ಏರ್‌ಟೆಲ್, ವೊಡಾ, ಟಾಟಾದಿಂದ ಕೇಂದ್ರಕ್ಕೆ 15 ಸಾವಿರ ಕೋಟಿ ಪಾವತಿ!
ಎಜಿಆರ್ ಶುಲ್ಕದ ಪೈಕಿ ಒಂದಷ್ಟು ಮೊತ್ತ ಕಟ್ಟಿದ ಕಂಪನಿಗಳು| ಏರ್‌ಟೆಲ್, ವೊಡಾ, ಟಾಟಾದಿಂದ ಕೇಂದ್ರಕ್ಕೆ 15000 ಕೋಟಿ ಪಾವತಿ
ನವದೆಹಲಿ[ಫೆ.18]: ಸುಪ್ರೀಂಕೋರ್ಟ್ ತಪರಾಕಿ ಬಳಿಕ ‘ಎಜಿಆರ್’ ಶುಲ್ಕ ಪಾವತಿಸುವ ಅನಿವಾರ್ಯತೆಗೆ ಸಿಲುಕಿದ್ದ ಸಂಸ್ಥೆಗಳ ಪೈಕಿ ಮೂರು ಟೆಲಿಕಾಂ ಕಂಪನಿಗಳು ಒಂದಷ್ಟುಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಕಟ್ಟಿ, ಬೀಸೋ ದೊಣ್ಣೆಯಿಂದ ಪಾರಾಗುವ ಪ್ರಯತ್ನ ನಡೆಸಿವೆ. ಈ ಮೂರೂ ಕಂಪನಿಗಳು 1 ಲಕ್ಷ ಕೋಟಿ ರು. ಪಾವತಿಸಬೇಕಾಗಿದೆಯಾದರೂ, ಸದ್ಯದ ಮಟ್ಟಿಗೆ ಸುಮಾರು 15 ಸಾವಿರ ಕೋಟಿ ರು. ಹಣವನ್ನು ಸರ್ಕಾರಕ್ಕೆ ಕಟ್ಟಿವೆ.
ಸರ್ಕಾರಕ್ಕೆ ಭಾರತಿ ಏರ್‌ಟೆಲ್ ಕಂಪನಿ 35,586 ಕೋಟಿ ರು. ಬಾಕಿ ಪಾವತಿಸಬೇಕಿದ್ದು, ಆ ಪೈಕಿ ಸೋಮವಾರ 10 ಸಾವಿರ ಕೋಟಿ ರು. ನೀಡಿದೆ. ವೊಡಾಫೋನ್ ಕಂಪನಿ 53,039 ಕೋಟಿ ರು. ಪಾವತಿಸಬೇಕಾಗಿದೆಯಾದರೂ, 2500 ಕೋಟಿ ರು. ಕಟ್ಟಿದೆ. ಟಾಟಾ ಗ್ರೂಪ್ ತನ್ನ ಬಾಕಿ ಮೊತ್ತ 13823 ಕೋಟಿ ರು. ಪೈಕಿ 2190 ಕೋಟಿ ರು. ಅನ್ನು ಪಾವತಿಸಿದೆ.
ಒಟ್ಟು 15 ಕಂಪನಿಗಳು ಸರ್ಕಾರಕ್ಕೆ 1.47 ಲಕ್ಷ ಕೋಟಿ ರು. ಎಜಿಆರ್ ಶುಲ್ಕ ಪಾವತಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ ಇದರ ವಸೂಲಾತಿಗೆ ಸರ್ಕಾರದ ಅಧಿಕಾರಿಯೊಬ್ಬರು ತಡೆ ನೀಡಿದ್ದರು. ಈ ಬಗ್ಗೆ ಸುಪ್ರೀಂಕೋರ್ಟ್ ಗರಂ ಆದ ಹಿನ್ನೆಲೆಯಲ್ಲಿ ಬಾಕಿ ಕಟ್ಟಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಎಜಿಆರ್ ಎಂಬುದು ಕಂಪನಿಗಳ ಆದಾಯದಲ್ಲಿ ಸರ್ಕಾರಕ್ಕೆ ನೀಡುವ ಪಾಲಿನ ಮೊತ್ತವಾಗಿದೆ.