Asianet Suvarna News Asianet Suvarna News

ಹುಣಸೂರಿಂದ ಅಸೆಂಬ್ಲಿಗೆ ಪ್ರತಾಪ್ ಸಿಂಹ ಸ್ಪರ್ಧೆ?

  • ಹನುಮ ಜಯಂತಿ ವಿವಾದ ಬೆನ್ನಲ್ಲೇ ಬಿಜೆಪಿ ಅಂಗಳದಲ್ಲಿ ಹೊಸ ರಾಜಕೀಯ ಲೆಕ್ಕಾಚಾರದ ಗುಸುಗುಸು
  • ಪ್ರತಾಪ್ ಸ್ಪರ್ಧೆಗೆ ಆರೆಸ್ಸೆಸ್ ಬೆಂಬಲ: ಉನ್ನತ ಮೂಲಗಳ ಮಾಹಿತಿ
  • ಹಾಗಾದಲ್ಲಿ ಮತ್ತೆ ಪ್ರತಾಪ್ v/s ಎಚ್.ವಿಶ್ವನಾಥ್!
Pratap Simha To Contest Assembly Elections

ಬೆಂಗಳೂರು: ಹನುಮ ಜಯಂತಿ ಆಚರಣೆಗೆ ಮುಂದಾಗುವ ಮೂಲಕ ವಿವಾದ ಸೃಷ್ಟಿಸಿರುವ ಮೈಸೂರು ಸಂಸದ ಹಾಗೂ ಬಿಜೆಪಿಯ ಯುವಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆಯೇ? ಬಿಜೆಪಿಯ ಅಂಗಳದಲ್ಲಿ ಇಂಥದೊಂದು ಸುದ್ದಿ ಬಲವಾಗಿ ಓಡಾಡುತ್ತಿದ್ದು, ಇದಕ್ಕೆ ಆರ್’ಎಸ್‌ಎಸ್‌ನ ಕೆಲವು ಮುಖಂಡರ ಬೆಂಬಲ ಇದೆ ಎಂಬ ಮಾತು ಕೇಳಿಬಂದಿದೆ.

ಹುಣಸೂರಿನಲ್ಲಿ ಆಯೋಜಿಸಿದ್ದ ಹನುಮ ಜಯಂತಿ ಕಾರ್ಯಕ್ರಮ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ರುವುದರ ಹಿಂದೆ ಕೇವಲ ಧಾರ್ಮಿಕ ಉದ್ದೇಶ ಅಲ್ಲದೆ ರಾಜಕೀಯ ಉದ್ದೇಶವೂ ಇದೆ. ಈ ಬೆಳವಣಿಗೆ ಪ್ರತಾಪ್ ಸಿಂಹ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಾದಿ ಸುಗಮಗೊಳಿಸುವಂತಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಾಪ್ ಸಿಂಹ ಅವರು ಇತರ ಹಲವು ವಿಧಾನಸಭಾ ಕ್ಷೇತ್ರಗಳಿದ್ದರೂ ತಮ್ಮ ಸಂಸದರ ನಿಧಿ ಅಡಿಯಲ್ಲಿ ಹುಣಸೂರು ಕ್ಷೇತ್ರಕ್ಕೇ ಹೆಚ್ಚಿನ ಅನುದಾನ ನೀಡಿದ್ದಾರೆ ಎಂಬ ಮಾತೂ ಇದನ್ನು ಪುಷ್ಟೀಕರಿಸುವಂತಿದೆ. ಆದರೆ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊರತುಪಡಿಸಿ ಬೇರೆ ಯಾವುದೇ ಸಂಸದರೂ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ ಎಂಬ ಸಂದೇಶವನ್ನು ಬಿಜೆಪಿಯ ವರಿಷ್ಠರು ರವಾನಿಸಿರುವುದರಿಂದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡಲು ಒಪ್ಪಿಕೊಳ್ಳುತ್ತಾರೆಯೇ ಎಂಬ ಕುತೂಹಲವಿದೆ.

ಇದೆಲ್ಲದರ ನಡುವೆಯೂ ಪ್ರತಾಪ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎನ್ನಲಾಗುತ್ತಿದೆ. ಪ್ರತಾಪ್ ಸಿಂಹ ಲೋಕಸಭೆ ಬದಲು ವಿಧಾನಸಭೆಯತ್ತ ದೃಷ್ಟಿ ಹಾಯಿಸಿರುವುದಕ್ಕೆ ಬಿಜೆಪಿ ಪಾಳೆಯದಲ್ಲಿ ಎರಡು ಪ್ರಮುಖ ಕಾರಣಗಳು ಕೇಳಿಬರುತ್ತಿವೆ.

ಕಾರಣ ಒಂದು- ಖುದ್ದು ಪ್ರತಾಪ್ ಸಿಂಹ ಅವರಿಗೆ ಮತ್ತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲ. ಜಿಲ್ಲೆಯಲ್ಲಿ ಪಕ್ಷದ ಮುಖಂಡರೊಂದಿಗಿನ ಒಡನಾಟ ಚೆನ್ನಾಗಿಲ್ಲದಿರುವುದರಿಂದ ಮತ್ತೊಮ್ಮೆ ಗೆಲ್ಲುವ ಬಗ್ಗೆ ಹಿಂಜರಿಕೆ ಉಂಟಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಇದ್ದ ರಾಜಕೀಯ ಅನುಕೂಲಕರ ವಾತಾವರಣ 2019ರಲ್ಲಿ ಇರಲಿಕ್ಕಿಲ್ಲ. ಪಕ್ಷದವರೇ ಸೋಲಿಸಲು ಮುಂದಾಗಬಹುದು. ಹೀಗಾಗಿ, ಈಗಲೇ ವಿಧಾನಸಭೆಯತ್ತ ಮುಖ ಮಾಡುವುದರಿಂದ ಮುಂದಿನ ಸೋಲಿನ ಭೀತಿಯಿಂದ ತಪ್ಪಿಸಿಕೊಳ್ಳಬಹುದು ಎಂಬ ಮುಂದಾಲೋಚನೆ.

