'ಸಿದ್ದು ನನ್ನಿಂದ ಹಣ ಪಡೆದಿದ್ದಾರೆ, ನನ್ನ ಋುಣದಲ್ಲಿ ಹಲವು ಕಾಂಗ್ರೆಸ್ಸಿಗರಿದ್ದಾರೆ'
ಸಿದ್ದು ನನ್ನಿಂದ ಹಣ ಪಡೆದಿದ್ದಾರೆ: ಎಂಟಿಬಿ| ಕೃಷ್ಣ ಬೈರೇಗೌಡ ಬಿಟ್ಟು ಬೇರಾವ ಕಾಂಗ್ರೆಸ್ ನಾಯಕರೂ ನನ್ನ ಹಣ ವಾಪಸ್ ನೀಡಿಲ್ಲ| ನನ್ನ ಋುಣದಲ್ಲಿ ಹಲವು ಕಾಂಗ್ರೆಸ್ಸಿಗರಿದ್ದಾರೆ| ಎಚ್‌ಡಿಕೆ ಮಾತಾಡಿ ಸಮಸ್ಯೆ ಬಗೆಹರಿಸಿ ಅಂದರೆ ನನ್ನ ಕೆಲಸವನ್ನೇ ಮಾಡಿಕೊಡ್ತಿಲ್ಲ ಅಂತ ಸಿದ್ದು ಹೇಳಿದ್ದರು
ಸೂಲಿಬೆಲೆ[ನ.21]: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಹಲವು ಕಾಂಗ್ರೆಸ್ ನಾಯಕರು ನನ್ನ ಬಳಿ ಹಣ ಪಡೆದಿದ್ದಾರೆ. ಈವರೆಗೂ ವಾಪಸ್ ಮಾಡಿಲ್ಲ ಎಂದು ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್ ಹೊಸ ‘ಬಾಂಬ್’ ಸಿಡಿಸಿದ್ದಾರೆ.
ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ನಾನಾ ಗ್ರಾಮಗಳಲ್ಲಿ ಬುಧವಾರ ಪ್ರಚಾರ ಕಾರ್ಯ ಕೈಗೊಂಡು ಮಾತನಾಡಿದ ಅವರು, ನಾನು ಯಾರ ಋುಣದಲ್ಲೂ ಇಲ್ಲ. ನನ್ನ ಋುಣದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಸಿದ್ದರಾಮಯ್ಯ, ಮುನಿಯಪ್ಪ, ನಂಜೇಗೌಡ, ನಾರಾಯಣಸ್ವಾಮಿ ನನ್ನ ಬಳಿ ಹಣ ಪಡೆದು ಇಂದಿಗೂ ವಾಪಸ್ ಮಾಡಿಲ್ಲ ಎಂದು ಹೇಳಿದರು.
'ಪತಿಯೊಂದಿಗೆ ನಾಮಪತ್ರ ಸಲ್ಲಿಸಿದ ಹೇಮಲತಾ, ಇತರ ಮೂವರು ಜೆಡಿಎಸ್‌ನಿಂದ ಉಚ್ಛಾಟನೆ'
ಲೋಕಸಭಾ ಚುನಾವಣೆ ವೇಳೆ ಕೃಷ್ಣ ಬೈರೇಗೌಡ ನನ್ನಿಂದ ಹಣ ಸಾಲ ಪಡೆದು ವಾಪಸ್ ಮಾಡಿದರು. ಅವರನ್ನು ಬಿಟ್ಟರೆ ಬೇರೆ ಯಾರೂ ವಾಪಸ್ ಮಾಡಿಲ್ಲ. ನಾನು ಮಂಜುನಾಥ ಸ್ವಾಮಿ ಭಕ್ತ. ಸುಳ್ಳು ಹೇಳಲ್ಲ. ನನ್ನ ಬಳಿ .1200 ಕೋಟಿಗೂ ಅಧಿಕ ಹಣ ಇದೆ. ಇಷ್ಟುಆಸ್ತಿಯ ಒಡೆಯ. ಇದೆಲ್ಲ ನ್ಯಾಯಯುತವಾಗಿ ಸಂಪಾದನೆ ಮಾಡಿದ ಹಣ ಎಂದರು.
