ನಿತ್ಯಾನಂದನ ಶಿಷ್ಯಂದಿರು ಬಿಡದಿಗೆ ವಾಪಸ್!
ನಿತ್ಯಾನಂದನ ಶಿಷ್ಯಂದಿರು ಬಿಡದಿಗೆ ವಾಪಸ್| ಅಹ್ಮದಾಬಾದ್‌ನಿಂದ ವೋಲ್ವೋಬಸ್‌ನಲ್ಲಿ ಆಗಮಿಸಿದ 38 ಮಂದಿ| ಧ್ಯಾನಪೀಠಕ್ಕೆ ಸಂಪೂರ್ಣ ಭದ್ರತೆ| ನಿತ್ಯಾನಂದನ ಶಿಷ್ಯರಿಂದಲೇ ಪಹರೆ| ಖಾಲಿಯಾಗಿದ್ದ ಆಶ್ರಮದಲ್ಲಿ ಇದೀಗ ಮತ್ತೆ ಚಟುವಟಿಕೆ ಚುರುಕು
ರಾಮನಗರ[ಡಿ.06]: ಗುಜರಾತ್‌ನ ಅಹ್ಮದಾಬಾದ್‌ನಿಂದ ವಿದೇಶಕ್ಕೆ ಪರಾರಿಯಾಗಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಸಹಚರರು, ಶಿಷ್ಯಂದಿರು ಇದೀಗ ರಾಮನಗರ ಜಿಲ್ಲೆಯಲ್ಲಿರುವ ಬಿಡದಿಯ ಧ್ಯಾನಪೀಠ ಆಶ್ರಮ ಸೇರಿಕೊಂಡಿದ್ದಾರೆ. ಅಹ್ಮದಾಬಾದ್ನ ಗುರುಕುಲದಲ್ಲಿದ್ದ 28 ವಿದ್ಯಾರ್ಥಿಗಳು, 10 ಸನ್ಯಾಸಿಗಳು ಸೇರಿ ಒಟ್ಟು 38 ಮಂದಿ ವೋಲ್ವೋ ಬಸ್‌ನಲ್ಲಿ ಬುಧವಾರ ತಡರಾತ್ರಿ ಇಲ್ಲಿಗಾಗಮಿಸಿದ್ದಾರೆ.
ನಿತ್ಯಾನಂದ ಬಿಡದಿ ಆಶ್ರಮದಿಂದ ಅಹ್ಮದಾಬಾದ್‌ಗೆ ನೆಲೆ ಬದಲಾಯಿಸಿದ್ದರಿಂದ ಇಲ್ಲಿನ ಆಶ್ರಮದಲ್ಲಿ ಕೆಲವೇ ಕೆಲವು ಮಂದಿ ಶಿಷ್ಯರಷ್ಟೇ ಆಶ್ರಮದಲ್ಲಿದ್ದರು. ಇದೀಗ ಅಹ್ಮದಾಬಾದ್ ಗುರುಕುಲದಲ್ಲಿದ್ದ 38 ಮಂದಿಯೂ ಬಂದಿಳಿದಿರುವುದರಿಂದ ಧ್ಯಾನಪೀಠದಲ್ಲಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ.
ಅಹ್ಮದಾಬಾದ್ ಆಶ್ರಮದ ಜಾಗವನ್ನು ಶಾಲೆ ನಡೆಸುವುದಾಗಿ ಹೇಳಿ ಪಡೆದಿದ್ದ ನಿತ್ಯಾನಂದ, ಆ ಸ್ಥಳದಲ್ಲಿ ಆಶ್ರಮ ನಡೆಸುತ್ತಿದ್ದನು. ಇತ್ತೀಚೆಗೆ ಆತನ ಮಾಜಿ ಶಿಷ್ಯ ಚೆನ್ನೈ ಮೂಲದ ಜನಾರ್ದನ ಶರ್ಮ ತನ್ನ ನಾಲ್ವರು ಮಕ್ಕಳ ವಿಚಾರವಾಗಿ ಅಹಮದಾಬಾದ್ ಪೊಲೀಸರಿಗೆ ದೂರು ನೀಡಿದ್ದರು. ಮಕ್ಕಳನ್ನು ಆಶ್ರಮದಲ್ಲಿ ಬಂಧಿಸಿಟ್ಟುಕೊಂಡು ಹಿಂಸೆ ನೀಡುತ್ತಿದ್ದಾರೆ. ತನ್ನ ಮಕ್ಕಳನ್ನು ನೋಡಲು ಸಹ ಬಿಡುತ್ತಿಲ್ಲ ಎಂದು ದೂರು ನೀಡಿದ್ದರು.
