ಮತ್ತೊಂದು ದಿನ ಫಡ್ನವೀಸ್ ಸರ್ಕಾರ ಸೇಫ್, ನಾಳೆ ಸುಪ್ರೀಂ ಅಂತಿಮ ತೀರ್ಪು!
ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರ ವಿಚಾರಣೆ| ಫಡ್ನವೀಸ್ ಸರ್ಕಾರಕ್ಕೆ ಮತ್ತೊಂದು ದಿನ ಜೀವದಾನ| ವಾದ- ಪ್ರತಿವಾದ ಆಲಿಸಿ ಅಂತಿಮ ತೀರ್ಪು ನಾಳೆ, ಮಂಗಳವಾರಕ್ಕೆ ಕಾಯ್ದಿರಿಸಿದ ಸುಪ್ರೀಂ!|
ಮುಂಬೈ[ನ.25]: ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ತಿಂಗಳು ಕಳೆದರೂ ಇನ್ನೂ ಸರ್ಕಾರ ರಚನೆಯ ಬಿಕ್ಕಟ್ಟಿನಲ್ಲೇ ಸಿಕ್ಕಿ ನಲುಗಿರುವ ಮಹಾರಾಷ್ಟ್ರ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಹತ್ವದ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಅಜಿತ್ ಪವಾರ್ ಮೈತ್ರಿಕೂಟದ ಸರ್ಕಾರ ರಚನೆ ವಿರುದ್ಧ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಮಂಗಳವಾರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ. ಇದೇ ವೇಳೆ, ವಿಶ್ವಾಸಮತವನ್ನು ಫಡ್ನವೀಸ್ ಯಾವಾಗ ಯಾಚಿಸಬೇಕು ಎಂಬ ಬಗ್ಗೆ ಕೂಡ ಕೋರ್ಟ್ ಆದೇಶ ಪ್ರಕಟಿಸುವ ಸಾಧ್ಯತೆ ಇದೆ.
‘ರಾಜ್ಯಪಾಲರು ತರಾತುರಿಯಲ್ಲಿ ಫಡ್ನವೀಸ್ ಹಾಗೂ ಅಜಿತ್ ಪವಾರ್ ಅವರಿಗೆ ಸರ್ಕಾರ ರಚಿಸಲು ಆಹ್ವಾನಿಸಿ ಪ್ರಮಾಣ ವಚನ ಬೋಧಿಸಿದ್ದು ಕಾನೂನು ಬಾಹಿರ. 24 ತಾಸಿನೊಳಗೆ ಫಡ್ನವೀಸ್ ಅವರಿಗೆ ವಿಶ್ವಾಸಮತ ಸಾಬೀತುಪಡಿಸಲು ಸೂಚಿಸಬೇಕು’ ಎಂದು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಜಂಟಿ ಅರ್ಜಿ ಸಲ್ಲಿಸಿದ್ದವು.
ಫಡ್ನವೀಸ್ ಸರ್ಕಾರಕ್ಕೆ 1 ದಿನದ ಜೀವದಾನ, ತಕ್ಷಣ ಬಹುಮತ ಸಾಬೀತು ಇಲ್ಲ: ಸುಪ್ರೀಂ
ಸೋಮವಾರ ಇದರ ವಿಚಾರಣೆ ಮುಂದುವರಿಸಿದ ನ್ಯಾ| ಎನ್.ವಿ. ರಮಣ, ನ್ಯಾ| ಅಶೋಕ್ ಭೂಷಣ್ ಹಾಗೂ ನ್ಯಾ| ಸಂಜೀವ್ ಖನ್ನಾ ಅವರ ಪೀಠ, ಎಲ್ಲ ದಾವೆದಾರರು ಹಾಗೂ ವಿವಿಧ ಪಕ್ಷಗಾರರ ವಾದ-ಪ್ರತಿವಾದ ಆಲಿಸಿ ಆದೇಶವನ್ನು ಮಂಗಳವಾರ ಬೆಳಗ್ಗೆ 10.30ಕ್ಕೆ ಪ್ರಕಟಿಸುವುದಾಗಿ ಹೇಳಿತು.
ಆದರೆ, ‘ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಆಹ್ವಾನ ನೀಡುವಂತೆ ರಾಜ್ಯಪಾಲರಿಗೆ ಸೂಚಿಸಬೇಕು’ ಎಂಬ ಮೂರೂ ಪಕ್ಷಗಳ ಕೋರಿಕೆಯನ್ನು ಪರಿಗಣಿಸಲು ಪೀಠ ನಿರಾಕರಿಸಿತು.
