ಕರ್ನಾಟಕದ ಜನತೆ ಕುತೂಹಲದಿಂದ ಕಾಯುತ್ತಿದ್ದ ರಾಜ್ಯ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕವನ್ನು ಘೋಷಿಸಿದೆ.

ಹೊಸದಿಲ್ಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದ್ದು, ಒಂದೇ ಹಂತದಲ್ಲಿ ಮೇ 12, ಶನಿವಾರದಂದು ಚುನಾವಣೆ ನಡೆಯಲಿದೆ. ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ.

ಇಲ್ಲಿನ ಚುನಾವಣಾ ಆಯೋಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಆಯುಕ್ತ ಓಂ ಪ್ರಕಾಶ್ ರಾವತ್ ದಿನ ಘೋಷಿಸಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.

ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುವುದು, ಮತದಾನದ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಎಂದು ಅವರು ಹೇಳಿದರು.

ಈಗಾಗಲೇ ಚುನಾವಣಾ ಪ್ರಕ್ರಿಯೆಗಳು ರಾಜ್ಯದಲ್ಲಿ ಬಿರುಸಿನಿಂದ ಸಾಗುತ್ತಿದ್ದು, ರಾಷ್ಟ್ರ ನಾಯಕರೂ ರಾಜ್ಯದಲ್ಲಿಯೇ ಬೀಡು ಬಿಟ್ಟಿದ್ದಾರೆ. ದಿನಾಂಕ ನಿಗದಿಯಾದ್ದರಿಂದ ಈ ಚಟುವಟಿಕೆಗಳು ಮತ್ತಷ್ಟು ಬಿರುಸುಗೊಳ್ಳಲ್ಲಿದೆ.

ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಬಿರುಸಿನ ಹೋರಾಟ ನಡೆಯಲಿದ್ದು, ಇನ್ನೂ ಕೆಲವು ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಪಕ್ಷಗಳು ಘೋಷಿಸುವುದು ಬಾಕಿ ಇದೆ. ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಮೇ 28ಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿ ಮುಕ್ತಾಯವಾಗಲಿದೆ.

ಚುನಾವಣೆ ಪ್ರಕ್ರಿಯೆಗಳು ಈ ಕೆಳಗಿನಂತೆ ನಡೆಯಲಿವೆ....

ಏಪ್ರಿಲ್ 17ಕ್ಕೆ ಚುನಾವಣಾ ಅಧಿಸೂಚನೆ

ಏಪ್ರಿಲ್ 24ಕ್ಕೆ- ನಾಮಪತ್ರ ಸಲ್ಲಿಸಲು ಕಡೇ ದಿನ

ಏಪ್ರಿಲ್ 25ಕ್ಕೆ ನಾಮಪತ್ರಗಳ ಪರಿಶೀಲನೆ

ಏಪ್ರಿಲ್ 27ಕ್ಕೆ-ನಾಮಪತ್ರ ಹಿಂಪಡೆಯಲು ಕಡೇ ದಿನ

ಮೇ 12ಕ್ಕೆ ಚುನಾವಣೆ

ಮೇ 15ಕ್ಕೆ ಮತ ಎಣಿಕೆ