ಟೆಲಿಕಾಂ ಕಂಪನಿಗಳಿಗೆ ಕೇಂದ್ರದಿಂದ ಬಿಗ್ ರಿಲೀಫ್!
ಟೆಲಿಕಾಂ ಕಂಪನಿಗಳಿಗೆ ಕೇಂದ್ರದ ನೆರವು| 42000 ಕೋಟಿ ರು. ಸ್ಪೆಕ್ಟ್ರಂ ಖರೀದಿ ಶುಲ್ಕ ಪಾವತಿ ಅವಧಿ 2 ವರ್ಷ ಮುಂದೂಡಿಕೆ
ನವದೆಹಲಿ[ನ.21]: ಭಾರೀ ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿರುವ ಟೆಲಿಕಾಂ ಕಂಪನಿಗಳ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ.
ಸ್ಪೆಕ್ಟ್ರಂ ಖರೀದಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಪಾವತಿ ಮಾಡಬೇಕಿರುವ ಸುಮಾರು 42000 ಕೋಟಿ ರು. ಹಣ ಪಾವತಿ ಅವಧಿಯನ್ನು ಸರ್ಕಾರ ಎರಡು ವರ್ಷಗಳ ಕಾಲ ಮುಂದೂಡಿದೆ.
ಇದರಿಂದಾಗಿ ತಕ್ಷಣಕ್ಕೆ ಭಾರೀ ಮೊತ್ತ ಪಾವತಿಯ ಅನಿವಾರ್ಯತೆಗೆ ಸಿಲುಕಿದ್ದ ಏರ್‌ಟೆಲ್, ವೊಡಾಫೋನ್- ಐಡಿಯಾ ಮತ್ತು ರಿಲಯನ್ಸ್ ಜಿಯೋ ಕಂಪನಿಗಳು ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಈ ಕಂಪನಿಗಳು 2020-21 ಮತ್ತು 2021-22ನೇ ವರ್ಷಕ್ಕೆ ಪಾವತಿಸಬೇಕಿರುವ ಶುಲ್ಕವನ್ನು 2022-23ರ ಹಣಕಾಸು ವರ್ಷದಲ್ಲಿ ಪಾವತಿಸಬೇಕಾಗುತ್ತದೆ. ಜೊತೆಗೆ ವಿಸ್ತರಿತ ಅವಧಿಗೆ ತಗಲುವ ಬಡ್ಡಿಯನ್ನು ಕಂಪನಿಗಳು ಪಾವತಿಸಬೇಕು ಎಂದು ಸರ್ಕಾರ ಸೂಚಿಸಿದೆ.