ಉಪಚುನಾವಣೆ : ಬಿಜೆಪಿ ಟಿಕೆಟ್‌ಗೆ ಯೋಗೇಶ್ವರ್ ಮಾಸ್ಟರ್ ಪ್ಲಾನ್ ?
ಹುಣಸೂರು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿ.ಪಿ ಯೋಗೇಶ್ವರ್ ಅವರಿಗೆ ಸ್ಥಳೀಯ ಮುಖಂಡರಿಂದ ವಿರೋಧವಿದ್ದು ಈ ನಿಟ್ಟಿನಲ್ಲಿ ಟಿಕೆಟ್ ಪಡೆಯಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.
ಮೈಸೂರು [ನ.12]: ರಾಜ್ಯದಲ್ಲಿ ಉಪ ಚುನಾವಣೆ ಸಮೀಪಿಸುತ್ತಿದೆ. ಈಗಾಗಲೇ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ನವೆಂಬರ್ 11ರಿಂದಲೇ ಆರಂಭವಾಗಿದೆ.
ಇತ್ತ ಶಾಸಕ ವಿಶ್ವನಾಥ್ ಅನರ್ಹತೆಯಿಂದ ತೆರವಾದ ಹುಣಸೂರು ಕ್ಷೇತ್ರದಲ್ಲಿ ರಾಜಕೀಯ ರಂಗೇರುತ್ತಿದೆ. ಬಿಜೆಪಿ ಟಿಕೆಟ್ ವಿಚಾರದಲ್ಲಿ ಸಾಕಷ್ಟು ರಾಜಕೀಯ ಜೋರಾಗಿದೆ.
ಹುಣಸೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲು ಬಿಜೆಪಿ ಟ್ರಬಲ್ ಶೂಟರ್ ಎಂದೇ ಕರೆಸಿಕೊಂಡಿದ್ದ ಸಿ.ಪಿ.ಯೋಗೇಶ್ವರ್ ಪ್ಲಾನ್ ಮಾಡುತ್ತಿದ್ದಾರೆ.
ಉಪ ಚುನಾವಣೆ ಮೂಲಕ ತಾವು ರಾಜಕೀಯ ಅಸ್ತಿತ್ವ ಪಡೆಯಲು ಭಗೀರಥ ಪ್ರಯತ್ನ ನಡೆಸಿದ್ದು, ಈ ನಿಟ್ಟಿನಲ್ಲಿ, ಹುಣಸೂರು ವಿವಿಧ ಹಳ್ಳಿಗಳಲ್ಲಿ ಗೌಪ್ಯ ಸಭೆಗಳನ್ನೂ ನಡೆಸಿದ್ದಾರೆ ಸಿ ಪಿ ಯೋಗೇಶ್ವರ್. ಪ್ರಮುಖವಾಗಿ ಇಲ್ಲಿನ ಪ್ರಭಾವಿ ಸಮುದಾಯವಾದ ಒಕ್ಕಲಿಗರ ಮತಗಳ ಮೇಲೆ ಸಿ ಪಿ ವೈ ಕಣ್ಣು ಇಟ್ಟಿದ್ದು, ಸಂಘ ಪರಿವಾರದ ಮುಖಂಡರ ಜೊತೆಗೆ ಕ್ಷೇತ್ರದಲ್ಲಿ ತಿರುಗಾಡುತ್ತಿದ್ದಾರೆ. ಆದರೆ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಲು ಸ್ಥಳೀಯ ಮುಖಂಡರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಇದೊಂದು ಬಿಜೆಪಿ ಮುಖಂಡರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ನಾನಿನ್ನೂ ಯಾವ ಪಕ್ಷದಲ್ಲಿ ಇದ್ದೀನಿ ಎಂಬುದೇ ಗೊತ್ತಾಗ್ತಿಲ್ಲ ಎಂದ ಅನರ್ಹ ಶಾಸಕ...
ಇನ್ನೊಂದೆಡೆ ಅನರ್ಹ ಶಾಸಕ ವಿಶ್ವನಾಥ್ ಅವರ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿದ್ದು, ಅವರಿಗೆ ಎಂಎಲ್ ಸಿ ಸ್ಥಾನ ನೀಡುವ ಚರ್ಚೆಗಳು ನಡೆದಿವೆ. ವಿಶ್ವನಾಥ್ ಅವರಿಗೂ ಟಿಕೆಟ್ ನೀಡಲು ಸ್ಥಳೀಯ ಬಿಜೆಪಿ ಮುಖಂಡರಿಂದ ಸಾಕಷ್ಟು ವಿರೋಧವಿದ್ದು, ಇಲ್ಲಿನ ಪ್ರಭಾವಿ ನಾಯಕ ಹುಣಸೂರು ತಾಲೂಕು ಘಟಕದ ಅಧ್ಯಕ್ಷ ಯೋಗಾನಂದ್ ಕಣಕ್ಕಿಳಿಸುವ ಸಾಧ್ಯತೆಗಳು ಕಂಡು ಬಂದಿವೆ.
ಡಿಸೆಂಬರ್ 5 ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ.