ಕೊರೋನಾ ಗೂಂಡಾಗಳಿಗೆ 2 ವರ್ಷ ಜೈಲು, ದಂಡ?: ಸುಗ್ರೀವಾಜ್ಞೆ ಜಾರಿಗೆ ನಿರ್ಧಾರ!
ಕೊರೋನಾ ಗೂಂಡಾಗಳಿಗೆ 2 ವರ್ಷ ಜೈಲು, ದಂಡ?| ಶೀಘ್ರ ಸುಗ್ರೀವಾಜ್ಞೆ ಜಾರಿಗೆ ರಾಜ್ಯ ಸರ್ಕಾರ ನಿರ್ಧಾರ| ಪಾದರಾಯನಪುರ ಘಟನೆ ಬಗ್ಗೆ ಜನಾಕ್ರೋಶ| ಜನನಾಯಕರಿಂದ ಪಕ್ಷಾತೀತ ಖಂಡನೆ| ಆರೋಗ್ಯ ಸಿಬ್ಬಂದಿ, ಪೊಲೀಸರ ರಕ್ಷಣೆಗೆ ಕಠಿಣ ಕಾನೂನು: ಸಚಿವ ಸಂಪುಟ ನಿರ್ಧಾರ
ಬೆಂಗಳೂರು(ಏ.21): ಕೊರೋನಾ ವೈರಾಣು ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್, ಪೊಲೀಸರು, ಆಶಾ ಕಾರ್ಯಕರ್ತರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜಕೀಯ ನಾಯಕರೂ ಪಕ್ಷಾತೀತವಾಗಿ ಇಂತಹ ವಿದ್ಯಮಾನಗಳನ್ನು ಕಟುಶಬ್ದಗಳಿಂದ ಖಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೇರಳ ಮತ್ತು ಉತ್ತರಪ್ರದೇಶ ಮಾದರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ.
ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟಲು ಸಹಕರಿಸದವರಿಗೆ ಶಿಕ್ಷೆ ವಿಧಿಸುವ ಸಂಬಂಧ ಕಠಿಣ ಕಾನೂನು ಜಾರಿಗೆ ಸುಗ್ರೀವಾಜ್ಞೆ ತರಲು ನಿರ್ಧರಿಸಲಾಯಿತು. ರಾಜ್ಯ ಎಪಿಡಮಿಕ್ ಕಾಯ್ದೆಯಡಿ ಆಶಾ ಕಾರ್ಯಕರ್ತರು, ವೈದ್ಯರು, ಅಧಿಕಾರಿಗಳ ಮೇಲೆ ಹಲ್ಲೆ, ಉದ್ದೇಶಪೂರ್ವಕವಾಗಿ ಸೋಂಕು ಹಬ್ಬಿಸುವುದನ್ನು ಶಿಕ್ಷಾರ್ಹ ಅಪರಾಧ ಮಾಡುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ತರಲು ನಿರ್ಣಯಿಸಲಾಗಿದೆ.
ಲಾಕ್‌ಡೌನ್ ಸಡಿಲ ಇಲ್ಲ: ರಾಜ್ಯ ಸರ್ಕಾರದಿಂದ ಕಠಿಣ ತೀರ್ಮಾನ!
ಭಾನುವಾರ ತಡರಾತ್ರಿ ರಾಜಧಾನಿ ಬೆಂಗಳೂರಿನ ಪಾದರಾಯನಪುರದಲ್ಲಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ಆಗಮಿಸಿದ್ದ ಪೊಲೀಸರು ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆದಿತ್ತು. ಅದರ ಬೆನ್ನಲ್ಲೇ ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆದು ದೌರ್ಜನ್ಯ ತಡೆಯಲು ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಯಿತು.
ಇನ್ನೆರಡು ದಿನಗಳಲ್ಲಿ ಈ ಸುಗ್ರೀವಾಜ್ಞೆ ಹೊರಬೀಳಲಿದ್ದು, ಕೊರೋನಾ ವಾರಿಯರ್ಸ್ ಮೇಲೆ ದೌರ್ಜನ್ಯ ಎಸಗುವ ಅಥವಾ ದಾಳಿ ನಡೆಸುವವರಿಗೆ ಎರಡು ವರ್ಷಗಳವರೆಗೆ ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಲಾಗುತ್ತದೆ. 10 ಸಾವಿರ ರು.ಗಳವರೆಗೆ ದಂಡ ವಿಧಿಸುವ ಹಾಗೂ ದೌರ್ಜನ್ಯ ಎಸಗಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಂಶವನ್ನು ಸೇರಿಸುವ ನಿರೀಕ್ಷೆಯಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಆರೋಗ್ಯ ಕಾರ್ಯಕರ್ತರು ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿದರೆ ಸಹಿಸುವುದಿಲ್ಲ. ಕೇರಳ ಮತ್ತು ಉತ್ತರ ಪ್ರದೇಶದಲ್ಲಿ ಇಂತಹ ಘಟನೆಗಳು ಶಿಕ್ಷಾರ್ಹ ಅಪರಾಧ. ರಾಜ್ಯದಲ್ಲಿಯೂ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೆ ಶಿಕ್ಷಾರ್ಹ ಅಪರಾಧ ಎಂದು ಸುಗ್ರೀವಾಜ್ಞೆ ಹೊರಡಿಸುತ್ತೇವೆ ಎಂದರು.
ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸೋರಿಗೆ ಗುಂಡಿಕ್ಕಿ ಎಂದ BJP ಶಾಸಕ
ಆರೋಗ್ಯ ಕಾರ್ಯಕರ್ತರು ಹಾಗೂ ಪೊಲೀಸರು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳುತ್ತಿದ್ದರೆ ಕೆಲವರು ಕಾನೂನು ಕೈಗೆ ತೆಗೆದುಕೊಂಡು ದುರ್ವರ್ತನೆ ತೋರುತ್ತಿದ್ದಾರೆ. ಸರ್ಕಾರವು ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ರಾಜ್ಯದಲ್ಲಿಯೂ ಸುಗ್ರೀವಾಜ್ಞೆ ಹೊರಡಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸೋಂಕು ಹರಡುವುದನ್ನು ನಿಯಂತ್ರಣ ಮಾಡುವ ವೇಳೆ ಸಿಬ್ಬಂದಿಗೆ ತೊಂದರೆ ಮಾಡುವವರ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳಲು ಸಹ ಅವಕಾಶ ಇದೆ ಎಂದು ಹೇಳಿದರು.
ಉತ್ತರ ಪ್ರದೇಶ, ಕೇರಳ ಮಾದರಿ
- ಸಾಂಕ್ರಾಮಿಗ ರೋಗ ತಡೆಗೆ ಸಹಕರಿಸದಿರುವವರನ್ನು ಶಿಕ್ಷಿಸಲು ಕ್ರಮ
- ರಾಜ್ಯ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಸುಗ್ರೀವಾಜ್ಞೆ ಜಾರಿ
- ಆಶಾ, ವೈದ್ಯಕೀಯ ಸಿಬ್ಬಂದಿ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಸಲ್ಲದು
- ಸೋಂಕು ಹಬ್ಬಿಸುವುದು ಕೂಡ ಶಿಕ್ಷಾರ್ಹ ಅಪರಾಧ ಎಂದು ಪರಿಗಣನೆ
- ಕೇರಳ, ಉತ್ತರ ಪ್ರದೇಶ ಮಾದರಿಯಲ್ಲಿ ಸುಗ್ರೀವಾಜ್ಞೆ ತರಲು ನಿರ್ಧಾರ