ನಿರ್ಮಲಾ ಮನೆ ಮುಂದೆ ಯುವ ಕಾಂಗ್ರೆಸ್‌ ಪ್ರತಿಭಟನೆ| ರಮೇಶ್‌ ಸಾವಿಗೆ ವಿತ್ತ ಸಚಿವೆಯೇ ಕಾರಣ| ಕರ್ನಾಟಕಕ್ಕೆ ಬಂದ್ರೆ ಬಹಿಷ್ಕಾರ: ಶ್ರೀನಿವಾಸ್‌

ನವದೆಹಲಿ[ಅ.13]: ರಾಜ್ಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮತ್ತು ಹಿರಿಯ ಕಾಂಗ್ರೆಸಿಗ ಆರ್‌.ಎಲ್.ಜಾಲಪ್ಪ ಅವರ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ(ಐಟಿ) ಖಂಡಿಸಿ ಯುವ ಕಾಂಗ್ರೆಸ್‌ ಮತ್ತು ವಿದ್ಯಾರ್ಥಿ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ದೆಹಲಿಯ ಸಫ್ದರ್‌ ಜಂಗ್‌ ರಸ್ತೆಯಲ್ಲಿರುವ ನಿರ್ಮಲಾ ಸೀತಾರಾಮನ್‌ ಮನೆ ಮುಂದೆ ಪ್ರಧಾನಿ ಮೋದಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು ಬೋನೊಂದರಲ್ಲಿ ವ್ಯಕ್ತಿಯೊಬ್ಬನನ್ನು ಕೂರಿಸಿ ಆ ವ್ಯಕ್ತಿಗೆ ಇ.ಡಿ, ಸಿಬಿಐ, ಐಟಿಯ ನಾಮಫಲಕಗಳನ್ನು ತೂಗು ಹಾಕುವ ಮೂಲಕ ವಿಭಿನ್ನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಐಟಿ, ಸಿಬಿಐ, ಇ.ಡಿ.ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ವೇಳೆ ನಿರ್ಮಲಾ ಸೀತಾರಾಮನ್‌ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡರು.

ರಕ್ಷಣೆಗಾಗಿ ಉಳಿಸಿಕೊಂಡಿದ್ದ ಮೊಬೈಲ್‌ ರೆಕಾರ್ಡ್‌ ರಮೇಶ್‌ಗೆ ಉರುಳಾಯ್ತಾ?

ರಮೇಶ್‌ ಸಾವಿಗೆ ನಿರ್ಮಲಾ ಕಾರಣ: ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಷ್ಟೀಯ ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ಮಾತನಾಡಿ, ನಿರ್ಮಲಾ ಸೀತಾರಾಮನ್‌ ಕರ್ನಾಟಕಕ್ಕೆ ಮೋಸ ಮಾಡಿದ್ದಾರೆ. ಕರ್ನಾಟಕದ ಜನ ನಿರ್ಮಲಾ ಸೀತಾರಾಮನ್‌ ಅವರನ್ನು ಕ್ಷಮಿಸುವುದಿಲ್ಲ. ಪ್ರವಾಹಕ್ಕೆ ಪರಿಹಾರ ಹಣ ಬಿಡುಗಡೆ ಮಾಡಲು ಇವರಿಗೆ ಸಮಯವಿಲ್ಲ. ಪರಮೇಶ್ವರ್‌ ಆಪ್ತ ರಮೇಶ್‌ ಆತ್ಮಹತ್ಯೆ ಮಾಡಿಕೊಂಡಿದ್ದು ರಮೇಶ್‌ ಸಾವಿಗೆ ನಿರ್ಮಲಾ ಸೀತಾರಾಮನ್‌ ಅವರೇ ಕಾರಣ ಎಂದು ಆರೋಪಿಸಿದರು.

ಐಟಿ ದಾಳಿ ನಡೆಸಲು ಕಾರಣರಾದವರ ಮೇಲೆ ಸಿಬಿಐ ದಾಳಿ ಆಗಬೇಕು. ರಮೇಶ್‌ಗೆ ದಮ್ಕಿ ಹಾಕಿದ ಐಟಿ ಅಧಿಕಾರಿ ಮೇಲೆ ತನಿಖೆ ಆಗಬೇಕು. ಇಲ್ಲದೆ ಹೋದರೆ ನಿರ್ಮಲಾ ಸೀತಾರಾಮನ್‌ ಕರ್ನಾಟಕಕ್ಕೆ ಬಂದರೆ ಕರ್ನಾಟಕ ಜನ ಅವರಿಗೆ ಬಹಿಷ್ಕಾರ ಹಾಕುತ್ತಾರೆ ಎಂದು ಶ್ರೀನಿವಾಸ್‌ ಆಕ್ರೋಶ ವ್ಯಕ್ತಪಡಿಸಿದರು.

ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ: ಪರಂ ಹೇಳಿಕೆಯಿಂದ ಕೈ ವಾದಕ್ಕೆ ಹಿನ್ನಡೆ!