Asianet Suvarna News Asianet Suvarna News

ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿಯನ್ನು ಈ ದಿಕ್ಕಿನಲ್ಲಿಟ್ಟರೆ ಕ್ಷೇಮ

ಚಪ್ಪಲಿ ಸ್ಥಾನ ಏನಿದ್ದರೂ ಮನೆಯ ಹೊರಗೆಯೇ.ವಾಸ್ತುಶಾಸ್ತ್ರದ ಪ್ರಕಾರ ಮನೆಯ ಕೆಲವು ದಿಕ್ಕು ಹಾಗೂ ಸ್ಥಳಗಳಲ್ಲಿ ಚಪ್ಪಲಿ ಸ್ಟ್ಯಾಂಡ್ ಇಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚುವ ಜೊತೆಗೆ ದಾರಿದ್ರ್ಯವೂ ಕಾಡಬಹುದಂತೆ.

Where you should keep shoe rack at home according to vastu
Author
Bangalore, First Published Feb 24, 2020, 2:18 PM IST

ಭಾರತೀಯ ಸಂಪ್ರದಾಯದಲ್ಲಿ ಚಪ್ಪಲಿಯ ಸ್ಥಾನ ಮನೆಯ ಹೊರಗೆ. ಚಪ್ಪಲಿ ಮನೆ ಹೊಸ್ತಿಲು ದಾಟಿ ಒಳಬರಬಾರದು ಎಂಬುದು ತಲಾತಲಾಂತರಗಳಿಂದ ಅನುಸರಿಸಿಕೊಂಡು ಬಂದಿರುವ ಪದ್ಧತಿಯಾಗಿದೆ.ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಚಪ್ಪಲಿ ಹಾಕಿಕೊಂಡು ಊರೆಲ್ಲ ಸುತ್ತಾಡಿ ಮನೆಯೊಳಗೆ ಬಂದರೆ ಅದರಲ್ಲಿರುವ ಕೊಳೆ, ರೋಗಾಣುಗಳು ಮನೆಮಂದಿಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಚಪ್ಪಲಿಯನ್ನು ಹೊರಗಿಡುವುದು ಉತ್ತಮ. ಚಪ್ಪಲಿಯನ್ನು ಮನೆ ಹೊರಗೇ ಇಡುತ್ತೇವಾದರೂ ಅದನ್ನು ಹೇಗಿಡಬೇಕು, ಎಲ್ಲಿಡಬೇಕು? ಎಂಬ ಪ್ರಶ್ನೆ ಕಾಡಬಹುದು.ಮನೆಯಲ್ಲಿ ಚಪ್ಪಲಿಗಳನ್ನು ಎಲ್ಲಿಡಬೇಕು ಎಂಬ ಬಗ್ಗೆ ವಾಸ್ತುಶಾಸ್ತ್ರದಲ್ಲಿ ಕೂಡ ಉಲ್ಲೇಖವಿದೆ. ಜ್ಯೋತಿಷಿಗಳ ಪ್ರಕಾರ ಚಪ್ಪಲಿಗೂ ಶನಿ ಗ್ರಹಕ್ಕೂ ಸಂಬಂಧವಿದೆ. ವಾಸ್ತುಶಾಸ್ತ್ರದ ಪ್ರಕಾರ ನೋಡುವುದಾದ್ರೆ ಶನಿ ಪಶ್ಚಿಮ ದಿಕ್ಕಿನಲ್ಲಿರುವ ಗ್ರಹ. ಹೀಗಾಗಿ ಶೂ ಸ್ಟ್ಯಾಂಡನ್ನು ಪಶ್ಚಿಮ ದಿಕ್ಕಿನಲ್ಲಿಡುವುದು ಉತ್ತಮ. ಚಪ್ಪಲಿಗೂ ಶನಿ ಗ್ರಹಕ್ಕೂ ಸಂಬಂಧವಿರುವ ಕಾರಣ ಮನೆಯಲ್ಲಿ ಶೂ ಸ್ಟ್ಯಾಂಡನ್ನು ಯಾವ ಸ್ಥಳದಲ್ಲಿಡಬೇಕು ಎಂಬ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. 

ಬೆಡ್‌ರೂಂನಲ್ಲಿ ಎಂಥ ಫೋಟೋಗಳಿದ್ರೆ ರೋಮಾಂಚನ ಗೊತ್ತಾ?