ಮಾಲೂರು ಕ್ಷೇತ್ರದ ಶಾಸಕ ನಂಜೇಗೌಡ ಅವರು ಸಿದ್ದರಾಮಯ್ಯ ಸಮ್ಮುಖದಲ್ಲಿ ಹಣ ಪಡೆದಿದ್ದಾರೆ. ಆದರೆ, ಈಗ ಅವರು ನನ್ನ ವಿರುದ್ಧ ಪ್ರಚಾರ ಮಾಡಲು ನಮ್ಮ ಕ್ಷೇತ್ರಕ್ಕೆ ಬಂದಿದ್ದಾರೆ. ಆದರೆ ಮುಂದಿನ ಚುನಾವಣೆಯಲ್ಲಿ ಅವರು ಮಾಲೂರು ಕ್ಷೇತ್ರದಲ್ಲಿ ಲೆಕ್ಕಕ್ಕೆ ಇಲ್ಲದಂತೆ ಹೋಗುತ್ತಾರೆ. ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಜೊತೆ ಮಾತನಾಡಿ, ಸಮಸ್ಯೆ ಬಗೆಹರಿಸುವಂತೆ ಕೇಳಿದ್ದಕ್ಕೆ ಸಿದ್ದರಾಮಯ್ಯ ನನ್ನ ಮತ್ತು ನನ್ನ ಮಗನ ಕ್ಷೇತ್ರದ ಕೆಲಸವನ್ನೇ ಮಾಡಿಕೊಡುತ್ತಿಲ್ಲ ಅಂತ ಅಸಹಾಯಕತೆ ತೋರಿದ್ದರು. ಮೈತ್ರಿ ಮುರಿದುಕೊಂಡು ವಿಪಕ್ಷದಲ್ಲಿ ಕೂರೋಣ ಅಂತ ಸಲಹೆ ಕೊಟ್ಟೆ. ಹೈಕಮಾಂಡ್ ಕಡೆ ಬೆರಳು ತೋರಿಸಿದ್ದರು ಎಂದು ಹೇಳಿದರು.
ನರೇಂದ್ರ ಮೋದಿ ಅವರು ಎಷ್ಟುವರ್ಷಗಳ ಕಾಲ ರಾಜಕೀಯದಲ್ಲಿ ಇರುತ್ತಾರೋ ಅಲ್ಲಿಯ ತನಕ ಯಾವುದೇ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲ. ಸ್ಥಿರ ಹಾಗೂ ಸುಭದ್ರ ಸರಕಾರ ನೀಡುತ್ತಿರುವ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಉತ್ತಮ ಆಡಳಿತ ನೀಡುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಇದ್ದೂ ಇಲ್ಲದಂತಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಾಯಕತ್ವ ಇಲ್ಲ, ರಾಹುಲ್ ಗಾಂಧಿ ಸಹ ರಾಜೀನಾಮೆ ಕೊಟ್ಟಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಇಲ್ಲಿಯ ತನಕ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕೇವಲ 1 ಸ್ಥಾನವನ್ನು ಮಾತ್ರ ಗೆದ್ದ ಇತಿಹಾಸವೇ ಇಲ್ಲ ಎಂದರು.
‘ಸಿದ್ದರಾಮಯ್ಯ ಅವರ ಧೂಳಿಗೂ ಎಂಟಿಬಿ ನಾಗರಾಜ್ ಸಮನಲ್ಲ’
ಗುರುವಾರ ನಾಮಪತ್ರ ಪಡೆಯಲು ಕೊನೆಯ ದಿನ. ನಾಮಪತ್ರ ವಾಪಸು ಪಡೆಯುವವರು ಪಡೆದು ಅಂತಿಮ ಪಟ್ಟಿಸಿದ್ಧವಾದ ನಂತರ, ತಾಲೂಕಿನ ಆಸ್ತಿಯನ್ನು ಯಾರು ಯಾರು ಕಬಳಿಸಿದ್ದಾರೆ ಎಂಬುದನ್ನು ದಾಖಲೆ ಸಮೇತ ಬಹಿರಂಗಪಡಿಸುತ್ತೇನೆ. ಒಂದು ವೇಳೆ ನಾನು ಏನಾದರೂ ಈ ರೀತಿಯಾಗಿ ಮಾಡಿದ್ದರೆ ನನ್ನ ವಿರುದ್ಧ ದಾಖಲೆ ಸಮೇತ ಬಹಿರಂಗ ಪಡಿಸಲಿ ಎಂದರು.
ನನಗೆ ಮಂತ್ರಿ ಸ್ಥಾನ ಇಲ್ಲದಿದ್ದರೂ ಪರವಾಗಿಲ್ಲ, ಅಭಿವೃದ್ಧಿ ಕಾರ‍್ಯಗಳಿಗೆ ಅನುದಾನ ಬಿಡುಗಡೆ ಮಾಡಿದ್ದರೆ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುತ್ತಿರಲಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಅನುದಾನ ಕೇಳಲು ಸಿದ್ದರಾಮಯ್ಯ ಅವರೇ ಸಮಯ ಕೊಡುತ್ತಿಲ್ಲ ಎಂಬುವಷ್ಟರ ಮಟ್ಟಿಗೆ ಪರಿಸ್ಥಿತಿ ಹೋಗಿತ್ತು. ಹೀಗಿರುವಾಗ ನಾವು ಯಾಕೆ ಅವರಿಗೆ ಬೆಂಬಲ ಸೂಚಿಸಬೇಕು ಎಂದು ಎಲ್ಲರೂ ತೀರ್ಮಾನಿಸಿ ರಾಜೀನಾಮೆ ನೀಡಿ ಹೊರ ಬಂದಿದ್ದೇವೆ.