ರೋಹಿತ್ ಭರ್ಜರಿ ಶತಕ: ಆಫ್ರಿಕಾ ಗೆಲ್ಲಲು 275 ಟಾರ್ಗೆಟ್
ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ನಿರಾತಂಕವಾಗಿ ಬ್ಯಾಟ್'ಬೀಸಿದ ಹಿಟ್'ಮ್ಯಾನ್ ರೋಹಿತ್ ವೃತ್ತಿ ಜೀವನದ 17ನೇ ಏಕದಿನ ಶತಕ ಸಿಡಿಸಿದರು. ಶತಕ ಬಾರಿಸಿ ಕೆಲ ಹೊತ್ತಿನಲ್ಲೇ ಶರ್ಮಾ(115) ಎನ್ಜಿಡಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಫೋರ್ಟ್ ಎಲಿಜಬೆತ್(ಫೆ.13): ಸತತ ಬ್ಯಾಟಿಂಗ್ ವೈಪಲ್ಯದಿಂದ ಬಳಲುತ್ತಿದ್ದ ರೋಹಿತ್ ಶರ್ಮಾ ಕೊನೆಗೂ ಭರ್ಜರಿ ಶತಕ ಸಿಡಿಸುವ ಮೂಲಕ ಟೀಕಾಕಾರಿಗೆ ಬ್ಯಾಟ್'ನಿಂದಲೇ ಉತ್ತರ ನೀಡಿದ್ದಾರೆ. ರೋಹಿತ್ ಶತಕದ ಬಲದಿಂದ ಟೀಂ ಇಂಡಿಯಾ, ಹರಿಣಗಳಿಗೆ 275 ರನ್'ಗಳ ಗುರಿ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಧವನ್ ಕೇವಲ 23 ಎಸೆತಗಳಲ್ಲಿ 34 ರನ್ ಬಾರಿಸಿ ರಬಾಡಗೆ ವಿಕೆಟಗ ಒಪ್ಪಿಸಿದರು. ಆ ಬಳಿಕ ಎರಡನೇ ವಿಕೆಟ್'ಗೆ ನಾಯಕ ಕೊಹ್ಲಿ ಹಾಗೂ ರೋಹಿತ್ ಶರ್ಮಾ 105 ರನ್'ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಕೊಹ್ಲಿ 36 ರನ್ ಬಾರಿಸಿದಾಗ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಬಲೆಗೆ ಬಿದ್ದರು. ರಹಾನೆ ಕೂಡಾ 8 ರನ್ ಬಾರಿಸಿ ರನೌಟ್'ಗೆ ಗುರಿಯಾದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ನಿರಾತಂಕವಾಗಿ ಬ್ಯಾಟ್'ಬೀಸಿದ ಹಿಟ್'ಮ್ಯಾನ್ ರೋಹಿತ್ ವೃತ್ತಿ ಜೀವನದ 17ನೇ ಏಕದಿನ ಶತಕ ಸಿಡಿಸಿದರು. ಶತಕ ಬಾರಿಸಿ ಕೆಲ ಹೊತ್ತಿನಲ್ಲೇ ಶರ್ಮಾ(115) ಎನ್ಜಿಡಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಕೆಳಕ್ರಮಾಂಕದಲ್ಲಿ ಧೋನಿ(13) ಹಾಗೂ ಭುವನೇಶ್ವರ್ ಕುಮಾರ್(19) ಉಪಯುಕ್ತ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ರೋಹಿತ್ ವಿಕೆಟ್ ಉರುಳುತ್ತಿದ್ದಂತೆ ದಿಢೀರ್ ಕುಸಿತ ಕಂಡ ಟೀಂ ಇಂಡಿಯಾ ಅಂತಿಮವಾಗಿ 7 ವಿಕೆಟ್ ಕಳೆದುಕೊಂಡು 274 ರನ್ ಬಾರಿಸಿತು.
ಡೆತ್ ಓವರ್'ನಲ್ಲಿ ಎನ್ಜಿಡಿ ಸತತ 2 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಶ್ರೇಯಸ್ ಅಯ್ಯರ್(29) ಹಾಗೂ ಮರು ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ವಿಕೆಟ್ ಕಿತ್ತು ಆಫ್ರಿಕಾ ಪಡೆಗೆ ಮೇಲುಗೈ ಒದಗಿಸಿಕೊಟ್ಟರು.
ಸಂಕ್ಷಿಪ್ತ ಸ್ಕೋರ್:
ಭಾರತ: 274/7
ರೋಹಿತ್ ಶರ್ಮಾ: 115
ಎನ್ಜಿಡಿ: 51/4
(* ವಿವರ ಅಪೂರ್ಣ)