ಗಣಿ ನಾಡಿನ ಅಕ್ಷರ ಧಣಿ ರವಿ ಬೆಳಗೆರೆ, ಗೋಕಾಕ್ ಚಳವಳಿಯಲ್ಲೂ ಭಾಗಿ!
ಗಣಿ ನಾಡಿನ ಅಕ್ಷರ ಧಣಿ ರವಿ ಬೆಳಗೆರೆ| ವಿದ್ಯಾರ್ಥಿ ದೆಸೆಯಲ್ಲಿಯೇ ಹೋರಾಟದ ಕಿಚ್ಚು, ಗೋಕಾಕ್ ಚಳವಳಿಯಲ್ಲಿ ಭಾಗಿ
ಕೆ.ಎಂ.ಮಂಜುನಾಥ್
ಬಳ್ಳಾರಿ(ನ.14): ರಾಜ್ಯದ ಜನಪ್ರಿಯ ಪರ್ತಕರ್ತ ರವಿ ಬೆಳೆಗೆರೆ ಬಾಲ್ಯ, ಶಾಲಾ, ಕಾಲೇಜು ಜೀವನಗಳೆಲ್ಲ ಬೆಸೆದುಕೊಂಡಿರುವುದು ಗಣಿ ಜಿಲ್ಲೆ ಬಳ್ಳಾರಿ ಜೊತೆ. ವಿದ್ಯಾರ್ಥಿ ದೆಸೆಯಲ್ಲಿಯೇ ಬಂಡಾಯ ಮನೋಭಾವ ಹೊಂದಿದ್ದ ರವಿ ಬೆಳಗೆರೆ ಅವರು ‘ಬಳ್ಳಾರಿ ವಿದ್ಯಾರ್ಥಿಗಳ ಒಕ್ಕೂಟ’ ಹೆಸರಿನಲ್ಲಿ ವಿದ್ಯಾರ್ಥಿ ಸಂಘ ಕಟ್ಟಿಕೊಂಡು ಹೆಚ್ಚು ಸಕ್ರಿಯವಾಗಿದ್ದರು. ಜಿಲ್ಲೆಯಲ್ಲಿ ಗೋಕಾಕ್ ಚಳವಳಿ ನಡೆಯುತ್ತಿದ್ದ ವೇಳೆ ಮುಂಚೂಣಿಯಲ್ಲಿದ್ದರು.
ಬಳ್ಳಾರಿಯ ಸತ್ಯನಾರಾಯಣ ಪೇಟೆಯ ಪುಟ್ಟದೊಂದು ಮನೆಯಲ್ಲಿ ವಾಸವಾಗಿದ್ದ ರವಿ ಬೆಳೆಗೆರೆ ತಾಯಿ ಪಾರ್ವತಮ್ಮ ವೀರಶೈವ ವಿದ್ಯಾವರ್ಧಕ ಸಂಘದ ಸಿಲ್ವರ್ ಜೂಬ್ಲಿ ಶಾಲೆಯ ಶಿಕ್ಷಕಿಯಾಗಿದ್ದರು. ರವಿ ಬೆಳಗೆರೆ ಚಿಕ್ಕವನಿರುವಾಗಲೇ ಪಾರ್ವತಮ್ಮ ಅವರು ಗಂಡನನ್ನು ಕಳೆದುಕೊಂಡಿದ್ದರು. ಒಬ್ಬನೇ ಮಗ ರವಿ ಬೆಳಗೆರೆಯನ್ನು ಹೆಚ್ಚು ಮುದ್ದಾಗಿ ಬೆಳೆಸಿದ್ದರು. ಬಳ್ಳಾರಿಯ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ ಮುಗಿಸಿದ ರವಿ ಬೆಳೆಗೆರೆ, ವೀರಶೈವ ಕಾಲೇಜಿನಲ್ಲಿ ಪದವಿ ಮುಗಿಸಿದರು. ಧಾರವಾಡ ವಿವಿಯಲ್ಲಿ ಎಂಎ ಪೂರ್ಣಗೊಳಿಸಿದರು. ವಿವಿ ಸಂಘದ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲ ಕಾಲ ಸೇವೆ ಸಲ್ಲಿಸಿದರು. ಬಳಿಕ ಸೇವೆಯಿಂದ ಹೊರ ಬಂದು ಬಳ್ಳಾರಿ ಬಿಟ್ಟು ಬೆಂಗಳೂರು ಕಡೆ ಮುಖ ಮಾಡಿದರು. ಬಳ್ಳಾರಿಯ ಸತ್ಯನಾರಾಯಣ ಪೇಟೆಯಲ್ಲಿ ರವಿ ಬೆಳೆಗೆರೆ ಅವರಿಗೆ ಸೇರಿದ ಜಾಗ ಇನ್ನೂ ಇದೆ.
