Asianet Suvarna News Asianet Suvarna News

ಬಿಜೆಪಿಗೆ ಬಂದ್ಮೇಲೂ ‘ಬಂಡಾಯಗಾರರ’ ಒಗ್ಗಟ್ಟು: ‘ಅರ್ಹ’ ಶಾಸಕರಿಂದ ಬಿಎಸ್‌ವೈಗೆ ಹಲವು ಬೇಡಿಕೆ!

‘ಅರ್ಹ’ ಶಾಸಕರಿಂದ ಬಿಎಸ್‌ವೈಗೆ ಹಲವು ಬೇಡಿಕೆ| ಸೋತ ಎಂಟಿಬಿ, ವಿಶ್ವನಾಥ್‌ಗೆ ಸೂಕ್ತ ಸ್ಥಾನಮಾನ ನೀಡಬೇಕು| ಆರ್‌ಆರ್‌ ನಗರ, ಮಸ್ಕಿ ಕೇಸ್‌ ಇತ್ಯರ್ಥಗೊಳಿಸಿ| ಮೊನ್ನೆ ರಾತ್ರಿ ಸಭೆ, ನಿನ್ನೆ ಸಿಎಂ ಭೇಟಿಯಾಗಿ ಬೇಡಿಕೆ| ಬಿಜೆಪಿಗೆ ಬಂದಮೇಲೂ ‘ಬಂಡಾಯಗಾರರ’ ಒಗ್ಗಟ್ಟು

Karnataka Politics Newly Elected BJP MLAs Demand In Front Of BS Yediyurappa
Author
Bangalore, First Published Dec 12, 2019, 8:06 AM IST

ಬೆಂಗಳೂರು[ಡಿ.12]: ಮಂಗಳವಾರ ರಾತ್ರಿ ಸಭೆ ಸೇರಿ ತಮ್ಮ ಒಗ್ಗಟ್ಟು ಮುಂದುವರೆಸಲು ನಿರ್ಧರಿಸಿದ್ದ ಬಿಜೆಪಿಯ ಅರ್ಹ ಮತ್ತು ಅನರ್ಹ ಶಾಸಕರು ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಲ್ಲದೆ, ಹಲವು ಬೇಡಿಕೆಗಳನ್ನೂ ಮುಂದಿರಿಸಿದ್ದಾರೆ.

ಉಪಚುನಾವಣೆಯಲ್ಲಿ ಸೋಲು ಅನುಭವಿಸಿರುವ ಹೊಸಕೋಟೆ ಕ್ಷೇತ್ರದ ಎಂ.ಟಿ.ಬಿ.ನಾಗರಾಜ್‌ ಮತ್ತು ಹುಣಸೂರು ಕ್ಷೇತ್ರದ ಎಚ್‌.ವಿಶ್ವನಾಥ್‌ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಹಾಗೂ ಉಪಚುನಾವಣೆ ಬಾಕಿ ಇರುವ ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರಗಳ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಎಂದು ಯಡಿಯೂರಪ್ಪ ಅವರ ಬಳಿ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಎರಡೂ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೂತನ ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜು, ಬಿ.ಸಿ.ಪಾಟೀಲ್‌ ಸೇರಿದಂತೆ ಅನರ್ಹ ಶಾಸಕರಾದ ಎಚ್‌.ವಿಶ್ವನಾಥ್‌, ಮುನಿರತ್ನ, ಪ್ರತಾಪ್‌ಗೌಡ ಪಾಟೀಲ್‌, ಆರ್‌.ಶಂಕರ್‌ ಮೊದಲಾದವರು ಜತೆಯಾಗಿಯೇ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿದ್ದರು.

ವಿಶೇಷವಾಗಿ ಸೋಮಶೇಖರ್‌ ಮತ್ತು ಬೈರತಿ ಬಸವರಾಜು ಅವರು ತಮ್ಮ ಪರಮಾಪ್ತ ಮುನಿರತ್ನ ಅವರ ಹಾದಿ ಸುಗಮಗೊಳಿಸುವ ಬಗ್ಗೆ ಹೆಚ್ಚು ಪ್ರಸ್ತಾಪಿಸಿದರು. ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಮುನಿರಾಜುಗೌಡ ಅವರು ದಾಖಲಿಸಿರುವ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅದನ್ನು ವಾಪಸ್‌ ಪಡೆಯುವಂತೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

ಜತೆಗೆ ಮಸ್ಕಿಯ ಬಿಜೆಪಿ ಪರಾಜಿತ ಅಭ್ಯರ್ಥಿ ಬಸವನಗೌಡ ತುರವಿಹಾಳ ಅವರು ಹೂಡಿರುವ ಪ್ರಕರಣವನ್ನೂ ಹಿಂಪಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪ ಅವರು, ಆ ಎರಡು ಕ್ಷೇತ್ರಗಳ ಬಿಜೆಪಿಯ ಪರಾಜಿತ ಅಭ್ಯರ್ಥಿಗಳ ಜೊತೆ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡಲಾಗಿದೆ. ಆದರೂ ಪ್ರಕರಣ ವಾಪಸ್‌ ಪಡೆಯಲು ಒಪ್ಪಿಕೊಂಡಿಲ್ಲ. ಹೀಗಾಗಿ, ದೆಹಲಿಗೆ ತೆರಳಿದ ವೇಳೆ ವರಿಷ್ಠರ ಬಳಿಯೇ ಪ್ರಸ್ತಾಪ ಮಾಡಿ ಅವರಿಂದಲೇ ಮುಂದಿನ ಪ್ರಯತ್ನ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಸ್ಪಷ್ಟಭರವಸೆ ನೀಡಿದರು ಎನ್ನಲಾಗಿದೆ.

ಇದೇ ವೇಳೆ ಉಪಚುನಾವಣೆಯಲ್ಲಿ ಸೋಲುಂಡಿರುವ ಎಂ.ಟಿ.ಬಿ.ನಾಗರಾಜ್‌ ಮತ್ತು ವಿಶ್ವನಾಥ್‌ ಅವರಿಗೆ ಸೂಕ್ತ ಸ್ಥಾನಮಾನ ನೀಡಲು ಮನಸ್ಸಿದೆ. ಅವರ ತ್ಯಾಗ ಗೌರವಿಸಲಾಗುವುದು. ಮುಂದಿನ ಹಂತದಲ್ಲಿ ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುವ ಬಗ್ಗೆ ವರಿಷ್ಠರ ಬಳಿ ಪ್ರಸ್ತಾಪಿಸುತ್ತೇನೆ ಎಂಬುದಾಗಿ ಯಡಿಯೂರಪ್ಪ ತಿಳಿಸಿದರು ಎಂದು ತಿಳಿದು ಬಂದಿದೆ.

Follow Us:
Download App:
  • android
  • ios