ ಬಯಲು
ವಾಷಿಂಗ್ಟನ್(ಏ.07): ಕೊರೋನಾ ಪೀಡಿತರ ಚಿಕಿತ್ಸೆಗಾಗಿ ಬಳಸಲಾಗುವ ಮಲೇರಿಯಾ ತಡೆಗಟ್ಟುವ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿನ ಮೇಲಿನ ನಿಷೇಧವನ್ನು ಭಾರತ ಹಿಂಪಡೆಯದಿದ್ದಲ್ಲಿ ಪ್ರತೀಕಾರ ಪಡೆಯುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. ಕಳೆದೆರಡು ದಿನಗಳ ಹಿಂದಷ್ಟೇ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ರಫ್ತು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಬಳಿ ಮನವಿ ಮಾಡಿದ್ದರು.
ಈ ಸಂಬಂಧ ಮಾತನಾಡಿದ ಟ್ರಂಪ್ ‘ನಾನು ಈಗಾಗಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ್ದೇನೆ. ಭಾರತವೇನಾದರೂ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ರಫ್ತಿನ ಮೇಲಿನ ನಿಷೇಧ ಹಿಂಪಡೆಯದಿದ್ದರೆ ಉಭಯ ದೇಶಗಳ ನಡುವಿನ ಸಂಬಂಧ ಮೊದಲಿನ ಹಾಗೆ ಉಳಿಯುವುದಿಲ್ಲ. ಈ ಸಂಬಂಧವನ್ನು ಮುಂದುವರೆಸಬೇಕಾದ ಅಗತ್ಯವೂ ನಮಗೆ ಇರುವುದಿಲ್ಲ ಎಂದು ವೈಟ್ಹೌಸ್ನಲ್ಲಿ' ಎಂದಿದ್ದಾರೆ
ಇತ್ತೀಚೆಗಷ್ಟೇ ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡಿದ್ದ ಟ್ರಂಪ್ ಅಮೆರಿಕಾದಲ್ಲಿ ಕೊರೋನಾ ವೈರಸ್ ನಿಯಂತ್ರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಔಷಧ ಅಭಿವೃದ್ಧಿ ಪಡಿಸುವ ಪ್ರಯತ್ನವೂ ನಡೆಯುತ್ತಿದೆ. ಈ ನಡುವೆ ಮಲೇರಿಯಾ ತಡೆಗೆ ಬಳಸುವ ಹೈಡ್ರೋಕ್ಸಿಕ್ಲೋರೋಕ್ವಿನ್ ಈ ಸೋಂಕು ನಿಯಂತ್ರಿಸಲು ಸಹಾಯಕವಾಗಿದೆ ಎಂದಿದ್ದಾರೆ. ಈ ಮೂಲಕದ ಸಂಶೋಧನೆಯ ಕುರಿತು ಉಲ್ಲೇಖಿಸಿದ್ದರು.
ಕೊರೋನಾ ತಾಂಡವ: ಭಾರತದ ಸಹಾಯ ಯಾಚಿಸಿದ ವಿಶ್ವದ ದೊಡ್ಡಣ್ಣ!
ಭಾರತದಲ್ಲಿ ಹೆಚ್ಚಾಗಿ ಉತ್ಪಾದನೆಯಾಗುತ್ತಿರುವ ಹೈಡ್ರೋಕ್ಸಿಕ್ಲೋರೋಕ್ವಿನ್ ಕೊರೋನಾ ತಡೆಯುವ ಸಾಮರ್ಥ್ಯ ಹೊಂದಿದೆ ಎಂದು ತಿಳಿದ ಬೆನ್ನಲ್ಲೇ ಈ ಔಷಧಿಯನ್ನು ರಫ್ತು ಮಾಡದಂತೆ, ಮಾ. 25ರಿಂದ ಕೇಂದ್ರ ಸರ್ಕಾರ ನಿಷೇಧ ಹೇರಿತ್ತು. ಆ ನಿಷೇಧವನ್ನು ಸಡಿಲಗೊಳಿಸುವಂತೆ ಅಮೆರಿಕ ಈಗ ಒತ್ತಡ ಹೇರುತ್ತಿದೆ.
ಅಮೆರಿಕಾದಲ್ಲಿ ಕೊರೋನಾ ತಾಂಡವ
ಸದ್ಯ ಅಮೆರಿಕಾದಲ್ಲಿ ಕೋವಿಡ್ 19 ಅಟ್ಟಹಾಸ ಮೆರೆಯುತ್ತಿದ್ದು 10,871 ಜನರು ಬಲಿಯಾಗಿದ್ದು, 3,67,004 ಜನ ಸೋಂಕು ಪೀಡಿತರಾಗಿದ್ದಾರೆ ಎಂದು ವರದಿ ತಿಳಿಸಿದೆ.