ಕೋರ್ಟ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಸದನದಲ್ಲಿ ಬಿಜೆಪಿಗೆ ತಕ್ಕ ಉತ್ತರ ಲಭಿಸಲಿದೆ. ಸೇನೆ-ಕಾಂಗ್ರೆಸ್-ಎನ್‌ಸಿಪಿಗೆ 154 ಶಾಸಕರ ಬೆಂಬಲವಿದೆ’ ಎಂದಿದೆ. ಎನ್‌ಸಿಪಿ-ಶಿವಸೇನೆ ಕೂಡ ತಮ್ಮ ಕೂಟಕ್ಕೆ ಬಹುಮತದ ಬೆಂಬಲವಿದೆ ಎಂದು ಹೇಳಿಕೊಂಡಿವೆ. ಆದರೆ ಬಿಜೆಪಿ ಮಾತ್ರ, ‘ಬಹುಮತ ಸಾಬೀತು ಮಾಡುತ್ತೇವೆ’ ಎಂದು ತಿರುಗೇಟು ನೀಡಿದೆ.
ಫಡ್ನವೀಸ್, ರಾಜ್ಯಪಾಲರ ಪತ್ರ ಸಲ್ಲಿಕೆ:
ಸೋಮವಾರ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ 10.30ರ ಗಡುವಿನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಫಡ್ನವೀಸ್ ಹಾಗೂ ರಾಜ್ಯಪಾಲರ ಪತ್ರಗಳನ್ನು ಪೀಠಕ್ಕೆ ಸಲ್ಲಿಸಿದರು.
ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರು ರಾಜ್ಯಪಾಲರಿಗೆ ಸಲ್ಲಿಸಿದ್ದ ಸರ್ಕಾರ ರಚನೆ ಹಕ್ಕು ಮಂಡನೆ ಪತ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಬಿಜೆಪಿಗೆ ಸರ್ಕಾರ ರಚಿಸಲು ನೀಡಿದ್ದ ಆಹ್ವಾನ ಪತ್ರ ಇವಾಗಿದ್ದವು. ಈ ಪತ್ರದಲ್ಲಿ ರಾಜ್ಯಪಾಲರು ಫಡ್ನವೀಸ್ ಅವರಿಗೆ ಬಹುಮತ ಸಾಬೀತುಪಡಿಸಲು 14 ದಿವಸಗಳ ಕಾಲಾವಕಾಶ ನೀಡಿದ್ದಾರೆ ಎಂಬ ಅಂಶವಿದೆ.
ಅಲ್ಲದೆ, ಫಡ್ನವೀಸ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಪತ್ರದಲ್ಲಿ ‘170 ಶಾಸಕರ ಬೆಂಬಲ ಬೆಂಬಲವಿದೆ’ ಎಂದು ಹೇಳಿಕೊಂಡಿರುವ ಸಂಗತಿಯೂ ಇದೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಎನ್‌ಸಿಪಿ ಪರ ವಕೀಲರಾದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಸಿಂಘ್ವಿ ಅವರು, ‘ಯಾರಿಗೂ ಗೊತ್ತಾಗದ ರೀತಿ ತುರ್ತಾಗಿ ಬೆಳಗ್ಗೆ 5.47ಕ್ಕೆ ರಾಷ್ಟ್ರಪತಿ ಆಳ್ವಿಕೆ ರದ್ದು ಮಾಡಿದ್ದೇಕೆ? ಬೆಳಗ್ಗೆ 8 ಗಂಟೆಗೇ ಗಡಿಬಿಡಿಯಲ್ಲಿ ಫಡ್ನವೀಸ್ ಹಾಗೂ ಅಜಿತ್ ಪವಾರ್ ಅವರಿಗೆ ಪ್ರಮಾಣ ವಚನವನ್ನು ರಾಜ್ಯಪಾಲರು ಬೋಧಿಸಿದ್ದೇಕೆ? ಅಂಥಾ ತುರ್ತುಸ್ಥಿತಿಯೇನು ಈಗ ಸೃಷ್ಟಿಯಾಗಿತ್ತು?’ ಎಂದು ಪ್ರಶ್ನಿಸಿದರು.
‘ಶಾಸಕರ ಕುದುರೆ ವ್ಯಾಪಾರ ತಪ್ಪಿಸುವ ದೃಷ್ಟಿಯಿಂದ 24 ತಾಸಿನಲ್ಲಿ ಫಡ್ನವೀಸ್ ಅವರಿಗೆ ವಿಶ್ವಾಸಮತ ಸಾಬೀತಿಗೆ ಸೂಚನೆ ನೀಡಬೇಕು. ಬಹುಮತಕ್ಕೆ ಬೇಕಾದಷ್ಟುಶಾಸಕರ ಬೆಂಬಲ ತಮಗಿದೆ ಎನ್ನುವ ಫಡ್ನವೀಸ್, ಏಕೆ ಅದರ ಸಾಬೀತಿಗೆ ವಿಳಂಬ ಮಾಡುತ್ತಿದ್ದಾರೆ?’ ಎಂದು ಸಿಬಲ್ ಹಾಗೂ ಸಿಂಘ್ವಿ ಕೇಳಿದರು.