ಈ ಸ್ಥಳಗಳಲ್ಲಿ ಶೂ ಸ್ಟ್ಯಾಂಡ್ ಇಡಬೇಡಿ:
-ಮನೆಯ ಮುಖ್ಯದ್ವಾರದ ಮುಂಭಾಗದಲ್ಲಿ ಶೂ ಸ್ಟ್ಯಾಂಡ್ ಇಡಬಾರದು. ಮನೆಗೆ ಪಾಸಿಟಿವ್ ಎನರ್ಜಿ ಪ್ರವೇಶವಾಗುವುದೇ ಮುಖ್ಯದ್ವಾರದ ಮೂಲಕ. ಹೀಗಾಗಿ ಮುಖ್ಯದ್ವಾರದ ಮುಂಭಾಗ ಶೂ ಸ್ಟ್ಯಾಂಡ್ ಇಟ್ಟರೆ ಪಾಸಿಟಿವ್ ಎನರ್ಜಿ ಮನೆಯೊಳಗೆ ಪ್ರವೇಶಿಸಲು ತಡೆಯುಂಟಾಗುತ್ತದೆ.ಅಲ್ಲದೆ,ಚಪ್ಪಲಿ ಕಾಲಿಗೆ ಧರಿಸುವ ವಸ್ತುವಾಗಿದ್ದು, ಅದು ಅಶುಭ ಎಂದೇ ಹೇಳಲಾಗುತ್ತದೆ. ಹೀಗಾಗಿ ಸಕಾರಾತ್ಮಕ ಶಕ್ತಿ ಪ್ರವೇಶಕ್ಕೆ ಅದು ಭಂಗವುಂಟು ಮಾಡುವ ಸಾಧ್ಯತೆಯೂ ಇದೆ.
-ಶೂ ಸ್ಟ್ಯಾಂಡ್ನ್ನು ಬೆಡ್‍ರೂಮ್‍ನಲ್ಲಿಡಬಾರದು.ಒಂದು ವೇಳೆ ಬೆಡ್‍ರೂಮ್‍ನಲ್ಲಿ ಶೂ ಸ್ಟ್ಯಾಂಡ್ ಇಟ್ಟರೆ ಅದು ನಿಮ್ಮ ದಾಂಪತ್ಯ ಬದುಕಿನ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆಯಿದೆ.
-ಚಪ್ಪಲಿ ಕೊಳೆಯ ಸಂಕೇತ. ಚಪ್ಪಲಿಯಲ್ಲಿ ಆರೋಗ್ಯಕ್ಕೆ ಹಾನಿ ಮಾಡುವ ಸಹಸ್ರಾರು ರೋಗಾಣುಗಳಿರುತ್ತವೆ.ಬರೀ ವಾಸ್ತು ದೃಷ್ಟಿಯಿಂದ ಮಾತ್ರವಲ್ಲ,ಆರೋಗ್ಯದ ದೃಷ್ಟಿಯಿಂದ ಕೂಡ ಶೂ ಸ್ಟ್ಯಾಂಡ್ ಅನ್ನು ಅಡುಗೆಮನೆಯಲ್ಲಿಡಬಾರದು. ದೇವಸ್ಥಾನದ ಒಳಹೊಕ್ಕುವ ಮುನ್ನ ಚಪ್ಪಲಿ ತೆಗೆದಿಟ್ಟೇ ಹೋಗುತ್ತೇವೆ. ಹೀಗಿರುವಾಗ ದೇವರಮನೆಯಲ್ಲಿ ಯಾರಾದ್ರೂ ಚಪ್ಪಲಿ ಸ್ಟ್ಯಾಂಡ್ ಇಡ್ತಾರಾ? ಒಂದು ವೇಳೆ ಹಾಗೇನಾದ್ರೂ ಇಟ್ಟರೆ ವಾಸ್ತುಶಾಸ್ತ್ರದ ಪ್ರಕಾರ ಮನೆಗೆ ಅಶುಭವಾಗಬಹುದು.
-ನಿಮ್ಮ ಮನೆಯ ಈಶಾನ್ಯ ದಿಕ್ಕು ಅತ್ಯಂತ ಪವಿತ್ರವಾದ ಸ್ಥಳ.ಇದು ಪ್ರಾರ್ಥನೆ ಮಾಡಲು,ದೇವರನ್ನು ಸ್ತುತಿಸಲು ಸೂಕ್ತವಾದ ದಿಕ್ಕು. ಹೀಗಾಗಿ ಈ ಜಾಗದಲ್ಲಿ ನೀವು ಚಪ್ಪಲಿಗಳನ್ನಿಡಬಾರದು.
- ಹೊಸ ಅವಕಾಶಗಳ ಬಾಗಿಲು ತೆರೆಯುವ ದಿಕ್ಕು ಉತ್ತರ. ಆದಕಾರಣ ಉತ್ತರ ದಿಕ್ಕಿನಲ್ಲಿ ಶೂ ಸ್ಟ್ಯಾಂಡ್ಯಿಟ್ಟರೆ ನಿಮ್ಮ ವೃತ್ತಿಬದುಕಿನಲ್ಲಿ ಸಂಕಷ್ಟಗಳು ಸೃಷ್ಟಿಯಾಗುವ ಸಾಧ್ಯತೆಯಿದೆ.
-ಸಾಮಾಜಿಕ ಸಂಘಟನೆ ಹಾಗೂ ಸಂಪರ್ಕವನ್ನು ಸೂಚಿಸುವ ದಿಕ್ಕು ಪೂರ್ವ. ಹೀಗಾಗಿ ಎಲ್ಲರೊಂದಿಗೆ ಬೆರೆತು ಸಮಾಜಮುಖಿ ಬದುಕು ನಿಮ್ಮದಾಗಬೇಕೆಂದ್ರೆ ಮನೆಯ ಪೂರ್ವ ದಿಕ್ಕಿನಲ್ಲಿ ಚಪ್ಪಲಿಗಳನ್ನಿಡಬಾರದು.
-ಆಗ್ನೇಯ ದಿಕ್ಕು ಮನೆಗೆ ಹಣ ಹಾಗೂ ಸಂಪತ್ತಿನ ಹರಿವನ್ನು ಸೂಚಿಸುವ ದಿಕ್ಕಾಗಿದೆ. ಹೀಗಾಗಿ ಈ ಭಾಗದಲ್ಲಿ ಚಪ್ಪಲಿಗಳನ್ನಿಟ್ಟರೆ ಲಕ್ಷ್ಮೀ ದೇವಿ ಮುನಿಸಿಕೊಳ್ಳುತ್ತಾಳೆ ಎನ್ನುತ್ತದೆ ವಾಸ್ತುಶಾಸ್ತ್ರ.

