ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವ ವಿಚಾರಕ್ಕೆ ಎಚ್‌ಡಿಕೆ ಖಡಕ್ ಮಾತು...!
ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಅದ್ಯಾಕೋ ಕೆಲ ಜೆಡಿಎಸ್ ಶಾಸಕರುಮ ಪಕ್ಷ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಜಿಟಿ ದೇವೇಗೌಡ ಅಂತೂ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಇದೀಗ ಮಧು ಬಂಗಾರಪ್ಪ ಕೂಡ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ದಟ್ಟವಾಗಿದ್ದು, ಇದಕ್ಕೆ ಕುಮಾರಸ್ವಾಮಿ ಖಡಕ್ ಪ್ರತಿಕ್ರಿಯಿಸಿದ್ದಾರೆ. ಹಾಗಾದ್ರೆ ಮಧು ಬಂಗಾರ ಕಾಂಗ್ರೆಸ್ ಸೇರ್ಪಡೆಗೆ ಎಚ್‌ಡಿಕೆ ಹೇಳಿದ್ದೇನು..? ನೋಡಿ...
ಬೆಂಗಳೂರು, (ಜ.25): ಸಧ್ಯ ಕರ್ನಾಟಕದಲ್ಲಿ ರಾಜ್ಯ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಒಂದು ಕಡೆ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಚಟುವಟಿಕೆ ಗರಿಗೆದರಿದರೆ, ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಆಯ್ಕೆ ಕಾಳಗ ಬಲು ಜೋರಾಗಿದೆ.
ಇನ್ನು ಜೆಡಿಎಸ್‌ನಲ್ಲಿ ಪಕ್ಷಾಂತರ ಪರ್ವ ಮಾತು ಜೋರಾಗಿ ಕೇಳಿಬಂರುತ್ತವೆ. ಸೊರಬ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಮಧು ಬಂಗಾರಪ್ಪ ಹಾಗೂ ಪರಿಷತ್ ಮಾಜಿ ಸದಸ್ಯ, ವಕ್ತಾರ ರಮೇಶ್ ಬಾಬು ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ದಟ್ಟವಾಗಿದೆ.
ಶಿವಮೊಗ್ಗದಲ್ಲಿ ರಾಘವೇಂದ್ರಗೆ ನಿರೀಕ್ಷಿತ ಗೆಲುವು: ಮಧು ಯಡವಿದ್ದೆಲ್ಲಿ..?
ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಮಾತುಕತೆ ನಡೆಸಿದ್ದು, ಯುಗಾದಿ ಬಳಿಕ ಕಾಂಗ್ರೆಸ್ ಪಕ್ಷ ಸೇರುವುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡ ಬಳಿಕ ಮಧು ಬಂಗಾರಪ್ಪ ಜೆಡಿಎಸ್ ಪಕ್ಷದಿಂದ ದೂರ ಉಳಿದ್ದಿದ್ದಾರೆ. ಪಕ್ಷದ ಯಾವುದೇ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದೀಗ ಅವರ ಕಾಂಗ್ರೆಸ್ ಸೇರುವ ಒಲವು ವ್ಯಕ್ತಪಡಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು (ಶನಿವಾರ) ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಮಾತನಾಡಿದ ಅವರು, ಬರುವವರು ಬರುತ್ತಾರೆ, ಹೋಗುವವರು ಹೋಗುತ್ತಾರೆ. ಬಂದು ಹೋಗುವವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಮಧು ಬಂಗಾರಪ್ಪ 'ಕೈ' ಹಿಡಿಯುತ್ತಾರೆ ಎಂಬುದಕ್ಕೆಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದರು.
ಈಗಾಗಲೇ ಹಲವಾರು ಬಾರಿ ಇಬ್ಬರನ್ನೂ ಕರೆದು ಮಾತನಾಡಿದ್ದೇನೆ. ಇನ್ನೂ ನಾನು ಎಷ್ಟು ಬಾರಿ ಕರೆದು ಮಾತನಾಡಲಿ? ದೊಡ್ಡ ಪಕ್ಷಕ್ಕೆ ಸೇರಿ ಏನೋ ಸಾಧನೆ ಮಾಡುತ್ತೇನೆಂಬ ಭ್ರಮೆ ಅವರಲ್ಲಿದೆ. ನಮ್ಮ ಪಕ್ಷ ಅವರನ್ನು ಚೆನ್ನಾಗಿ ನೋಡಿಕೊಂಡಿತ್ತು. ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ ಎಂದು ಖಡಕ್ ಆಗಿ ಹೇಳಿದರು.