Asianet Suvarna News Asianet Suvarna News

'ಬಾಂಬರ್‌ ಬೆಂಗಳೂರಿಗೆ ಬಂದು ಶರಣಾಗಿದ್ದೇಕೆ? ಇದೊಂದು ನಾಟಕ'

ಬಾಂಬರ್‌ ಶರಣಾಗತಿ ಕೂಡ ನಾಟಕ: ಎಚ್‌ಡಿಕೆ| ಬೆಂಗಳೂರಿಗೆ ಬಂದು ಶರಣಾಗಿದ್ದೇಕೆ? ಕರೆದುಕೊಂಡು ಬಂದವರಾರು?| ಮಂಗಳೂರು ಬಾಂಬ್‌ ಅಣಕು ಪ್ರದರ್ಶನ, ಅದು ಪಟಾಕಿ ಪ್ರಕರಣ| ಈ ಬಗ್ಗೆ ಪ್ರಧಾನಿ, ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ

Mangaluru Airport Bomb Case Accused Adithya Rao surrenders HD Kumaraswamy Calls It As Drama
Author
Bangalore, First Published Jan 23, 2020, 7:43 AM IST

ಬೆಂಗಳೂರು[ಜ.23]: ಮಂಗಳೂರು ವಿಮಾನ ನಿಲ್ದಾಣದಲ್ಲಿನ ಬಾಂಬ್‌ ಸ್ಪೋಟ ಪ್ರಕರಣವನ್ನು ಅಣುಕು ಪ್ರದರ್ಶನ ಎಂದು ಪುನರುಚ್ಚರಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಆರೋಪಿ ಆದಿತ್ಯರಾವ್‌ ಪೊಲೀಸರಿಗೆ ಶರಣಾಗಿರುವುದು ಸಹ ನಾಟಕೀಯವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣ ಪ್ರಕರಣವನ್ನು ಬಿಜೆಪಿಗರು ಏನೇ ಹೇಳಿದರೂ ಅದನ್ನು ಅಣಕು ಪ್ರದರ್ಶನವೆಂದೇ ಕರೆಯುತ್ತೇನೆ. ಪಟಾಕಿಯ ಪ್ರಕರಣ ಅಂತಲೇ ಹೇಳುತ್ತೇನೆ. ಪ್ರಕರಣದ ಆರೋಪಿ ಆದಿತ್ಯರಾವ್‌ ಬಂದು ಶರಣಾಗಿದ್ದರ ಬಗ್ಗೆಯೂ ಅನುಮಾನ ಇದೆ ಎಂದರು.

ಮಂಗಳೂರಿನಿಂದ ಬೆಂಗಳೂರಿಗೆ ಬಂದು ಶರಣಾಗುವ ಪ್ರಮೇಯ ಏನಿತ್ತು? ಪೊಲೀಸ್‌ ಮಹಾನಿರ್ದೇಶಕರ ಕಚೇರಿಗೆ ಯಾಕೆ ಬಂದ? ಆತನನ್ನು ಕರೆದುಕೊಂಡು ಬಂದವರು ಯಾರು ಎಂಬಿತ್ಯಾದಿ ಹಲವು ಪ್ರಶ್ನೆಗಳು ಮೂಡಿವೆ. ಎಲ್ಲವೂ ನಾಟಕೀಯ ಎನ್ನಿಸುತ್ತಿದೆ. ಶರಣಾಗತಿಯ ಹಿಂದೆಯ ಯಾವುದಾದರೂ ಕೈ ಕೆಲಸ ಮಾಡುತ್ತಿವೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ಶಾಂತಿಯುತ ಮತ್ತು ಸೌಹಾರ್ದ ರಾಜ್ಯ ನಮ್ಮದಾಗಿದೆ. ಬೇರೆ ರಾಜ್ಯಗಳಲ್ಲಿ ಗಲಭೆಗಳು ನಡೆಯುತ್ತವೆ. ಆದರೆ, ಕರ್ನಾಟಕದಲ್ಲಿ ಅಂತಹ ಗಲಭೆಗಳು ನಡೆಯುವುದಿಲ್ಲ. ಪೊಲೀಸರ ಕಾರ್ಯವೈಖರಿ ದೇಶವೇ ಮೆಚ್ಚುವಂತಹದ್ದು. ಆದರೆ, ಬಿಜೆಪಿ ಹೆಚ್ಚಿನ ಶಕ್ತಿ ಪಡೆದ ಬಳಿಕ ರಾಜ್ಯದಲ್ಲಿಯೂ ಗಲಭೆಗಳು ನಡೆಯುತ್ತಿರುವುದಕ್ಕೆ ಬಿಜೆಪಿ ನಡವಳಿಕೆಯೇ ಕಾರಣ. ನಾನು ಪೊಲೀಸ್‌ ಇಲಾಖೆಯ ಬಲವನ್ನು ಕುಗ್ಗಿಸುತ್ತಿದ್ದೇನೆ ಎಂಬುದು ಬಿಜೆಪಿ ಆರೋಪಿಸಿದೆ. ಪೊಲೀಸ್‌ ಇಲಾಖೆ ಸರಿಯಾಗಿ ನಿರ್ವಹಣೆ ಮಾಡುವುದು ಆಡಳಿತ ಪಕ್ಷದ ಕೈಯಲ್ಲಿರುತ್ತದೆ. ಜನತೆಯ ಆತ್ಮಸ್ಥೆರ್ಯ ಕುಗ್ಗಿಸಬಾರದು ಎಂಬ ಕಾರಣಕ್ಕಾಗಿ ಹೇಳಿಕೆ ನೀಡಿದ್ದೇನೆಯೇ ಹೊರತು ಬೇರೆ ಯಾವುದೇ ಕಾರಣವಲ್ಲ ಎಂದು ತಿಳಿಸಿದರು.