ಆಗ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ರಾಜ್ಯಪಾಲರ ನಿರ್ಧಾರಗಳು ಸುಪ್ರೀಂ ಕೋರ್ಟ್ ಪ್ರಕ್ರಿಯೆಗಳಿಂದ ಅತೀತವಾಗಿರುತ್ತವೆ. ಅವನ್ನು ಇಲ್ಲಿ ಪ್ರಶ್ನಿಸಲು ಆಗದು. ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸುವ ಆಹ್ವಾನ ನೀಡುವ ವಿವೇಚನೆ ರಾಜ್ಯಪಾಲರಿಗೆ ಇದೆ. ಇದಲ್ಲದೆ ಶಿವಸೇನೆ ಹಾಗೂ ಎನ್‌ಸಿಪಿಗೂ ಈ ಮುನ್ನ ಅವರು ಆಹ್ವಾನ ನೀಡಿದ್ದರು. ಅವು ಸರ್ಕಾರ ರಚಿಸಲು ವಿಫಲವಾದ ನಂತರ ಪುನಃ ಎನ್‌ಸಿಪಿಯ 54 ಶಾಸಕರ ಬೆಂಬಲ ಪಡೆದ ಬಿಜೆಪಿಗೆ ಅವರು ಆಹ್ವಾನ ಕೊಟ್ಟರು’ ಎಂದರು.
ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು
‘ಬಿಜೆಪಿಗೆ 54 ಎನ್‌ಸಿಪಿ ಶಾಸಕರ ಬೆಂಬಲವಿದೆ’ ಎಂದು ಹೇಳಿದ ಮೆಹ್ತಾ, ‘ಎನ್‌ಸಿಪಿ-ಶಿವಸೇನೆ-ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಗಳಿಗೆ ಉತ್ತರಿಸಲು 3 ದಿನದ ಸಮಯ ಕೊಡಿ’ ಎಂದೂ ಕೋರಿದರು.
ಆದರೆ 3 ದಿನ ಕಾಲಾವಕಾಶ ಕೊಡಲು ನಿರಾಕರಿಸಿದ ಕೋರ್ಟ್, ‘ಮುಖ್ಯಮಂತ್ರಿಯು ತಾವು ಬಹುಮತ ಹೊಂದಿದ್ದೇವೆ ಎಂಬುದನ್ನು ಸದನದಲ್ಲೇ ಸಾಬೀತುಪಡಿಸಬೇಕು’ ಎಂದು ಹೇಳಿತು.
ಅಜಿತ್ ಪವಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್, ‘ರಾಜ್ಯಪಾಲರು ಫಡ್ನವೀಸ್‌ಗೆ ಸರ್ಕಾರ ರಚಿಸಲು ನೀಡಿದ ಆಹ್ವಾನ ಕಾನೂನುಬದ್ಧವಾಗಿದೆ’ ಎಂದರು. ಅಲ್ಲದೆ, ‘ನಾನೂ ಎನ್‌ಸಿಪಿ. ನಾನು ಶಾಸಕಾಂಗ ನಾಯಕನಾದ ಕಾರಣ ನನಗಿದ್ದ ಅಧಿಕಾರದಿಂದ ರಾಜ್ಯಪಾಲರಿಗೆ ಎನ್‌ಸಿಪಿ ಶಾಸಕರ ಬೆಂಬಲ ಪತ್ರ ನೀಡಿದೆ’ ಎಂದು ಅಜಿತ್ ಅವರನ್ನು ಉಲ್ಲೇಖಿಸಿ ಮಣಿಂದರ್ ನುಡಿದರು.
ಬಿಜೆಪಿ ಹಾಗೂ ಕೆಲವು ಸ್ವತಂತ್ರ ಶಾಸಕರ ಪರ ವಾದಿಸಿದ ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ, ‘ಅಜಿತ್ ಪವಾರ್ ಅವರು ಶಾಸಕಾಂಗ ಪಕ್ಷದ ನಾಯಕರಾಗಿದ್ದಾಗ ಬಿಜೆಪಿಗೆ ಎನ್‌ಸಿಪಿ ಬೆಂಬಲ ನೀಡುವ ನಿರ್ಧಾರ ಕೈಗೊಂಡಿತು. 170 ಶಾಸಕರ ಬೆಂಬಲ ತಮಗಿದೆ ಎಮದು ಫಡ್ನವೀಸ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಫಡ್ನವೀಸ್ ಸಲ್ಲಿಸಿದ ದಾಖಲೆ ಪತ್ರಗಳು ನಕಲಿ ಎನ್ನಲಾಗದು’ ಎಂದರು.