ಬಳ್ಳಾರಿ ಗೆಳೆಯರ ನಂಟು:
ರವಿ ಬೆಳಗೆರೆ ಬಳ್ಳಾರಿ ಬಿಟ್ಟು ಬೆಂಗಳೂರು ಸೇರಿದ ಬಳಿಕ ಜಿಲ್ಲೆಯ ಗೆಳೆಯರ ಜತೆ ನಿರಂತರ ಒಡನಾಟ ಇಟ್ಟುಕೊಂಡಿದ್ದರು. ಗೆಳೆಯರ ಮನೆಯಲ್ಲಿ ನಡೆದ ಕಾರ್ಯಕ್ರಮಗಳಿಗೆ ಬಂದು ಹೋಗುತ್ತಿದ್ದರು. ಸ್ಥಳೀಯ ರಾಜಕೀಯ ನಾಯಕರ ವಿರುದ್ಧ ಬರೆದಿದ್ದ ಲೇಖನಕ್ಕೆ ಸಂಬಂಧಿಸಿದಂತೆ ಮಾನನಷ್ಟಮೊಕದ್ದಮೆ ಎದುರಿಸಿದ ರವಿ ಬೆಳಗೆರೆ ಅವರು ಆಗಾಗ್ಗೆ ಕೋರ್ಟ್‌ಗೆ ಹಾಜರಾಗುತ್ತಿದ್ದರು. ಆಗ ಬಳ್ಳಾರಿಯ ಗೆಳೆಯರನ್ನು ಕಂಡು ಮಾತನಾಡಿಸಿ ಹೋಗುತ್ತಿದ್ದರು. ಬಳ್ಳಾರಿಯ ಬಾಲ್ಯ, ಹೋರಾಟ, ಜನರ ಅಭಿರುಚಿ, ರಾಜಕೀಯ ಹೀಗೆ ಅನೇಕ ಸಂಗತಿಗಳನ್ನು ರವಿ ಬೆಳಗೆರೆ ಅವರು ತಮ್ಮ ಹಾಯ್ ಬೆಂಗಳೂರಿನಲ್ಲಿ ಬರೆದುಕೊಂಡಿದ್ದಾರೆ.
ಕಳ್ಳರ ಗ್ಯಾಂಗ್ ಮೇಲೆ ಗುಂಡು
ರವಿ ಬೆಳಗೆರೆ ಜೀವನದಲ್ಲಿ ಸದಾ ನೆನಪಿನಲ್ಲಿಟ್ಟುಕೊಳ್ಳುವ ಘಟನೆಯೊಂದು ನಡೆಯುತ್ತದೆ. ಅದು 2006ರ ವರ್ಷ. ಕಳ್ಳರ ಗ್ಯಾಂಗ್‌ವೊಂದು ರವಿ ಬೆಳಗೆರೆ ಮೇಲೆ ದಾಳಿ ಮಾಡುತ್ತದೆ. ಆಗ ಕೂಡಲೇ ಎಚ್ಚೆತ್ತ ಅವರು ಕಳ್ಳರ ಗ್ಯಾಂಗ್ ಮೇಲೆ ಗುಂಡು ಹಾರಿಸಿ, ಪ್ರಾಣ ರಕ್ಷಣೆ ಮಾಡಿಕೊಳ್ಳುತ್ತಾರೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಕಲಿ ಚಿನ್ನ ಮಾರಾಟ ಮಾಡುವ ಗ್ಯಾಂಗ್ ಇದೆ ಎಂದು ಗೊತ್ತಾಗುತ್ತಿದ್ದಂತೆಯೇ ತನಿಖಾ ವರದಿ ಮಾಡಲು ರವಿ ಬೆಳಗೆರೆ ಹರಪನಹಳ್ಳಿ ಕಡೆ ಆಗಮಿಸುತ್ತಾರೆ. ಇದನ್ನರಿತ ಕಳ್ಳರ ಗ್ಯಾಂಗ್ ಐಯ್ಯನಕೆರೆ ಸಮೀಪ್ ದಾಳಿಗೆ ಮುಂದಾಗುತ್ತದೆ. ತಡರಾತ್ರಿ ನಡೆದ ದಾಳಿಯಲ್ಲಿ ಅವರು ಕಳ್ಳರತ್ತ ಗುಂಡು ಹಾರಿಸದೇ ಇದ್ದರೆ ಆರೇಳು ಜನರಿದ್ದ ಕಳ್ಳರ ತಂಡದಿಂದ ಜೀವಕ್ಕೆ ಖಂಡಿತ ಅಪಾಯವಿತ್ತು ಎಂದು ಅನೇಕ ಬಾರಿ ಹೇಳಿಕೊಂಡಿದ್ದರು. ಬಳಿಕ ನಕಲಿ ಬಂಗಾರ ಜಾಲ ಪತ್ತೆ ಹಚ್ಚಲು ಪೊಲೀಸರು ಬೆಳೆಗೆರೆಯನ್ನೇ ಸಾಕ್ಷಿ ಮಾಡಿ ಕಳ್ಳರನ್ನ ಹಿಡಿದರು.