ಮಲ್ಯ ರೀತಿ ಸಿಬಲ್ ವಂಚನೆ: ಬರ್ಖಾದತ್ ಆರೋಪ
ಮಲ್ಯ ರೀತಿ ಸಿಬಲ್ ವಂಚನೆ: ಬರ್ಖಾದತ್ ಆರೋಪ| ತಿರಂಗಾ ಟೀವಿಯ ನೂರಾರು ಉದ್ಯೋಗಿಗಳಿಗೆ ವೇತನ ನೀಡದೇ ವಂಚನೆ| ಉದ್ಯೋಗಿಗಳ ಗೋಳು ಕೇಳದೇ ಲಂಡನ್‌ನಲ್ಲಿ ಮೋಜಿನಲ್ಲಿರುವ ಕಾಂಗ್ರೆಸ್ಸಿಗ
ನವದೆಹಲಿ[ಜು.16]: ವಿಜಯ್ ಮಲ್ಯ, ನೀರವ್ ಮೋದಿ ಭಾರತದಲ್ಲಿ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾದ ವೇಳೆ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ನೀತಿ ಪಾಠ ಮಾಡಿದ್ದ ಹಿರಿಯ ಕಾಂಗ್ರೆಸ್ಸಿಗ, ಕೇಂದ್ರ ಮಾಜಿ ಸಚಿವ ಕಪಿಲ್ ಸಿಬಲ್ ಇದೀಗ ಸ್ವತಃ ತಾವೇ ನೂರಾರು ಜನರಿಗೆ ವಂಚಿಸಿದ ಆರೋಪಕ್ಕೆ ತುತ್ತಾಗಿದ್ದಾರೆ.
ಸಿಬಲ್ ಮತ್ತು ಅವರ ಪತ್ನಿ ಕೆಲ ಸಮಯದ ಹಿಂದೆ ಸ್ಥಾಪಿಸಿದ್ದ ತಿರಂಗಾ ಸುದ್ದಿವಾಹಿನಿ ಈಗ ಮುಚ್ಚುವ ಹಂತಕ್ಕೆ ಬಂದಿದ್ದು, ಕಂಪನಿಯ 200ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ವೇತನ ನೀಡದೇ ವಂಚಿಸಲಾಗಿದೆ ಎಂದು ಹಿರಿಯ ಪತ್ರಕರ್ತೆ ಬರ್ಖಾ ದತ್ ಆರೋಪ ಮಾಡಿದ್ದಾರೆ. ಮಲ್ಯ, ಜನರಿಗೆ ವಂಚಿಸಿ ಲಂಡನ್‌ಗೆ ಹೋಗಿ ಐಷಾರಾಮದ ಜೀವನ ನಡೆಸುತ್ತಿರುವ ರೀತಿಯಲ್ಲೇ ಸಿಬಲ್ ಕೂಡಾ ವರ್ತಿಸುತ್ತಿರುವ ಕಾರಣ ಅವರನ್ನು ಮಲ್ಯಗೆ ಹೋಲಿಸಬೇಕಾಗಿ ಬಂದಿದೆ ಎಂದು ದತ್ ಕಿಡಿಕಾರಿದ್ದಾರೆ. ಜೊತೆಗೆ ತಮ್ಮ ಈ ಆರೋಪದ ಬೆನ್ನಲ್ಲೇ ತಮಗೆ ಬೆದರಿಕೆಯನ್ನೂ ಹಾಕಲಾಗಿದ್ದು, ಟೀವಿ ಚಾನೆಲ್‌ಗೆ ಸಿಬಲ್ ಕಡೆಯವರು ಎನ್ನಲಾದ ಬೌನ್ಸರ್‌ಗಳು ಬಂದು ಕುಳಿತಿದ್ದಾರೆ ಎಂದು ಬರ್ಖಾ ಟ್ವೀಟ್ ಮಾಡಿದ್ದಾರೆ. ಆದರೆ ಈ ಆರೋಪಗಳನ್ನು ಕಂಪನಿ ತಳ್ಳಿಹಾಕಿದೆ.
