ದೀಪಾವಳಿ ಹಬ್ಬಕ್ಕೆ ರೈತರಿಗೊಂದು ಬಂಪರ್ ಸುದ್ದಿ
ಎಮ್ಮೆ ಹಾಲಿಗೆ 4, ಹಸು ಹಾಲಿಗೆ 2 ಹೆಚ್ಚಳ| ವಿಜಯಪುರ- ಬಾಗಲಕೋಟೆ ಹಾಲು ಒಕ್ಕೂಟದ ಸಭೆಯಲ್ಲಿ ಹಾಲು ದರ ಹೆಚ್ಚಳಕ್ಕೆ ನಿರ್ಧಾರ| ಅ.16ರಿಂದ ಜಾರಿಗೆ ಬರುವಂತೆ ಈ ನಿರ್ಧಾರ ಪ್ರಕಟಿಸಲಾಗಿದೆ| ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ರೈತರಿಗೆ ದೀಪಾವಳಿ ಕೊಡುಗೆ ನೀಡಿದಂತಾಗಿದೆ| ಈ ಬಾರಿ ಅತ್ಯಧಿಕ ಮೊತ್ತ ಹೆಚ್ಚಳ ಮಾಡಿರುವುದು ದಾಖಲೆಯಾಗಿದೆ|
ವಿಜಯಪುರ[ಅ.15]: ಬರ ಮತ್ತು ನೆರೆ ಹಾವಳಿ ಹಿನ್ನೆಲೆಯಲ್ಲಿ ಅವಳಿ ಜಿಲ್ಲೆಯ ಹಾಲು ಉತ್ಪಾದಕರು ಸಂಕಷ್ಟದಲ್ಲಿದ್ದು, ರೈತರಿಗೆ ನೆರವಾಗುವ ದೃಷ್ಟಿಯಿಂದ ಪ್ರತಿ ಕೆಜಿ ಎಮ್ಮೆ ಹಾಲಿಗೆ 4 ಹಾಗೂ ಆಕಳು ಹಾಲಿಗೆ 2 ಹೆಚ್ಚಿಸಲು ವಿಜಯಪುರ- ಬಾಗಲಕೋಟೆ ಹಾಲು ಉತ್ಪಾದಕರ ಒಕ್ಕೂಟ ನಿರ್ಧರಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಸಂಭಾಜಿ ಮಿಸಾಳೆ ತಿಳಿಸಿದ್ದಾರೆ.
ನಗರದ ಹೊರ ವಲಯದ ಭೂತನಾಳದಲ್ಲಿರುವ ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಿಸಿದ್ದಾರೆ.
ಅ.16ರಿಂದ ಜಾರಿಗೆ ಬರುವಂತೆ ಈ ನಿರ್ಧಾರ ಪ್ರಕಟಿಸಲಾಗಿದ್ದು, ಎಮ್ಮೆ ಹಾಲಿಗೆ ಪ್ರತಿ ಕೆಜಿಗೆ 4 ಹೆಚ್ಚಳ ಮಾಡಿ ಶೇ. 6ರಷ್ಟು ಫ್ಯಾಟ್, ಶೇ. 9 ರಷ್ಟು ಎಸ್‌ಎನ್‌ಎಫ್‌ಯುಳ್ಳ ಎಮ್ಮೆ ಹಾಲಿನ ಖರೀದಿ ದರವನ್ನು ಕನಿಷ್ಠ ದರ 33 ನಿಗದಿಪಡಿಸಲಾಗಿದ್ದು, ಆಕಳು ಹಾಲಿಗೆ ಪ್ರತಿ ಕೆಜಿಗೆ 2 ಹೆಚ್ಚಿಸಿ ಶೇ.3.5ರಷ್ಟುಫ್ಯಾಟ್ ಮತ್ತು ಶೇ. 8.5 ಎಸ್‌ಎನ್‌ಎಫ್‌ಯುಳ್ಳ ಆಕಳು ಹಾಲಿಗೆ ಕನಿಷ್ಠ 23 ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದರಿಂದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ರೈತರಿಗೆ ದೀಪಾವಳಿ ಕೊಡುಗೆ ನೀಡಿದಂತಾಗಿದೆ. ಪ್ರತಿ ವರ್ಷ ಸುಗ್ಗಿ ಕಾಲ ಪ್ರಾರಂಭದಲ್ಲಿ ಅಂದರೆ ಅಕ್ಟೋಬರ್‌ನಿಂದ ಹಾಲಿನ ದರ ಕಡಿಮೆ ಮಾಡಲಾಗುತ್ತಿತ್ತು. ಈ ಬಾರಿ ಅತ್ಯಧಿಕ ಮೊತ್ತ ಹೆಚ್ಚಳ ಮಾಡಿರುವುದು ದಾಖಲೆಯಾಗಿದೆ ಎಂದರು.
ಅಲ್ಲದೇ ಪ್ರಮುಖ ಉತ್ಪಾದನಾ ವೆಚ್ಚವಾದ ನಂದಿನಿ ಸಮತೋಲನ ಪಶು ಆಹಾರದ 50 ಕೆಜಿ ಚೀಲಕ್ಕೆ .100ರಂತೆ ಸಹಾಯಧನ ನೀಡಲಾಗುತ್ತಿದ್ದು, ನವೆಂಬರ್ 1ರಿಂದ ಪರಿಷ್ಕೃತ ಪರಿಹಾರ ಧನ ನೀಡಲಾಗುವುದು ಎಂದೂ ತಿಳಿಸಿದ್ದಾರೆ.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ ಮಾತನಾಡಿ, ಒಕ್ಕೂಟದ ಹಾಲು ಖರೀದಿ ದರ ಹೆಚ್ಚಳದಿಂದ ಒಕ್ಕೂಟಕ್ಕೆ ಪ್ರತಿ ತಿಂಗಳು .1 ಕೋಟಿ ಮತ್ತು ಪಶು ಆಹಾರ ಸಹಾಯಧನ ನೀಡಿಕೆಯಿಂದ ಪ್ರತಿ ತಿಂಗಳು .18 ಲಕ್ಷ ಸೇರಿ ಒಟ್ಟು 1.18 ಕೋಟಿ ಹೆಚ್ಚುವರಿ ವೆಚ್ಚ ಭರಿಸಬೇಕಾಗುತ್ತದೆ ಎಂದರು.
ಕರ್ನಾಟಕ ಹಾಲು ಮಹಾಮಂಡಳ ಮತ್ತು ಒಕ್ಕೂಟದ ನಿರ್ದೇಶಕ ಎಸ್.ಬಿ. ಪಾಟೀಲ, ವಿಮೂಲ್ ನಿರ್ದೇಶಕರಾದ ಎಸ್.ಜೆ. ಹಂಡಿ, ಜಿ.ಎಸ್. ಚಲವಾದಿ, ಎಸ್.ಎ. ಕಡಪಟ್ಟಿ, ಐ.ಎಸ್. ಕರಿಗೌಡ್ರ, ಎಂ.ಆರ್. ಹನಗಂಡಿ, ಎಸ್.ಎಲ್. ತಳೇವಾಡ, ಜಿ.ಎಂ. ಆದಬಸಪ್ಪಗೋಳ, ಎ.ಕೆ. ಹಳ್ಳೂರ, ನಾಮ ನಿರ್ದೇಶಿತ ಸದಸ್ಯ ಕೆ.ಎಲ್. ಬಿಲ್‌ಕೆರಿ ಅನೇಕರಿದ್ದರು.