ಕೊರೋನಾದಿಂದ ಜಗತ್ತು ರಕ್ಷಿಸಲು ಚೀನಾದ ಒಂದು ಇಡೀ ಪ್ರಾಂತ್ಯವೇ ಬಲಿ!
ಕೊರೋನಾದಿಂದ ಜಗತ್ತು ರಕ್ಷಿಸಲು ಪ್ರಾಂತ್ಯವನ್ನೇ ‘ಬಲಿ’ ಕೊಟ್ಟ ಚೀನಾ| ಕೊರೋನಾ ಕೇಂದ್ರ ಬಿಂದು ಹುಬೆ ಪ್ರಾಂತ್ಯದಲ್ಲಿ ಎಲ್ಲವೂ ನಿಷಿದ್ಧ| ಹೆಚ್ಚಿನ ಚಿಕಿತ್ಸೆ ಪಡೆಯಲೂ ರೋಗಿಗಳು ಹೊರಗೆ ಹೋಗುವಂತಿಲ್ಲ| ಈ ಕ್ರಮಗಳಿಂದ ರೋಗ ಮತ್ತಷ್ಟುಹರಡುವುದನ್ನು ತಪ್ಪಿಸಿದ ಚೀನಾ
ಬೀಜಿಂಗ್[ಫೆ.07]: ಪ್ರತಿನಿತ್ಯ 60ರಿಂದ 70 ಮಂದಿಯನ್ನು ಬಲಿ ಪಡೆದು ಜಾಗತಿಕವಾಗಿ ಭೀತಿ ಹುಟ್ಟಿಸಿರುವ ಮಾರಕ ಕೊರೋನಾ ವೈರಸ್ ವಿಶ್ವಾದ್ಯಂತ ವ್ಯಾಪಿಸುವುದನ್ನು ತಪ್ಪಿಸಲು ಚೀನಾ ತನ್ನ ಒಂದು ಪ್ರಾಂತ್ಯವನ್ನೇ ‘ತ್ಯಾಗ’ ಮಾಡಿಬಿಟ್ಟಿದೆ.
ಮೊದಲ ಬಾರಿಗೆ ಕೊರೋನಾ ವೈರಸ್ ಕಂಡುಬಂದಿದ್ದು, 6 ಕೋಟಿ ಜನಸಂಖ್ಯೆ ಹೊಂದಿರುವ ಚೀನಾದ ಹುಬೆ ಪ್ರಾಂತ್ಯದಲ್ಲಿ. ವೈರಾಣು ಸೋಂಕು ತೀವ್ರಗೊಳ್ಳುತ್ತಿದ್ದಂತೆ ಜ.23ರಿಂದ ಆ ಪ್ರಾಂತ್ಯವನ್ನು ಚೀನಾ ಅಕ್ಷರಶಃ ಮುಚ್ಚಿಸಿದೆ. ಜನರ ಮುಕ್ತ ಓಡಾಟಕ್ಕೆ ನಿರ್ಬಂಧ ಹೇರಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಬಂದ್ ಮಾಡಿದೆ. ಕಾರ್ಯಕ್ರಮ, ಸಮಾವೇಶಗಳನ್ನು ನಿಷೇಧಿಸಿದೆ.
ಕೊರೋನಾ ರೋಗ ಮುಚ್ಟಿಟ್ಟರೆ ಮರಣದಂಡನೆ!
ಹೀಗಾಗಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ಒಂದು ವೇಳೆ, ಜನರ ಮುಕ್ತ ಸಂಚಾರಕ್ಕೆ ಚೀನಾ ಏನಾದರೂ ಅನುವು ಮಾಡಿಕೊಟ್ಟಿದ್ದರೆ ಹುಬೆ ಪ್ರಾಂತ್ಯದ ಚೀನಿಯರು ದೇಶದ ಇತರೆ ಭಾಗಗಳಿಗೆ ಚಿಕಿತ್ಸೆಗಾಗಿ ತೆರಳುತ್ತಿದ್ದರು. ಇಡೀ ಚೀನಾದಾದ್ಯಂತ, ನಂತರ ವಿಶ್ವದಾದ್ಯಂತ ಈ ಸೋಂಕು ಭಾರಿ ವೇಗದಲ್ಲಿ ವ್ಯಾಪಿಸುವ ಅಪಾಯವಿತ್ತು. ಆದರೆ ಹುಬೆ ಪ್ರಾಂತ್ಯವನ್ನು ಬಂದ್ ಮಾಡುವ ಮೂಲಕ ಚೀನಾ ಆ ಆಪಾಯವನ್ನು ತಪ್ಪಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಮತ್ತೊಂದೆಡೆ, ಹುಬೆ ಪ್ರಾಂತ್ಯದ ಜನರಿಗಾಗಿ ಚೀನಾ ತನ್ನ ವಿವಿಧ ಭಾಗಗಳ 8000 ಆರೋಗ್ಯ ಸಿಬ್ಬಂದಿಯನ್ನು ಅಲ್ಲಿಗೆ ರವಾನಿಸಿದೆ. ಹುಬೆ ಪ್ರಾಂತ್ಯದ ವುಹಾನ್‌ನಲ್ಲಿ 27 ಆಸ್ಪತ್ರೆಗಳಲ್ಲಿ ಕೊರೋನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. 2600 ಹಾಸಿಗೆ ಸಾಮರ್ಥ್ಯದ ಎರಡು ಆಸ್ಪತ್ರೆಗಳನ್ನು 2000 ಕಾರ್ಮಿಕರನ್ನು ಬಳಸಿ ಹತ್ತೇ ದಿನದಲ್ಲಿ ನಿರ್ಮಾಣ ಮಾಡಿದೆ. ವೈದ್ಯರಿಗೆ ಮುಖಗವಸು, ಕೈಗವಸು ಹಾಗೂ ರಕ್ಷಣಾ ಸಮವಸ್ತ್ರ ಧರಿಸಿ ಕೆಲಸ ಮಾಡುವಂತೆ ಸೂಚಿಸಿದೆ. ಹುಬೆ ಪ್ರಾಂತ್ಯದ ವೈದ್ಯರು ಕಳೆದ ಕೆಲವು ವಾರಗಳಿಂದ ನಿದ್ರೆಗೆಟ್ಟು ಕೆಲಸ ಮಾಡುತ್ತಿದ್ದಾರೆ. ರೋಗಿಗಳು ಚಿಕಿತ್ಸೆಗಾಗಿ 8 ತಾಸು ಕ್ಯೂ ನಿಲ್ಲುವಂತಹ ಪರಿಸ್ಥಿತಿ ಇದೆ ಎಂದು ವರದಿಗಳು ತಿಳಿಸಿವೆ.