ರಾಜ್ಯದಲ್ಲಿ 1 ಲಕ್ಷ ದಾಟಿದ ಕೊರೋನಾ ಟೆಸ್ಟ್‌!

ರಾಜ್ಯದಲ್ಲಿ 1 ಲಕ್ಷ ದಾಟಿದ ಕೊರೋನಾ ಟೆಸ್ಟ್‌| ಪರೀಕ್ಷೆಯಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕ ಮುಂದೆ| ಪ್ರತಿ 100 ಪರೀಕ್ಷೆಯಲ್ಲಿ 1ಕ್ಕಿಂತ ಕಡಿಮೆ ಸೋಂಕು ಪತ್ತೆ

Karnataka Conducts More Than 1 Lakh Coronavirus Tests

ಬೆಂಗಳೂರು(ಮೇ.10): ರಾಜ್ಯದಲ್ಲಿ ನಡೆಸಿದ ಒಟ್ಟು ಕೊರೋನಾ ಸೋಂಕು ಪರೀಕ್ಷೆಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದ್ದು, ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಮಂದಿಗೆ ರಾಜ್ಯದಲ್ಲಿ ಪರೀಕ್ಷೆ ನಡೆಸಲಾಗಿದೆ. ಅಲ್ಲದೆ, ಪ್ರತಿ ನೂರು ಪರೀಕ್ಷೆಗಳಿಗೆ ಶೇ.1ಕ್ಕಿಂತ ಕಡಿಮೆ ಸೋಂಕು ರಾಜ್ಯದಲ್ಲಿ ದೃಢಪಟ್ಟಿದೆ.

ರಾಜ್ಯದಲ್ಲಿ ಪ್ರತಿ ಹತ್ತು ಲಕ್ಷ ಮಂದಿಗೆ 1,530 ಮಂದಿಯಂತೆ ನಿತ್ಯ 4,500ರಿಂದ 4,800 ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಒಟ್ಟು 1,03,098 ಮಂದಿಗೆ ಮೇ 9ರ ವರೆಗೆ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 97,326 ಮಂದಿಗೆ ಸೋಂಕು ಇಲ್ಲದಿರುವುದು ದೃಢಪಟ್ಟಿದ್ದು, 794 ಮಂದಿಗೆ ಸೋಂಕು ಉಂಟಾಗಿದೆ. ಉಳಿದಂತೆ 4,978 ಪರೀಕ್ಷಾ ವರದಿಗಳÜ ಫಲಿತಾಂಶ ಬರಬೇಕಿದೆ.

ದೇಶದಲ್ಲಿ ಸರಾಸರಿ ಪ್ರತಿ 10 ಲಕ್ಷ ಮಂದಿಯಲ್ಲಿ 1,186 ಮಂದಿಗೆ ಮಾತ್ರ ಪರೀಕ್ಷೆ ನಡೆಸಲಾಗಿದೆ. ರಾಷ್ಟ್ರೀಯ ಸರಾಸರಿಗೆ ಹೋಲಿಸಿಕೊಂಡರೆ ರಾಜ್ಯದಲ್ಲಿ ಪರೀಕ್ಷೆಗಳ ಪ್ರಮಾಣ ಉತ್ತಮವಾಗಿದ್ದು, ದೆಹಲಿ (4,294) ಮಂದಿ, ಆಂಧ್ರಪ್ರದೇಶದಲ್ಲಿ (3,030) ಮಂದಿಗೆ ಪರೀಕ್ಷೆ ನಡೆಸುವ ಮೂಲಕ ಮುಂಚೂಣಿಯಲ್ಲಿವೆ. ಈ ಸಾಲಿನಲ್ಲಿ ಕರ್ನಾಟಕ ಹತ್ತನೇ ಸಾಲಿನಲ್ಲಿದೆ.

ಮೇ 7ರ ವೇಳೆಗೆ ಬೆಂಗಳೂರಿನಲ್ಲಿ 11,471 ಮಂದಿ, ಕಲಬುರಗಿಯಲ್ಲಿ 5,768 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಅತಿ ಕಡಿಮೆ (790) ಮಂದಿಯನ್ನು ಪರೀಕ್ಷೆ ಮಾಡಲಾಗಿದೆ.

ಇನ್ನು ಪರೀಕ್ಷೆಗಳ ಪೈಕಿ ಪ್ರತಿ ನೂರು ಪರೀಕ್ಷೆಗಳಿಗೆ ದೃಢಪಟ್ಟಿರುವ ಸೋಂಕಿನ ಪ್ರಮಾಣವೂ ರಾಜ್ಯದಲ್ಲಿ ತೀರ ಕಡಿಮೆಯಿದ್ದು, ರಾಜ್ಯದ ಜನತೆ ತಕ್ಕಮಟ್ಟಿಗೆ ನಿಟ್ಟಿಸಿರು ಬಿಡುವಂತಾಗಿದೆ. ದೇಶದಲ್ಲಿ ಪ್ರತಿ 100 ಪರೀಕ್ಷೆಗೆ 4 ಮಂದಿಗೆ ಸೋಂಕು ದೃಢಪಡುತ್ತಿದ್ದರೆ ಮಹಾರಾಷ್ಟ್ರದಲ್ಲಿ ಪ್ರತಿ 100 ಪರೀಕ್ಷೆಗಳಿಗೆ 9 ಮಂದಿಗೆ ಸೋಂಕು ದೃಢಪಟ್ಟಿದೆ. ದೆಹಲಿಯಲ್ಲಿ 8 ಮಂದಿಗೆ ಸೋಂಕು ದೃಢಪಡುತ್ತಿದೆ. ಆದರೆ, ರಾಜ್ಯದಲ್ಲಿ ಶೇ.1ಕ್ಕಿಂತ ಕಡಿಮೆ ವರದಿಯಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ರಾಜ್ಯದಲ್ಲಿ ಒಂದು ಲಕ್ಷ ಪರೀಕ್ಷೆಗಳ ಮೈಲಿಗಲ್ಲು ದಾಟಿದ್ದೇವೆ. ತಿಂಗಳಾಂತ್ಯಕ್ಕೆ 60 ಪ್ರಯೋಗಾಲಯಗಳನ್ನು ಸ್ಥಾಪಿಸಲಿದ್ದು, ನಿತ್ಯ 10 ಸಾವಿರ ಮಂದಿಗೆ ಪರೀಕ್ಷೆ ನಡೆಸುವಷ್ಟುಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲಾಗುವುದು. ಕೊರೋನಾ ವಿರುದ್ಧದ ಹೋರಾಟ ಮುಂದುವರೆಸಲಾಗುವುದು.

- ಡಾ.ಕೆ. ಸುಧಾಕರ್‌, ವೈದ್ಯಕೀಯ ಶಿಕ್ಷಣ ಸಚಿವ

Latest Videos
Follow Us:
Download App:
  • android
  • ios