ಗುಜರಾತ್ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಆಶ್ರಮದ ಮೇಲೆ ದಾಳಿ ಮಾಡಿದ್ದರು. ಅಲ್ಲದೇ ನಿತ್ಯಾನಂದನ ನಾಲ್ವರು ಶಿಷ್ಯರನ್ನು ಸಹ ಬಂಧಿಸಲಾಗಿತ್ತು. ಜನಾರ್ದನ ಶರ್ಮ ಹಾಗೂ ನಾಲ್ವರು ಗುಜರಾತ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಕೂಡ ಸಲ್ಲಿಸಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಗುಜರಾತ್ ಹೈಕೋರ್ಟ್ ಆಶ್ರಮ ಜಾಗವನ್ನು ಖಾಲಿ ಮಾಡುವಂತೆ ಸೂಚಿಸಿತ್ತು. ಹಾಗಾಗಿ ಆಶ್ರಮದಲ್ಲಿದ್ದ ನಿತ್ಯಾನಂದನ ಶಿಷ್ಯರು ಹಾಗೂ ಗುರುಕುಲದಲ್ಲಿದ್ದ ಮಕ್ಕಳು ದಿನೋಪಯೋಗಿ ವಸ್ತುಗಳೊಂದಿಗೆ ಬಿಡದಿಗೆ ಆಗಮಿಸಿದ್ದಾರೆ.
ಕಾಂಪೌಂಡ್ ಗೋಡೆ 12 ಅಡಿಗೇರಿಕೆ:
ನಿತ್ಯಾನಂದನನ್ನು ನಂಬಿದ್ದ ಶಿಷ್ಯರು ಹಾಗೂ ಮಕ್ಕಳು ಬಿಡದಿಯ ಆಶ್ರಮದಲ್ಲಿರುವ ರಾಜ್ಯಸಭಾ, ಚಿಕ್ಕಸಭಾ ಎಂಬ ಕೊಠಡಿಗಳಲ್ಲಿ ತಂಗಿದ್ದಾರೆ. ಆಶ್ರಮದ ಸುತ್ತಲೂ ಇದ್ದ 5 ಅಡಿಯ ಕಾಂಪೌಂಡ್ ಗೋಡೆಯನ್ನು ಈಗ 12 ಅಡಿ ಎತ್ತರಕ್ಕೆ ಏರಿಸಲಾಗಿದೆ. ಧ್ಯಾನಪೀಠದ ಒಳಭಾಗದಲ್ಲಿ ನಡೆಯುವ ಯಾವುದೇ ಚಟುವಟಿಕೆಗಳೂ ಹೊರ ಜಗತ್ತಿಗೆ ಕಾಣದಂತೆ ಮಾಡಲು ಇದೀಗ ಕಾಂಪೌಂಡ್ ಎತ್ತರಿಸಲಾಗಿದೆ. ಆಶ್ರಮದ ಒಳಗೆ ಹೊಸ ಹೊಸ ಕಟ್ಟಡಗಳ ಕಾಮಗಾರಿ ನಡೆಯುವುದರ ಜತೆಗೆ ನಿತ್ಯಾನಂದನ ಪ್ರತಿಮೆಗಳನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಆಶ್ರಮದ ಸುತ್ತಲೂ ಇರುವ ನಾಲ್ಕು ಗೇಟ್‌ಗಳಲ್ಲೂ ಆಶ್ರಮದ ಶಿಷ್ಯಂದಿರೇ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಠಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಹೊರತು ಪಡಿಸಿ ಅನ್ಯರು ಒಳಗೆ ಪ್ರವೇಶಿಸಲು ನಿರಾಕರಿಸಲಾಗುತ್ತಿದೆ.