ಅಯ್ಯಪ್ಪ ಮಾಲೆ ಧರಿಸಿ ಅಶ್ಲೀಲ ಭಂಗಿಯಲ್ಲಿ ಫೋಟೊ ತೆಗೆಸಿಕೊಂಡಿದ್ದ ಮಹಿಳಾ ಹೋರಾಟಗಾರ್ತಿ ರೆಹನಾ ಫಾತಿಮಾ ಬಂಧಿಸಲಾಗಿದೆ. 

ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿ ಸುದ್ದಿ ಮಾಡಿದ್ದ ಕೇರಳದ ಕಾರ್ಯಕರ್ತೆ ರೆಹಾನಾ ಫಾತಿಮಾಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ತನ್ನ ಫೇಸ್ ಬುಕ್ ಪುಟಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಫಾತಿಮಾಳನ್ನು ಬಂಧಿಸಲಾಗಿದೆ. 

32 ವರ್ಷದ ಬಿಎಸ್‌ಎನ್‌ಎಲ್ ಉದ್ಯೋಗಿಯಾಗಿರುವ ಫಾತಿಮಾಳನ್ನು ಆಕೆ ಕೆಲಸ ಮಾಡುತ್ತಿದ್ದ ಕೊಚ್ಚಿಯ ಕಚೇರಿಯಿಂದ ಪೊಲೀಸರು ಸೆರೆ ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಫಾತಿಮಾರನ್ನು ಬಿಎಸ್‌ಎನ್‌ಎಲ್ ಸಂಸ್ಥೆ ಹುದ್ದೆಯಿಂದ ಅಮಾನತು ಮಾಡಿದೆ. 

ಫೇಸ್‌ಬುಕ್‌ನಲ್ಲಿ ಫಾತಿಮಾ ಅಯ್ಯಪ್ಪನ ಭಕ್ತೆಯೆಂದು ಹೇಳಿಕೊಂಡು ಅಶ್ಲೀಲ ಭಂಗಿಗಳಲ್ಲಿ ಭಾವಚಿತ್ರಗಳನ್ನು ಹಾಕಿಕೊಂಡಿದ್ದಳು ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿ ನಡೆದು ಕೊಂಡಿದ್ದಳು ಎಂದು ರಾಧಾಕೃಷ್ಣ ಮೆನನ್ ಎಂಬುವವರು ದೂರು ಸಲ್ಲಿಸಿದ್ದರು.

ಈ ದೂರನ್ನು ಆಧರಿಸಿ ಭಾರತೀಯ ದಂಡ ಸಂಹಿತೆ 295 ಎ ಪ್ರಕಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣವನ್ನು ಆಕೆಯ ಮೇಲೆ ದಾಖಲಿಸಲಾಗಿದೆ. ಬಂಧನದ ಬಳಿಕ ಆಕೆಯನ್ನು ವಿಚಾರಣೆಗಾಗಿ ಪಟ್ಟಣಂತಿಟ್ಟಕ್ಕೆ ಕರೆದೊಯ್ಯಲಾಗಿದೆ.