ಈ ವಾಸ್ತು ಟಿಪ್ಸ್ ಪಾಲಿಸಿದ್ರೆ ನಿಮ್ಮ ಸಂಬಂಧ ಶಾಶ್ವತ

ಶೂ ಸ್ಟ್ಯಾಂಡ್ ಇಲ್ಲಿಟ್ಟರೆ ಸಮಸ್ಯೆಯಿಲ್ಲ: 
-ಮನೆಯಲ್ಲಿ ಚಪ್ಪಲಿ ಸ್ಟ್ಯಾಂಡ್ ಇಡಲು ಅತ್ಯುತ್ತಮವಾದ ಸ್ಥಳವೆಂದರೆ ಪಶ್ಚಿಮ ಹಾಗೂ ನೈರುತ್ಯ ದಿಕ್ಕು. 
-ನೀವು ಶೂ ಸ್ಟ್ಯಾಂಡ್ನ್ನು ಮನೆಯ ಮುಖ್ಯದ್ವಾರದ ಹೊರಭಾಗದಲ್ಲಿಡಬಹುದು.
-ನಿಮ್ಮ ಮನೆಯ ಲಿವಿಂಗ್ ರೂಮ್‍ನ ನೈರುತ್ಯ ಮೂಲೆ ಶೂ ಸ್ಟ್ಯಾಂಡ್ ಇಡಲು ಪ್ರಸಕ್ತವಾದ ಸ್ಥಳ. 
-ಶೂ ಸ್ಟ್ಯಾಂಡ್ ಅನ್ನು ಸ್ವಚ್ಛವಾಗಿ ಹಾಗೂ ನೀಟಾಗಿಡುವುದು ಮುಖ್ಯ.ಸ್ವಚ್ಛವಿಲ್ಲದ, ಅಸ್ತವ್ಯಸ್ತಗೊಂಡಿರುವ ಶೂ ಸ್ಟ್ಯಾಂಡ್ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
-ಚಪ್ಪಲಿ ಸ್ಟ್ಯಾಂಡ್ ಬಾಗಿಲು ಸದಾ ಮುಚ್ಚಿರುವಂತೆ ನೋಡಿಕೊಳ್ಳಿ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚದಂತೆ ತಡೆಯಬಹುದು. 

Follow Us:
Download App:
  • android
  • ios