ನನ್ನ ಅಧಿಕಾರವಧಿಯಲ್ಲಿಯೂ ಇದೇ ಪೊಲೀಸರು ಇದ್ದರು ಎಂಬುದನ್ನು ಒಪ್ಪುತ್ತೇನೆ. ಆದರೆ, ಅವರನ್ನು ಸದ್ಬಳಕೆ ಮಾಡಿಕೊಳ್ಳಬೇಕೇ ಹೊರತು ದುರ್ಬಳಕೆ ಮಾಡಿಕೊಳ್ಳಬಾರದು. ಪೊಲೀಸ್‌ ಇಲಾಖೆಯನ್ನು ಎಂದಿಗೂ ದುರ್ಬಳಕೆ ಮಾಡಿಕೊಂಡಿಲ್ಲ. ಬಿಜೆಪಿ ಈ ಕೆಲಸ ಮಾಡುತ್ತಿದೆ. ಅಲ್ಲದೇ. ಜಾತಿ ಹೆಸರಲ್ಲಿ ರಾಜಕಾರಣವನ್ನು ಸಹ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಆದಿಯಾಗಿ ಎಲ್ಲಾ ಸಚಿವರು ತಮ್ಮ ಕುರ್ಚಿಗಳನ್ನು ಉಳಿಸಿಕೊಳ್ಳಲು ಜಾತಿ ಓಲೈಕೆ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ ಅವರು, ಪೊಲೀಸರು ಯಾರನ್ನೋ ಓಲೈಕೆ ಮಾಡುವ ಬದಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ತೀಕ್ಷ$್ಣವಾಗಿ ಹೇಳಿದರು.

ಇತ್ತೀಚೆಗೆ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ನನ್ನ ಹೇಳಿಕೆಗಳಿಗೆ ಬಿಜೆಪಿ ನಾಯಕರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಕೂತು ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ನನಗೆ ಬಿಜೆಪಿಗರ ಸರ್ಟಿಫಿಕೇಟ್‌ ಅಗತ್ಯ ಇಲ್ಲ. ಬಿಜೆಪಿ ಹೆಚ್ಚಿನ ಶಕ್ತಿ ಪಡೆದ ಬಳಿಕ ರಾಜ್ಯದಲ್ಲಿ ಹಲವು ಸಂದರ್ಭದಲ್ಲಿ ಗಲಭೆಗಳು ನಡೆದಿದೆ. ಇದಕ್ಕೆ ಬಿಜೆಪಿಯ ನಡವಳಿಕೆಯೇ ಕಾರಣ ಎಂದು ಅವರು ಹರಿಹಾಯ್ದರು.

Follow Us:
Download App:
  • android
  • ios