ಕಾರಣ ಎರಡು- ಹಿಂದುತ್ವದ ಬಗ್ಗೆ ಪ್ರಖರವಾಗಿ ಮಾತನಾಡಬಲ್ಲ ಮತ್ತು ಹಿಂದುತ್ವವನ್ನು ಪ್ರತಿಪಾದಿಸಬಲ್ಲ ವ್ಯಕ್ತಿಗಳು ವಿಧಾನಸಭೆಯಲ್ಲೂ ಹೆಚ್ಚಾಗಬೇಕು. ಈಗಿರುವ ಸಿ.ಟಿ.ರವಿ, ವಿ.ಸುನೀಲ್‌ಕುಮಾರ್ ಮೊದಲಾದವರು ಈಗ ಮೊದಲಿನ ಉಗ್ರ ಪ್ರತಿಪಾದನೆಯ ಧ್ವನಿ ಕಳೆದುಕೊಂಡು ತುಸು ಮೃದು ಧೋರಣೆ ತಳೆದಿರುವುದರಿಂದ ಪ್ರತಾಪ್ ಸಿಂಹ ಅವರಂಥ ವ್ಯಕ್ತಿಗಳು ವಿಧಾನಸಭೆ ಪ್ರವೇಶಿಸುವ ಮೂಲಕ ಆ ಪರಂಪರೆ ಮುಂದುವರೆಸುವುದು ಸೂಕ್ತ ಎಂಬ ನಿಲುವಿಗೆ ಆರ್‌ಎಸ್‌ಎಸ್‌ನ ಕೆಲವು ಮುಖಂಡರು ಬಂದಿದ್ದಾರೆ.

ಪ್ರತಾಪ್ ಸಹೋದರ ಹೆಸರೂ ಪ್ರಸ್ತಾಪ

ಈ ನಡುವೆ ಪ್ರತಾಪ್ ಸಿಂಹ ಅವರು ತಮ್ಮ ಸಹೋದರ ವಿಕ್ರಂ ಸಿಂಹ ಅವರಿಗಾಗಿ ಹುಣಸೂರು ಕ್ಷೇತ್ರದಲ್ಲಿ ಬುನಾದಿ ಹಾಕುತ್ತಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಕಳೆದ ಚುನಾವಣೆಯಲ್ಲೂ ಪ್ರತಾಪ್ ಪರವಾಗಿ ಸಹೋದರ ಓಡಾಡಿದ್ದರು. ಹೀಗಾಗಿ, ಅವರನ್ನು ಕಣಕ್ಕಿಳಿಸುವ ಉದ್ದೇಶವಿದೆ ಎನ್ನಲಾಗುತ್ತಿದೆ.

ಹುಣಸೂರು ಸುರಕ್ಷಿತ ಕ್ಷೇತ್ರ?:

ಸದ್ಯ ಹುಣಸೂರು ಕಾಂಗ್ರೆಸ್ ವಶದಲ್ಲಿದೆ. ಎಚ್.ಪಿ.ಮಂಜುನಾಥ್ ಹಾಲಿ ಶಾಸಕರು. ಕ್ಷೇತ್ರದಲ್ಲಿ ಒಕ್ಕಲಿಗರು ಮತ್ತು ಕುರುಬರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಸಕಲ ತಯಾರಿ ನಡೆಸಿದ್ದರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಪುತ್ರ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಬಂದಿದ್ದರಿಂದ ಅವರನ್ನು ಹುಣಸೂರಿನಿಂದ ಕಣಕ್ಕಿಳಿಸಲು ನಿರ್ಧರಿಸಿದ ನಂತರ ಪ್ರಜ್ವಲ್ ರೇವಣ್ಣ ಹಿಂದೆ ಸರಿಯಬೇಕಾಯಿತು.

ಹುಣಸೂರಿನಿಂದ ಸ್ಪರ್ಧಿಸಲು ಬಿಜೆಪಿಯಲ್ಲೂ ಪ್ರಬಲ ಅಭ್ಯರ್ಥಿ ಇಲ್ಲ. ಮಾಜಿ ಸಂಸದ ಎಚ್.ಸಿ.ವಿಜಯಶಂಕರ್ ಅವರು ಬಹಿರಂಗವಾಗಿಯೇ ಆಸಕ್ತಿ ವ್ಯಕ್ತಪಡಿಸಿದರೂ ಬಿಜೆಪಿ ನಾಯಕರು ಒಲವು ತೋರದ ಹಿನ್ನೆಲೆಯಲ್ಲಿ ಕೊನೆಗೆ ಕಾಂಗ್ರೆಸ್ ಬಾಗಿಲು ಬಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಮತ್ತು ವಿಶ್ವನಾಥ್ ನಡುವೆ ನೇರ ಹಣಾಹಣಿ ನಡೆದಿತ್ತು. ಒಂದು ವೇಳೆ ಈಗ ಹುಣಸೂರಿನಿಂದ ಪ್ರತಾಪ್ ಸಿಂಹ ಸ್ಪರ್ಧಿಸಿದಲ್ಲಿ ವಿಧಾನಸಭಾ ಚುನಾವಣೆಗೂ ಉಭಯ ಮುಖಂಡರು ಮುಖಾಮುಖಿಯಾಗಲಿದ್ದಾರೆ.

 

Follow Us:
Download App:
  • android
  • ios