ಏನಾಯ್ತು?:
ಕೆಲ ತಿಂಗಳ ಹಿಂದೆ ಸಿಬಲ್ ತಮ್ಮ ಒಡೆತನದಲ್ಲಿ ಟೀವಿ ಚಾನೆಲ್ ಆರಂಭಿಸಿದ್ದರು. ಕನಿಷ್ಠ 2 ವರ್ಷ ಯಾವುದೇ ತೊಂದರೆ ಇಲ್ಲದೇ ಚಾನೆಲ್ ನಡೆಸಲಾಗುವುದು ಎಂದು ಹೇಳಿ ಹಲವು ಹಿರಿಯ ಪತ್ರಕರ್ತರನ್ನು ಕರೆತಂದಿದ್ದರು. ಆದರೆ ನಾನಾ ಕಾರಣಗಳಿಂದಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಚಾನೆಲ್ ಇದೀಗ ಬಾಗಿಲು ಹಾಕುವ ಹಂತ ತಲುಪಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬರ್ಖಾದತ್, ‘ಕಪಿಲ್ ಸಿಬಲ್ ಮತ್ತು ಅವರ ಪತ್ನಿ ಸ್ಥಾಪಿಸಿದ್ದ ತಿರಂಗಾ ಟೀವಿಯಲ್ಲಿ ಈಗ ಭಯಾನಕ ಪರಿಸ್ಥಿತಿ ಇದೆ. 200ಕ್ಕೂ ಹೆಚ್ಚು ಸಿಬ್ಬಂದಿಗಳ ಉಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅವರಿಗೆಲ್ಲಾ 6 ತಿಂಗಳ ವೇತನವನ್ನೂ ನೀಡದೇ ಹೊರಹಾಕುವ ಭೀತಿ ಕಾಡುತ್ತಿದೆ. ಸಾರ್ವಜನಿಕವಾಗಿ ನೈತಿಕತೆಯ ಬಗ್ಗೆ ದೊಡ್ಡದಾಗಿ ಬಿಂಬಿಸಿಕೊಳ್ಳುವ ವ್ಯಕ್ತಿ ಪತ್ರಕರ್ತರನ್ನು ಭೀಕರವಾಗಿ ನಡೆಸುಕೊಳ್ಳುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಜೊತೆಗೆ ‘ಬಹಳಷ್ಟು ಜನ ತಮಗೆ ಸಿಕ್ಕ ಅತ್ಯುತ್ತಮ ಕೆಲಸ ತಿರಸ್ಕರಿಸಿ ಇಲ್ಲಿಗೆ ಬಂದಿದ್ದರು. ಅವರಿಗೆ 2 ವರ್ಷಗಳ ಖಚಿತ ಉದ್ಯೋಗದ ಭರವಸೆ ನೀಡಲಾಗಿತ್ತು. ಆದರೆ ಇದೀಗ ಪತಿ ಮತ್ತು ಪತ್ನಿ ಇಬ್ಬರೂ ಉದ್ಯೋಗಿಗಳ ಜೊತೆ ಮಾತನಾಡುವುದಕ್ಕೂ ಹಿಂಜರಿಯುತ್ತಿದ್ದಾರೆ. ಟೀವಿಯಲ್ಲಿ 48 ಗಂಟೆಗಳಿಂದ ನೇರ ಪ್ರಸಾರ ಬಂದ್ ಆಗಿದೆ. ಮಾಂಸ ಮಾರಾಟದ ಉದ್ಯೋಗಿಯಾಗಿರುವ ಸಿಬಲ್ ಪತ್ನಿ, ಕಾರ್ಮಿಕರಿಗೆ ಒಂದು ಪೈಸೆಯನ್ನೂ ನೀಡದೇ ನಾನು ಕಾರ್ಖಾನೆ ಬಂದ್ ಮಾಡಿದ್ದೇನೆ. ಹೀಗಿರುವಾಗ ನನ್ನ ಬಳಿ 6 ತಿಂಗಳ ವೇತನ ಕೇಳಲು ಇವರಾರಯವ ಪತ್ರಕರ್ತರು ಎಂದೆಲ್ಲಾ ಟೀಕಿಸಿದ್ದಾರೆ.
ನಿತ್ಯವೂ ಕೋಟ್ಯಂತರ ರುಪಾಯಿ ಸಂಪಾದಿಸುವ ಸಿಬಲ್ 200 ಸಿಬ್ಬಂದಿ ವೇತನ ಪಾವತಿಗೆ ಕೊಡಲು ನಿರಾಕರಿಸುತ್ತಿವುದು ಅತ್ಯಂತ ನಾಚಿಕೆಗೇಡಿನ ವಿಷಯ. ಟೀವಿ ಚಾನೆಲ್ ಬಂದ್ ಆಗಲು ಮೋದಿ ಸರ್ಕಾರ ಕಾರಣ ಎಂದು ಸಿಬಲ್ ಹೇಳುತ್ತಿದ್ದಾರೆ. ಆದರೆ ಇದು ಪೂರ್ಣ ಸುಳ್ಳು. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿ ಸಿಬ್ಬಂದಿಗಳನ್ನು ಎದುರಿಸುವ ಬದಲು ಪತಿ ಮತ್ತು ಪತ್ನಿ ಕಂಪನಿಗೆ ಬಾಗಿಲು ಹಾಕಿ ಲಂಡನ್‌ಗೆ ಪ್ರವಾಸಕ್ಕೆ ತೆರಳಿದ್ದಾರೆ. ಇಷ್ಟಾದ ಮೇಲೆ ಅವರನ್ನು ಮಲ್ಯ ಅನ್ನದೇ ಏನನ್ನಲೀ’ ಎಂದು ಬರ್ಖಾ ಪ್ರಶ್ನಿಸಿದ್ದಾರೆ.