‘ಕುದುರೆ ವ್ಯಾಪಾರ ನಡೆಸಲಾಗುತ್ತಿದೆ ಎಂಬುದು ಸುಳ್ಳು. ಶುಕ್ರವಾರದವರೆಗೆ ವಿಪಕ್ಷ ಮೈತ್ರಿಕೂಟವೇ ಶಾಸಕರ ಖರೀದಿಯಲ್ಲಿ ತೊಡಗಿತ್ತು’ ಎಂದು ರೋಹಟಗಿ ಆರೋಪಿಸಿದರು.
‘ಈಗ ಪ್ರಶ್ನೆ ಏನೆಂದರೆ ಬಹುಮತ ಸಾಬೀತು ಇಂತಿಷ್ಟೇ ದಿನದಲ್ಲಿ ಆಗಬೇಕು ಎಂಬುದನ್ನು ಕೋರ್ಟ್ ನಿರ್ಧರಿಸಬೇಕೇ ಎಂಬುದು’ ಎಂದು ಅವರು ಅಭಿಪ್ರಾಯಪಟ್ಟರು.
‘ರಾಜ್ಯಪಾಲರು ಹಾಗೂ ವಿಧಾನಸಭೆ ಹೀಗೆಯೇ ನಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನಿರ್ಧರಿಸಬೇಕು ಎಂದು ಅರ್ಜಿದಾರರು ಕೇಳುತ್ತಿದ್ದಾರೆ. ಆದರೆ ಸದನದ ಕಲಾಪದಲ್ಲಿ ಹಾಗೂ ರಾಜ್ಯಪಾಲರ ಕಾರ್ಯನಿರ್ವಹಣೆಯಲ್ಲಿ ಕೋರ್ಟುಗಳಿಗೆ ಮೂಗು ತೂರಿಸಲು ಕಾನೂನಿನಲ್ಲಿ ಅವಕಾಶವಿಲ್ಲ’ ಎಂದೂ ರೋಹಟಗಿ ಹೇಳಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ತುಷಾರ್ ಮೆಹ್ತಾ, ‘ಕೋರ್ಟ್ ನಿಗಾದಲ್ಲಿ ವಿಧಾನಸಭೆ ಕಲಾಪ ನಡೆಸಲು ಸಂವಿಧಾನವು ಅನುಮತಿ ನೀಡಿಲ್ಲ’ ಎಂದರು.
ಬಹುಮತ ಸಾಬೀತಿಗೆ 14 ದಿನ ಕಾಲಾವಕಾಶ
ನವದೆಹಲಿ: ಈವರೆಗೆ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ಎಷ್ಟುದಿನಗಳ ಕಾಲಾವಕಾಶವನ್ನು ರಾಜ್ಯಪಾಲರು ನೀಡಿದ್ದಾರೆ ಎಂಬುದು ನಿಗೂಢವಾಗಿತ್ತು. ಆದರೆ ಸೋಮವಾರದ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಈ ಗುಟ್ಟು ರಟ್ಟಾಗಿದ್ದು, 14 ದಿನಗಳ ಸಮಯಾವಕಾಶ ನೀಡಿದ್ದರು ಎಂದು ಬಹಿರಂಗವಾಗಿದೆ. ರಾಜ್ಯಪಾಲರು ಫಡ್ನವೀಸ್ ಅವರಿಗೆ ಸರ್ಕಾರ ರಚನೆಗೆ ನೀಡಿದ ಆಹ್ವಾನ ಪತ್ರದಲ್ಲಿ ಈ ಅಂಶವಿದೆ. ವಿಚಾರಣೆಯ ಸಂದರ್ಭದಲ್ಲಿ ಇದನ್ನು ದೃಢಪಡಿಸಿದ ಬಿಜೆಪಿ ಪರ ವಕೀಲ ಮುಕುಲ್ ರೋಹಟಗಿ, ‘ರಾಜ್ಯಪಾಲರು 14 ದಿನಗಳ ಸಮಯಾವಕಾಶವನ್ನು ಬಹುಮತ ಸಾಬೀತಿಗಾಗಿ ಫಡ್ನವೀಸ್ ಅವರಿಗೆ ನವೆಂಬರ್ 23ರಂದು ನೀಡಿದ್ದರು’ ಎಂದರು. ಈ ಮುನ್ನ ನವೆಂಬರ್ 30ರವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ವರದಿಯಾಗಿತ್ತು.
ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು